ಮ್ಯಾನ್ಮಾರನ್ನು ಮತ್ತೊಮ್ಮೆ ಕಟಕಟೆಯಲ್ಲಿ ನಿಲ್ಲಿಸಿದ ಸೂಕಿ

0
1481

ಸನ್ಮಾರ್ಗ ಸಂಪಾದಕೀಯ

ಝಾಂಬಿಯ ಎಂಬ ಆಫ್ರಿಕಾದ ಪುಟ್ಟ ರಾಷ್ಟ್ರವೊಂದು ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ICJ) ಸಲ್ಲಿಸಿರುವ ದೂರು ಇದೀಗ ಮ್ಯಾನ್ಮಾರನ್ನು ಕಾಡತೊಡಗಿದೆ. ಕಳೆದ ತಿಂಗಳು ಮೂರು ದಿನಗಳ ಕಾಲ ವಿಚಾರಣೆ ನಡೆದಿತ್ತು. ಮ್ಯಾನ್ಮಾರ್ ನ ನಾಯಕಿ ಆಂಗ್ ಸಾನ್ ಸೂಕಿ ಅವರು ವಿಚಾರಣೆಯ ಸಮಯದಲ್ಲಿ ಜಾಗತಿಕವಾಗಿ ಸುದ್ದಿಗೀಡಾಗಿದ್ದರು. ರಾಖೈನ್ ಪ್ರದೇಶದಲ್ಲಿರುವ ರೋಹಿಂಗ್ಯನ್ ಮುಸ್ಲಿಮರ ಜನಾಂಗೀಯ ಹತ್ಯೆಯ ಆರೋಪಕ್ಕೆ ಉತ್ತರ ಕೊಡಲು ಆಂಗ್ ಸಾನ್ ಸೂಕಿಯವರು ಸ್ವತಃ ಹೇಗ್ ನ್ಯಾಯಾಲಯಕ್ಕೆ ಬಂದು ಅಚ್ಚರಿ ಮೂಡಿಸಿದ್ದರು. ಅದು ಮ್ಯಾನ್ಮಾರ್ ನಲ್ಲಿ ಅವರಿಗೆ ಹೀರೋ ಪಟ್ಟ ಒದಗಿಸಿಕೊಟ್ಟರೂ ಅದರಿಂದಾಗಿ ರೋಹಿಂಗ್ಯನ್ ಮುಸ್ಲಿಮರ ದಯನೀಯ ಸ್ಥಿತಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಚರ್ಚೆಗೆ ಒಳಗಾಯಿತು. ಆಂಗ್ ಸಾನ್ ಸೂಕಿಯವರು ಸ್ವತಃ ಅಂತಾರಾಷ್ಟ್ರೀಯ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಮ್ಯಾನ್ಮಾರನ್ನು ಸಮರ್ಥಿಸತೊಡಗಿದಾಗ ಇತ್ತ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು, ಮಾಧ್ಯಮಗಳು ರೋಹಿಂಗ್ಯನ್ ಹತ್ಯಾಕಾಂಡದ ಬರ್ಬರತೆಯನ್ನು ಮತ್ತೊಮ್ಮೆ ಜಗತ್ತಿನ ಮುಂದಿಟ್ಟವು. ಅನೇಕ ಪತ್ರಕರ್ತರು ಬಾಂಗ್ಲಾದೇಶದಲ್ಲಿ ನೆಲೆಸಿರುವ ರೋಹಿಂಗ್ಯನ್ ನಿರಾಶ್ರಿತರನ್ನು ಭೇಟಿಯಾದರು. ವರದಿಗಳನ್ನು ತಯಾರಿಸಿದರು. ಒಂದುವೇಳೆ,

ಆಂಗ್ ಸಾನ್ ಸೂಕಿಯ ಬದಲು ಮ್ಯಾನ್ಮಾರ್ ನ ಯಾವುದಾದರೂ ಅಧಿಕಾರಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಹಾಜರಾಗಿರುತ್ತಿದ್ದರೆ ಆ ವಿಚಾರಣಾ ಪ್ರಕ್ರಿಯೆ ಮತ್ತು ರೋಹಿಂಗ್ಯನ್ ಮುಸ್ಲಿಮರ ದಯನೀಯತೆ ಜಾಗತಿಕವಾಗಿ ಚರ್ಚೆಗೆ ಒಳಗಾಗುತ್ತಿರಲಿಲ್ಲವೇನೋ. ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯವು ರೋಹಿಂಗ್ಯನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೂಚನೆಯನ್ನು ಕೊಟ್ಟಿದೆ. ರೋಹಿಂಗ್ಯನ್ ಮುಸ್ಲಿಮರ ಮೇಲೆ ನಡೆದಿರುವ ದೌರ್ಜನ್ಯ, ಜನಾಂಗೀಯ ಹತ್ಯೆ, ಅತ್ಯಾಚಾರಗಳ ಕುರಿತಂತೆ ಯಾವೆಲ್ಲ ಸಾಕ್ಷ್ಯ ಗಳನ್ನು ಸಂಗ್ರಹಿಸಿದ್ದೀರೋ ಅದನ್ನು ನ್ಯಾಯಾಲಯಕ್ಕೆ ನಾಲ್ಕು ತಿಂಗಳ ಒಳಗಾಗಿ ಸಲ್ಲಿಸಬೇಕೆಂದು ಆದೇಶಿಸಿದೆ. ಒಟ್ಟು ಘಟನೆಯ ಬಗ್ಗೆ 6 ತಿಂಗಳ ಒಳಗಾಗಿ ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ. 6 ಲಕ್ಷ ರೋಹಿಂಗ್ಯನ್ ಮುಸ್ಲಿಮರು ಪ್ರಭುತ್ವದ ದಮನದ ಭೀತಿಯಲ್ಲಿ ಬದುಕುತ್ತಿದ್ದಾರೆ ಅನ್ನುವ ಅಭಿಪ್ರಾಯವನ್ನೂ ಅದು ವ್ಯಕ್ತಪಡಿಸಿದೆ. ವಿಚಾರಣೆಯ ವೇಳೆ ಜನಾಂಗೀಯ ಹತ್ಯೆಯೆಂಬ ಆರೋಪವನ್ನು ಆಂಗ್ ಸಾನ್ ಸೂಕಿ ನಿರಾಕರಿಸಿದ್ದರು. 2017ರಲ್ಲಿ ರಾಖೈನ್ ಪ್ರಾಂತ್ಯದಲ್ಲಿ ಮುಸ್ಲಿಮರ ಮೇಲೆ ಏನು ನಡೆಯಿತೋ ಅದು ದಂಗೆಗೆ ನೀಡಲಾದ ಪ್ರತಿಕ್ರಿಯೆಯಾಗಿತ್ತು ಎಂದುವರು ಸಮರ್ಥಿಸಿದ್ದರು. ಆದರೆ,

ವಿಶ್ವಸಂಸ್ಥೆಯ ವರದಿ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವರದಿಯು ರಾಖೈನ್ ಪ್ರಾಂತ್ಯದಲ್ಲಿ ನಡೆದ ಬರ್ಬರ ಕ್ರೌರ್ಯದ ಹಿಂದೆ ಯಾರಿದ್ದಾರೆ ಮತ್ತು ಯಾಕಿದ್ದಾರೆ ಅನ್ನುವುದು ಸ್ಪಷ್ಟಪಡಿಸಿತ್ತು. ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರಭುತ್ವದ ನೇರ ಕಣ್ಗಾವಲಿನೊಂದಿಗೆ ಮಾಡಲಾಯಿತು ಎಂದು ಆ ವರದಿಗಳು ಹೇಳಿದ್ದುವು. ಜನಾಂಗೀಯ ನಿರ್ಮೂಲನದ ಉದ್ದೇಶವನ್ನಿಟ್ಟುಕೊಂಡು ಮಿಲಿಟರಿಯ ಮುಂದಾಳುತ್ವದಲ್ಲಿ ನಡೆದ ಅಮಾನುಷ ಕ್ರೌರ್ಯವಾಗಿ ಹಲವಾರು ವರದಿಗಳು ಸ್ಪಷ್ಟಪಡಿಸಿದ್ದುವು. ಆ ಕ್ರೌರ್ಯದ ಭೀಭತ್ಸತೆಯನ್ನು ವರದಿ ಮಾಡಿದ ತನ್ನಿಬ್ಬರು ಪತ್ರಕರ್ತರನ್ನು ಮ್ಯಾನ್ಮಾರ್ ಎರಡು ವರ್ಷಕ್ಕಿಂತಲೂ ಅಧಿಕ ಸಮಯ ಜೈಲಲ್ಲಿಟ್ಟು ಶಿಕ್ಷಿಸಿದ್ದೂ ಈ ಸಮಯದಲ್ಲಿ ಸುದ್ದಿಯಾಗಿತ್ತು. ಬಾಂಗ್ಲಾದೇಶಕ್ಕೆ ಓಡಿ ಬಂದಿರುವ ಸುಮಾರು 9 ಲಕ್ಷದಷ್ಟು ರೋಹಿಂಗ್ಯನ್ ಮುಸ್ಲಿಮರು ಮ್ಯಾನ್ಮಾರ್ ಸರಕಾರದ ಮನಸ್ಥಿತಿಯ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಮನ ಬಿಚ್ಚಿ ಮಾತಾಡಿದರು. ಸಾವಿರಾರು ಮಂದಿ ಭಾರತಕ್ಕೂ ಬಂದರು. ನೂರಾರು ಮಂದಿ ಪಲಾಯನದ ಹಾದಿಯಲ್ಲಿ ಸಮುದ್ರದಲ್ಲಿ ಮುಳುಗಿ ಸಾವಿಗೀಡಾದರು. ವಿಷಾದ ಏನೆಂದರೆ,

2016ರಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಕ್ರೌರ್ಯ ಇದು. ಮಿಲಿಟರಿ ವ್ಯವಸ್ಥೆಯ ವಿರುದ್ಧ ದಶಕಗಳಿಂದ ಹೋರಾಡುತ್ತಾ ಬಂದ, ಅದಕ್ಕಾಗಿ ಜೈಲು ಪಾಲಾದ ಮತ್ತು ನೋಬೆಲ್ ಶಾಂತಿ ಪಾರಿತೋಷಕವನ್ನು ಪಡಕೊಂಡ ಆಂಗ್ ಸಾನ್ ಸೂಕಿಯು ಅಧಿಕಾರಕ್ಕೆ ಬಂದ ಬಳಿಕ ಮಿಲಿಟರಿಯನ್ನೂ ನಾಚುವಂತೆ ವರ್ತಿಸಿದ್ದರು. ಇದೀಗ ಮ್ಯಾನ್ಮಾರ್ ಸರಕಾರದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಎದುರಾಗಿದೆ. ಬಲಾಢ್ಯ ರಾಷ್ಟ್ರಗಳು ತನ್ನ ಮೇಲೆ ಕ್ರಮಕ್ಕೆ ಮುಂದಾಗುವ ಭೀತಿ ಅದನ್ನು ಕಾಡತೊಡಗಿದೆ. ಆದ್ದರಿಂದಲೇ, ಅದು ಚೀನಾದ ತೆಕ್ಕೆಗೆ ಜಾರಿದೆ. ಕಳೆದವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಮ್ಯಾನ್ಮಾರ್‍ಗೆ ಭೇಟಿ ನೀಡಿದರು. ಮಾತ್ರವಲ್ಲ, 33ರಷ್ಟು ಒಪ್ಪಂದಗಳಿಗೆ ಸಹಿಯನ್ನೂ ಹಾಕಿದರು. 2001ರ ಬಳಿಕ ಚೀನಾದ ಅಧ್ಯಕ್ಷರು ಕೊಡುತ್ತಿರುವ ಪ್ರಥಮ ಭೇಟಿ ಇದು. ಮ್ಯಾನ್ಮಾರ್ ನ ಮುಖ್ಯ ಮೂರು ನಾಯಕರಾದ ಅಧ್ಯಕ್ಷ ವಿನ್ ಮಿಂಟ್, ಆಡಳಿತ ಮುಖ್ಯಸ್ಥೆ ಆಂಗ್ ಸಾನ್ ಸೂಕಿ ಮತ್ತು ಮಿಲಿಟರಿ ಮುಖ್ಯಸ್ಥ ಮಿನ್ ಹಾಂಗ್ ಲೈಂಗ್‍ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಚೀನಾ ಮತ್ತು ಮ್ಯಾನ್ಮಾರ್ ಗಳ ನಡುವೆ ಮೂರು ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸುವುದೂ ಈ ಒಪ್ಪಂದದಲ್ಲಿ ಸೇರಿದೆ. ಈಗಾಗಲೇ ಪ್ರಗತಿಯಲ್ಲಿರುವ ಚೀನಾ-ಮ್ಯಾನ್ಮಾರ್ ನಡುವಿನ ಆರ್ಥಿಕ ಕಾರಿಡಾರ್ ಗೆ ವೇಗವನ್ನು ತುಂಬುವ ಮಾತುಕತೆಗಳಾಗಿವೆ. ಚೀನಾದ ಮಟ್ಟಿಗೆ ಇದೊಂದು ತಂತ್ರಗಾರಿಕೆ. ಸಂಕಷ್ಟದಲ್ಲಿರುವ ಸಮಯವನ್ನು ನೋಡಿ ಅದು ಮ್ಯಾನ್ಮಾರ್ ನ ಕಡೆಗೆ ಮುಖ ಮಾಡಿದೆ. ಅಲ್ಲದೇ, ಮ್ಯಾನ್ಮಾರ್ ನ ಮಿಲಿಟರಿ ಸರಕಾರಕ್ಕೂ ಅತ್ಯಂತ ಆಪ್ತ ಸಂಬಂಧ ಇದ್ದುದು ಚೀನಾದ ಜೊತೆಗೇ. ಇದೀಗ ಆ ಸಂಬಂಧವನ್ನು ಇನ್ನಷ್ಟು ಬಲಪಡಿಸುವುದಕ್ಕೆ ಚೀನಾ ಸಂದರ್ಭವನ್ನು ಸೂಕ್ತವಾಗಿ ಬಳಸಿಕೊಂಡಿದೆ. ಇನ್ನೊಂದೆಡೆ, ಶೀಘ್ರದಲ್ಲೇ ಚೀನಾ ಅಧ್ಯಕ್ಷರು ನೇಪಾಳ ಮತ್ತು ಶ್ರೀಲಂಕಕ್ಕೆ ಭೇಟಿ ಕೊಡುವ ಕಾರ್ಯಕ್ರಮವಿದೆ. ಈ ಎರಡೂ ಭೇಟಿಗಳನ್ನೂ ಚೀನಾ ಬಹಳ ಯೋಜನಾಬದ್ಧವಾಗಿಯೇ ನಿಗದಿಗೊಳಿಸಿದೆ ಎಂದು ಹೇಳಲಾಗುತ್ತದೆ. ಭಾರತದ ನೆರೆಯ ಈ ರಾಷ್ಟ್ರಗಳನ್ನು ಇನ್ನಷ್ಟು ತನ್ನ ತೆಕ್ಕೆಗೆ ಎಳೆದುಕೊಳ್ಳುವುದು ಇದರ ಉದ್ದೇಶಗಳಲ್ಲಿ ಒಂದು. ಮ್ಯಾನ್ಮಾರ್‍ನಲ್ಲಿ ಇದನ್ನು ಸಾಧಿಸಿಕೊಂಡ ಚೀನಾವು ನೇಪಾಳವನ್ನು ಈಗಾಗಲೇ ತನ್ನ ಪರವಾಗಿ ಒಲಿಸಿಕೊಂಡಿದೆ. ಶ್ರೀಲಂಕಾದ ಹೊಸ ಸರಕಾರವನ್ನು ಒಲಿಸಿಕೊಳ್ಳುವುದೂ ಚೀನಾಕ್ಕೆ ಕಷ್ಟವಲ್ಲ. ಈಗಾಗಲೇ ಅಲ್ಲಿನ ಹಲವು ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಹೂಡಿಕೆಯನ್ನು ಅದು ಮಾಡಿರುವುದರಿಂದ ಶ್ರೀಲಂಕಾವು ಭಾರತದ ಆಪ್ತ ಮಿತ್ರನಾಗುವ ಸಾಧ್ಯತೆ ತೀರಾ ಕಡಿಮೆ. ಒಂದು ರೀತಿಯಲ್ಲಿ,

ಭಾರತ ತನ್ನ ನೆರೆ ರಾಷ್ಟ್ರಗಳನ್ನೆಲ್ಲ ಒಂದೊಂದಾಗಿ ಕಳೆದುಕೊಂಡು ಒಂಟಿಯಾಗತೊಡಗಿದೆ. ಸಿಎಎಯು ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನವನ್ನು ಭಾರತದಿಂದ ದೂರ ಮಾಡಿತು. ಪಾಕಿಸ್ತಾನವಂತೂ ಈ ಮೊದಲೇ ಚೀನಾಕ್ಕೆ ಆಪ್ತಮಿತ್ರವಾಗಿ ಮಾರ್ಪಟ್ಟಿತು. ಇದೀಗ ನಮ್ಮ ಸುತ್ತಮುತಲಿನ ಇನ್ನಷ್ಟು ರಾಷ್ಟ್ರಗಳ ಮೇಲೆ ಪ್ರಭುತ್ವ ಸ್ಥಾಪಿಸುವಲ್ಲಿ ಚೀನಾ ಯಶಸ್ವಿಯಾಗುತ್ತಿದೆ. ಬಲಶಾಲಿ ಭಾರತ ಎಂಬ ಪರಿಕಲ್ಪನೆಗೆ ತೀರಾ ವಿರುದ್ಧವಾದ ಪರಿಸ್ಥಿತಿ ಇದು. ಏನೇ ಆಗಲಿ,
ರೋಹಿಂಗ್ಯನ್ ಮುಸ್ಲಿಮರನ್ನು ಉಟ್ಟ ಬಟ್ಟೆಯಲ್ಲೇ ಓಡಿ ಹೋಗುವಂತೆ ಬಲವಂತಪಡಿಸಿದ ಮ್ಯಾನ್ಮಾರ್ ನ ಪ್ರಭುತ್ವವು ಇದೀಗ ಅದರ ಪರಿಣಾಮವನ್ನು ಎದುರಿಸುವ ಭೀತಿಗೆ ಒಳಗಾಗಿದೆ. ಅರಕ್ಕಾನ್ ರೋಹಿಂಗ್ಯ ಸಾಲ್ವೇಷನ್ ಆರ್ಮಿಯ ಹಿಂಸೆಗೆ ಕಾನೂನು ರೀತಿಯಲ್ಲಿ ನೀಡಿದ ಉತ್ತರವನ್ನೇ ಜನಾಂಗೀಯ ನಿರ್ಮೂಲನ ಎಂದು ಮಾಧ್ಯಮಗಳು ತಿರುಚಿ ವರದಿ ಮಾಡಿವೆ ಎಂಬ ಮ್ಯಾನ್ಮಾರ್ ನ ವಾದವನ್ನು ಒಪ್ಪಿಕೊಳ್ಳಲು ಈ ಜಗತ್ತಿನಲ್ಲಿ ಈಗ ಯಾವ ರಾಷ್ಟ್ರಗಳೂ ಇಲ್ಲದಂಥ ಸ್ಥಿತಿ ಎದುರಾಗಿದೆ. ಹೇಗ್‍ನ ಅಂತಾರಾಷ್ಟ್ರೀಯ ನ್ಯಾಯಾಲಯದ ಕಟಕಟೆಯಲ್ಲಿ ನಿಂತ ಆಂಗ್ ಸಾನ್ ಸೂಕಿ, ಆ ಮೂಲಕ ಮ್ಯಾನ್ಮಾರನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ಝಾಂಬಿಯಾ ಎಂಬ ಪುಟ್ಟ ರಾಷ್ಟ್ರಕ್ಕೆ ಅಭಿನಂದನೆಗಳು.