ಹೆಸರಾಂತ ವಿದ್ವಾಂಸ ಶೈಖ್ ಯೂಸುಫುಲ್ ಕರ್ದಾವಿಯ ಮಗಳು ಮತ್ತು ಪತಿಯ ಬಿಡುಗಡೆಗೆ ಈಜಿಪ್ಟ್ ಕೋರ್ಟ್ ಆದೇಶ

0
601

ಮುಸ್ಲಿಂ ವಿದ್ವಾಂಸರ ಅಂತಾರಾಷ್ಟ್ರೀಯ ವೇದಿಕೆಯ ಮಾಜಿ ಅಧ್ಯಕ್ಷ ಮತ್ತು ವಿಶ್ವದ ಹೆಸರಾಂತ ವಿದ್ವಾಂಸ ಶೈಖ್ ಯೂಸುಫುಲ್ ಕರ್ದಾವಿ ಅವರ ಮಗಳನ್ನು ಮತ್ತು ಅವರ ಪತಿಯನ್ನು ಬಿಡುಗಡೆಗೊಳಿಸುವಂತೆ ಈಜಿಪ್ಟಿನ ನ್ಯಾಯಾಲಯವೊಂದು ಆದೇಶಿಸಿದೆ. 56 ವರ್ಷದ ಔಲಾ ಮತ್ತು ಅವರ ಪತಿ 58 ವರ್ಷದ ಹಸಾಂ ಖಲಫ್ ಇಬ್ಬರನ್ನೂ 2017 ಜೂನ್ ನಲ್ಲಿ ಈಜಿಪ್ಟಿನ ಪೊಲೀಸರು ಬಂಧಿಸಿದ್ದರು. ದೇಶದ ಭದ್ರತಾ ಸಂಸ್ಥೆಗಳು ಮತ್ತು ಇತರ ಕಡೆಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಸಂಚು ನಡೆಸಿದ್ದಾರೆ ಮತ್ತು ಇವರಿಗೆ ನಿಷೇಧಿತ ಮುಸ್ಲಿಂ ಬ್ರದರ್ ಹುಡ್ ನೊಂದಿಗೆ ಸಂಬಂಧ ಇದೆ ಎಂಬ ಆರೋಪವನ್ನು ಇವರ ಹೊರಿಸಲಾಗಿತ್ತು. ಈ ಆರೋಪದ ಪ್ರಕಾರ ವಿಚಾರಣೆಯಿಲ್ಲದೆ ಎರಡು ವರ್ಷ ಜೈಲಲ್ಲಿ ಇರಿಸಬಹುದಾಗಿದೆ. ಇದೀಗ ಎರಡು ವರ್ಷಗಳ ಜೈಲು ವಾಸ ಮುಗಿದಿದ್ದು ಮಾತ್ರವಲ್ಲದೆ, ಈ ಅವಧಿಯೊಳಗೆ ಸಲ್ಲಿಸಬೇಕಾದ ಚಾರ್ಜ್ ಶೀಟ್ ಸಲ್ಲಿಸದೆ ಇರುವುದರಿಂದ ಷರತ್ತುಬದ್ಧ ಬಿಡುಗಡೆಗೆ ಕೋರ್ಟು ಆದೇಶ ನೀಡಿದೆ. ಷರತ್ತು ಏನೆಂದರೆ, ನಿಗದಿತ ದಿನಾಂಕದಂದು ಪೊಲೀಸ್ ಠಾಣೆಗೆ ಹಾಜರಾಗುತ್ತಿರಬೇಕು ಎಂಬುದಾಗಿದೆ. ಆದರೆ, ಈ ಆದೇಶದ ಬಳಿಕವೂ ಬಿಡುಗಡೆ ಸಾಧ್ಯ ಅನ್ನುವಂತಿಲ್ಲ. ಸರಿಕಾರಿ ವಕೀಲರು ಈ ಆದೇಶಕ್ಕೆ ತಡೆ ಕೋರಿ ಮೇಲಿನ ಕೋರ್ಟಿಗೆ ಮನವಿ ಸಲ್ಲಿಸಿದರೆ, ಬಂಧನ ಮುಂದುವರಿಯಲಿದೆ.

ಬಂಧನದ ಈ ಎರಡು ವರ್ಷಗಳ ಅವಧಿಯಲ್ಲಿ ಈ ದಂಪತಿಗಳಿಗೆ ವಕೀಲರನ್ನು ಹೊಂದುವ ಮತ್ತು ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಕೊಳ್ಳುವ ಅವಕಾಶವನ್ನೂ ನಿರಾಕರಿಸಲಾಗಿತ್ತು.