ಉ. ಪ್ರದೇಶ: ಕಾಣೆಯಾದ ಮಗಳನ್ನು ಹುಡುಕಲು ಭಿನ್ನಸಾಮರ್ಥ್ಯ ಮಹಿಳೆಯಿಂದ 15,000 ರೂ ಪೀಕಿಸಿದ ಪೊಲೀಸರು

0
330

ಸನ್ಮಾರ್ಗ ವಾರ್ತೆ

ಲಕ್ನೊ,ಫೆ.2: ಉತ್ತರಪ್ರದೇಶದಲ್ಲಿ ಕಾಣೆಯಾದ ಮಗಳನ್ನು ಹುಡುಕಲು ಹೊರಟ ಪೊಲೀಸ್ ವಾಹನಕ್ಕೆ ಡೀಸೆಲ್ ತುಂಬಿಸಲೆಂದು ಭಿನ್ನಸಾಮರ್ಥ್ಯ ಮಹಿಳೆಯಿಂದ ಪೊಲೀಸರು 15,000 ರೂಪಾಯಿ ಪಡೆದುಕೊಂಡ ಘಟನೆ ವರದಿಯಾಗಿದೆ‌.

ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಕಳೆದ ತಿಂಗಳು ಭಿನ್ನಸಾಮರ್ಥ್ಯದ ಮಹಿಳೆ ಗುಡಿಯಾರವರ ಮಗಳನ್ನು ಸಂಬಂಧಿಕರು ಅಪಹರಿಸಿದ್ದರು. ನಂತರ ಪೊಲೀಸರಿಗೆ ಮಹಿಳೆ ದೂರು ನೀಡಿದ್ದರು. ಆದರೆ ಪೊಲೀಸರು ತನಿಖೆಗೆ ಮುಂದಾಗಲಿಲ್ಲ. ಮಗಳನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ವಾಪಸು ಕಳುಹಿಸುತ್ತಿದ್ದರು. ಕೆಲವೊಮ್ಮೆ ಪೊಲೀಸ್ ಠಾಣೆಯಿಂಧ ಹೊರದಬ್ಬುತ್ತಿದ್ದರು ಎನ್ನಲಾಗಿದೆ. ಮಗಳ ಚಾರಿತ್ರ್ಯದ ಕುರಿತು ಅಪಮಾನಿಸಿದ್ದಾರೆ ಎಂದೂ ಗುಡಿಯಾ ಹೇಳಿದ್ದಾರೆ.

ಮಗಳನ್ನು ಹುಡುಕುವುದಕ್ಕಾಗಿ ಜೀಪಿಗೆ ಡೀಸೆಲ್ ಹಾಕಬೇಕೆಂದು ಪೊಲೀಸರು ಹೇಳಿದ್ದರು. ಇದಕ್ಕಾಗಿ ಸಂಬಂಧಿಕರಿಂದ ಸಾಲ ಪಡೆದು ಹದಿನೈದು ಸಾವಿರ ಕೊಟ್ಟಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಹಣಕೊಟ್ಟರೂ ಮಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಗುಡಿಯಾರ ದುಸ್ಥಿತಿಯನ್ನು ವಿವರಿಸುವ ವೀಡಿಯೊ ಪ್ರಸಾರವಾಗುತ್ತಿದೆ. ಇದರೊಂದಿಗೆ ಕಾನ್ಪುರ ಪೊಲೀಸರು ಕೇಸು ದಾಖಲಿಸಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಇಲಾಖಾ ತನಿಖೆ ಘೋಷಿಸಿದ್ದಾರೆ. ಗುಡಿಯಾರ ಮಗಳನ್ನು ಪತ್ತೆ ಮಾಡಲು ನಾಲ್ವರ ತಂಡವನ್ನು ನೇಮಕಗೊಳಿಸಲಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಹಿರಿಯ ಪೊಲೀಸಧಿಕಾರಿ ಬ್ರಜೇಶ್ ಕುಮಾರ್ ಶ್ರೀವಾಸ್ತವ ಹೇಳಿದರು.