ಭಯಂಕರ ಭೂತ-ಪ್ರೇತಗಳು

0
270

ಅಬ್ದುಲ್ ರಜಾಕ್ `ಫೈಝಲ್, ಮುಲ್ಕಿ

ಸಂತನೊಡನೆ ಶಿಷ್ಯನೊಬ್ಬ ಕೇಳಿದ,

“ನೀವು ಭೂತ-ಪ್ರೇತಗಳನ್ನು ನೋಡಿದ್ದೀರಾ?”

ಸಂತ ನುಡಿದ, “ಹೌದು”.

ಬಹಳ ರೋಮಾಂಚಿತನಾದ ಶಿಷ್ಯ ಕೇಳಿದ, “ಹೌದಾ..?! ಎಲ್ಲಿ ನೋಡಿದ್ದು..?”

“ಅವು ನನ್ನತಲೆಯಲ್ಲೇ ಮನೆ ಮಾಡಿಕೊಂಡಿದ್ದವು.ಇತ್ತೀಚೆಗಷ್ಟೇ ನಾನು ಅವುಗಳನ್ನು ಓಡಿಸಿದೆ” ಎಂದ ಸಂತ.

ಹೌದು. ಬಹಳಷ್ಟು ಭೂತ ಪ್ರೇತಗಳು ನಮ್ಮೊಳಗೇ ಮನೆ ಮಾಡಿವೆ. ಅವುಗಳು ನಮ್ಮ ಮುನ್ನಡೆಯನ್ನು ತಡೆ ಹಿಡಿಯುತ್ತವೆ. ನಮ್ಮ ಗುರಿ ಸಾಧನೆಗೆ ಅಡ್ಡಿಯಾಗಿ ನಿಲ್ಲುತ್ತವೆ. ಹಲವಾರು ಸಲ ಕನಸು ಕಾಣಲೂ ಬಿಡುವುದಿಲ್ಲ. ಈ ಭೂತ-ಪ್ರೇತಗಳ ಸಾಂಘಿಕ ಹೆಸರು ಭಯ. ಚೆನ್ನಾಗಿ ತಿನ್ನೋದಕ್ಕೆ ರೋಗದ ಭಯ, ಮೈ ಬಗ್ಗಿಸಿ ದುಡಿಯೋದಕ್ಕೆ ದೇಹದ ಭಯ, ಎಷ್ಟೋ ಸಮಯದಿಂದ ಯೋಚಿಸಿದ ವ್ಯಾಪಾರ ಪ್ರಾರಂಭಿಸೋಕೆ ವೈಫಲ್ಯದ ಭಯ. ಬಾಲ್ಯದಲ್ಲಿ, ನಾ ಇನ್ನೂ ಎಳಸು ಅನ್ನೋ ಭಯ. ಯೌವ್ವನದಲ್ಲಿ ಯಥಾಸ್ಥಿತಿ ಎಲ್ಲಿ ಹಾಳಾಗಿ ಹೋದರೆ ಅನ್ನೋ ಭಯ. ನಡು ವಯಸ್ಸಾದರೆ ವೃದ್ಧಾಪ್ಯದ ಭಯ. ಹೀಗೆ… ನಾವು ಈ ಭಯಗಳನ್ನು ಗೆಲ್ಲುವುದೇ ಇಲ್ಲ. ಹೀಗೆ ಭಯಗಳನ್ನು ನೆಚ್ಚಿ ಕೂತರೆ ಯಾವ ಕಾರ್ಯ ಸಾಧನೆಯೂ ಆಗಲಾರದು. ಬ್ರಿಟಿಷರ ಬಲಿಷ್ಟ ಸೇನೆಯನ್ನು ಸೋಲಿಸಿ ಅಮೇರಿಕ ಸಂಸ್ಥಾನ ಸ್ವಾತಂತ್ರ ರಾಷ್ಟ್ರವಾದದ್ದು ಈ ಭಯ ಮೀರಿದ ಸ್ಯಾಮ್‍ವೆಲ್ ಆಡಮ್ಸ್, ಜಾನ್ ಹಾನ್ಕೋಕ್ ಮುಂತಾದ ಭಯವನ್ನು ಗೆದ್ದಿದ್ದ ಕೆಲ ಅಪ್ರತಿಮ ಮನುಷ್ಯರ ಕಾರಣದಿಂದಲೇ ಆಗಿತ್ತು. ಇಪ್ಪತ್ತು ಕೋಟಿಯಷ್ಟು ಬೃಹತ್ ಜನ ಸಮೂಹವನ್ನು ಗಾಂಧಿ ಎಂಬ ಕೃಶಾಕಾರದ ತುಂಡು ಬಟ್ಟೆತೊಟ್ಟ ಫಕೀರ, ಸೂರ್ಯ ಮುಳುಗದ ಸಾಮ್ರಾಜ್ಯ ಹೊಂದಿದ್ದ ಬ್ರಿಟಿಷರ ವಿರುದ್ದ ಒಂದುಗೂಡಿಸಿದ್ದೂ ಈ ಭಯಗಳನ್ನು ಗೆದ್ದ ಕಾರಣದಿಂದಲೇ. ಏಕ ವ್ಯಕ್ತಿಯಾಗಿ ಪ್ರತಿಪಾದಿಸಿದ್ದ ಭೋದನೆಯಡಿ ಇಡಿ ೀಅರೇಬಿಯಾವನ್ನು ಒಂದುಗೂಡಿಸಿದ ಪ್ರವಾದಿ ಮುಹಮ್ಮದರ ಯಶೋಗಾಥೆಯಲ್ಲೂ ಭಯದ ಆಚೆ ಇರೋ ಯಶಸ್ಸಿನ ಕುರಿತು ಮಹೋನ್ನತ ಪಾಠವಿದೆ. ಗಿಲಿಟಿನ್‍ಗೆ ಜನ ಹೆದರಿದ್ದರೆ ಪ್ರಾನ್ಸ್ ಕ್ರಾಂತಿ ಸಂಭವಿಸುತ್ತಿರಲಿಲ್ಲ. ಬರ್ಲಿನ್ ಗೋಡೆಯೂ ಒಡೆಯಲ್ಪಡುತ್ತಿರಲಿಲ್ಲ.

ಹೀಗೆ ಜಗತ್ತಿನಲ್ಲಿ ನಡೆದ ಮಹತ್ತರ ಬದಲಾವಣೆಗಳೆಲ್ಲವೂ ಕೆಲ ಜನರ ಎದೆಯಲ್ಲಿ ಕೊನರಿದ ಅಸಾಮಾನ್ಯ ಧೈರ್ಯದ ಪ್ರದರ್ಶನದಿಂದಲೇ ಆಗಿವೆ. ಪ್ರತಿಯೊಬ್ಬ ಸಾಧಕನೂ ಭಯವನ್ನು ಮೀರಿದ ಕಾರಣದಿಂದ, ಹಿಂಜರಿಕೆಯನ್ನು ಮೆಟ್ಟಿ ನಿಂತ ದೆಸೆಯಿಂದಾಗಿಯೇ ಇತಿಹಾಸದಲ್ಲಿ ಛಾಪು ಮೂಡಿಸಿದ್ದಾನೆ. ಹೇಳಲಿಕ್ಕೆ ಇದು ಒಂದು ಸಣ್ಣ ವಿಷಯ. ಆದರೆ, ಆ ಧೈರ್ಯ ಬೆಳೆಸೋದು ಮತ್ತು ವಿವಿಧ ಭಯಗಳೆಂಬ ಭೂತ-ಪ್ರೇತಗಳನ್ನು ಮೆದುಳಿಂದ ಬೆಳೆಸೋದು ಮತ್ತು ವಿವಿಧ ಭಯಗಳೆಂಬ ಭೂತ-ಪ್ರೇತಗಳನ್ನು ಮೆದುಳಿಂದ ಓಡಿಸೋದು ನಿಜಕ್ಕೂ ಬಹಳ ತ್ರಾಸದಾಯಕ ಕಾರ್ಯ. ಆದರೆ ಅದು ಅಷ್ಟೇ ಮಹೋನ್ನತ ಕಾರ್ಯವೂ ಹೌದು. ಏಕೆಂದರೆ ಯಾವಾಗ ಭಯ ನಮ್ಮ ಮನಸ್ಸನ್ನು ಬಿಟ್ಟುಓಡುತ್ತದೋ, ಆಗ ಮನ ಸಂದೇಹ ಮುಕ್ತವಾಗಿರುತ್ತದೆ. ಎಲ್ಲಿ ಸಂದೇಹವಿರುವುದಿಲ್ಲವೋ ಅಲ್ಲಿ ನಿಷ್ಕಲ್ಮಶವಾದ ನಂಬಿಕೆ ಇರುತ್ತದೆ. ಎಲ್ಲಿ ಈ ಅಸಾಮಾನ್ಯ ನಂಬಿಕೆಯು ಮನದಾಳದ ಉತ್ಕಟ ಇಚ್ಛೆಯ ಜೊತೆ ಬೆರೆಯಲ್ಪಟ್ಟು ಕಾರ್ಯ ಪ್ರವೃತ್ತವಾಗುತ್ತದೋ, ಆಗ ಜಗತ್ತಿನ ಎಲ್ಲಾ ನಿಗೂಢ ಶಕ್ತಿಗಳು ವ್ಯಕ್ತಿಯೋರ್ವನ ಗೆಲುವಿಗೆ ಪ್ರಯತ್ನಪಡುತ್ತಿದೆಯೋ ಎಂದು ಅನುಮಾನ ಮೂಡುವಂತೆ, ಗೆಲುವು ಸಿದ್ದಿಸುತ್ತದೆ. ಇದರ ಕಾರಣ ಇಂದಿಗೂ ತಿಳಿದಿಲ್ಲ, ಆದರೆ ಎಲ್ಲಾ ಭಯಗಳನ್ನು ಮೀರಿ ತನ್ನ ಕೆಲಸ ಆಗೇ ಆಗುತ್ತದೆ ಎಂದು ಅಚಲವಾಗಿ ನಂಬಿ ಆ ದೆಸೆಯಲ್ಲಿ ಕೆಲಸ ಮಾಡುವ ಮಂದಿ ಗೆದ್ದೆ ಗೆಲ್ಲುತ್ತಾರೆ..!