ಚೀನಾದಿಂದ ಉಯಿಘರ್ ಮುಸ್ಲಿಮರ ಜನಾಂಗೀಯ ಹತ್ಯೆ: ಅಮೆರಿಕನ್ ಆಯೋಗ ವರದಿ

0
267

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಸಿಂಜಿಯಾಂಘ್‌ನ ಉಯಿಘರರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಚೀನ ಜನಾಂಗೀಯ ಹತ್ಯೆ ನಡೆಸಿದೆ ಎಂದು ಅಮೆರಿಕದ ತನಿಖಾ ಆಯೋಗ ಬಹಿರಂಗಪಡಿಸಿದೆ. ಈಗಲೂ ಅದು ಮುಂದುವರಿಯುತ್ತಿದ್ದು, ಹೊಸ ಸಾಕ್ಷ್ಯಗಳು ಲಭಿಸಿವೆ ಎಂಬುದಾಗಿ ಅಮೆರಿಕನ್ ಕಾಂಗ್ರೆಸಿನ ಎರಡು ಪಕ್ಷಗಳ ಸಮಿತಿ ಕಾಂಗ್ರೆಸಲ್ ಎಕ್ಸಿಕ್ಯೂಟಿವ್ ಕಮಿಷನ್ ಆನ್ ಚೀನಾ(ಸಿಇಸಿಸಿ) ಹೇಳಿದೆ.

ಉದ್ಯೋಗ ತರಬೇತಿ ಕೇಂದ್ರದ ಹೆಸರಿನಲ್ಲಿ ಸಿಂಜಿಯಾಂಘಿನಲ್ಲಿ ವ್ಯಾಪಕವಾಗಿ ಸಮುಚ್ಚಯಗಳನ್ನು ನಿರ್ಮಿಸಿ ಮುಸ್ಲಿಮರನ್ನು ಪೀಡಿಸಲಾಗುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ. ಹೊಸ ಕುಶಲತೆಯನ್ನು ಕಲಿಸುವುದು ಎಂಬ ಹೆಸರಿನಲ್ಲಿ ಇಲ್ಲಿ ಕಾನ್ಸಂಟ್ರೇಶನ್ ಕ್ಯಾಂಪುಗಳು ನಿರ್ಮಾಣಗೊಂಡಿವೆ ಎಂದು ತನಿಖೆಗಳು ತಿಳಿಸಿವೆ.

ಒಂದು ದಶಲಕ್ಷ ಉಯಿಘರ್ ಮುಸ್ಲಿಮರು ಇಲ್ಲಿದ್ದಾರೆ. ಇಲ್ಲಿ ನರಹತ್ಯೆ ನಡೆಯುತ್ತಿದೆ ಮತ್ತು ನಿಜವಾದ ವಂಶ ಹತ್ಯೆಯೂ ನಡೆಯುತ್ತಿದೆ ಎಂದು ಸ್ವಯಂಸೇವಾ ಸಂಘಟನೆಗಳು ಹೇಳುತ್ತಿವೆ. ಪ್ರದೇಶದಲ್ಲಿ ಮಾನವ ಹಕ್ಕುಗಳ ದಮನ ಮಾಡುವುದು ಚೀನದ ಉದ್ದೇಶವಾಗಿದ್ದು, ಇದು ಕಂಗೆಡಿಸುವಂತಹದ್ದೆಂದು ಸಿಇಸಿಸಿ ಸಹ ಅಧ್ಯಕ್ಷರಾದ ಡೆಮಕ್ರಾಟಿಕ್ ಪ್ರತಿನಿಧಿ ಜಿಮ್ ಮ್ಯಾಕ್‍ಗವಾನ್ ಹೇಳಿದರು.

ತನಿಖೆಯಲ್ಲಿ ಚೀನ ಜನಾಂಗೀಯ ಹತ್ಯೆ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಆದ್ದರಿಂದ ವಿಶ್ವಸಂಸ್ಥೆಯು ದಿಗ್ಬಂಧನ ಹೇರುವ ಸಾಧ್ಯತೆಯಿದೆ. ಕಳೆದ ಜೂನ್‍ನಲ್ಲಿ ಮೈಕ್ ಪೊಂಪಿಯೊ ಇದಕ್ಕೆ ಸಂಬಂಧಿಸಿದ ಘೋಷಣೆ ಮಾಡಲಿದ್ದಾರೆ ಎಂದು ವರದಿಯಾಗಿದ್ದರೂ ಹಾಗೆ ಆಗಿಲ್ಲ. ಸಿಂಜಿಯಾಂಘ್‌‌ನ ಹತ್ತಿ, ಈರುಳ್ಳಿಗಳಿಗೆ ಅಮೆರಿಕ ನಿಷೇಧ ಹೇರಿದೆ.