ಯಾವುದೇ ಸರ್ಕಾರ ರೈತರ ವಿರುದ್ಧ ಗೆಲುವು ಸಾಧಿಸಿದ ಇತಿಹಾಸವಿಲ್ಲ: ಕೇಂದ್ರ ಸರಕಾರವನ್ನು ಕುಟುಕಿದ ನವಜೋತ್ ಸಿಂಗ್‌ ಸಿಧು

0
534

ಸನ್ಮಾರ್ಗ ವಾರ್ತೆ

ನವದೆಹಲಿ: ಇತಿಹಾಸದಿಂದ ಪಾಠ ಕಲಿಯಿರಿ… ಯಾವುದೇ ಸರ್ಕಾರ ರೈತರ ವಿರುದ್ಧ ಗೆಲುವು ಸಾಧಿಸಿದ ಇತಿಹಾಸವಿಲ್ಲ ಎಂಬುದಾಗಿ ನವಜೋತ್‌ ಸಿಂಗ್‌ ಸಿಧು ಕೇಂದ್ರ ಸರಕಾರವನ್ನು ಕುಟುಕಿದ್ದಾರೆ.

ಕೇಂದ್ರ ಸರಕಾರವು ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸುಮಾರು ಎರಡು ತಿಂಗಳುಗಳಿಂದ ರೈತರು ಶಾಂತಿಯುತ ಪ್ರತಿಭಟನೆ ಕೈಗೊಂಡಿದ್ದರು. ಸರಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣಕ್ಕಾಗಿ ರೈತ ನಾಯಕರು ಈ ಹಿಂದೆ ಘೋಷಿಸಿದಂತೆ ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ಪರೇಡ್ ನಡೆಸಿದ್ದರು.

ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ್ದು, ಭಾರತದ ಐತಿಹಾಸಿಕ ಸ್ಮಾರಕ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಕಾರರು ರೈತ ಧ್ವಜವನ್ನು ನೆಟ್ಟಿದ್ದರು.

ರೈತರ ಟ್ರಾಕ್ಟರ್ ರ್ಯಾಲಿ ಮತ್ತು ಹಿಂಸಾಚಾರದ ಕುರಿತು ಟ್ವೀಟ್ ಮಾಡಿರುವ ನವಜೋತ್‌ ಸಿಂಗ್‌ ಸಿಧು, ‘ಯಾವ ಸರ್ಕಾರವೂ ರೈತರ ವಿರುದ್ಧ ಗೆಲುವು ಪಡೆದ ಇತಿಹಾಸವಿಲ್ಲ. ನೀವು ಇತಿಹಾಸದಿಂದ ಪಾಠ ಕಲಿಯಬೇಕು. ಇಲ್ಲದಿದ್ದರೆ ಇತಿಹಾಸವು ಮರುಕಳಿಸುತ್ತಲೇ ಇರುತ್ತದೆ. ಇತಿಹಾಸವು ನಮಗೆ ಹೇಳುವುದೇನೆಂದರೆ, ರೈತರ ವಿರುದ್ಧ ಯಾವ ಸರ್ಕಾರವೂ ಗೆಲುವು ಸಾಧಿಸಿದ ಚರಿತ್ರೆಯೇ ಇಲ್ಲ ಎಂದಾಗಿದೆ ಎಂದು ಸಿಧು ಟ್ವೀಟ್ ಮಾಡಿದ್ದಾರೆ.

ರೈತರು ಎರಡು ತಿಂಗಳುಗಳ ಕಾಲ ಚಳಿಯಲ್ಲಿ ಕುಳಿತು ಸಾವಧಾನದಿಂದ, ತಾಳ್ಮೆಯಿಂದ ಸರ್ಕಾರವು ಕಾಯ್ದೆಯನ್ನು ಹಿಂಪಡೆಯುತ್ತದೆಯೇ ಎಂದು ಕಾದರು. ಆದರೆ ಯಾವುದೇ ಬದಲಾವಣೆ ಉಂಟಾಗಲಿಲ್ಲ. ಹೃದಯವೇ ಇಲ್ಲದ ಸರ್ಕಾರ ರೈತರ ದನಿಗೆ ಕಿವಿಯಾಗಲಿಲ್ಲ. ಇದೀಗ ರೈತರ ಸಂಯಮದ ಕಟ್ಟೆ ಹೊಡೆದಿದೆ ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.