ಚುನಾವಣೆಯಲ್ಲಿ ವೈಫಲ್ಯ: ಕೇರಳ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಸುರೇಂದ್ರನ್‍ರನ್ನು ಕೆಳಗಿಳಿಸಲು ಒತ್ತಾಯ

0
840

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ: ಸ್ಥಳೀಯಾಡಳಿತ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದಿರುವ ಕಾರಣದಿಂದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‍ರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಬೇಕೆಂದು ಬಿಜೆಪಿಯಲ್ಲಿ ಬೇಡಿಕೆ ಎದ್ದಿದೆ. ಶೋಭಾ ಸುರೇಂದ್ರನ್, ಕೃಷ್ಣದಾಸ್ ಬಣಗಳು ಈ ಬೇಡಿಕೆಯೊಂದಿಗೆ ಸಕ್ರಿಯವಾಗಿದ್ದು ಸುರೇಂದ್ರನ್‍ರೊಂದಿಗೆ ಅಸಮಾಧಾನಗೊಂಡಿರುವ ಹಲವು ನಾಯಕರು ಅವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಬದಲಾವಣೆ ಆಗಬೇಕಾದರೆ ಸುರೇಂದ್ರನ್‍ರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕೆಂದು ಶೋಭಾ ಸುರೇಂದ್ರನ್-ಕೃಷ್ಣದಾಸ್ ಬಣಗಳು ಬಿಜೆಪಿಯ ಕೇಂದ್ರ ನಾಯಕರಿಗೆ ಆಗ್ರಹಿಸಿದ್ದಾರೆಂದು ವರದಿಯಾಗಿದೆ. ಪಕ್ಷವನ್ನು ಒಗ್ಗೂಡಿಸಿ ಮುನ್ನಡೆಸಲು ವಿಫಲರಾಗಿದ್ದಾರೆಂದು ಈ ಬಣಗಳು ಆರೋಪಿಸಿವೆ.

ನಿರೀಕ್ಷಿತ ಸಾಧನೆ ಮಾಡಲು ಈ ಚುನಾವಣೆಯಲ್ಲಿ ಎನ್‍ಡಿಎಗೆ ಸಾಧ್ಯವಾಗಿಲ್ಲ. ಗ್ರಾಮ ಪಂಚಾಯತ್‍ಗಳ ಸಂಖ್ಯೆಯಲ್ಲಿ 2015ಕ್ಕಿಂತಲೂ ಹೆಚ್ಚುಆಗಿದ್ದರೂ ಬ್ಲಾಕ್ ಹಾಗೂ ಜಿಲ್ಲಾ ಪಂಚಾಯತ್‍ಗಳ ಸ್ಥಾನಗಳು ನಷ್ಟವಾಗಿದೆ. ತಿರುವನಂತಪುರಂ ಕಾರ್ಪೊರೇಷನ್‍ನಲ್ಲಿ ಬಿಜೆಪಿ ಗೆಲುವು ನಿರೀಕ್ಷಿಸಿದ್ದರೂ ಕೂಡಾ ಅದು ಯಶಸ್ವಿಯಾಗಿಲ್ಲ. ಬಿಜೆಪಿಯ ಬಿ. ಗೋಪಾಲಕೃಷ್ಣನ್, ಎಸ್.ಸುರೇಶ್‍ರಂತಹ ನಾಯಕರು ಸೋಲುಂಡಿದ್ದಾರೆ. ಚುನಾವಣೆಯಲ್ಲಾದ ವೈಫಲ್ಯದ ಕಾರಣಗಳ ಕುರಿತು ಕೇಂದ್ರ ನೇತೃತ್ವಕ್ಕೆ ರಾಜ್ಯದ ನಾಯಕರು ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.