ಮೊದಲು ಭಯೋತ್ಪಾದನಾ ಆರೋಪ ಹೊರಿಸಿದರು, ನಡೆಯಲಿಲ್ಲ, ಈಗ ಅಕ್ರಮ ಆರ್ಥಿಕ ವ್ಯವಹಾರದ ಕೇಸು ದಾಖಲಿಸಿದ್ದಾರೆ, ಇದೂ ನಿಲ್ಲೋಲ್ಲ- ಝಾಕಿರ್ ನಾಯ್ಕ್

0
978

ಹೊಸದಿಲ್ಲಿ, ಜೂ.13: ಭಾರತದ ರಾಜಕೀಯದ ಪ್ರಮುಖರ ಮಧ್ಯಪ್ರವೇಶದಿಂದ ತನ್ನ ವಿರುದ್ಧ ಕೇಸು ದಾಖಲಾಗಿದೆ ಎಂದು ಪ್ರಮುಖ ಇಸ್ಲಾಮಿಕ್ ಧರ್ಮ ಬೋಧಕ ಝಾಕಿರ್ ನಾಯ್ಕ್ ಹೇಳಿದರು. ಪಿಟಿಐ ವರದಿಯ ಪ್ರಕಾರ ಭಾರತದ ತನಿಖಾ ಏಜೆನ್ಸಿಗಳು ಪ್ರಮುಖ ರಾಜಕಾರಣಿಗಳ ನಿರ್ದೇಶದಂತೆ ಕಾರ್ಯಾಚರಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈಗ ಮಲೇಶ್ಯದಲ್ಲಿರುವ ಅವರನ್ನು ಭಾರತಕ್ಕೆ ಕರೆತರಲು ಆಗ್ರಹಿಸಿ ಇಡಿ ರೆಡ್‍ಕಾರ್ನರ್ ನೋಟಿಸನ್ನು ಇಂಟರ್‍ಫೋಲ್‍ಗೆ ಹಸ್ತಾಂತರಿಸಿದೆ. ಕಳೆದ ತಿಂಗಳು ಎಂಫೋರ್ಸ್‍ಮೆಂಟ್ (ಇಡಿ) ಅಕ್ರಮ ಆರ್ಥಿಕ ವ್ಯವಹಾರ ಕೇಸು ದಾಖಲಿಸಿದ್ದು ಭಾರತ ಮತ್ತು ವಿದೇಶಗಳ ಸಹಿತ 193 ಕೋಟಿ ರೂಪಾಯಿಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿದೆ ಎಂದು ಆರೋಪ ಹೊರಿಸಿದೆ. ಎನ್‍ಐಎ ನಾಯ್ಕ್ ವಿರುದ್ಧ ದಾಖಲಿಸಿದ ಎಫ್‍ಐಆರ್ ನಲ್ಲಿ ಈ ವಿವರಗಳನ್ನು ಸೂಚಿಸಲಾಗಿದೆ. ಈ ಹಿಂದೆ ಅನ್ಯಧರ್ಮಗಳ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಎನ್‍ಐಎ ನಾಯ್ಕ್ ವಿರುದ್ಧ ಭಯೋತ್ಪಾದನೆಯ ಆರೋಪ ಹೊರಿಸಿ ಕೇಸು ದಾಖಲಿಸಿತ್ತು. ಅದೃಷ್ಟವಶಾತ್ ಇಂಟರ್‍ಫೋಲ್ ಭಾರತೀಯ ರಾಜಕಾರಣಿಗಳ ಅಧೀನದಲ್ಲಿಲ್ಲ. ಭಾರತದ ಏಜೆನ್ಸಿಗಳು ತನ್ನ ವಿರುದ್ಧ ಹೊರಿಸಿದ ಆರೋಪ ಅವರಿಗೆ ಅರ್ಥವಾಗಿಲ್ಲ. ತನ್ನ ವಿರುದ್ಧ ಏನಾದರೂ ಕಟ್ಟುಕತೆ ಹೆಣೆಯಲು ತನಿಖಾ ಏಜೆನ್ಸಿಗಳು ಯತ್ನಿಸುತ್ತಿವೆ. ತನ್ನ ವಿರುದ್ಧ ಹೇರಿದ ಭಯೋತ್ಪಾದನೆ ಆರೋಪ ನಡೆಯದ್ದರಿಂದ ತನ್ನ ವಿರುದ್ಧ ಆರ್ಥಿಕ ಅಪರಾಧ ಆರೋಪದೊಂದಿಗೆ ಈಗ ರಂಗಪ್ರವೇಶಿಸಿದ್ದಾರೆ. ಭಾರತದ ಒತ್ತಡ ಇದ್ದರೂ ಇಂಟರ್‍ಪೋಲ್ ತನ್ನ ವಿರುದ್ಧ ರೆಡ್‍ಕಾರ್ನರ್ ನೋಟಿಸು ಹೊರಡಿಸಿಲ್ಲ. ತನ್ನ ವಿರುದ್ಧ ಕೇಸು ಸಾಬೀತಾಗುವವರೆಗೆ ಬಂಧಿಸುವುದಿಲ್ಲ ಎನ್ನುವ ಭರವಸೆಯನ್ನು ಸುಪ್ರೀಂಕೋರ್ಟು ನೀಡಿದರೆ ಭಾರತಕ್ಕೆ ಬರಲು ಸಿದ್ಧನಿರುವೆ. ಭಾರತದ ನ್ಯಾಯಾಂಗದಲ್ಲಿ ತನಗೆ ಭರವಸೆ ಇದೆ. ಆದರೆ ಪ್ರಾಸಿಕ್ಯೂಶನ್‍ನಲ್ಲಿ ನಂಬಿಕೆಯಿಲ್ಲ ಎಂದು ಝಾಕಿರ್ ನಾಯ್ಕ್ ಹೇಳಿದರು.