ಚುನಾವಣೆ ಮುಗಿದು ಒಂದು ವಾರದ ಬಳಿಕ ಮತದಾನ ಮಾಡಲು ಮನವಿ ಮಾಡಿದ ಟ್ರಂಪ್ ಪುತ್ರ

0
1222

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.11: ಅಮೆರಿಕ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆದು ಒಂದು ವಾರದ ಬಳಿಕ ಜನರಲ್ಲಿ ಮತದಾನ ಮಾಡಲು ಡೊನಾಲ್ಡ್ ಟ್ರಂಪ್ ಪುತ್ರ ಮನವಿ ಮಾಡಿದ್ದಾರೆ. ಮಂಗಳವಾರ ಟ್ವೀಟ್ ಮಾಡಿದ ಡೊನಾಲ್ಡ್ ಟ್ರಂಪ್‍ರ ಎರಡನೆ ಪುತ್ರ ಎರಿಕ್ ಟ್ರಂಪ್ ಮಿನಸೋಟದ ಜನರಲ್ಲಿ ಹೊರಗೆ ಬನ್ನಿ ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ. ತನ್ನ ಪ್ರಮಾದ ಮನವರಿಕೆಯಾದ ಬಳಿಕ ಟ್ವೀಟ್ ತೆಗೆದು ಹಾಕಿದರೂ ಸಾಮಾಜಿಕ ಮಾಧ್ಯಮಗಳು ಅದನ್ನು ಎತ್ತಿ ಹಿಡಿದು ಅಣಕಿಸುತ್ತಿವೆ.

ಒಂದು ಗಂಟೆಯೊಳಗೆ ಎರಿಕ್‍ರ ಪೋಸ್ಟಿನ ಸ್ಕ್ರೀನ್‌ಶಾಟ್ ವೈರಲ್ ಆಗಿದೆ. ಎರಿಕ್‍ರನ್ನು ಹಲವಾರು ಮಂದಿ ತಮಾಷೆ ಮಾಡಿ ಟ್ವೀಟ್ ಮಾಡಿದ್ದಾರೆ. ಚುನಾವಣೆ ದಿವಸ ಈ ರೀತಿ ಅವರು ಹಲವು ಟ್ವೀಟ್ ಮಾಡಿದ್ದರು. ಟ್ವೀಟ್ ಶೆಡ್ಯೂಲ್‍ನಲ್ಲಿ ಆದ ಪ್ರಮಾದದಿಂದ ಈ ರೀತಿ ಸಂಭವಿಸಿರಬಹುದು ಎನ್ನಲಾಗುತ್ತಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಿಕ್‍ರ ತಂದೆ ಡೊನಾಲ್ಡ್ ಟ್ರಂಪ್‍ರನ್ನು ಅವರ ಪ್ರತಿಸ್ಪರ್ಧಿ ಡೆಮಕ್ರಾಟಿಕ್ ಪಾರ್ಟಿಯ ಜೊ ಬೈಡನ್ ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೂ ಟ್ರಂಪ್ ಸೋಲು ಒಪ್ಪಿಕೊಂಡಿಲ್ಲ. ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಹೇಳುತ್ತಿದ್ದಾರೆ.