ಈಜಿಪ್ಟ್ ಜೈಲಿಗೆ ಹಾಕಿರುವ ಅಲ್‍ಜಝೀರ ವರದಿಗಾರನ ಬಿಡುಗಡೆಗೆ ಹೆಚ್ಚಿದ ಒತ್ತಡ

0
499

ಕೈರೊ,ಮೇ 30: 900 ದಿನಗಳಿಂದ ಆರೋಪ ಹೊರಿಸದೆ ಜೈಲಿನಲ್ಲಿ ಬಂಧಿಸಿಟ್ಟಿರುವ ಅಲ್‍ಜಝೀರದ ಪತ್ರಕರ್ತ ಮಹ್ಮೂದ್ ಹುಸೈನ್‍ರ ಬಿಡುಗಡೆಗೆ ಒತ್ತಾಯ ಹೆಚ್ಚಿದ್ದು ತುರ್ತಾಗಿ ಮತ್ತು ನಿಶ್ಶರ್ತವಾಗಿ ಬಿಡುಗಡೆಗೊಳಿಸಬೇಕೆಂದು ಅಂತಾರಾಷ್ಟ್ರೀಯ ಪ್ರೆಸ್ ಇನ್ಸಿಟ್ಯೂಟ್ (ಐಪಿಐ) ಒತ್ತಾಯಿಸಿದೆ. ಹುಸೈನ್‍ರ ಬಿಡುಗಡೆಗೆ ಕಳೆದ 23ನೆ ತಾರೀಕು ಈಜಿಪ್ಟ್ ಕೋರ್ಟು ಆದೇಶಿಸಿತ್ತು. 24 ಗಂಟೆಯೊಳಗೆ ಬಿಡುಗಡೆಗೊಳಿಸಬೇಕೆಂದು ಕೋರ್ಟು ಹೇಳಿದ್ದರೂ ಅವರನ್ನು ಈಗಲೂ ಜೈಲಿನಲ್ಲಿರಿಸಲಾಗಿದೆ. ಇದನ್ನು 100 ದೇಶಗಳ ಪತ್ರಕರ್ತರನ್ನೊಳಗೊಂಡ ಸಂಘಟನೆ ಐಪಿಐ ಪ್ರಶ್ನಿಸಿದೆ. ಹುಸೈನ್‍ರನ್ನು ಈಜಿಪ್ಟ್ ಸುಳ್ಳು ವರದಿಗಾರಿಕೆ ಮಾಡಿದ್ದಾರೆಂದು ಆರೋಪಿಸಿ 2016ರಲ್ಲಿ ಈಜಿಪ್ಟ್ ಸಿಸಿ ಸರಕಾರ ಬಂಧಿಸಿ ಜೈಲಿಗಟ್ಟಿದೆ. ಅವರ ವಿರುದ್ಧ ಯಾವುದೇ ಆರೋಪವನ್ನು ಹೊರಿಸಿಲ್ಲ. ಕೇವಲ ಜೈಲುವಾಸದ ಅವಧಿಯನ್ನು ಹೆಚ್ಚಿಸುತ್ತಾ ಬಂದಿದೆ.