ಸಿಎಎ ಪರ ರ‌್ಯಾಲಿ: ಮಹಿಳಾ ಜಿಲ್ಲಾಧಿಕಾರಿಯ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ; ಒಬ್ಬನ ಬಂಧನ

0
837

ಸನ್ಮಾರ್ಗ ವಾರ್ತೆ

ಭೋಪಾಲ, ಜ .20: ಮಧ್ಯಪ್ರದೇಶ ರಾಜ್‍ಗರ್ ನಲ್ಲಿ ಪೌರತ್ವ ತಿದ್ದುಪಡಿ ಕಾನೂನನ್ನು ಬೆಂಬಲಿಸಿ ನಡೆಸಿದ ಪ್ರತಿಭಟನೆಯ ವೇಳೆ ಮಹಿಳಾ ಉಪಜಿಲ್ಲಾಧಿಕಾರಿಯ ಮೇಲೆ ಕೈಹಾಕಿದ ಘಟನೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ರಾಜ್‍ಗರ್ ಡೆಪ್ಯುಟಿ ಕಲೆಕ್ಟರ್ ಪ್ರಿಯವರ್ಮಾರ ಮೇಲೆ ಬಿಜೆಪಿ ಕಾರ್ಯಕರ್ತರು ಕೈಹಾಕಿದ್ದರು.

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದವರನ್ನು ತಡೆಯಲು ಶ್ರಮಿಸಿದ ಪ್ರಿಯಾ ವರ್ಮರನ್ನು ಸುತ್ತುವರಿದ ಕಾರ್ಯಕರ್ತರು ಅವರ ಕೂದಲು ಹಿಡಿದೆಳೆದು ದೂರ ಸರಿಸಿದ್ದರು. ಓರ್ವ ತನ್ನನ್ನು ಹಿಡಿದು ಎಳೆದನೆಂದು ಅವರು ದೂರು ನೀಡಿದ್ದು ಪ್ರಿಯಾ ವರ್ಮಾರ ದೂರಿನಲ್ಲಿ ಇಬ್ಬರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ನಂತರ ಆರೋಪಿಯ ಬಂಧನ ನಡೆದಿದೆ.

ನಿಷೇಧಾಜ್ಞೆ ಇರುವಾಗಲೇ ರಾಜ್‍ಗರ್ ನಲ್ಲಿ ಬಿಜೆಪಿ ನಡೆಸಿದ ರ‌್ಯಾಲಿಯನ್ನು ತಡೆದ ನಂತರ ನಡೆದ ಘರ್ಷಣೆಯಲ್ಲಿ ಹದಿನೇಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಷನ್ 144 ಉಲ್ಲಂಘಿಸಿ ಪ್ರತಿಭಟನೆ ನಡೆಸಿದ 124 ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.