ದಿಲ್ಲಿ: ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ 17 ಸಾವಿರ ಪುಟಗಳ ಆರೋಪಪಟ್ಟಿ!

0
85

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಫೆಬ್ರವರಿ ದಿಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ 17,500 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದೆ. ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ 15 ಜನರ ಹೆಸರನ್ನು ಉಲ್ಲೇಖಿಸಿ ಆರೋಪಿಗಳು ಎಂಬುದಾಗಿ ವರದಿಮಾಡಿದೆ.

ಎರಡು ಟ್ರಂಕ್‌ಗಳಲ್ಲಿ ಭರ್ತಿ ಮಾಡಲಾದ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಆರೋಪ ಪಟ್ಟಿಯಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಹೆಸರು ಹೊರತುಪಡಿಸಿ, ಅಮಾನತುಗೊಂಡಿರುವ ಆಮ್ ಆದ್ಮಿ ಪಕ್ಷದ ಮುಖಂಡ ತಾಹಿರ್ ಹುಸೇನ್, ನತಾಶಾ ನರ್ವಾಲ್, ದೇವಾಂಗನಾ ಕಲಿತ, ಆಸಿಫ್ ಇಕ್ಬಾಲ್ ತನ್ಹಾ, ಇಶ್ರತ್ ಜಹಾನ್, ಮೀರನ್ ಹೈದರ್, ಸಫೂರಾ ಝರ್ಗರ್, ಖಲೀಫ್ ಸೈಫಿ ಸಹಿತ 15 ಜನರ ಹೆಸರನ್ನು ಕರ್ಕಾರ್‌ಡೂಮ ನ್ಯಾಯಾಲಯದ ವಿಶೇಷ ತನಿಖಾ ವಿಭಾಗಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದಲ್ಲಿ ಇದುವರೆಗೆ ಬಂಧಿಸಲಾಗಿರುವ 21 ಜನರಲ್ಲಿ 15 ಜನರ ವಿರುದ್ಧ ಪುರಾವೆ, ದಾಖಲೆಯ ಸಾಕ್ಷ ಹಾಗೂ ಪ್ರಮಾಣಪತ್ರದ ಪುರಾವೆ ಹಾಗೂ ವಾಟ್ಸಪ್ ಗ್ರೂಪ್‌ಗಳ ಆಧಾರದಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ. ಉಳಿದ 6 ಜನರ ವಿರುದ್ಧ ಸಾಕಷ್ಟು ಪುರಾವೆ ಲಭಿಸಿದ ಬಳಿಕ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಸೀಲಾಂಪುರ ಮತ್ತು ಜಫ್ರಾಬಾದ್‌ನಲ್ಲಿ ನಡೆದಿದ್ದ ಹಿಂಸಾಚಾರವನ್ನು ವ್ಯವಸ್ಥಿತಗೊಳಿಸಲು ಎರಡು ವಾಟ್ಸಪ್ ಗುಂಪನ್ನು ರಚಿಸಲಾಗಿತ್ತು. ಆರಂಭದಿಂದಲೇ ಶಾಂತಿಯುತ ಪ್ರತಿಭಟನೆ ನಡೆದಿಲ್ಲ‌ ಬದಲಾಗಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಉದ್ದೇಶ ಪ್ರತಿಭಟನೆಯ ಹಿಂದೆ ಇತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ, ಪೊಲೀಸರು ಕೇವಲ ಸಿಎಎ ವಿರೋಧಿ ಹೋರಾಟಗಾರರನ್ನು, ವಿದ್ಯಾರ್ಥಿ ನಾಯಕರನ್ನು ಗುರಿಯಾಗಿಸಿ ಬಂಧನ ಹಾಗೂ ಆರೋಪ ಪಟ್ಟಿ ಸಲ್ಲಿಸಿದ್ದನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ದಿಲ್ಲಿ ಪೊಲೀಸರ ತನಿಖೆಯನ್ನು ಪಿತೂರಿ ಎಂಬುದಾಗಿ ಕರೆಯಲಾಗುತ್ತಿದೆ.

ಗಲಭೆಗೆ ಬಹಿರಂಗ ಪ್ರಚೋದನೆ ನೀಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಪೊಲೀಸರ ಕ್ರಮವನ್ನು ಪ್ರಶ್ನಿಸುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here