ಸುಳ್ಳಿನ ಕಾರ್ಖಾನೆಯನ್ನೇ ಸ್ಥಾಪಿಸಿ, ಬೆನ್ನುಬಿದ್ದು ಹಿಂಸಿಸಿದರಲ್ಲ, ಅವರಿಗೇನು ಶಿಕ್ಷೆ?

0
429
editorial

ಸನ್ಮಾರ್ಗ ಸಂಪಾದಕೀಯ

ಸುಮಾರು ಒಂದು ವರ್ಷದ ಅಲೆದಾಟದ ನಂತರ ತಬ್ಲೀಗಿ ಜಮಾಅತ್‌ನ 18 ಸದಸ್ಯರಿಗೆ ಲಕ್ನೋದ ಸೆಶನ್ಸ್ ನ್ಯಾಯಾಲಯ ನೆಮ್ಮದಿಯನ್ನು ನೀಡಿದೆ. ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆಂಬ ಆರೋಪ ಹೊರಿಸಿ 11 ಭಾರತೀಯರು ಮತ್ತು 7 ವಿದೇಶಿಯರೂ ಸೇರಿದಂತೆ 18 ಮಂದಿಯ ವಿರುದ್ಧ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಇಂಡಿಯನ್ ಪೀನಲ್ ಕೋಡ್‌ನ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಗಳಡಿ ವಿವಿಧ ಆರೋಪಗಳನ್ನು ಇವರ ವಿರುದ್ಧ ಹೊರಿಸಲಾಗಿತ್ತು. ಆರೋಪಿಗಳು ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದರು ಎಂಬುದು ಒಂದು ಆರೋಪವಾದರೆ, ಕೊರೋನಾವನ್ನು ಹರಡುವ ಸಂಚನ್ನು ಹೊಂದಿದ್ದರು ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂಬ ಆರೋಪವನ್ನೂ ಪೊಲೀಸರು ಹೊರಿಸಿದ್ದರು. ದುರಂತ ಏನೆಂದರೆ,

ಈ ಯಾವ ಆರೋಪಗಳಿಗೂ ಪೊಲೀಸರು ಸಾಕ್ಷ್ಯವನ್ನು ಒದಗಿಸಿರಲಿಲ್ಲ. ವೃತ್ತಪತ್ರಿಕೆಗಳೇ ಇವರ ಸಾಕ್ಷ್ಯಗಳಾಗಿದ್ದುವು. ಹಾಗಂತ, ವೃತ್ತಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳಲ್ಲಿ ಪ್ರಕಟಗೊಳ್ಳುವ ಯಾವುದೇ ಸುದ್ದಿಯನ್ನು ಸರಕಾರಿ ಅ ಧಿಕಾರಿಗಳ ಆದೇಶದ ಪ್ರಕಟಣೆಯೆಂದು ಪರಿಗಣಿಸುವ ಹಾಗಿಲ್ಲ ಎಂದು ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಸುಶೀಲ್ ಕುಮಾರ್ ಹೇಳುವುದಕ್ಕಿಂತ ಮೊದಲೇ ಈ ಕೇಸನ್ನು ಸಿದ್ಧಪಡಿಸಿದ ಪೊಲೀಸರಿಗೆ ಅದು ಗೊತ್ತಿರಲೇಬೇಕು. ಮತ್ತೇಕೆ ಇಂಥ ಆರೋಪಗಳನ್ನು ಹೊರಿಸಲಾಯಿತು ಎಂಬ ಪ್ರಶ್ನೆಗೆ ಮಹತ್ವ ಬರುವುದೂ ಈ ಕಾರಣದಿಂದಲೇ.

ಇದೊಂದು ಹೊಸ ಟ್ರೆಂಡು. ಸತಾಯಿಸುವುದೇ ಇದರ ಉದ್ದೇಶ. ಕಳೆದ 6 ವರ್ಷಗಳಲ್ಲಿ ಈ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ದೂರುಗಳು ಯಾವುದೆಂದರೆ, ದೇಶದ್ರೋಹ. ಇತ್ತೀಚೆಗಷ್ಟೇ ದೇಶದ ಖ್ಯಾತ ಪತ್ರಕರ್ತರಾದ ರಾಜ್‌ದೀಪ್ ಸರ್ದೇಸಾಯಿ, ವರದರಾಜನ್, ದ ಕಾರವಾನ್ ಮ್ಯಾಗಸಿನ್‌ನ ಸಂಪಾದಕರು ಮತ್ತು ಪ್ರಧಾನ ಸಂಪಾದಕರು, ಕಾಂಗ್ರೆಸ್ ಸಂಸದ ಶಶಿ ತರೂರ್ ಸಹಿತ ಇನ್ನೂ ಕೆಲವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಯಿತು. ಇದಕ್ಕಿಂತ ತುಸು ಮೊದಲು ಕಾಮೆಡಿಯನ್ ಮುನವ್ವರ್‌ನ ವಿರುದ್ಧ ಕೇಸು ಜಡಿಯಲಾಯಿತು. ಈತ ಜೋಕ್ ಪ್ರಾರಂಭಿಸಿಯೇ ಇರಲಿಲ್ಲ. ಅದಕ್ಕಿಂತ ಮೊದಲೇ ಆತನನ್ನು ವೇದಿಕೆಯಿಂದ ಎಳೆದುಕೊಂಡು ಹೋಗಲಾಯಿತು ಮತ್ತು ತಿಂಗಳ ಕಾಲ ಜೈಲಲ್ಲಿರಿಸಲಾಯಿತು. ಇದಕ್ಕಿಂತ ತುಸು ಮೊದಲು ರೈತ ಪ್ರತಿಭಟನೆಯ ಕುರಿತು ವರದಿ ಮಾಡುತ್ತಿದ್ದ ಪೂನಿಯಾ ಎಂಬ ಉತ್ಸಾಹಿ ಪ್ರಕರ್ತನನ್ನು ಬಂಧಿಸಲಾಯಿತು. ಅದಕ್ಕಿಂತ ತುಸು ಮೊದಲು ಸಿದ್ದೀಕ್ ಕಪ್ಪನ್ ಎಂಬ ಪತ್ರಕರ್ತನನ್ನು ಯುಎಪಿಎ ಕಾಯ್ದೆಯಡಿ ಜೈಲಿಗಟ್ಟಲಾಯಿತು. ಇದು ಒಂದು ಭಾಗವಾದರೆ,

ಇನ್ನೊಂದು ಭಾಗ ಇದಕ್ಕಿಂತಲೂ ಕ್ರೂರವಾದುದು. ಈ ಮೇಲೆ ಹೆಸರಿಸಿರುವವರೆಲ್ಲ ಸಾಮಾನ್ಯ ವ್ಯಕ್ತಿಗಳಲ್ಲ. ಪರಿಚಿತರು ಮತ್ತು ಸದಾ ಸುದ್ದಿಯಲ್ಲಿರುವವರು. ಇದರ ಇನ್ನೊಂದು ಕರಾಳ ಭಾಗ ಯಾವುದೆಂದರೆ, ಹೀಗೆ ಪರಿಚಿತರಲ್ಲದ ಸಾಮಾನ್ಯರು. ಅವರ ಮೇಲೂ ಕೇಸುಗಳನ್ನು ಎಗ್ಗಿಲ್ಲದೇ ದಾಖಲಿಸಲಾಯಿತು. ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ದಾಖಲಿಸಲಾದ ಕೇಸುಗಳಿಗೆ ಲೆಕ್ಕ ಮಿತಿಯಲ್ಲ. ಈಗಲೂ ಅನೇಕ ಮಂದಿ ಜೈಲಲ್ಲಿದ್ದಾರೆ. ಪ್ರಭುತ್ವಕ್ಕೆ ಯಾವೆಲ್ಲ ವಿವಿಗಳ ಮೇಲೆ ಕಣ್ಣಿತ್ತೋ ಆ ಎಲ್ಲ ವಿವಿಗಳ ಆಯ್ದ ವಿದ್ಯಾರ್ಥಿಗಳನ್ನು ಗುರಿ ಮಾಡಿಕೊಂಡು ಕಠಿಣ ಕೇಸುಗಳಡಿ ಬಂಧಿಸಲಾಯಿತು. ಉತ್ತರ ಪ್ರದೇಶದ ಸರಕಾರಿ ವೈದ್ಯರಾಗಿದ್ದ ಡಾ| ಕಫೀಲ್ ಖಾನ್‌ರನ್ನು ಸತಾಯಿಸಿದ್ದೇ ಇದಕ್ಕೊಂದು ಅತ್ಯುತ್ತಮ ನಿದರ್ಶನ. ಪ್ರಭುತ್ವದ ಕಿರುಕುಳವನ್ನು ತಾಳಲಾರದೇ ಅವರು ರಾಜಸ್ಥಾನಕ್ಕೆ ವಲಸೆ ಹೋದರು. ಇದೊಂದು ವಿಚಿತ್ರ ಬೆಳವಣಿಗೆ.

ಈ ದೇಶದ ಓರ್ವ ಪ್ರಜೆ ಪ್ರಭುತ್ವದ ಕಿರುಕುಳವನ್ನು ತಾಳಲಾರದೇ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗುವುದೆಂದರೇನು? ರೌಡಿಗಳು, ಕ್ರಿಮಿನಲ್‌ಗಳಿಗೆ ಹೆದರುವಂತೆ ಒಂದು ಸರಕಾರಕ್ಕೂ ಹೆದರುವುದೆಂದರೆ, ಪ್ರಜಾತಂತ್ರಕ್ಕೆ ಏನು ಬೆಲೆ? ಇತ್ತೀಚೆಗಷ್ಟೇ ಇನ್ನೊಂದು ದಂಗುಬಡಿಸುವ ವರದಿಯೂ ಬಂದಿತ್ತು. ದೇಶದ ವಿರುದ್ಧ ಸಂಚು, ಪ್ರಧಾನಿ ಮೋದಿ ಹತ್ಯೆ ಮತ್ತು ದೇಶದ ವಿರುದ್ಧ ಬಂಡೇಳುವುದಕ್ಕೆ ಷಡ್ಯಂತ್ರ ಹೆಣೆದಿರುವುದು ಇತ್ಯಾದಿ ಗಂಭೀರ ಆರೋ ಪಗಳ ಅಡಿಯಲ್ಲಿ 2018ರಲ್ಲಿ ಬಂಧಿಸಲಾಗಿದ್ದ ರೋನಾ ವಿಲ್ಸನ್ ಕುರಿತಾದ ವರದಿ ಅದು. ಅವರ ಬಂಧನಕ್ಕಿಂತ ದಿನಗಳ ಮೊದಲು ಈ ಮೇಲಿನ ಆರೋಪಕ್ಕೆ ಸಂಬಂಧಿಸಿದ ಫೈಲುಗಳನ್ನು ಅವರ ಲ್ಯಾಪ್‌ಟಾಪ್‌ನೊಳಗೆ ಹ್ಯಾಕರ್‌ಗಳು ಪ್ಲಾಂಟ್ ಮಾಡಿದ್ದರು ಎಂಬುದಾಗಿ ಅಮೇರಿಕದ ಮೆಸಾಚುಸೆಟ್ಸ್ನ ಆರ್ಸೆನಲ್ ಕನ್ಸಲ್ಟಿಂಗ್ ಸಂಸ್ಥೆಯ ತಜ್ಞರು ಪರಿಶೀಲನೆಯ ಬಳಿಕ ಕಂಡುಕೊAಡರು. ಇಂಥದ್ದೇ ಆರೋಪದಲ್ಲಿ ಇನ್ನೂ ಹಲವು ಪ್ರಮುಖ ವ್ಯಕ್ತಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಸುಧಾ ಭಾರದ್ವಾಜ್, ನವ್ಲಾಖಾ, ಸ್ಟ್ಯಾನ್ ಸ್ವಾಮಿ, ವರವರ ರಾವ್ ಮುಂತಾದವರು ಈಗಲೂ ಜೈಲಲ್ಲಿದ್ದಾರೆ. ಅಮೇರಿಕದ ತಜ್ಞರು ಬಹಿರಂಗಪಡಿಸಿರುವ ಈ ವರದಿಯು ಒಟ್ಟು ಬಂಧನ ಪ್ರಕ್ರಿಯೆಯ ಬಗ್ಗೆಯೇ ಗಂಭೀರ ಅನುಮಾನಗಳನ್ನು ಹುಟ್ಟು ಹಾಕಿದೆ. ಇವು ಮತ್ತು ಇನ್ನಿತರ ಅನೇಕ ಪ್ರಕರಣಗಳು ಸಾರ್ವಜನಿಕವಾಗಿ ಹಲವಾರು ಸಂದೇಹಗಳನ್ನೂ, ಭೀತಿಯನ್ನೂ ಉಂಟು ಮಾಡಿದೆ. ಈ ಭೀತಿಗೆ ಪೂರಕವಾಗಿ ದಿಲ್ಲಿಯ ಮಹಿಳಾ ನ್ಯಾಯವಾದಿಗಳ ವೇದಿಕೆಯು ಕಳೆದವಾರ ಆಯೋಜಿಸಿದ್ದ ‘ನಮ್ಮ ಭಿನ್ನಾಭಿಪ್ರಾಯಗಳ ಹಕ್ಕು’ ಎಂಬ ವೆಬಿನಾರ್ ಸಭೆಯಲ್ಲಿ ನಿವೃತ್ತ ನ್ಯಾಯಾಧೀಶ ದೀಪಕ್ ಗುಪ್ತಾ ಮತ್ತು ಇನ್ನಿತರ ನ್ಯಾಯವಾದಿಗಳು ಮಾತಾಡಿದ್ದರು. ಅನೇಕ ಪತ್ರಕರ್ತರು ತಮ್ಮ ವರದಿಯನ್ನು ಪ್ರಕಟಿಸುವುದಕ್ಕಿಂತ ಮೊದಲು ತನಗೆ ಕಳುಹಿಸುತ್ತಿದ್ದಾರೆ ಮತ್ತು ಕಾನೂನು ಉಲ್ಲಂಘನೆಯ ಏನಾದರೂ ಅಂಶಗಳು ಇವೆಯೇ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಹಿರಿಯ ನ್ಯಾಯವಾದಿ ರೆಬೆಕ್ಕಾ ಜಾನ್ ಈ ಸಭೆಯಲ್ಲಿ ಹೇಳಿರುವುದು ಒಟ್ಟು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ.

ಇದೊಂದು ಅಪಾಯಕಾರಿ ವಾತಾವರಣ. ಪ್ರಭುತ್ವದ ವಿರುದ್ಧ ಮಾತೆತ್ತುವುದೇ ಅಪಾಯಕಾರಿ ಎಂಬ ಸನ್ನಿವೇಶ ನಿಧಾನಕ್ಕೆ ಬಲ ಪಡೆಯುತ್ತಿರುವುದರ ಸೂಚನೆ. ಪ್ರಭುತ್ವದ ಕಾಲಾಳುಗಳು ಯಾರ ಮೇಲೂ ಕೇಸು ದಾಖಲಿಸಬಹುದು ಮತ್ತು ಯಾರನ್ನೂ ಹೇಗೆ ಬೇಕಾದರೂ ಸತಾಯಿಸಬಹುದು ಎಂಬ ಪ್ರಜಾತಂತ್ರ ವಿರೋಧಿ ಸ್ಥಿತಿ ಯಶ ಪಡೆಯತೊಡಗಿದೆ. ತಬ್ಲೀಗಿ ಜಮಾಅತ್‌ನ ಹೆಸರಲ್ಲಿ ಈ ದೇಶದಲ್ಲಿ ಮುಸ್ಲಿಮರನ್ನು ಬೇಟೆಯಾಡಿರುವುದೂ ಇಂಥ ಸ್ಥಿತಿಗೆ ಒಂದು ಪುರಾವೆ. ದೇಶದಲ್ಲಿ ಕೊರೋನಾ ಲಾಕ್‌ಡೌನ್ ಘೋಷಿಸಿವುದಕ್ಕಿಂತ ಮೊದಲೇ ತಬ್ಲೀಗಿ ಸದಸ್ಯರು ವಿದೇಶದಿಂದ ದೇಶಕ್ಕೆ ಬಂದಿದ್ದರು ಮತ್ತು ಅದು ಸರಕಾರದ ಪೂರ್ಣ ಅಂಗೀಕಾರದೊಂದಿಗೆಯೇ ಆಗಿತ್ತು. ದಿಢೀರ್ ಲಾಕ್‌ಡೌನ್‌ನಿಂದಾಗಿ ದೆಹಲಿಯ ಮರ್ಕಝï‌ನಲ್ಲಿ ಸಾವಿರಾರು ಮಂದಿ ಸಿಲುಕಿಕೊಂಡಿರುವುದೂ ಸರ್ಕಾರಕ್ಕೆ ಗೊತ್ತಿತ್ತು. ವೈದ್ಯರ ತಂಡದ ಭೇಟಿಯೂ ನಡೆದಿತ್ತು. ಆದರೆ, ಪ್ರಭುತ್ವಕ್ಕೆ ಕೊರೋನಾ ಕಾಲದಲ್ಲಿ ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಖಳರು ಬೇಕಿದ್ದರು. ಆಗ ಸಿಕ್ಕಿದ್ದೇ ತಬ್ಲೀಗಿಗಳು. ತಬ್ಲೀಗಿಗಳಂತೆ ಆ ಸಮಯದಲ್ಲಿ ಮಹಾರಾಷ್ಟ್ರದ ಗುರುದ್ವಾರದಲ್ಲಿ ಸಿಕ್ಖರು ಸಿಲುಕಿಕೊಂಡಿದ್ದರು. ಜಮ್ಮುವಿನ ವೈಷ್ಣೋ ದೇವಿ ಮಂದಿರದಲ್ಲೂ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು. ಆದರೆ

ತಬ್ಲೀಗಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಗುರಿ ಮಾಡಲಾಯಿತು. ಮಾಧ್ಯಮಗಳು ಮತ್ತು ಪ್ರಭುತ್ವದ ಮಂದಿ ಅತ್ಯಂತ ಕ್ರೂರ ಸುಳ್ಳುಗಳನ್ನು ಅವರ ಮೇಲೆ ಹೊರಿಸಿ, ಆ ಬಳಿಕ ಆ ಸುಳ್ಳುಗಳನ್ನು ಇಡೀ ಭಾರತೀಯ ಮುಸ್ಲಿಮರ ಕೊರಳಿಗೆ ಹಾಕಿ ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಕೇಸು ಜಡಿಯಲಾಯಿತು. ತಬ್ಲೀಗಿ ಸಭೆಗೆ ಬಂದ ವಿದೇಶಿಯರನ್ನು ಜೈಲಿಗಟ್ಟಲಾಯಿತು.

ಇದೀಗ ಒಂದೊಂದೇ ಪ್ರಕರಣ ಬಿದ್ದು ಹೋಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ 36 ವಿದೇಶಿ ತಬ್ಲೀಗಿಗಳನ್ನು ದಿಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಕಳೆದ ಆಗಸ್ಟ್ನಲ್ಲಿ ಬಾಂಬೆ ಉಚ್ಚ ನ್ಯಾಯಾಲಯ 29 ಮಂದಿ ವಿದೇಶಿಯರ ಮೇಲಿನ ಎಫ್‌ಐಆರ್ ರದ್ದುಗೊಳಿಸಿತ್ತು. ಹಾಗಂತ, ಈ ವಿಷಯದಲ್ಲಿ ಪ್ರಭುತ್ವ ಅಮಾಯಕ ಎಂದಲ್ಲ. ಹೀಗಾಗಬಹುದು ಎಂದು ಪ್ರಭುತ್ವಕ್ಕೆ ಮೊದಲೇ ಗೊತ್ತಿರುತ್ತದೆ. ಸತಾಯಿಸುವುದು ಮತ್ತು ಪ್ರಭುತ್ವ ವಿರೋಧಿ ಧ್ವನಿಗಳನ್ನು ದಮನಿಸುವುದೇ ಅದರ ಗುರಿ. ಅಂದಹಾಗೆ,

ಕಳೆದೊಂದು ವರ್ಷದಲ್ಲಿ ತಬ್ಲೀಗಿಗಳು ಅನುಭವಿಸಿದ ನೋವು, ಸಂಕಟ, ಅವಮಾನಗಳನ್ನು ಅವರಿಗೆ ಮರಳಿಸುವವರು ಯಾರು?