ಈದ್ ಗೆ ವಿದ್ಯುತ್ ಕೊಟ್ಟದ್ದಕ್ಕಾಗಿ ಅಖಿಲೇಶ್ ರನ್ನು ಈ ಹಿಂದೆ ಟೀಕಿಸಿದ್ದ ಬಿಜೆಪಿಯಿಂದ ಈಗ ತಿಪ್ಪರಲಾಗ: ಯೋಗಿಯಿಂದ ರಮಝಾನ್ ಗೆ ವಿದ್ಯುತ್

0
403

ಲಕ್ನೋ: ಮುಂಬರುವ ರಮಝಾನ್ ಅವಧಿಯಲ್ಲಿ ಮುಸ್ಲಿಮ್ ಪ್ರಾಬಲ್ಯದ ಜಿಲ್ಲೆಗಳಿಗೆ ವಿದ್ಯುತ್ ಸರಬರಾಜಿಗೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಆದೇಶಿಸಿದೆ. ಕಳೆದ ವರ್ಷ ಯುಪಿ ಅಸೆಂಬ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಮುಖ್ಯಮಂತ್ರಿ ಅಖಿಲೇಶ್ ಯಾದವ್ ರನ್ನು ಟೀಕಿಸುತ್ತಾ, ಮುಸ್ಲಿಮರ ಈದ್ ಸಂದರ್ಭದಲ್ಲಿ ಸಮಾಜವಾದಿ ಪಕ್ಷವು ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುತ್ತಿದೆ, ಆದರೆ ದೀಪಾವಳಿಗೆ ಈ ಭಾಗ್ಯ ಕೊಟ್ಟಿಲ್ಲ ಎಂದು ಹರಿಹಾಯ್ದಿದ್ದರಲ್ಲದೆ, ,ಧರ್ಮದ ಮೇಲೆ ರಾಜ್ಯ ಸರಕಾರವು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಭಾನುವಾರ ಸಂಜೆ ಯುಪಿ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಮಾತಾಡುತ್ತಾ, ರವಾನೆ ಮತ್ತು ವಿತರಣಾ ವ್ಯವಸ್ಥೆಯನ್ನು ನವೀಕರಿಸುವ ಸಲುವಾಗಿ ಎಲ್ಲ ವಿಭಾಗಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, “ನಮ್ಮಲ್ಲಿ ಸಾಕಷ್ಟು ವಿದ್ಯುತ್ ಶಕ್ತಿಯಿದೆ. ವಿಶೇಷವಾಗಿ ಮುಸ್ಲಿಮರ ಪ್ರಾರ್ಥನಾ ಸಮಯ ಮತ್ತು ‘ಸಹೆರಿ’ ( ಸೂರ್ಯೋದಯಕ್ಕೂ ಮುಂಚಿತವಾಗಿ ಮಾಡುವ ಊಟ) ಸಂಧರ್ಬದಲ್ಲಿ ವಿದ್ಯುತ್ ಸರಬರಾಜಿಗೆ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳುವುದಾಗಿಯೂ, ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ಸಮುದಾಯದ ವಿರುದ್ಧ ನಾವು ತಾರತಮ್ಯ ಮಾಡುವುದಿಲ್ಲ ” ಎಂದೂ ತಿಳಿಸಿದರು.

ಅಖಿಲೇಶ್ ಸರಕಾರದ “ಒಂದು ಸಮುದಾಯವನ್ನು ಸಮಾಧಾನಗೊಳಿಸುವ” ನೀತಿಗಿಂತ ಭಿನ್ನವಾಗಿ ಬಿಜೆಪಿ ‘ಸಬ್ಕಾ ಸಾತ್ ಸಬ್ಕಾ ವಿಕಾಸ್’ನಲ್ಲಿ ನಂಬಿಕೆ ಹೊಂದಿದ್ದು, ಈ ಕ್ರಮವನ್ನು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದ ಆರೋಪವನ್ನು ತಡೆಯುವ ಪ್ರಯತ್ನವಾಗಿ ಕಾಣಬೇಕಾಗುತ್ತದೆ ಎಂದರು.

ಅಯೋಧ್ಯೆ ಮತ್ತು ಮಥುರಾ ಮುಂತಾದ ಸ್ಥಳಗಳಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುತ್ತಲೇ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದ ಆರೋಪವನ್ನು ತಡೆಗಟ್ಟುವ ಪ್ರಯತ್ನವಾಗಿ ಈ ಕ್ರಮಕ್ಕೆ ಸರಕಾರ ಮುಂದಾಗಿದೆ. ಪಶ್ಚಿಮ ಯುಪಿಯ ಸೂಕ್ಷ್ಮ ಪ್ರದೇಶಗಳಾದ ಕೈರನಾ ಲೋಕಸಭೆ ಮತ್ತು ನೂರ್ಪುರ್ ವಿಧಾನಸಭಾ ಉಪಚುನಾವಣೆಗಿಂತ ಮುಂಚಿತವಾಗಿ ತೆಗೆಯುವ ಈ ಕ್ರಮ ಮಹತ್ವ ಪಡೆದಿದೆ.

ಕೈರಾನಾ ಮತ್ತು ನೂರ್ಪುರ ಎರಡೂ ಮುಸ್ಲಿಮ್ ಬಾಹುಲ್ಯ ಪ್ರದೇಶಗಳಾಗಿದ್ದು , ಈ ಕ್ರಮ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಆರ್ ಎಲ್ ಡಿ ಮುಂತಾದ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಮೇ 28 ರಂದು ಈ ಎರಡೂ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಇದರ ಬಗ್ಗೆ ಮಾತಾಡಿದ ಶಾಸನಸಭೆಯ ಪ್ರತಿಪಕ್ಷ ನಾಯಕ ಮತ್ತು ಎಸ್ಪಿ ಹಿರಿಯ ನಾಯಕ ಅಹ್ಮದ್ ಹಸನ್, ”ಇದು ಒಂದು ಹಬ್ಬದ ಬಗ್ಗೆ ಇರಬಾರದು, ಬಿಜೆಪಿ ಒಂದು ಹಬ್ಬದ ಮೇಲೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಮೂಲಕ ವಾತಾವರಣವನ್ನು ಕೋಮುವಾದಗೊಳಿಸಲು ಪ್ರಯತ್ನಿಸುತ್ತಿದೆ. ಎಲ್ಲಾ ಧರ್ಮ ಧಾರ್ಮಿಕ ಉತ್ಸವಗಳ ಅವಧಿಯಲ್ಲಿ ವಿದ್ಯುತ್ ಸರಬರಾಜನ್ನು ಎಸ್ಪಿಯ ಸರ್ಕಾರ ಪ್ರಾರಂಭಿಸಿತ್ತು, ಬಿಜೆಪಿ ಈ ನಿಯಮ ತನ್ನದೆಂದು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್, ಬಿಜೆಪಿ ತನ್ನ ಸೀಮಿತ ಕಾರ್ಯಕ್ರಮಗಳಿಂದ ರಾಜ್ಯವನ್ನು ಕೋಮುವಾದೀಕರಣಗೊಳಿಸಲು ಪ್ರಯತ್ನಿಸುತ್ತಿದ್ದು ಇದು ನಿಲ್ಲಬೇಕು ಹಾಗೂ , ಎಲ್ಲಾ ಹಬ್ಬಗಳಲ್ಲೂ ವಿದ್ಯುತ್ ಸರಬರಾಜು ಖಾತರಿಪಡಿಸಬೇಕು ” ಎಂದು ಆಗ್ರಹಿಸಿದರು.