ಕೊರೋನ ವಾರಿಯರ್ಸ್ ಕಥೆ: ಆರು ತಿಂಗಳ ಮಗು ಎಲ್ವಿನ್‌ನ ಯಶೋಧೆಯಾದ ಡಾ.ಮೇರಿ

0
173

ಸನ್ಮಾರ್ಗ ವಾರ್ತೆ

ಪಂಜು ಗಂಗೂಲಿ

ಕೇರಳದ ಎರ್ನಾಕುಲಂನ ಈ ದಂಪತಿಗಳು ಗುರ್ಗಾಂವ್‌ನ ಆಸ್ಪತ್ರೆಯೊಂದರ ನರ್ಸ್‌ಗಳು. ಕಳೆದ ತಿಂಗಳು ಗಂಡನಿಗೆ ಕೋವಿಡ್ ಸೋಂಕು ತಗಲಿ ಹೆಂಡತಿ ಸುರಕ್ಷತೆಯ ಕಾರಣ ತನ್ನ ಆರು ತಿಂಗಳ ಮಗು ಎಲ್ವಿನ್‌ನೊಂದಿಗೆ ಕೊಚ್ಚಿಗೆ ವಾಪಾಸಾದರು. ಆದರೆ ಕೇರಳಕ್ಕೆ ವಾಪಾಸಾಗಿ ಮನೆಯಲ್ಲಿ ಕ್ವಾರಂಟೈನ್ ಒಳಗಾದ ಕೆಲವು ದಿನಗಳಲ್ಲಿ ಅವರಿಗೂ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿತು. ಆಗ ಎಲ್ವಿನ್‌ನನ್ನು ಸಾಕುವ ಪ್ರಶ್ನೆ ಎದುರಾಯಿತು.

ತಾಯಿಯೊಂದಿಗೆ ಇದ್ದುದರಿಂದ ಎಲ್ವಿನ್‌ಗೂ ಸೋಂಕು ತಗಲಿರುವ ಸಾಧ್ಯತೆ ಹೆಚ್ಚಿರುವುದರಿಂದ ಬೇರೆಯವರು ಇರಲಿ, ಸ್ವತಃ ಆಕೆಯ ಸಂಬಂಧಿಕರೂ ಅವನ ಪಾಲನೆಗೆ ಮುಂದೆ ಬರಲಿಲ್ಲ..!

ಜಿಲ್ಲಾ ಮಕ್ಕಳ ಅಭಿವೃದ್ಧಿ ಸಮಿತಿ ಎಲ್ವಿನ್‌ಗೆ ಸಾಕು ತಾಯಿಯೊಬ್ಬಳಿಗಾಗಿ ಹುಡುಕಾಟ ಶುರು ಮಾಡಿ ಡಾ.ಮೇರಿ ಎಂಬುವವರನ್ನು ಸಂಪರ್ಕಿಸುತ್ತಾರೆ. ಕ್ಲಿನಿಕಲ್ ಸೈಕಾಲಾಜಿಸ್ಟ್ ಆಗಿರುವ ಡಾ.ಮೇರಿ (ಎಡ ಭಾಗದಲ್ಲಿ ಇರುವವರು) ಕೊಚ್ಚಿಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಒಂದು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅಲ್ವಿನ್‌ನ ವಿಚಾರ ತಿಳಿಯುತ್ತಲೇ ಅವರು ಅವನ ಯಶೋಧೆಯಾಗಲು ಮುಂದೆ ಬಂದರು.

ಡಾ.ಮೇರಿ ಜೂನ್ 15 ರಂದು ಆಸ್ಪತ್ರೆಗೆ ಹೋಗಿ ಎಲ್ವಿನ್‌ನನ್ನು ಕರೆದುಕೊಂಡು ಬಂದರು. ತಾಯಿಯಿಂದ ಅವನಿಗೂ ಸೋಂಕು ತಗಲಿರುವ ಸಾಧ್ಯತೆ ಇದ್ದುದರಿಂದ ಹೆಚ್ಚಿನ ನಿಗಾ ವಹಿಸಬೇಕಾಗಿತ್ತು.

ಏಕೆಂದರೆ, ಡಾ ಮೇರಿಯವರ ಮನೆಯಲ್ಲಿ ಅವರ ಮೂವರು ಮಕ್ಕಳು ಹಾಗೂ ಇತರ ಸದಸ್ಯರು ಇದ್ದರು. ಹಾಗಾಗಿ, ಅವರು ತಮ್ಮ ವಸತಿ ಸಂಕೀರ್ಣದಲ್ಲಿ ಖಾಲಿಯಿರುವ ಒಂದು ಫ್ಲಾಟನ್ನು ಪಡೆದುಕೊಂಡು ಅಲ್ಲಿ ಇರ ತೊಡಗಿದರು. ಪ್ರತೀದಿನ ಅವರ ಮಕ್ಕಳು ಅವರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಂದು ಬಾಗಿಲ ಬಳಿ ಇಟ್ಟು ಬರುತ್ತಿದ್ದರು.

ಅವರು ಇಟ್ಟು ಹೋದ ನಂತರ ಡಾ.ಮೇರಿ ಬಾಗಿಲು ತೆರೆದು ಅವುಗಳನ್ನು ಒಳಗೆ ಕೊಂಡೊಯ್ಯುತ್ತಿದ್ದರು. ಆಗಾಗ್ಗೆ ಗುರ್ಗಾಂವ್‌ನಲ್ಲಿರುವ ಎಲ್ವಿನ್‌ನ ತಂದೆ ಮತ್ತು ಕೊಚ್ಚಿಯಲ್ಲಿರುವ ತಾಯಿಗೆ ವೀಡಿಯೋ ಕಾಲ್ ಮಾಡಿ ಅವರನ್ನು ನಿಶ್ಚಿಂತಗೊಳಿಸುತ್ತಿದ್ದರು.

ಒಂದು ತಿಂಗಳು ಹೀಗೆ ಎಲ್ವಿನ್‌ನನ್ನು ನೋಡಿಕೊಂಡ ಡಾ.ಮೇರಿ ನಿನ್ನೆ ಬುಧವಾರ, ಕೋವಿಡ್ ಸೋಂಕಿನಿಂದ ಮುಕ್ತರಾಗಿ ಬಂದ ಅವನ ಹೆತ್ತವರ ಮಡಿಲಿಗೆ ಅವನನ್ನು ಹಾಕಿದರು. ಕೋವಿಡ್ ರೋಗಿಗಳ ಮಗುವನ್ನು ಒಂದು ತಿಂಗಳು ಕಾಲ ಲಾಲನೆ ಪಾಲನೆ ಮಾಡಿದ ಡಾ.ಮೇರಿಯವರಿಗೆ ನಿಜವಾದ ಕೊರೋನ ವಾರಿಯರ್ಸ್‌ಗಳ ಸಾಲಲ್ಲಿ ಇದ್ದಾರೆ. ಅವರಿಗೆ ಹ್ಯಾಟ್ಸಪ್ ಹೇಳಲೇಬೇಕು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇ‌ಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here