ಚಿಂತನ-ಮಂಥನ-2

0
1332
  •  ಎ.ಎಸ್. ಅಲಿ

ಆಗಸ್ಟ್ 15, ನಾವು 72ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಹೊರಟಿದ್ದೇವೆ. ಆದರೆ ನಮಗೆ ನೈಜ ಸ್ವಾತಂತ್ರ್ಯ ದೊರಕಿ ದೆಯೇ? ಅದು ನಮ್ಮಿಂದ ಅನತಿ ದೂರದಲ್ಲಿದೆ. ನೈಜ ಸ್ವಾತಂತ್ರ್ಯವನ್ನು ಗಳಿಸಲು ಇನ್ನೆಷ್ಟು ಶತಮಾನಗಳನ್ನು ಕ್ರಮಿಸಬೇಕಾಗುವುದೋ? ನಾವು ಸ್ವಾತಂತ್ರರಾಗಿದ್ದೇವೆ. ನಿಜ. ಆದರೆ ಎಷ್ಟು ಸ್ವತಂತ್ರರು? ಈ ಪ್ರಶ್ನೆಯು ಸ್ವಾತಂತ್ರ್ಯಗಳಿಸುವಾಗ ಇದ್ದಷ್ಟು ಇಂದಿಗೂ ಪ್ರಸ್ತುತವಾಗಿದೆ. ಇಂದಿನ ಸ್ವಾತಂತ್ರ್ಯವು ಬೆವರು ರಕ್ತದಿಂದ ಅಂದಿನ ಹೋರಾಟಗಾರರು ಕಂಡ ಕನಸಿನ ಸ್ವಾತಂತ್ರ್ಯ ಇದಲ್ಲ.
ಸ್ವತಂತ್ರ ಭಾರತದಲ್ಲಿಂದು ದ್ವೇಷದ ರಾಜಕಾರಣ ನಡೆಯುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅನ್ಯಾಯ, ಹಿಂಸೆ, ದೌರ್ಜನ್ಯಗಳು, ಅತ್ಯಾಚಾರ, ಶೋಷಣೆ, ಅಸಮಾನತೆಯು ಎಲ್ಲೆಲ್ಲೂ ತಾಂಡವವಾಡುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಈ ಮಹಾನ್ ದೇಶವು ದ್ವೇಷ, ಹಗೆತನ, ದೊಂಬಿ, ಗಲಭೆಗಳ ಬೆಂಕಿ ಯಲ್ಲಿ ಉರಿಯುತ್ತಿದೆ. ಧರ್ಮ, ಭಾಷೆ, ಪ್ರದೇಶ ಮತ್ತು ಆರ್ಥಿ ಕವೇ ಮೊದಲಾದ ರಂಗಗಳಲ್ಲಿ ಒಡಕು, ಸಂಘರ್ಷ ಮತ್ತು ದ್ವೇಷದ ಮನೋಭಾವವನ್ನು ಬೆಳೆಸಲಾಗುತ್ತದೆ. ಅಷ್ಟೇ ಅಲ್ಲ. ಬಾಹ್ಯ ಶಕ್ತಿಗಳ ಷಡ್ಯಂತ್ರಗಳು, ವಿದೇಶಿ ಹಸ್ತಕ್ಷೇಪ ಮತ್ತು ನಮ್ಮ ಆಂತರಿಕ ವ್ಯವಹಾರಗಳ ಮೇಲೆ ಅವರ ಪ್ರಭಾವ ಇತ್ಯಾದಿ ಗಮನಾರ್ಹವಾಗಿದೆ.
ಸ್ವಾತಂತ್ರ್ಯೋತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸುವ ನಾವು ಮೇಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ಸ್ವಾತಂತ್ರ್ಯಗಳಿಸುವುದು ಸುಲಭ, ಅದನ್ನು ಉಳಿಸುವುದು ಕಷ್ಟ’ ಎಂದು ಯಾರೋ ಹೇಳಿರುವುದು. ವಾಸ್ತವದಲ್ಲಿ ಇಂದು ನಮ್ಮ ಸ್ವಾತಂತ್ರ್ಯ ಮತ್ತು ಏಕತೆಗೆ ಅಪಾಯ ಎದುರಾಗಿದೆ. ದೇಶದ ನಿವಾಸಿ ಗಳ ಹೃದಯಗಳು ಒಡೆದು ಹೋಗಿವೆ. ನಾವು ಒಡೆದ ಹೃದಯಗಳನ್ನು ಜೋಡಿಸುವವರಾಗಬೇಕು. ಸ್ವಾರ್ಥ ರಾಜಕಾರಣದಿಂದ ಹೊರಬಂದು ಪರಸ್ಪರ ಪ್ರೀತಿ-ಪ್ರೇಮ, ಭ್ರಾತೃತ್ವ-ಸಹೋದರತೆ ಹಾಗೂ ರಾಷ್ಟ್ರೀಯ ಭಾವೈಕ್ಯದ ವಾತಾವರಣವನ್ನು ಸೃಷ್ಟಿಸಬೇಕು. ರಾಷ್ಟ್ರೀಯ ಭಾವೈಕ್ಯ ವೆಂಬುದು ಹೊಸ ಪಾರಿಭಾಷಿಕವೇನೂ ಅಲ್ಲ. ಸ್ವಾತಂತ್ರ್ಯ ಲಭಿಸಿದ ನಂತರ ನವಭಾರತದ ನಿರ್ಮಾಣದಲ್ಲಿ ವಿವಿಧ ಜನ ವಿಭಾಗಗಳು, ಭಾಷಾ ಗುಂಪುಗಳು, ಧಾರ್ಮಿಕ ವರ್ಗಗಳು ಪರಸ್ಪರ ಪ್ರೀತಿ ಸೌಹಾರ್ದ ಹಾಗೂ ಸಹೋದರ ಸಂಬಂಧವನ್ನು ಬಲಪಡಿಸಲಿಕ್ಕಾಗಿ ಮಾಡಲಾದ ಪ್ರಯತ್ನಗಳೇ ರಾಷ್ಟ್ರೀಯ ಭಾವೈಕ್ಯ, ಪುರಾತನ ಕಾಲದಿಂದಲೂ ನಮ್ಮ ದೇಶವು ಜಾತ್ಯತೀತ ರಾಷ್ಟ್ರವಾಗಿದೆ. ಇಲ್ಲಿ ವಿವಿಧ ಧರ್ಮಗಳು, ಸಂಸ್ಕೃತಿ, ಭಾಷೆ ಮತ್ತು ರೂಢಿ ಸಂಪ್ರದಾಯಗಳ ಜನರು ಒಂದಾಗಿ ಕೂಡಿ ಬಾಳುತ್ತಾ ಬಂದಿದ್ದಾರೆ. ವಿವಿಧತೆಯಲ್ಲಿರುವ ಏಕತೆಯೇ ನಮ್ಮ ಮಹಾನ್ ದೇಶದ ಸೌಂದರ್ಯವಾಗಿದೆ. ಅದನ್ನು ಪೋಷಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.