ಕೊರೋನಾ ಪೆಡಂಭೂತ ತೋರಿಸಿ ಕೃಷಿಯೇತರರಿಗೆ ಕೃಷಿಭೂಮಿ ಖರೀದಿಸಲು ಅವಕಾಶ ನೀಡಿದ ರಾಜ್ಯ ಸರಕಾರ; ಭೂ ಸುಧಾರಣಾ ಕಾಯ್ದೆಗೆ ಇನ್ನು ಹಲ್ಲಿಲ್ಲ

0
611

ಸನ್ಮಾರ್ಗ ವಾರ್ತೆ

ಸದ್ಯದ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನರ ಗಮನ ಸಂಪೂರ್ಣವಾಗಿ ಕೊರೋನಾದ ಮೇಲಿದೆ. ಹಾಗಾಗಿ ಕೊರೋನಾ ಭೂತವನ್ನು ನಮಗೆ ತೋರಿಸಿ, ದೊಡ್ಡವರು ಅದರ ಹಿಂದೆ ತಮಗೆ ಬೇಕಾದುದನ್ನು ಮಾಡುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಭೂ ಸುಧಾರಣಾ ಕಾಯಿದೆ ಮೇಲೆ ಕಳೆದ ಮೂರು ತಿಂಗಳುಗಳಿಂದ ಆಗುತ್ತಿರುವ ಪ್ರಹಾರ. ಒಂದೂವರೆ ತಿಂಗಳ ಹಿಂದೆ ಕಾರ್ಪರೇಟ್ ಕುಳಗಳು ಕೃಷಿ ಭೂಮಿಯನ್ನು ನೇರವಾಗಿ ರೈತರಿಂದ ಖರೀದಿಸಬಹುದೆಂದು ಸರಕಾರ ಒಪ್ಪಿಗೆ ಕೊಟ್ಟಿತು. ಯಾರಿಂದಲೂ ವಿರೋಧ ಬರಲೇ ಇಲ್ಲ. ಇದಕ್ಕೆ ಸರಕಾರದ ಅನುಮತಿ ಅಗತ್ಯವಿಲ್ಲ. ಭೂಮಿ ಖರೀದಿ ಬಗ್ಗೆ ಕಂದಾಯ ಇಲಾಖೆಗೆ ಮುಂಚಿತವಾಗಿ ತಿಳಿಸಬೇಕು. ಆದರೆ ಒಂದೊಮ್ಮೆ ಕಂದಾಯ ಇಲಾಖೆ ಮೂವತ್ತು ದಿನಗಳೊಳಗೆ ಸ್ಪಂದಿಸಿಲ್ಲವೆಂದರೆ, ಉದ್ಯಮಿಗಳು, ಕಾರ್ಪರೇಟ್ ಕುಳಗಳು ರೈತರಿಂದ ಕೃಷಿ ಭೂಮಿಯನ್ನು ನೇರವಾಗಿ ಖರೀದಿಸಬಹುದು. ಇದಕ್ಕೆ ಕೊಡುತ್ತಿರುವ ಸಮರ್ಥನೆ ಎಂದರೆ ಪಕ್ಕದ ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಇದು ಈಗಾಗಲೇ ಜಾರಿಗೆಯಿದೆ. ಹಾಗಾಗಿ ನಮ್ಮಲ್ಲಿ ಇನ್ನೂ ಸರಕಾರದ ಅನುಮತಿ ಎಂದು ಕೂತರೆ ಕೈಗಾರಿಕೆಗಳೆಲ್ಲವೂ ಪಕ್ಕದ ರಾಜ್ಯಗಳಿಗೆ ಹೋಗುತ್ತವೆ ಎಂದು. ಸರಕಾರದ ವಿವಿಧ ಇಲಾಖೆಗಳು ಕೊಡಬೇಕಾದ ಅನುಮತಿಯಲ್ಲಿ ವಿಳಂಬ ಯಾಕೆ ಆಗುತ್ತಿದೆ, ಅದನ್ನು ಹೇಗೆ ಸರಿಪಡಿಸಬಹುದೆಂದು ಯೋಚಿಸದೇ, ಆ ಇಲಾಖೆಗಳಿಂದ ಅನುಮತಿ ಪಡೆಯುವುದೇ ಬೇಡ ಎಂದು ಬಿಜೆಪಿ ಸರ್ಕಾರ ನಿರ್ಧರಿಸಿದೆ. ರೈತ ಬಂಧು ಎಂದು ತನ್ನನ್ನೇ ತಾನು ಕರೆಸಿಕೊಂಡು ಹಸಿರು ಶಾಲನ್ನು ಹಾಕಿಕೊಂಡು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪನವರೇ ಇಂಥದೊಂದು ‘ಕಾರ್ಪರೇಟ್ ಕಬಳುವಿಕೆಗೆ’ ಆಸ್ಪದ ಕೊಟ್ಟಿದ್ದಾರೆ.

ಇದರಿಂದ ಕೈಗಾರೀಕರಣಕ್ಕೆ, ಹೊಸ ಕೈಗಾರಿಕೆಗಳ ಸ್ಥಾಪನೆಗೆ, ಇರೋ ಕೈಗಾರಿಕೆಗಳ ವಿಸ್ತರಣೆಗೆ ಅವಕಾಶವಾಗುತ್ತೆ, ರಾಜ್ಯದ ಬೊಕ್ಕಸಕ್ಕೆ ಲಾಭವಾಗುತ್ತೆ ಎನ್ನುವ ಸಮರ್ಥನೆ ಕೊಟ್ಟರೂ, ಇದರ ಅಪಾಯದ ಬಗ್ಗೆ ಯಾಕೆ ಯೋಚನೆ ಇಲ್ಲ. ಈವಾಗ ಯಾವುದೇ ಉದ್ಯಮಿ, ಕಾರ್ಪರೇಟ್ ಕುಳ, ತನಗೆ ಬೇಕಾದ ಕೃಷಿ ಭೂಮಿಯನ್ನು ಯಾವುದೇ ಅನುಮತಿ, ಆತಂಕಗಳಿಲ್ಲದೆ ಖರೀದಿಸಬಹುದು. ಒಂದೊಮ್ಮೆ ರೈತರು ತಮ್ಮ ಭೂಮಿಯನ್ನು ಮಾರಲು ನಿರಾಕರಿಸಿದರೆ ಅವರನ್ನು ಬೆದರಿಸಿ, ಅವರಿಂದ ಬಲವಂತವಾಗಿಯೂ ಖರೀದಿಸಬಹುದು. ಸರ್ಕಾರ ಏನೂ ಮಾಡುವಂತಿಲ್ಲ. ಇನ್ನು ಕಂದಾಯ ಇಲಾಖೆಗೆ ಹೆಸರಿಗಾಗಿ ಒಂದು ಅರ್ಜಿ ಸಲ್ಲಿಸಿದರಾಯ್ತು. ಆಮೇಲೆ ಅಲ್ಲಿನ ಅಧಿಕಾರಿಗಳಿಗೆ ಗಿಂಬಳ ಕೊಟ್ಟು, ಮೂವತ್ತು ದಿನಗಳ ಕಾಲ ಆ ಫೈಲ್ ಮೇಲೆ ಕೂತಿರಿ, ಏನೂ ಮಾಡಬೇಡಿ ಎಂದರಾಯ್ತು. ಕೃಷಿ ಭೂಮಿ ಮೂವತ್ತು ದಿನಗಳಲ್ಲಿ ಭೂಮಾಫೀಯಾ, ಉದ್ಯಮಿಗಳು, ಕಾರ್ಪರೇಟ್‍ಗಳ ಕೈಗೆ.

ಬಿಜೆಪಿ ಸರಕಾರ ಅಷ್ಟಕ್ಕೇ ನಿಂತಿಲ್ಲ. ಇವತ್ತು ಕೃಷಿಯೇತರರು ಕೃಷಿ ಭೂಮಿಯನ್ನು ಖರೀದಿಸಲು ಇದ್ದ ಆರ್ಥಿಕ ಮಿತಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿದೆ. ಅಲ್ಲಿಗೆ ದೇವರಾಜ್ ಅರಸರ ಕ್ರಾಂತೀಕಾರಿ ಭೂ ಸುಧಾರಣಾ ಕಾಯಿದೆಯ ಕತ್ತನ್ನು ಸಂಪೂರ್ಣವಾಗಿ ಹಿಸುಕಲಾಗಿದೆ. 1961ರ ಭೂ ಸುಧಾರಣಾ ಕಾಯಿದೆಯಂತೆ ಕೃಷಿಕರಲ್ಲದವರು ಕೃಷಿ ಜಮೀನನ್ನು ಖರೀದಿಸಲು ನಿರ್ಭಂಧವಿತ್ತು. ಮುಂದೆ ಅದನ್ನು ಬಹುಷ ಎಂಬತ್ತರ ದಶಕದ ಅಂತ್ಯದಲ್ಲೋ, ತೊಂಬತ್ತರ ದಶಕದ ಆರಂಭದಲ್ಲೋ ಸ್ವಲ್ಪ ತಿದ್ದುಪಡಿ ತಂದು ವಾರ್ಷಿಕ ವರಮಾನ Rs 50,000ಕ್ಕಿಂತ ಕಡಿಮೆ ಇರುವ ಕೃಷಿಕರಲ್ಲದವರು ಕೃಷಿ ಜಮೀನನ್ನು ಖರೀದಿಸಬಹುದೆಂದು ಕಾನೂನು ತಂದರು. ಅಲ್ಲಿಗೆ ನಿಲ್ಲಲಿಲ್ಲ. ಮಣ್ಣಿನ ಮಗ, ನಾನೇ ರೈತ ಎನ್ನುವ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಈ ಮಿತಿಯನ್ನು Rs 50,000 ರಿಂದ ಎರಡು ಲಕ್ಷಕ್ಕೆ ಏರಿಸಿ, ತಮ್ಮ ರೈತ ಪ್ರೇಮವನ್ನು ಮೆರೆದರು. ಮುಂದೆ 2015ರಲ್ಲಿ ದೇವರಾಜ ಅರಸರ ಆಶಯದಂತೆ ಆಡಳಿತ ಮಾಡುತ್ತೇನೆಂದು ಹೇಳುತ್ತಿದ್ದ ಸಿದ್ದರಾಮಯ್ಯನವರ ಸರಕಾರ ಈ ಮಿತಿಯನ್ನು ಎರಡು ಲಕ್ಷದಿಂದ Rs 25 ಲಕ್ಷಕ್ಕೆ ಏರಿಸಿದರು. ಆದರೆ ನಾಮ್‍ಕೆವಾಸ್ತೆ ಎನ್ನುವಂತೆ ಕೇವಲ ‘ಕನ್ವರ್ಟ್’ ಆದ ಕೃಷಿ ಜಮೀನನ್ನು ಮಾತ್ರ ಖರೀದಿಸಬಹುದೆಂದು ಕೇವಿಯಟ್ ಹಾಕಿದರು. ಆದರೂ ಕೃಷಿ ಭೂಮಿಯನ್ನು ಖಾಸಗಿಯವರು ಖರೀದಿಸಲು ಸರಕಾರಿ ಇಲಾಖೆಗಳ ಅನುಮತಿ ಅಗತ್ಯವಿತ್ತು. ಈವಾಗ ಯಡಿಯೂರಪ್ಪನವರ ಸರಕಾರ ಎಲ್ಲವನ್ನೂ ಭೂ ಕಬಳಿಕೆದಾರರು, ಕಾರ್ಪರೇಟ್‍ಗಳಿಗೆ ಸುಲಭ ಮಾಡಿಕೊಟ್ಟಿದ್ದಾರೆ. ಮೊದಲು ವಿವಿಧ ಇಲಾಖೆಗಳ ಅನುಮತಿಯಿಲ್ಲದೆ, ನೇರವಾಗಿ ರೈತರಿಂದ ಖರೀದಿಸಬಹುದೆಂದು ತಿದ್ದುಪಡಿ ತಂದರೆ, ಈವಾಗ ಕೃಷಿಕರಲ್ಲದವರಿಗೆ ಇದ್ದ ಆರ್ಥಿಕ ಮಿತಿಯೂ ಹೋಯಿತು. ಹಾಗಾಗಿ ಭೂ ಸುಧಾರಣ ಕಾಯಿದೆಗೆ ಇನ್ಮುಂದೆ ಹಲ್ಲಿಲ್ಲ.

ಅಂದಹಾಗೆ ಹಿಂದಿನ ಕಾಯಿದೆಯಿಂದ ಮಾಜಿ ‘ಹಿರಿಯ ಕಾಂಗ್ರೇಸಿಗ’ ಹಾಗೂ ‘ಹಾಲಿ ಬಿಜೆಪಿ’ಯ ರಾಜಕಾರಣಿಯೋರ್ವರಿಗೆ ತಮ್ಮ ಭಾರೀ ಜಮೀನನ್ನು ಮಾರಲು ಕಷ್ಟವಾಗುತ್ತಿತ್ತು. ಹಾಗಾಗಿ ಭೂ ಸುಧಾರಣಾ ಕಾಯಿದೆಯನ್ನು ತಿದ್ದುಪಡಿ ಮಾಡುವ ಹಿಂದೆ ಈ ರಾಜಕಾರಣಿಯ ಪ್ರಯತ್ನ ಬಹಳಷ್ಟಿದೆಯೆಂದು ವಿಧಾನಸಭೆಯ ಪಡಸಾಲೆಯ ಕಳ್ಳಗಿವಿಗಳ ಅಂಬೋಣ. ಎಷ್ಟೆಂದರೆ ಬಿಜೆಪಿ ಈ ತಿದ್ದುಪಡಿಯನ್ನು ಅಧಿವೇಶನದಲ್ಲಿ ಮಂಡಿಸಿದಾಗ ಅದನ್ನು ವಿರೋಧಿಸಬಾರದೆಂದು ಈ ‘ರಾಜಕಾರಣಿ’ ಕಾಂಗ್ರೇಸಿನ ಎಲ್ಲಾ ಘಟಾನುಘಟಿಗಳನ್ನೇ ಕೇಳಿಕೊಂಡಿದ್ದರಂತೆ. ಹಾಗಾಗಿ ಅಧಿವೇಶನದಲ್ಲಿ ಕಾಂಗ್ರೇಸ್ ವಿರೋಧ ಕೇವಲ ಸಿದ್ದರಾಮಯ್ಯ ಸಭಾತ್ಯಾಗ ಮಾಡೋದಕಷ್ಟೇ ಸೀಮಿತವಾಯಿತು. ಮಿಕ್ಕವರಿಗೆ ತಮ್ಮ ಹಿಂದಿನ ಗುರುವಿಗೆ ‘ಗುರು ದಕ್ಷಿಣೆ’ ಕೊಡಬೇಕಿತ್ತಾದರೆ ಇನ್ನುಳಿದವರಿಗೆ ಮುಂದೆ ‘ಶಿಷ್ಯ ವೇತನ’ ಸಿಗಬಹುದೆನ್ನುವ ದೂರಾಲೋಚನೆ. ಹೀಗೆ ಎಲ್ಲ ಪಕ್ಷದ, ಎಲ್ಲಾ ನಾಯಕರು ಒಟ್ಟಾಗಿ ಭೂ ಸುಧಾರಣೆ ಕಾಯಿದೆಯನ್ನು ಕೊಲೆ ಮಾಡಿದ್ದಾರೆ.

ಅಲ್ಮೇಡಾ ಗ್ಲಾಡ್ಸನ್

              ಲೇಖಕರು: ಅಲ್ಮೇಡಾ ಗ್ಲಾಡ್ಸನ್

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.