ಕೊರೋನ ನಿಯಂತ್ರಣ ಜನವರಿ 31ರವರೆಗೆ ಮುಂದುವರಿಕೆ

0
345

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.29: ಕೊರೋನ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದರೂ ಜನವರಿ 31ರವರೆಗೆ ಮುನ್ನೆಚ್ಚರಿಗಳು ಮತ್ತು ನಿರೀಕ್ಷಣೆ, ನಿಯಂತ್ರಣಗಳು ಮುಂದುವರಿಯಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಅತಿವೇಗ ಹರಡುವ ಕೊರೊನ ಪ್ರಭೇದ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಚಿವಾಲಯ ಮಾರ್ಗಸೂಚಿಯನ್ನು ಹೊರಡಿಸಿದ್ದು ಹೊಸ ವರ್ಷದ ದಿನಾಚರಣೆಯ ವೇಳೆಯೂ ಕೊರೋನ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರಬಹುದು ಆದ್ದರಿಂದ ಮುಂಜಾಗೃತೆ ವಹಿಸಬೇಕೆಂದು ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಮನವಿ ಮಾಡಿದೆ.

ಹೊಸ ಮಾನದಂಡಗಳ ಪ್ರಕಾರ ಕಂಟೈನ್ಮೆಂಟ್ ಝೋನ್‍ಗಳು ಮುಂದುವರಿಯಲಿದೆ. ಈಗ ಜಿಲ್ಲೆ, ನಗರ ಅಧಿಕಾರಿಗಳು ಮತ್ತು ಪೊಲೀಸರು ಕಂಟೈನ್‍ಮೆಂಟ್ ಜೋನ್ ನಿಶ್ಚಯಿಸುತ್ತಾರೆ. ಇದು ಮುಂದುವರಿಯಲಿದೆ. ರಾಜ್ಯಗಳು ಕೊರೋನ ಮಾನಂದಂಡಗಳನ್ನು ಕಠಿಣವಾಗಿ ಜಾರಿಗೊಳಿಸಬೇಕೆಂದು ಕೇಂದ್ರ ಸರಕಾರ ತಿಳಿಸಿದೆ.

ಕಂಟೊನ್ಮೆಂಟ್ ಝೋನ್‍ಗಳ ಹೊರಗೆ ಲಾಕ್‍ಡೌನ್ ಘೋಷಿಸಬಹುದಾದರೂ ಕೇಂದ್ರ ಸರಕಾರದ ಅನುಮತಿ ಪಡೆದಿರಬೇಕು. ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧ ಮುಂದುವರಿಯಲಿದೆ. ಸಿನೆಮಾ ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಕ್ರೀಡಾ ತರಬೇತಿ ನಿಯಂತ್ರಣಗಳೊಂದಿಗೆ ನಡೆಯಬೇಕು. ಕ್ರೀಡೆ, ಧರ್ಮ, ಸಾಮಾಜಿಕ, ಮನರಂಜನೆ, ಶಿಕ್ಷಣ ಸಾಂಸ್ಕೃತಿಕ ಸಭೆಗಳಲ್ಲಿ ಹಾಲ್‍ನಲ್ಲಿ ಆಸನಗಳಲ್ಲಿ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶ ಇರಬೇಕು. ಮುಚ್ಚಿದ ಕೋಣೆಗಳಲ್ಲಿ ಗರಿಷ್ಠ ನೂರಕ್ಕೆ ಸೀಮಿತಗೊಳಿಸುವ ವಿಷಯವನ್ನು ರಾಜ್ಯಗಳು ತೀರ್ಮಾನಿಸಬೇಕು. ಜನರ ಅಂತಾರಾಜ್ಯ ಪ್ರಯಾಣಕ್ಕಾಗಲಿ, ಸರಕು ಸಾಗಾಟಕ್ಕಾಗಲಿ ಯಾವುದೇ ನಿರ್ಬಂಧವಿಲ್ಲ. ಇದಕ್ಕೆ ಪಾಸ್ ಬೇಡ. ವ್ಯಾಪಾರಕ್ಕಾಗಿ ನೆರೆ ದೇಶಗಳಿಗೆ ಪ್ರಯಾಣ, ಸರಕು ಸಾಗಾಟಕ್ಕೆ ಅನುಮತಿ ಬೇಕಾಗಿಲ್ಲ.