ಸಾವಿರಾರು ಮಂದಿಗೆ ಊಟ ತಯಾರಿಸಿ ಹಂಚುತ್ತಿರುವ ಜಮಾಅತೆ ಇಸ್ಲಾಮೀ ಹಿಂದ್: ಮನೆಮನೆಗೆ ಆಹಾರ ಧಾನ್ಯ ವಿತರಣೆ, ಯುವಕರ ಸೇವಾ ಮನೋಭಾವಕ್ಕೆ ವ್ಯಾಪಕ ಮೆಚ್ಚುಗೆ

0
2677

ಸನ್ಮಾರ್ಗ ವಾರ್ತೆ

ಬೆಂಗಳೂರು: ಮಾ. 26- ಕೊರೊನದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾಡಿರುವುದರ ಕಾರಣ ಕಾರ್ಮಿಕರು, ಭಿಕ್ಷುಕರು, ಬಡವರು ಸಹಿತ ಒಂದು ದೊಡ್ಡ ವಿಭಾಗವು ಸಂಕಷ್ಟಕ್ಕೀಡಾಗಿದ್ದು ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಅದರ ಸಮಾಜಸೇವಾ ವಿಭಾಗವಾದ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯು (HRS) ಈ ದುರ್ಬಲರ ನೆರವಿಗಾಗಿ ಧಾವಿಸಿದೆ.

ರಾಜ್ಯಾದ್ಯಂತ ಇವು ಸೇವಾ ಚಟುವಟಿಕೆಯಲ್ಲಿ ನಿರತವಾಗಿದ್ದು, ಜನತಾ ಕರ್ಫ್ಯೂ ದಿನದಿಂದ ಜನರ ಸೇವೆಯಲ್ಲಿ ಇವು ತೊಡಗಿಸಿಕೊಂಡಿವೆ. HRS ನ ಮಂಗಳೂರು ವಿಭಾಗವು ಕಂದಕ ಎಂಬಲ್ಲಿ ಊಟ ತಯಾರಿಸಿ ಪ್ರತಿದಿನ ಆಹಾರ ವಿತರಿಸುತ್ತಿರೆ,  ಉಳ್ಳಾಲ ವಿಭಾಗವು ಮನೆಮನೆಗೆ ಆಹಾರ ವಸ್ತುಗಳನ್ನು ವಿತರಿಸುತ್ತಿದೆ. ಮಂಗಳೂರು ವಿಭಾಗವು ಗುರುವಾರದವರೆಗೆ ಸುಮಾರು ಎರಡು ಸಾವಿರ ಮಂದಿಗೆ ಊಟ ತಯಾರಿಸಿ ಮಂಗಳೂರಿನ ಆಸುಪಾಸಿನಲ್ಲಿ ಹಂಚಿದೆ. ಉಳ್ಳಾಲ ಘಟಕವು ನೂರಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಮನೆ-ಮನೆಗೆ ವಿತರಿಸಿದೆ.

ಇದೇ ವೇಳೆ HRS ನ ಬೀದರ್, ಉಡುಪಿ ವಿಭಾಗಗಳು ಮತ್ತು ಜಮಾತೆ ಇಸ್ಲಾಮಿ ಹಿಂದ್ ಬೆಂಗಳೂರು ಮೆಟ್ರೋ ಘಟಕವು ಊಟ ತಯಾರಿಸಿ ಬಡವರಲ್ಲಿ ಹಂಚುತ್ತಿದೆ. HRS ನ ಸಿದ್ದಾಪುರ ವಿಭಾಗವು ಬಸ್ ನಿಲ್ದಾಣದಲ್ಲಿ ನೀರಿನ ನಳ್ಳಿ ಮತ್ತು ಸಾನಿಟೈಸರ್ ನ ವ್ಯವಸ್ಥೆ ಮಾಡಿ ಕೈತೊಳೆಯಲು ಅನುಕೂಲ ಮಾಡಿಕೊಟ್ಟಿದೆ. ಈ ಸೇವಾ ಕಾರ್ಯದ ಬಗ್ಗೆ ಸಾರ್ವಜನಿಕವಾಗಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಜನರು ಈ ಕೆಲಸದಲ್ಲಿ ಭಾಗಿಯಾಗುವ ಉತ್ಸಾಹ ತೋರುತ್ತಿದ್ದಾರೆ. ಪೊಲೀಸರಿಂದಲೂ ಬೆಂಬಲ ವ್ಯಕ್ತವಾಗಿದೆ.