ಮಂಗಳೂರು: ಕೊರೋನಕ್ಕೆ ಬಲಿಯಾದ ಯುವಕನ ಅಂತ್ಯಸಂಸ್ಕಾರಕ್ಕೆ ಸ್ಥಳೀಯರ ವಿರೋಧ; ಬುದ್ಧಿವಂತರ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ವರದಿ

0
1280

ಸನ್ಮಾರ್ಗ ವಾರ್ತೆ

ಮಂಗಳೂರು,ಜೂ.28: ಈ ಹಿಂದೆ ಶವ ದಹನಕ್ಕೆ ಅಡ್ಡಿ ಪಡಿಸಿದ ಘಟನೆ ಹಾಗೂ ಹಾಸ್ಟೆಲ್‌ವೊಂದರಲ್ಲಿ ಅನಿವಾಸಿಗಳನ್ನು ಕ್ವಾರಂಟೈನ್ ಮಾಡುವುದನ್ನು ವಿರೋಧಿ ಸ್ಥಳೀಯರಿಂದ ಪ್ರತಿಭಟನೆ ನಡೆದ ಅಮಾನವೀಯ ಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದ್ದವು.

ದೇಶದಲ್ಲಿ ಕೊರೋನಾದ ವಿರುದ್ಧ ಹೋರಾಡಿ ಕೊರೋನಾ ರೋಗಿಗಳ ವಿರುದ್ಧವಲ್ಲ ಎಂದು ಪದೇ ಪದೇ ಹೇಳಲಾಗುತ್ತಿದ್ದರೂ ಕೂಡ ಭಾನುವಾರ ಮಧ್ಯಾಹ್ನ ತಮ್ಮ ಪರಿಸರದಲ್ಲಿ ಶವ ಸಂಸ್ಕಾರದಿಂದ ಕೊರೋನ ಹರಡಬಹುದು ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಕೊರೋನಾದಿಂದ ಮೃತ ಪಟ್ಟ ಯುವಕನ ದಫನ ಕ್ರಿಯೆಗೆ ಅಡ್ಡಿ ಪಡಿಸಿದ ಅಮಾನವೀಯ ಘಟನೆ ಮಂಗಳೂರಿನ ಬೋಳಾರದಲ್ಲಿ ವರದಿಯಾಗಿದ್ದು ಮತ್ತೊಮ್ಮೆ ಅಮಾನವೀಯತೆಗೆ ಸಾಕ್ಷಿಯಾಗಿದೆ‌.

ಶನಿವಾರ ರಾತ್ರಿ ಕೊರೋನ ಸೋಂಕಿನಿಂದ ಮೃತಪಟ್ಟ ಸುರತ್ಕಲ್ ಸಮೀಪದ ಇಡ್ಯದ 31ರ ಹರೆಯದ ಯುವಕನ ಅಂತ್ಯಸಂಸ್ಕಾರವನ್ನು ಮಳೆಯ ಕಾರಣದಿಂದಾಗಿ ಸುರತ್ಕಲ್ ಸಮೀಪದ ಇಡ್ಯದ ಮಸೀದಿಗೊಳಪಟ್ಟ ದಫನ ಭೂಮಿಯ ಕಬರ್ ಗುಂಡಿಯಲ್ಲಿ ನೀರು ಹರಿದು ಬರುತ್ತಿರುವುದರಿಂದ ಅಲ್ಲಿನ ಮಸೀದಿಯ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರ ಮನವಿಯ ಮೇರೆಗೆ ಬೋಳಾರದ ಮಸೀದಿ ಆವರಣದ ದಫನ ಭೂಮಿಯಲ್ಲಿ ದಫನಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು ಆದರೇ, ಸ್ಥಳೀಯರು ದಫನ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಧಫನ ಕಾರ್ಯವನ್ನು ಸುರತ್ಕಲ್ ಸಮೀಪದ ಇಡ್ಯದ ಮಸೀದಿಗೊಳಪಟ್ಟ ದಫನ‌ ಭೂಮಿಗೆ ಸ್ಥಳಾಂತರಿಸಲಾಯ್ತು.

ಮಸೀದಿಯ ಆವರಣದಲ್ಲಿ ಧಫನ ಮಾಡುವ ಕುರಿತು ಮಸೀದಿಯ ಸಮಿತಿಯವರಿಗಾಗಲಿ ಜಮಾತ್‌ಗೆ ಒಳಪಟ್ಟ ಸದಸ್ಯರಿಂದಾಗಲಿ ವಿರೋಧ ಕಂಡು ಬಂದಿಲ್ಲವಾದರೇ, ಅಕ್ಕಪಕ್ಕದ ನಿವಾಸಿಗಳು ಹಾಗೂ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದು ಕಂಡು ಬಂದಿದೆ. ಮಂದಿರ-ಮಸೀದಿಗಳೆರಡು ಇರುವ ಸೌಹಾರ್ದತೆಯ ಸ್ಥಳವಿದಾಗಿದ್ದು, ಕೋಮು ಸಂಬಂಧಗಳು ಹಾಳಾಗಬಾರದೆಂಬ ನೆಲೆಯಲ್ಲಿ ಹಾಗೂ ಸೌಹಾರ್ದತೆಗೆ ಧಕ್ಕೆಯುಂಟಾಗಬಾರದೆಂಬ ನೆಲೆಯಲ್ಲಿ ಶವಸಂಸ್ಕಾರವನ್ನು ಇಡ್ಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬೋಳಾರ ಮಸೀದಿಯ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಹುಸೈನ್‌ರವರು ಹೇಳಿದ್ದಾರೆ.

ಕೃಪೆ: ವಾರ್ತಾ ಭಾರತಿ

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.