ಗಾಂಧಿಯನ್ನು ಕೊಂದ ಆರ್‌ಎಸ್‌ಎಸ್ ಭಾರತವನ್ನು ವಿಭಜಿಸುತ್ತಿದೆ- ತುಷಾರ್ ಗಾಂಧಿ

0
628

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.22: ಭಾರತವನ್ನು ವಿಭಜಿಸುವ ಆರೆಸ್ಸೆಸ್ ವಿರುದ್ಧ ಹೋರಾಟಕ್ಕೆ ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಕರೆ ನೀಡಿದ್ದಾರೆ. ಅವರು ಮಹಾತ್ಮಾ ಗಾಂಧಿಯ ಮೊಮ್ಮಗ ಅರುಣ್‍ ಗಾಂಧಿಯ ಪುತ್ರ ಆಗಿದ್ದಾರೆ.

ಪೋರ್‍ಬಂದಿನಲ್ಲಿ ನಡೆದ ಮಹಾತ್ಮಾ ಗಾಂಧಿಯವರ ಪತ್ನಿ ಕಸ್ತೂರ್ ಬಾ‌ರವರ 150ನೇ ಜನ್ಮದಿನೋತ್ಸ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದ್ದಾರೆ. ಆರೆಸ್ಸೆಸ್ ಅಧಿಕಾರಿಗಳನ್ನು ನಾನು ದ್ವೇಷಿಸುವುದಿಲ್ಲ. ಆದರೆ ವಿರೋಧಿಸುತ್ತೇನೆ. ಅದು ದೇಶವನ್ನು ವಿಭಜಿಸುತ್ತಿದೆ. ಬೇರೆ ಯಾರೂ ಹೀಗೆ ಮಾಡಿಲ್ಲ ಎಂದು ನಾನು ಹೇಳುವುದಿಲ್ಲ. ನಾನು ಅದನ್ನು ವಿರೋಧಿಸುತ್ತೇನೆ. ನಮಗೆ ಇದರ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಇಲ್ಲದಿದ್ದರೆ ನಾವು ಗಾಂಧಿವಾದಿಗಳೆಂದು ಹೇಳಿ ಪ್ರಯೋಜನವಿಲ್ಲ ಎಂದು ತುಷಾರ್ ಗಾಂಧಿ ಹೇಳಿದರು.

ಮಹಾತ್ಮಾ ಗಾಂಧಿಯನ್ನು ಆರೆಸ್ಸೆಸ್ ಕೊಲೆ ಮಾಡಿದೆ. ನನ್ನ ಪುಸ್ತಕದಲ್ಲಿ ಇದನ್ನು ಹೇಳಿದ್ದೇನೆ. ನನ್ನ ಎಲ್ಲ ಭಾಷಣಗಳಲ್ಲಿ ನಾನಿದನ್ನು ಹೇಳುತ್ತೇನೆ. ಗಾಂಧೀಜಿಯನ್ನು ಕೊಂದದ್ದು ನಾಥೂರಾಮ್ ಗೋಡ್ಸೆ. ಅದು ಆರೆಸ್ಸೆಸ್ ಹೇಳಿ ಮಾಡಿಸಿದ ಕೆಲಸವಾಗಿದೆ. ಜನರು ಬರುತ್ತಾರೆ, ಹೋಗುತ್ತಾರೆ. ಇಂದಿರಾ ಗಾಂಧಿ ಸರ್ವಾಧಿಕಾರಿಯಾದಾಗ ಅವರನ್ನು ನಾವು ಮನೆಗೆ ಕಳುಹಿಸಿದ್ದೇವೆ. ಆ ಶಕ್ತಿ ಸತ್ತಿಲ್ಲ. ನಾವು ಅದನ್ನು ಪುನಃ ಹೊರತೆಗೆಯಬೇಕಾಗಿದೆ ಎಂದು ತುಷಾರ್ ಗಾಂಧಿ ಹೇಳಿದರು.