ದೆಹಲಿ: ರೇಪ್ ಕೇಸ್ ಹಿಂಪಡೆಯಲು ಒಪ್ಪದ ಅಪ್ರಾಪ್ತ ಬಾಲಕಿಗೆ ವಿಷವುಣಿಸಿ ಬೆದರಿಕೆ

0
576

ದೆಹಲಿ: ಅತ್ಯಾಚಾರ ಪ್ರಕರಣವನ್ನು ಹಿಂಪಡೆಯಲು ಒಪ್ಪದ ಅಪ್ರಾಪ್ತ ಬಾಲಕಿಗೆ ಮೋಟರ್ ಸೈಕಲ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಾಲಕಿಗೆ ವಿಷವುಣಿಸಿ ಬೆದರಿಕೆ ಒಡ್ಡಿದ ಘಟನೆಯು ನೈಋತ್ಯ ದೆಹಲಿಯ ಹಸ್ತ ಸಾಲ್ ನಲ್ಲಿ ನಡೆದಿದೆ.

ಕಳೆದ ವರ್ಷ 20 ರ ಹರೆಯದ ವ್ಯಕ್ತಿಯು ಬಾಲಕಿಯನ್ನು ಅಪಹರಿಸಿ ರಾಜಸ್ಥಾನದ ವಿವಿಧ ಪ್ರದೇಶಗಳಲ್ಲಿ ಆಕೆಯ ಮೇಲೆ ತಿಂಗಳಾವಧಿಯವರೆಗೂ ಅತ್ಯಾಚಾರವೆಸಗಿದ್ದನು. 2018 ರ ಎಪ್ರೀಲ್ ತಿಂಗಳಿನಲ್ಲಿ ರಾಜಸ್ಥಾನದ ಆಲ್ವಾರ್ ನ ಒಂದು ಮನೆಯಿಂದ ಪೋಲಿಸರು ಬಾಲಕಿಯನ್ನು ಸಂರಕ್ಷಿಸುವಲ್ಲಿ ಸಫಲರಾಗಗಿದ್ದರು.

ಆರೋಪಿಯು ತಲೆಮರೆಸಿಕೊಂಡಿದ್ದನಾದರೆ, ಕಾರ್ಯಾಚರಣೆಗಳ ಪರಿಣಾಮವಾಗಿ ಎಪ್ರೀಲ್ 26ರಂದು ಬಂಧಿಸಿ ಸೆರೆಮನೆಗೆ ತಳ್ಳಲಾಗಿತ್ತು. ಆದರೆ ಆರೋಪಿಯು ಕೆಲವೇ ತಿಂಗಳಲ್ಲಿ ಜಾಮೀನು ಮೇರೆಗೆ ಬಿಡುಗಡೆಗೊಂಡಿದ್ದನು.

ಆರೋಪಿಯು ಬಿಡುಗಡೆಗೊಂಡ ನಂತರ ತನಗೆ ಜೀವ ಬೆದರಿಕೆ ಇರುವ ಕುರಿತು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಹೇಳಿಕೊಂಡಿದ್ದಳು‌. ಆದರೆ ಟ್ಯೂಷನ್ ಮುಗಿಸಿ ಬರುತ್ತಿದ್ದ ವೇಳೆ ಇಬ್ಬರು ಬೈಕ್ ಸವಾರರು ಆಕೆಯನ್ನು ಅಡ್ಡಗಟ್ಟಿದ್ದು, ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಕೆ ಒಡ್ಡಿದರಲ್ಲದೇ ಆಕೆಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ ಬಲವಂತವಾಗಿ ಹಿಡಿದೆಳೆದು ಒಂದು ಬಾಟಲಿ ದ್ರಾವಣವನ್ನು ಆಕೆಯ ಬಾಯಿಗೆ ಸುರಿದು ಕುಡಿಸಿದ್ದರು.

ಈ ನಡುವೆ ಬಾಲಕಿಯು ಕಿರಿಚಾಟವನ್ನು ಕೇಳಿದ ಜನರು ಹತ್ತಿರ ಸುಳಿಯುತ್ತಿದ್ದಂತೆ ಬೈಕ್ ಸವಾರರು ಅಲ್ಲಿಂದ ಪರಾರಿಯಾಗಿದ್ದರು. ಬಾಲಕಿಗೆ ಮಂಪರು ಆವರಿಸಿದಂತಾಗಿದ್ದು ಆಕೆ ಕೂಡಲೇ ರಿಕ್ಷಾವನ್ನೇರಿ ಸರಕಾರಿ ಆಸ್ಪತ್ರೆಗೆ ಸೇರಿಕೊಂಡಿದ್ದಳು. ವೈದ್ಯರು ಆಕೆಯ ದೇಹದಲ್ಲಿ ವಿಷದ ಅಂಶಗಳಿರುವುದನ್ನು ಪತ್ತೆ ಹಚ್ಚಿದ್ದು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿದ್ದಾರಲ್ಲದೇ ಬಾಲಕಿಯು ಪ್ರಾಣಾಪಾಯದಿಂದ ಪಾರಾಗಿದ್ದಾಳೆಂದು ತಿಳಿಸಿದ್ದರು.

ಉತ್ತಮ್ ಪೋಲಿಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 328, 195A ಹಾಗೂ ಸೆಕ್ಷನ್ 341 ರ ಪ್ರಕಾರ ಪೋಲಿಸರು ದೂರನ್ನು ದಾಖಲಿಸಿದ್ದು ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಹಿರಿಯ ಪೋಲಿಸ್ ಅಧಿಕಾರಿ ಸಾಗರ್ ರವರು ತಿಳಿಸಿದ್ದಾರೆ.