ಮಥುರಾ ಜೈಲಿನಲ್ಲಿ ಅನುಭವಿಸಿದ ಚಿತ್ರಹಿಂಸೆಯನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ಡಾ.ಕಫೀಲ್ ಖಾನ್ ಪತ್ರ

0
587

ಹೊಸದಿಲ್ಲಿ(ಸನ್ಮಾರ್ಗ ವಾರ್ತೆ): ಕೇಂದ್ರ ಸರ್ಕಾರವು ಬಂಧನದಲ್ಲಿರುವ ಮಾನವ ಹಕ್ಕುಗಳ ಸಂರಕ್ಷಕರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸೂಚಿಸಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ(UNHRC) ತಜ್ಞರ ತಂಡಕ್ಕೆ ಡಾ.ಕಫೀಲ್ ಖಾನ್ ಪತ್ರ ಬರೆದಿದ್ದಾರೆ.

ಕಳೆದ ಜೂನ್ 26ರಂದು ವಿಶ್ವಸಂಸ್ಥೆ ಮಾನವ ಹಕ್ಕು ಆಯೋಗ ತಜ್ಞರ ತಂಡ ಭಾರತ ಸರ್ಕಾರಕ್ಕೆ ಪತ್ರ ಬರೆದು ತಕ್ಷಣ ಮಾನವಹಕ್ಕು ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿತ್ತು. ಈ ಪತ್ರವನ್ನು ಉಲ್ಲೇಖಿಸಿ ಕಫೀಲ್ ಖಾನ್‌ರವರು ಸೆಪ್ಟೆಂಬರ್ 17ರಂದು UNHRCಗೆ ಪತ್ರ ಬರೆದಿದ್ದಾರೆ.

ಯಾವುದೇ ರೀತಿಯ ಹಿಂಸೆಗೆ ಕರೆ ನೀಡದೇ ಪ್ರತಿಭಟಿಸಿದವರ ವಿರುದ್ಧ, ರಾಜಕೀಯ ಭಿನ್ನಾಭಿಪ್ರಾಯ ಹೊಂದಿದವರ ವಿರುದ್ಧ ದೇಶದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ/ಯುಎಪಿಎ ಪ್ರಯೋಗಿಸಿ ಧ್ವನಿಯನ್ನು ಹುಟ್ಟಡಗಿಸಲಾಗುತ್ತಿದೆ ಎಂದು ಡಾ.ಕಫೀಲ್ ಖಾನ್ ತಮ್ಮ‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಥುರಾ ಜೈಲಿನಲ್ಲಿ ತನಗೆ ನೀಡಲಾದ ಮಾನಸಿಕ ದೈಹಿಕ ಕಿರುಕುಳಗಳ ಕುರಿತು, ಜೈಲಿನಲ್ಲಿ ಹಲವು ದಿನಗಳ ಕಾಲ ನೀರು ಆಹಾರ ನೀಡದೇ ಹಿಂಸಿಸಿದ ಕುರಿತು ಅವರು ಪತ್ರದಲ್ಲಿ ಬರೆದಿದ್ದು, ಸಾಮಾಜಿಕ ಹೋರಾಟಗಾರರನ್ನು ಎಲ್ಲ ರೀತಿಯ ಬಲಪ್ರಯೋಗಗಳ ಮೂಲಕ ಹಿಂದೆಸರಿಯುವಂತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅಲಹಾಬಾದ್ ಹೈಕೋರ್ಟ್, ಕಫೀಲ್ ಖಾನ್ ಬಂಧನ ಅಕ್ರಮ ಎಂದು ಹೇಳಿತ್ತಲ್ಲದೇ, ಕಫೀಲ್ ಖಾನ್‌ರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಯುಪಿ ಸರ್ಕಾರಕ್ಕೆ ತಾಕೀತು ಮಾಡಿತ್ತು.  ಕಫೀಲ್ ಭಾಷಣದಲ್ಲಿ ದ್ವೇಷ ಅಥವಾ ಹಿಂಸೆಯನ್ನು ಪ್ರಚೋದಿಸುವ ಯಾವುದೇ ಅಂಶ ಕಂಡು ಬಂದಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದ ಬಳಿಕ ಅವರನ್ನು ಸೆಪ್ಟೆಂಬರ್ 1ರಂದು ಬಿಡುಗಡೆ ಮಾಡಲಾಗಿದೆ.