ಪ್ರವಾಹದಿಂದ ತಪ್ಪಿಸಲು ತಾಯಿ, ಪತ್ನಿ, ಮಗಳನ್ನು 3 ಕಿ.ಮೀ. ದೂರದ ಮನೆಯ್ಲಲಿರಿಸಿದೆ, ಆದರೆ… ಪ್ರಭುಕುಮಾರ್ ಭಟ್ ಅವರ ಹೃದಯಭೇದಕ ಕಥನ – ಇದು ಕೊಡಗು ಪ್ರವಾಹದ ಕತೆ

0
1778

ವರದಿ: ಅಬ್ದುರ್ರಹ್ಮಾನ್ ವಿರಾಜಪೇಟೆ

ದೇಶದ ಜನತೆ ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿರುವಾಗ ಉತ್ತರದ ಕಾಶ್ಮೀರ ಪ್ರಭುತ್ವದ ದಿಗ್ಬಂಧನಕ್ಕೆ ಒಳಗಾಗಿದ್ದರೆ, ದಕ್ಷಿಣದ ಕಾಶ್ಮೀರವೆಂದು ಹೆಸರುವಾಸಿಯಾದ ಕೊಡಗು ಜಿಲ್ಲೆ ಪ್ರಕೃತಿ ವಿಕೋಪದಿಂದಾಗಿ ದಿಗ್ಬಂಧನಕ್ಕೆ ಒಳಗಾಗಿತ್ತು. ಕಳೆದ ಎರಡು ವರ್ಷವೂ ಜಿಲ್ಲೆಯ ಮಟ್ಟಿಗೆ ಮರೆಯಲಾಗದ ಆಗಸ್ಟ್ ಆಗಿತ್ತು. ಕಳೆದ ಆಗಸ್ಟ್‍ನಲ್ಲಿ ಉಂಟಾದ ಜಲಪ್ರಳಯ ಮತ್ತು ಭೂಕುಸಿತದಿಂದಾಗಿ ಜಿಲ್ಲೆಯ ಉತ್ತರ ಭಾಗವಾದ ಮಡಿಕೇರಿಯಲ್ಲಿ 27 ಅಮೂಲ್ಯ ಜೀವಗಳು ಮಾತ್ರವಲ್ಲದೆ ಸಾವಿರಾರು ಎಕರೆಗಳ ಬೆಲೆಬಾಳುವ ಫಸಲಿನ ತೋಟಗಳು ಮತ್ತು ಆಸ್ತಿ-ಪಾಸ್ತಿಗಳು ನಾಶ ಹೊಂದಿದ್ದವು. ಈ ಬಾರಿ ಜಲಪ್ರಳಯ ಮತ್ತು ಮಹಾ ಮಾರಿ ದಕ್ಷಿಣದ ವಿರಾಜಪೇಟೆಯನ್ನು ಆಯ್ಕೆ ಮಾಡಿಕೊಂಡಿತ್ತು. ಬಾಗಮಂಡಲದ ಕೋರಂಗಾಲದಲ್ಲಿ ಐದು ಮಂದಿ ಮತ್ತು ವಿರಾಜಪೇಟೆಯ ಕೆದಮುಳ್ಳೂರು ಗ್ರಾಮಪಂಚಾಯ್ತಿಗೆ ಸೇರಿದ ತೋರ ಎಂಬ ಸಣ್ಣ ಗ್ರಾಮದ ಹತ್ತು ಮಂದಿಯ ಅಮೂಲ್ಯ ಜೀವವನ್ನು ಈ ಬಾರಿಯ ಪ್ರಳಯ ಬಲಿ ತೆಗೆದುಕೊಂಡಿದೆ. ಸಿದ್ಧಾಪುರದ ಕರಡಿಗೋಡು, ಗುಯ್ಯ, ಕೊಂಡಂಗೇರಿ, ಬೇತ್ರಿ, ನಾಪೋಕ್ಲುವಿನ ಚೆರಿಯಪರಂಬು ಮುಂತಾದ ಕಾವೇರಿ ತೀರದ ಪ್ರದೇಶಗಳಲ್ಲಿ ಹೆಚ್ಚು ಕಡಿಮೆ ಸಾವಿರಕ್ಕಿಂತಲೂ ಹೆಚ್ಚು ಮನೆ ಗಳು ಜಲಾವೃತಗೊಂಡಿವೆ. ಅವುಗಳಲ್ಲಿ 500ರಷ್ಟು ಮನೆಗಳು ಪೂರ್ಣವಾಗಿ ನೆಲೆಸಮವಾಗಿವೆ. ಐದು ಸಾವಿರಕ್ಕಿಂತಲೂ ಹೆಚ್ಚು ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.

ತೋರ ಗ್ರಾಮದ ಪರಮೇಶ್ ಎಂಬವರು ಮೂರೂವರೆ ಎಕರೆ ಕಾಫಿತೋಟವನ್ನು ಇಟ್ಟುಕೊಂಡು ಸುಖ ಸಂಸಾರ ಸಾಗಿಸುತ್ತಿದ್ದರು. ಆಗಸ್ಟ್ 9ರಂದು ಉಂಟಾದ ಭೂಕುಸಿತದಲ್ಲಿ ಪತ್ನಿ ಮಮತಾ ಹಾಗೂ ಲಿಖಿತಾ ಎಂಬ ಮಗಳನ್ನು ಮಾತ್ರವಲ್ಲ ಬದುಕು ಇಡೀ ದುಡಿದು ಸಂಪಾದಿಸಿದ್ದ ಸರ್ವವನ್ನು ಕಳೆದು ಕೊಂಡು ಬದುಕಿ ಉಳಿದ ತಮ್ಮ ಮತ್ತೊಬ್ಬ ಮಗಳು ಹಾಗೂ ಮಗ ದರ್ಶನ್‍ರೊಂದಿಗೆ ಹೆಗ್ಗಳದ ಪ್ರೌಢಶಾಲೆಯ ಪರಿಹಾರ ಕೇಂದ್ರದಲ್ಲಿ ಸರಕಾರದ ಆಶ್ರಯದಲ್ಲಿ ಇದ್ದಾರೆ. ಆಗಸ್ಟ್ 9ರಂದು ಬೆಳಿಗ್ಗೆ ಭೂಕುಸಿತ ಉಂಟಾಗುವಾಗ ಪತ್ನಿಯನ್ನು ಮತ್ತು ಮಗಳನ್ನು ಮನೆಯಲ್ಲಿ ಬಿಟ್ಟು ಹತ್ತಿರದಲ್ಲೇ ಇರುವ ವಯಸ್ಸಾದ ಪೋಷಕರನ್ನು ಕ್ಷೇಮ ವಿಚಾರಿಸಲು ಹೊರಗೆ ಹೋದಾಗ ಘಟನೆ ಸಂಭವಿಸಿದೆ. ಪುತ್ರ ದರ್ಶನ್ ಹಾಗೂ ಸ್ನೇಹಿತ ಸತೀಶ್ ಪವಾಡ ಸದೃಶ್ಯ ಬದುಕಿ ಉಳಿದಿದ್ದಾರೆ. ತಾರೀಕು 10ರಂದು ತಮ್ಮವರ ಮೃತದೇಹಗಳನ್ನು ವಿರಾಜಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮಲಬಾರ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಗೆ ಕೊಂಡೊಯ್ಯಲಾಗಿ ಅಲ್ಲಿಯೂ ಪರಮೇಶ್‍ರವರಿಗೆ ದುರ್ಗತಿ ಕಾದಿತ್ತು. ಮೃತದೇಹ ವಿರಾಜಪೇಟೆಯ ನಗರದಲ್ಲ ಎಂಬ ಕಾರಣವೊಡ್ಡಿ ಶ್ಮಶಾನ ಸಮಿತಿಯವರು ಮೃತದೇಹವೊಂದಕ್ಕೆ ನಿಗದಿ ಪಡಿಸಿದ ಶುಲ್ಕವಾದ ರೂ. 8,000 ಪಾವತಿಯಾಗದೆ ಸಂಸ್ಕರಿಸಲು ನಿರಾಕರಿಸಿದರು. ಈ ಘಟನೆ ಸಾಮಾಜಿಕ ಸುದ್ದಿ ಜಾಲಗಳಲ್ಲಿ ಮತ್ತು ಚಾನಲ್‍ಗಳಲ್ಲಿ ವಿವಾದವಾಗಿ ಸಂಸದ ಪ್ರತಾಪ್‍ಸಿಂಹರವರೆಗೂ ತಲುಪಿ ಸಾರ್ವಜನಿಕರ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆ ಬಗೆಹರಿಯಿತು.

ತಾಯಿ, ಪತ್ನಿ ಮತ್ತು ಈರ್ವರು ಮಕ್ಕಳನ್ನು ಕಳೆದುಕೊಂಡ ಅದೇ ಗ್ರಾಮದಲ್ಲಿ ತಲೆತಲಾಂತರ ಗಳಿಂದ ಬೇಸಾಯ ಮಾಡಿ ಬದುಕುತ್ತಿದ್ದ ಪ್ರಭು ಕುಮಾರ್ ಭಟ್ ಆಲಿಯಾಸ್ ಪ್ರಭು ಎಂಬವರ ಅನುಭವವಂತೂ ಹೃದಯ ವಿದ್ರಾವಕ. ನಲವತ್ತು ವರ್ಷಗಳ ಹಿಂದೆ ತಂದೆ ಬಿಟ್ಟು ಹೋದ ಅಲ್ಪ ಸ್ವಲ್ಪ ಕಾಫಿ ಜಮೀನನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಸಣ್ಣ-ಪುಟ್ಟ ವ್ಯಾಪಾರವನ್ನೂ ಮಾಡುತ್ತಿ ದ್ದರು. 13 ವರ್ಷಗಳ ಹಿಂದೆ ತೋಟದ ಮನೆ ಯಲ್ಲದೆ ರಸ್ತೆ ಬದಿಯಲ್ಲೇ ಒಂದು ಮನೆ ಹಾಗೂ ಒಂದು ಅಂಗಡಿಯನ್ನು ನಿರ್ಮಿಸಿ ಈರ್ವರು ಹೆಣ್ಣುಮಕ್ಕಳು ಹಾಗೂ ಪತ್ನಿಯೊಂದಿಗೆ ಸುಖಜೀವನ ಸಾಗಿಸುತ್ತಿರುವಾಗಲೇ ದೇವವಿಧಿ ಬಂದೆರಗಿದೆ. ಕದಲದ ಮನಸ್ಸಿನವರಾದ ಪ್ರಭು ರವರು “ಸನ್ಮಾರ್ಗ”ದೊಂದಿಗೆ ಮಾತನಾಡುತ್ತಾ,

“ಇದು ದೇವವಿಧಿಯಲ್ಲದೇ ಮತ್ತೇನೂ ಅಲ್ಲ. ಸಾಕಿ ಸಲಹಿದ ತಾಯಿ, ಕೈ ಹಿಡಿದ ಪತ್ನಿ, ಪ್ರೀತಿಯ ಮಕ್ಕಳನ್ನು ಕಳೆದುಕೊಂಡ ನನಗೆ ಬೇಸರವಿದೆ. ಆದರೆ ನಾನು ಕದಲುವವ ನಲ್ಲ. ಇಂತಹ ಸಂದರ್ಭದಲ್ಲಿ ಕದಲಲು ದೇವನು ಕಲಿಸಲಿಲ್ಲ. ನಾವೆಲ್ಲರೂ ಒಂದು ದಿನ ದೇವನೆಡೆಗೆ ಸೇರಬೇಕಾಗಿದೆ. ಘಟನೆಗೆ ಒಂದು ದಿನ ಮುಂಚೆ ಅಂದರೆ ಆಗಸ್ಟ್ 8 ರಂದು ತನ್ನ ಅಂಗಡಿ ಮನೆಯ ಮಹಡಿ ಮೇಲೆ ಕೊಠಡಿಯಿಂದ ಸುತ್ತಲೂ ಹರಿಯುತ್ತಿರುವ ನದಿಯ ಪ್ರವಾಹವನ್ನು ಮಕ್ಕಳೊಂದಿಗೆ ವೀಕ್ಷಿಸಿ ಮೊಬೈ ಲಿನಲ್ಲಿ ವೀಡಿಯೋ ತೆಗೆದಿದ್ದೆವು. ಆ ಸಂದರ್ಭದಲ್ಲಿ ನೆರೆಕರೆಯವರ ಒತ್ತಾಯದ ಮೇರೆಗೆ ತಾಯಿ, ಪತ್ನಿ ಮತ್ತು ಮಕ್ಕಳನ್ನು 3 ಕಿ.ಮೀ ದೂರದ ತೋಟದ ಮನೆಗೆ ಬಿಟ್ಟು ಅಂದು ರಾತ್ರಿ ಅಲ್ಲೇ ತಂಗಿದ್ದೆ. ಮಾರನೆಯ ದಿನ ಬೆಳಿಗ್ಗೆ ಮಕ್ಕಳೊಂದಿಗೆ ಉಪಹಾರ ಸೇವಿಸಿದ ನಂತರ ಅಂಗಡಿಯ ಬಗ್ಗೆ ವಿಚಾರಿಸಿ ಬರುವ ಸಲುವಾಗಿ ಹೊರಟೆ. ಹಿಂಬದಿಯಿಂದ ದೊಡ್ಡ ಶಬ್ದವಾಯಿತು. ಏನೆಂದು ತಿಳಿಯಲು ಹಿಂದಕ್ಕೆ ಕಾಲ್ಕಿತ್ತಾಗ ಪ್ರವಾಹ ಒಂದೇ ಸಮನೆ ತನ್ನನ್ನು ಗುರಿಯಾಗಿಸಿ ಬರುತ್ತಿತ್ತು. ತನ್ನ ಮ ನೆಯ ಮೇಲೆ ಗುಡ್ಡ ಜರಿದಿರಬಹುದು ಮತ್ತು ತನ್ನ ಕುಟುಂಬದವರು ಮಣ್ಣಿನ ಅಡಿ ಆಗಿರಬಹುದು ಎಂದು ತನ್ನ ಮನಸ್ಸು ಹೇಳುತ್ತಿತ್ತು. ಆದರೂ ಎಲ್ಲವೂ ದೇವೇಚ್ಛೆ ಮತ್ತು ದೇವರಲ್ಲಿ ಸಂಪೂರ್ಣ ಭರವಸೆ ಇರಿಸಿ ಮುಂದೆ ಸಾಗಿದೆ.

ಪ್ರವಾಹದ ರಭಸಕ್ಕೆ ತಾನೂ ಸಿಲುಕುವುದು ಖಚಿತ ಎಂದು ತಿಳಿದೆ. ಆದರೆ ನಾನು ಇದ್ದ ಸ್ಥಳದಿಂದ 30 ಅಡಿ ಇರುವಾಗ ಪ್ರವಾಹದ ದಿಕ್ಕು ತಪ್ಪಿತು. ತಾನು ಬದುಕಬೇಕೆಂಬುದು ದೇವರ ಇಚ್ಛೆ ಇರಬಹುದೇನೋ ಎಂದು ಚಿಂತಿಸಿದೆ. ಈ ಸಂದರ್ಭದಲ್ಲಿ ನಾನು ದೇವರನ್ನು ಪ್ರತ್ಯಕ್ಷ ಕಂಡಿದ್ದು ಮಾತ್ರವಲ್ಲ ಮನುಷ್ಯನ ಕೈಯಲ್ಲಿ ಏನೂ ಇಲ್ಲ ಎಂದು ಅರಿತುಕೊಂಡ ನಿಮಿಷಗಳು ಅವು. ತನ್ನ ಮರಣವನ್ನು ಮುಖಾ ಮುಖಿ ಕಂಡುದುದು ಮಾತ್ರವಲ್ಲ ಇಡೀ ಸಂಸಾರ ವನ್ನೇ ಕಳೆದುಕೊಂಡೆ. ಮನುಷ್ಯ ಸಂಬಂಧಗಳಿಗೆ ಇಷ್ಟು ಬೆಲೆ ಇದೆ ಎಂಬುದು ನಾನು ತಿಳಿದುಕೊಂಡೆ. ಆದರೂ ನಾನು ಕದಲುವವನಲ್ಲ. ದೇವರು ನನ್ನವರಿಗೆ ಶಾಂತಿ ನೀಡಲಿ” ಎಂದು ಮಾತು ಮುಗಿಸಿದರು.

ರಕ್ಷಣಾ ಕಾರ್ಯ:

ಕಳೆದ ವರ್ಷದಂತೆ ಉಂಟಾದ ಮಹಾಪೂರದ ನಂತರ ಜಿಲ್ಲಾಡಳಿತ ಸ್ವಯಂ ಸೇವಾ ಸಂಸ್ಥೆಗಳು ಎಂದಿನಂತೆ ರಕ್ಷಣಾ ಕಾರ್ಯಗಳಲ್ಲಿ ತೊಡಗಿದ್ದಾರೆ. ಒಟ್ಟು 60ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಿ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಜ ನಪ್ರತಿನಿಧಿಗಳು, ಅಧಿಕಾರಿಗಳು ಸಂದರ್ಶಿಸಿ ಪರಿಹಾರ ವಿತರಣೆಯ ಘೋಷಣೆ ಮಾಡಿ ಹೋಗುತ್ತಿದ್ದಾರೆ. 11 ತಿಂಗಳ ಹಿಂದೆ ಉಂಟಾದ ಪ್ರವಾಹದ ಸಂತ್ರಸ್ತರಿಗೆ ಹೆಚ್ಚಿಗೆ ಏನೂ ಮಾಡದೆ ಇದ್ದ ಆಡಳಿತವರ್ಗ ಹೊಸ ಭರವಸೆ ಮತ್ತು ಆಶ್ವಾಸನೆಗಳನ್ನು ನೀಡುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪರಿಹಾರ ಕೇಂದ್ರಗಳ ವ್ಯವಸ್ಥೆ ಇನ್ನಷ್ಟು ಅಚ್ಚುಕಟ್ಟಾಗಿ ನಡೆಯುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳಿಂದ ನೆರವು ಹರಿದುಬರುತ್ತಿದೆ. ಎಸ್.ವೈ.ಎಸ್, ಎಸ್.ಕೆ.ಎಸ್.ಎಸ್.ಎಫ್, ಎಸ್.ಡಿ. ಪಿ.ಐ., ದಯಾ ಚಾರಿಟಬಲ್ ಟ್ರಸ್ಟ್ ಬೆಂಗಳೂರು ಮುಂತಾದ ಸಂಘ ಸಂಸ್ಥೆಗಳು ರಕ್ಷಣಾ ಕಾರ್ಯ ಮತ್ತು ನೆರವು ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೆಚ್.ಆರ್.ಎಸ್ ಮತ್ತು ಜಮಾಅತ್ ತಂಡಗಳ ಸೇವಾ ಕಾರ್ಯ:

ಭೂಕುಸಿತ ಮತ್ತು ಜಲಪ್ರಳಯಕ್ಕೆ ತುತ್ತಾದ ಸಿದ್ದಾಪುರ, ಕರಡಿಗೋಡು, ಕೊಂಡಂಗೇರಿ, ಹೆಗ್ಗಳ, ತೋರ, ಗುಯ್ಯ, ಬೇತ್ರಿ ಪ್ರದೇಶಗಳಲ್ಲಿ ಜಿಲ್ಲೆಯ ಹೆಚ್.ಆರ್.ಎಸ್‍ನ ಸ್ವಯಂಸೇವಕರು ಪರಿಹಾರ, ರಕ್ಷಣಾ ಮತ್ತು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿಯವರ ನೇತೃತ್ವದ ತಂಡ ಘಟನಾ ಸ್ಥಳ ಮತ್ತು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸ್ಥಿತಿ-ಗತಿಗಳ ಬಗ್ಗೆ ಅವಲೋಕನ ನಡೆಸಿರುತ್ತಾರೆ. ಹೆಚ್.ಆರ್.ಎಸ್. ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರಕಡ, ವಲಯ ಸಂಚಾಲಕ ಯು. ಅಬ್ದುಸ್ಸಲಾಮ್, ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಈಲ್ ತಂಡದಲ್ಲಿ ಇದ್ದರು. ಇಡೀ ಸಂಸಾರ ಕಳೆದುಕೊಂಡ ಪ್ರಭುಕುಮಾರ್ ಭಟ್ ಮತ್ತು ಪರಮೇಶ್‍ರವರನ್ನು ಭೇಟಿಯಾಗಿ ಸಾಂತ್ವನ ತಿಳಿಸಿದರು. ಸಿದ್ದಾಪುರದ ಮಾರ್ಕೆಟ್ ರಸ್ತೆಯಲ್ಲಿ ಹಿರಾಸೆಂಟರಿಗೆ ಸಮೀಪವಾಗಿ ಕೊಡಗು ರಿಲೀಫ್ ಸೆಲ್‍ನ ಕಾರ್ಯಾಲಯವನ್ನು ಪ್ರಾರಂಭಿಸಿ ಸಂತ್ರಸ್ತರ ಸಮೀಕ್ಷೆ ಮತ್ತು ನೆರವು ಕಾರ್ಯ ಪ್ರಾರಂಭಗೊಂಡಿದೆ.