ದೇಶದ ಪರಿಸ್ಥಿತಿ ಸುಧಾರಿಸಲು ಮುಸ್ಲಿಮರು ಮುಂದಡಿ ಇಡಬೇಕು: ಮೌಲಾನಾ ಉಮರಿ

0
821

ನವದೆಹಲಿ: ಈದುಲ್ ಅಝ್ಹಾದ ಈದ್ ಸಂದೇಶವನ್ನು ಜಮಾಅತ್‍ನ ರಾಷ್ಟ್ರಾಧ್ಯಕ್ಷರಾದ ಮೌಲಾನಾ ಸೈಯ್ಯದ್ ಜಲಾಲುದ್ದೀನ್ ಉಮರಿಯವರು ನವದೆಹಲಿಯ ಜಮಾಅತೆ ಇಸ್ಲಾಮೀ ಹಿಂದ್ ಕೇಂದ್ರ ಕಛೇರಿಯಲ್ಲಿ ನೀಡಿದರು. ದೇಶದಲ್ಲಿ ಕಳೆದ ಈದುಲ್ ಫಿತ್ರ್‍ನಲ್ಲಿದ್ದ ಪರಿಸ್ಥಿತಿಯು ಈಗಲೂ ಹಾಗೇ ಇದೆ. ಕಾನೂನನ್ನು ಮುರಿಯುತ್ತಾ ಗುಂಪು ಹಲ್ಲೆಗಳು ದಿನೇ ದಿನೇ ಹೆಚ್ಚಾಗುತ್ತಲಿದೆ. ಅಧಿಕಾರದಲ್ಲಿರುವವರು ತಾವು ಕಾನೂನಿಗಿಂತಲೂ ಮಿಗಿಲಾದವರೆಂಬಂತೆ ವರ್ತಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಸ್ಲಿಮರು ಮೌನ ಮುರಿಯಬೇಕಾಗಿದೆ ಎಂದು ಅವರು ಕರೆ ನೀಡಿದರು.

“ಗುಂಪು ಹತ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ. ಸಂಘಟಿತರಾದ ಒಂದು ಗುಂಪು ಥಳಿಸಿ ಕೊಲ್ಲಲು ಹೇಸುತ್ತಿಲ್ಲ. ಮಹಿಳೆಯರು ತಮ್ಮ ಸ್ವಂತ ಮನೆಗಳಲ್ಲಿಯೂ ಸುರಕ್ಷಿತರಾಗಿಲ್ಲ. ಈ ನಡುವೆ ಸರಕಾರ ಸಲಿಂಗರತಿಗೆ ಮನ್ನಣೆ ನೀಡಲು ಮುಂದಾಗಿರುವುದು ದುರದೃಷ್ಟಕರ. ದೇಶದ ಆರ್ಥಿಕ ವ್ಯವಸ್ಥೆಯು ಕೆಲವೇ ಕೆಲವು ಬಂಡವಾಳಗಾರರ ಕೈಯಲ್ಲಿ ನಿಯಂತ್ರಿಸಲ್ಪಟ್ಟಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದಾದ್ಯಂತ ಹತ್ತಿಕ್ಕಲಾಗುತ್ತಿದೆ. ಇಂತಹ ಉದ್ವಿಗ್ನ ಪರಿಸ್ಥಿತಿ ಯಲ್ಲಿ ನೀವು ಮೌನವಾಗಿ ಎಲ್ಲವನ್ನೂ ಸಹಿಸುತ್ತಿರೋ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಂತಹ ಪರಿಸ್ಥಿತಿಗಳನ್ನು ನಾವು ನಿಯಂತ್ರಿಸಲು ಮುಂದಡಿ ಇಡಬೇಕಿದೆ. ಈ ಸಂದರ್ಭಗಳನ್ನು ಪರಿಹರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ದೇಶದ ನಿಷ್ಠಾವಂತ ಪ್ರಜೆಗಳೆಂಬ ನಿಟ್ಟಿನಲ್ಲಿ ನಮ್ಮ ಪರಿಸ್ಥಿತಿಯನ್ನು ನಾವು ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕಾದುದು ನಮ್ಮೆಲ್ಲರ ಕರ್ತವ್ಯ” ಎಂದು ಉಮರಿಯವರು ಕರೆ ನೀಡಿದರು.
ಲೌಕಿಕ ಜೀವನದತ್ತ ಧಾವಿಸದೆ ಅಲ್ಲಾಹನ ಮಾರ್ಗದಲ್ಲಿ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರಲ್ಲದೇ ಈದುಲ್ ಅಝ್ಝಾದ ಮಹತ್ವವನ್ನು ಸಾರಿದರು.

ಈ ಸಂದರ್ಭದಲ್ಲಿ ಗರಿಷ್ಠ ಮೊತ್ತದಲ್ಲಿ ಕೇರಳ/ಕೊಡಗು ನೆರೆಪೀಡಿತರ ನೆರವಿಗೆ ಪರಿಹಾರ ಧನ ಸಂಗ್ರಹಿಸಿ ಸಂಕಷ್ಟ ಪೀಡಿತರಿಗೆ ನೆರವಾಗಲು ಕರೆ ನೀಡಿದರು.