ತಬ್ರೇಝ್ ಬಿಟ್ಟು ಹೋದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳೋಣ

0
575

ಸನ್ಮಾರ್ಗ ಸಂಪಾದಕೀಯ

ಜಾರ್ಖಂಡ್‍ನ ಧಟ್ಕಿಧಿ ಎಂಬ ಗ್ರಾಮದಲ್ಲಿ ಗುಂಪು ಥಳಿತಕ್ಕೆ ಒಳಗಾಗಿ ಜೂನ್ 22ರಂದು ಸಾವಿಗೀಡಾದ ತಬ್ರೇಝ್ ಅನ್ಸಾರಿಯ ಬಗ್ಗೆ ಅಲ್ಲಿನ ಉಪವಿಭಾಗೀಯ ಅಧಿಕಾರಿ ನಡೆಸಿದ ತನಿಖಾ ವರದಿಯ ವಿವರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಈ ವರದಿಯಲ್ಲಿರುವ ಅಂಶಗಳಿಗೆ ಸಂಬಂಧಿಸಿ ಮಾಧ್ಯಮಗಳಲ್ಲಾಗಲಿ ಸಾಮಾಜಿಕ ವ್ಯವಸ್ಥೆಯಿಂದಾಗಲಿ ಅಥವಾ ಮಾನವ ಹಕ್ಕುಗಳ ಹೋರಾಟಗಾರರಿಂದಾಗಲಿ ಅಚ್ಚರಿ ವ್ಯಕ್ತವಾಗಿಲ್ಲ. ಟಿ.ವಿ. ಚರ್ಚೆಗಳು, ಪತ್ರಿಕಾ ವಿಶ್ಲೇಷಣೆಗಳೂ ನಡೆದಿಲ್ಲ. ಒಂದು ಸಹಜ ವರದಿ ಎಂಬ ಮಿತಿಗಿಂತ ಆಚೆ ಆ ತನಿಖಾ ವರದಿ ಸುದ್ದಿಯಾಗದೇ ಇರುವುದಕ್ಕೆ ಕಾರಣ ಏನೆಂದರೆ,

1. ಅಂಥ ಥಳಿತದ ಸುದ್ದಿಗಳಿಗೆ ನಾವೀಗ ಒಗ್ಗಿಕೊಂಡಿದ್ದೇವೆ.
2. ಇಂಥ ವರದಿಗಳಲ್ಲಿ ನಮಗೆ ಗೊತ್ತಿಲ್ಲದ ಯಾವುದೂ ಇರುವುದಿಲ್ಲ.

ತಬ್ರೇಝ್ ಅನ್ಸಾರಿಯ ಸಾವಿನ ಕುರಿತಾದ ತನಿಖಾ ವರದಿಯಲ್ಲಿ ಅಚ್ಚರಿಯ ಅಂಶಗಳೇನೂ ಇಲ್ಲ. ಪೊಲೀಸರು ಮತ್ತು ವೈದ್ಯರ ನಿರ್ಲಕ್ಷ್ಯ ವನ್ನು ವರದಿಯಲ್ಲಿ ಎತ್ತಿ ಹೇಳಲಾಗಿದೆ. ತಬ್ರೇಝ್ ನ ಮೇಲೆ ಗುಂಪು ಹಲ್ಲೆ ನಡೆಯುತ್ತಿರುವ ಕುರಿತು ತಡರಾತ್ರಿಯೇ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರೂ ಅವರು ನಿರ್ಲಕ್ಷ್ಯ ತೋರಿದರು ಮತ್ತು ಬೆಳಿಗ್ಗೆ ಘಟನಾ ಸ್ಥಳಕ್ಕೆ ತಲುಪಿದರು ಎಂದು ವರದಿಯಲ್ಲಿದೆ. ತಬ್ರೇಝ್ ನ ಮೇಲಾದ ಗಾಯಗಳ ಕುರಿತಂತೆ ವೈದ್ಯರು ಗಂಭೀರವಾಗಿ ತಪಾಸಣೆ ನಡೆಸದೇ ನಿರ್ಲಕ್ಷ್ಯ ತೋರಿದರು ಎಂದೂ ವರದಿ ಹೇಳಿದೆ. ನಿಜವಾಗಿ, ಗುಂಪುಹತ್ಯೆಯ ಹೆಚ್ಚಿನೆಲ್ಲ ಕ್ರೌರ್ಯಗಳ ಪಾಡು ಇದು. ಥಳಿಸುವವರಿಗೆ ಉದ್ದೇಶಪೂರ್ವಕವಾಗಿ ಒಂದು ಅವಕಾಶ ಕೊಟ್ಟ ಬಳಿಕವೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪುತ್ತಾರೆ ಎಂಬ ಆರೋಪವನ್ನು ಈ ವರದಿಯೂ ಸಮರ್ಥಿಸುತ್ತಿದೆ. ಗುಂಪು ಥಳಿತ ಎಂಬುದು ನಾಗರಿಕ ಪುಂಡ ಗುಂಪಿನ ಕೃತ್ಯ ಎಂಬ ವಾದವನ್ನು ತಳ್ಳಿ ಹಾಕುವ ಅಂಶ ಇದು. ಗುಂಪು ಥಳಿತದ ಜೊತೆ ನಮ್ಮ ವ್ಯವಸ್ಥೆಗೆ ನೇರವಾಗಿಯೋ ಪರೋಕ್ಷವಾಗಿಯೋ ಸಂಬಂಧ ಇದೆ. ಗುಂಪು ಥಳಿತಕ್ಕೆ ಒಳಗಾಗುವ ವ್ಯಕ್ತಿಯನ್ನು ಅಪರಾಧಿಯಂತೆ ಮತ್ತು ಥಳಿಸಿದವರನ್ನು ನೈತಿಕ ಸಿಪಾಯಿಗಳಂತೆ ಕಾಣುವ ಅಲಿಖಿತ ವಾತಾವರಣವೊಂದು ಕೆಲವು ಪೊಲೀಸ್ ಠಾಣೆಗಳಲ್ಲಿದೆ. ಥಳಿಸಿದ ಗುಂಪಿನ ಮೇಲೆ ಹಾಕಬಹುದಾದ ಕೇಸುಗಳ ಸ್ವರೂಪವೇ ಇದನ್ನು ಹೇಳುತ್ತದೆ. ಸುಲಭದಲ್ಲಿ ಜಾಮೀನು ದೊರೆಯಬಲ್ಲ ಸೆಕ್ಷನ್‍ಗಳಡಿ ಕೇಸು ದಾಖಲಿಸುವ ಮೂಲಕ ಅವರಲ್ಲಿ ಧೈರ್ಯ ತುಂಬುವ ಯತ್ನಗಳೂ ನಡೆಯುತ್ತಿವೆ. ಪೆಹ್ಲೂ ಖಾನ್ ಪ್ರಕರಣ ಇದಕ್ಕೊಂದು ಉದಾಹರಣೆ. ಈ ದೇಶದಲ್ಲಿ 2014ರ ಬಳಿಕ ಗುಂಪು ಥಳಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಮಟ್ಟದ ಏರಿಕೆ ಯಾಕಾಯಿತು ಎಂಬ ಪ್ರಶ್ನೆಗೆ ಉತ್ತರವೂ ಇಲ್ಲೆಲ್ಲೋ ಇವೆ. ಈ ಪ್ರಶ್ನೆಯ ಜೊತೆಗೇ ಇನ್ನೊಂದು ಪ್ರಶ್ನೆಯನ್ನೂ ಎತ್ತಬಹುದು. ಗುಂಪು ಥಳಿತದ ಪ್ರಕರಣಗಳಲ್ಲಿ ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ, ಗುಜರಾತ್ ದ್ವಿತೀಯ, ಬಿಹಾರ ತೃತೀಯ, ರಾಜಸ್ಥಾನಕ್ಕೆ ಚತುರ್ಥ ಸ್ಥಾನಗಳು ಯಾಕಿವೆ? ಈ ಎರಡೂ ಪ್ರಶ್ನೆಗಳ ಉತ್ತರವು ಬಿಜೆಪಿಯನ್ನು ಹೊಂದಿಕೊಂಡಿದೆ ಎಂಬುದೂ ಅತ್ಯಂತ ವಿಷಾದನೀಯ.

ರಾಷ್ಟ್ರೀಯ ದ್ವೇಷ ಹಿಂಸೆ ನಿಗಾ (Hate crime branch) ಸಂಸ್ಥೆಯ ಪ್ರಕಾರ, 2014ರ ವರೆಗೆ ದ್ವೇಷ ಹಿಂಸೆಯ ಪ್ರಕರಣಗಳು ಒಂಟಿ ಅಂಕಿಯಲ್ಲಿದ್ದುವು. ಉದಾಹರಣೆಗೆ, 2013ರಲ್ಲಿ ದ್ವೇಷ ಹಿಂಸೆಯ ಸಂಖ್ಯೆ 9. ಅದೇವೇಳೆ, 2018ರಲ್ಲಿ ಇಂಥ ಹಿಂಸೆಗಳ ಸಂಖ್ಯೆ 291. ಇದರಲ್ಲಿ 152 ಪ್ರಕರಣಗಳು ನಡೆದುದೂ ಬಿಜೆಪಿ ಆಡಳಿತದ ಮೇಲಿನ ನಾಲ್ಕು ರಾಜ್ಯಗಳಲ್ಲಿ. ಆಮ್ನೆಸ್ಟಿ ಇಂಟರ್ ನಾಶನಲ್ ಇಂಡಿಯಾ ಸಂಸ್ಥೆಯ ವರದಿಯಂತೂ ಹಿಂಸಾತ್ಮಕ ಭಾರತದ ಅತಿ ಅಪಾಯಕಾರಿ ಚಿತ್ರಣವನ್ನು ನೀಡುತ್ತದೆ. ಗುಂಪು ದಾಳಿಗಳಿಗೆ ಸಂಬಂಧಿಸಿ 2015ರಿಂದ 2018ರ ವರೆಗಿನ ಅಂಕಿ ಅಂಶಗಳನ್ನು ಅದು ಇತ್ತೀಚೆಗೆ ಬಿಡುಗಡೆ ಮಾಡಿದ್ದು ಈ ಅವಧಿಯಲ್ಲಿ ಒಟ್ಟು 721 ಗುಂಪು ದಾಳಿಗಳು ಭಾರತದಲ್ಲಿ ನಡೆದಿವೆ ಎಂದು ಅದು ಹೇಳಿದೆ. ಕೇವಲ 2018ರಲ್ಲೇ ಒಟ್ಟು 218 ಗುಂಪು ದಾಳಿಗಳು ನಡೆದಿವೆ. ಇದರಲ್ಲಿ ಸಿಂಹಪಾಲು ದಲಿತರ ಮೇಲೆ. 142 ದಲಿತರ ಮೇಲೆ ಕೇವಲ ಕಳೆದ ಒಂದೇ ವರ್ಷದಲ್ಲಿ ಗುಂಪು ದಾಳಿ ನಡೆದಿದ್ದರೆ, 50 ದಾಳಿಗಳು ಮುಸ್ಲಿಮರ ಮೇಲೆ ಮತ್ತು 40 ದಾಳಿಗಳು ಮಹಿಳೆಯರ ಮೇಲೆ ನಡೆದಿವೆ. ಕ್ರೈಸ್ತರು, ಆದಿವಾಸಿಗಳ ಮೇಲೆ ತಲಾ 8 ದಾಳಿಗಳು ನಡೆದಿವೆ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದುದು 2014ರ ಬಳಿಕ ಎಂಬುದರಿಂದ ಮತ್ತು ಹೆಚ್ಚಿನ ಗುಂಪು ಥಳಿತ ಪ್ರಕರಣಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆದಿವೆ ಎಂಬ ಕಾರಣಕ್ಕಾಗಿಯೂ ಈ ವಿವರಗಳು ಮುಖ್ಯವಾಗುತ್ತವೆ. ತಬ್ರೇಝ್ ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ತನ್ನ ನೋವನ್ನು ವ್ಯಕ್ತಪಡಿಸಿದರು. ತಾನು ಆ ಗುಂಪು ಹತ್ಯೆಗಳ ಪರ ಇಲ್ಲ ಅನ್ನುವ ಅವರ ಆ ಸಂದೇಶ ಸ್ವಾಗತಾರ್ಹ. ಆದರೆ ಆ ಸಂದೇಶ ಎಲ್ಲಿಗೆ ಮತ್ತು ಹೇಗೆ ತಲುಪಬೇಕಾಗಿದೆಯೋ ಹಾಗೆ ತಲುಪಿಲ್ಲ ಅನ್ನುವುದನ್ನು ಆ ಬಳಿಕದ ಗುಂಪು ಥಳಿತ ಪ್ರಕರಣಗಳು ಸಾಬೀತುಪಡಿಸಿವೆ. ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಮಟ್ಟಹಾಕಲು ಹೊಸ ಕಾಯ್ದೆಯೊಂದನ್ನು ಜಾರಿಗೆ ತರಲು ಮಧ್ಯಪ್ರದೇಶ ಸರಕಾರ ಮುಂದಾಗಿರುವುದೂ ಇದೇವೇಳೆ ನಡೆದಿದೆ. ನಿಜವಾಗಿ,

ಇಲ್ಲಿನ ಸಮಸ್ಯೆ ಕಾನೂನಿನ ಕೊರತೆಯದ್ದಲ್ಲ. ಭಾರತೀಯ ದಂಡಸಂಹಿತೆಯಲ್ಲೇ ಗುಂಪು ಥಳಿತವನ್ನು ಮಟ್ಟ ಹಾಕುವುದಕ್ಕೆ ಬೇಕಾದ ವಿವಿಧ ಸೆಕ್ಷನ್‍ಗಳಿವೆ. ಆದರೆ, ಒಂದನೆಯದಾಗಿ, ಕೇಸು ದಾಖಲಿಸುವ ಪೊಲೀಸರಿಗೆ ಈ ಸೆಕ್ಷನ್‍ಗಳ ಬಗ್ಗೆ ಸಮಗ್ರ ತಿಳುವಳಿಕೆ ಇಲ್ಲ. ಎರಡನೆಯದಾಗಿ, ಪೊಲೀಸ್ ಠಾಣೆಗಳು ಗುಂಪು ಥಳಿತದಲ್ಲಿ ಭಾಗಿಯಾದವರನ್ನು ಕ್ರಿಮಿನಲ್‍ಗಳಂತೆ ಪರಿಗಣಿಸುತ್ತಿಲ್ಲ. ಆದ್ದರಿಂದ, ಮೊದಲು ಪೊಲೀಸ್ ಠಾಣೆಗಳ ಮನಸ್ಥಿತಿಗೆ ಚಿಕಿತ್ಸೆಯಾಗಬೇಕು. ಗುಂಪು ಹತ್ಯೆಯನ್ನು ಗೌರವದ ದೃಷ್ಟಿಯಿಂದ ನೋಡುವ ಠಾಣೆಗಳಿಗೆ ಮೇಲಧಿಕಾರಿಗಳು ಕ್ಲಾಸ್ ತೆಗೆದುಕೊಳ್ಳಬೇಕು. ತಪ್ಪಿತಸ್ಥರೆಂದು ಕಂಡುಬರುವ ಪೆÇಲೀಸರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ,

ಗುಂಪು ಹತ್ಯೆಗೂ ದ್ವೇಷ ಭಾಷಣಕ್ಕೂ ನಡುವೆ ಇರುವ ಗಾಢ ಸಂಬಂಧವನ್ನು ನಿರ್ಲಕ್ಷಿಸಿಕೊಂಡು ಗುಂಪು ಥಳಿತವನ್ನು ವಿಶ್ಲೇಷಣೆಗೆ ಒಳಪಡಿಸುವುದಕ್ಕೂ ಸಾಧ್ಯವಿಲ್ಲ. ಗುಂಪು ಥಳಿತ ಮತ್ತು ದ್ವೇಷ ಭಾಷಣ ಇವೆರಡೂ ಅವಳಿ-ಜವಳಿ. ಒಂದಿಲ್ಲದೇ ಇನ್ನೊಂದಿರಲು ಸಾಧ್ಯವಿಲ್ಲದಷ್ಟು ಆಪ್ತ ಜೋಡಿಗಳು. ಓಆಖಿಗಿಯ ವರದಿ ಪ್ರಕಾರ, ಈ ಬಾರಿಯ ಸಂಸತ್ತಿನಲ್ಲಿ 45 ಮಂದಿ ಈ ಪಟ್ಟಿಯಲ್ಲಿ ಸೇರಿದವರಿದ್ದಾರೆ. ಇವರಲ್ಲಿ 35 ಮಂದಿ ಸಂಸದರೂ ಬಿಜೆಪಿಗೆ ಸೇರಿದವರು. ಕಳೆದೈದು ವರ್ಷಗಳಲ್ಲಿ ದ್ವೇಷ ಭಾಷಣ ಮಾಡಿದ ಕಪ್ಪು ಕಲೆ ಇವರೆಲ್ಲರ ಮೇಲಿದೆ.

ಗುಂಪು ಥಳಿತ ಅತ್ಯಂತ ಅನಾಗರಿಕವಾದುದು ಮತ್ತು ದೇಶವೊಂದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರಕ್ಕೆ ತಳ್ಳುವಂಥದ್ದು. ಒಂದು ದೇಶದ ಅಭಿವೃದ್ಧಿಗೂ ಜನರ ಜೀವನ ಸ್ಥಿತಿ-ಗತಿಗೂ ಸಂಬಂಧ ಇದೆ. ಅಭಿವೃದ್ಧಿ ಎಂಬುದು ಭೂಮಿಯಿಂದ ಮೇಲೆ ಮತ್ತು ಆಕಾಶದಿಂದ ಕೆಳಗೆ ನಡೆಯುವ ಪವಾಡ ಕೃತ್ಯ ಅಲ್ಲ. ಭಾರತದ ಅಭಿವೃದ್ಧಿ ಇಲ್ಲಿನ ಮಣ್ಣಿನಲ್ಲಿ ಮತ್ತು ಈ ಮಣ್ಣಿನೊಂದಿಗೆ ಸಂಬಂಧ ಇರುವ ಸಕಲ ವಿಷಯಗಳೊಂದಿಗೂ ಜೋಡಿಕೊಂಡಿದೆ. ಮುಸ್ಲಿಮರೂ ಕ್ರೈಸ್ತರೂ ಆದಿವಾಸಿಗಳೂ ದಲಿತರೂ ಸಹಿತ ಈ ಮಣ್ಣಿನಲ್ಲಿ ವಾಸಿಸುತ್ತಿರುವ ಎಲ್ಲರೂ ಇಲ್ಲಿನ ಮಣ್ಣಿನೊಂದಿಗೆ ಸಂಬಂಧ ಇರುವವರು. ಆದ್ದರಿಂದ ಇವರಲ್ಲಿ ಯಾರನ್ನು ತುಳಿದರೂ ಥಳಿಸಿದರೂ ಮತ್ತು ಹಿಂಸಾತ್ಮಕವಾಗಿ ನಡೆಸಿಕೊಂಡರೂ ಅಂತಿಮವಾಗಿ ಅದು ಈ ದೇಶದ ಅಭಿವೃದ್ಧಿಯ ಮೇಲೆ, ಇಲ್ಲಿನ ಜಿಡಿಪಿಯ ಮೇಲೆ ಮತ್ತು ಒಟ್ಟು ಜನಜೀವನದ ಮೇಲೆ ಖಂಡಿತ ಪ್ರಭಾವವನ್ನು ಬೀರಿಯೇ ಬೀರುತ್ತದೆ. ಆದ್ದರಿಂದ, ಅಭಿವೃದ್ಧ ಭಾರತದ ಬಗ್ಗೆ ಮಾತಾಡುವ ಸರಕಾರಗಳು ಈ ಅಭಿವೃದ್ಧಿಗೆ ತಡೆಯಾಗಿರುವ ಮೂಲ ಕಾರಣಗಳನ್ನು ಪತ್ತೆ ಹಚ್ಚಬೇಕಾಗಿದೆ. ಈ ಮಣ್ಣಿನಲ್ಲಿ ನಡೆಯುತ್ತಿರುವ ಬಹುವಿಧ ಹಿಂಸೆಯನ್ನು ತಡೆಯುವುದಕ್ಕೆ ಬೇಕಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪೊಲೀಸು ಠಾಣೆಗಳ ಸಮಗ್ರ ಸುಧಾರಣೆಗೆ ಒತ್ತು ಕೊಡಬೇಕಾಗಿದೆ. ಆದ್ದರಿಂದಲೇ,

ತಬ್ರೇಝ್ ಅನ್ಸಾರಿಯ ಸಾವು ಮುಖ್ಯವಾಗುತ್ತದೆ. ಆ ಸಾವು ಒಂದು ಎಚ್ಚರಿಕೆ ಕರೆಗಂಟೆ. ಗುಂಪು ಥಳಿತದ ವಿಷಯದಲ್ಲಿ ನಮ್ಮ ಪೊಲೀಸರ ಮನಸ್ಥಿತಿ ಏನು ಅನ್ನುವುದನ್ನು ತಬ್ರೇಝïನ ಸಾವು ಹೇಳುತ್ತದೆ. ಆ ಮನಸ್ಥಿತಿಗೆ ಚಿಕಿತ್ಸೆ ಆಗದ ಹೊರತು ಗುಂಪು ಥಳಿತ ನಿಲ್ಲಲಾರದು.