ಮಾರುವೇಷದಲ್ಲಿದ್ದ ರಾಜನಿಗೆ ಆ ಕುಡುಕ ವ್ಯಕ್ತಿಯ ಕುರಿತು ತಿಳಿದ ಸತ್ಯ….

0
1317

ಅಕ್ಬರ್ ಅಲಿ.ಬಜ್ಪೆ

ಒಂದು ಊರಿನಲ್ಲಿ ಒಬ್ಬ ಒಳ್ಳೆಯ ಮನಸ್ಸಿನ ಜನರ ಕ್ಷೇಮವನ್ನು ಬಯಸುವ ರಾಜನಿದ್ದ. ಅವನು ಯಾವಾಗಲೂ ರಾತ್ರಿ ಸಮಯದಲ್ಲಿ ತನ್ನ ವೇಷಭೂಷಣವನ್ನು ಬದಲಿಸಿ ಸಂಚರಿಸುತ್ತಿದ್ದ. ಅವನು ತನ್ನ ರಾಜ್ಯದಲ್ಲಿ ಯಾರೂ ಹಸಿವೆಯಿಂದ ಇಲ್ಲ ತಾನೆ? ಅಥವಾ ಯಾರೂ ಕಷ್ಟದಲ್ಲಿ ಇದ್ದಾರೆಯೇ? ಎಂದು ನೋಡುತಿದ್ದ.

ಹೀಗೆ ಒಂದು ದಿನ ಆ ರಾಜ ಊರಿನಲ್ಲಿ ತನ್ನ ವೇಷವನ್ನು ಬದಲಾಯಿಸಿ ಹೋಗುತಿದ್ದಾಗ ಒಂದು ಕಡೆ ಜನ ಜಂಗುಳಿಯನ್ನು ನೋಡುತ್ತಾನೆ. ಅದರ ಮಧ್ಯದಲ್ಲಿ ಒಬ್ಬ ಮರಣ ಹೊಂದಿದವನು ನೆಲದಲ್ಲಿ ಬಿದ್ದಿದ್ದಾನೆ. ಜನರು ಮರಣ ಹೊಂದಿದ ಮನುಷ್ಯನ ತಮಾಷೆಯನ್ನು ನೋಡುತಿದ್ದಾರೆ. ಯಾರೂ ಶವದ ಬಳಿಗೆ ಹೋಗುತಿಲ್ಲ.

ರಾಜನಿಗೆ ಆಶ್ಚರ್ಯವಾಗಿ ಜನರ ಬಳಿಗೆ ಹೋಗುತ್ತಾನೆ ಹೋಗಿ ಅವರ ಬಳಿ ಕೇಳುತ್ತಾನೆ; ”ಯಾಕೆ ನೀವು ಆ ಮನುಷ್ಯನ ಶವದ ಬಳಿ ಹೋಗುತಿಲ್ಲ. ನೀವು ಯಾರೂ ಆ ಮನುಷ್ಯನನ್ನು ಅರಿತಿಲ್ಲವೆ?”

ಆವಾಗ ಅಲ್ಲಿ ನೆರೆದಿದ್ದ ಜನರು ಹೇಳುತ್ತಾರೆ “ಆ ಮನುಷ್ಯನ ಶವವನ್ನು ಮುಟ್ಟುವುದು ನಮಗೆ ಪಾಪವಾಗಿದೆ. ಆ ಮನುಷ್ಯನು ತನ್ನ ಜೀವಿತ ಕಾಲದಲ್ಲಿ ಶರಾಬು ಕುಡಿಯುತಿದ್ದ ಮತ್ತು ವ್ಯಭಿಚಾರವನ್ನು ಮಾಡುತಿದ್ದ ಆದರಿಂದ ಅವನ ಶವವನ್ನು ನಾವು ಮುಟ್ಟುವುದಿಲ್ಲ”ಎಂದರು.

ರಾಜನಿಗೆ ತುಂಬಾ ಬೇಸರವಾಗುತ್ತದೆ ಮತ್ತು ಜನರ ಬಳಿ ಹೇಳುತ್ತಾನೆ. “ಮನುಷ್ಯ ಮಾಡಿದ ಪಾಪದ ಕರ್ಮವನ್ನು ದೇವನು ಅವನಿಗೆ ನೀಡುತ್ತಾನೆ. ಆದರೆ ಮಾನವರಾಗಿ ನಾವು ಅವನ ಶವವನ್ನು ಅವನ ಮನೆಗೆ ಮುಟ್ಟಿಸುವುದು ನಮ್ಮ ಕರ್ತವ್ಯವಾಗಿದೆ”. ಮಾರುವೇಷದಲ್ಲಿ ಇದ್ದ ರಾಜನ ಮಾತನ್ನು ಕೇಳಿ ಜನರು ರಾಜನಿಗೆ ಸಹಾಯ ಮಾಡುತ್ತಾರೆ ಮತ್ತು ಆ ಮನುಷ್ಯನ ಶವವನ್ನು ಅವನ ಮನೆಗೆ ತಲುಪಿಸುತ್ತಾರೆ.

ಆ ಮನುಷ್ಯನ ಶವವನ್ನು ಕಂಡು ಮನೆಯ ಒಳಗಿನಿಂದ ಅವನ ಹೆಂಡತಿ ಓಡಿ ಬರುತ್ತಾಳೆ ತನ್ನ ಗಂಡನ ಶವವನ್ನು ಕಂಡು ರೋದಿಸುತ್ತಾಳೆ ಮತ್ತು ಹೇಳುತ್ತಾಳೆ ನನ್ನ ಜೀವಮಾನದಲ್ಲಿ ತನ್ನ ಗಂಡನಷ್ಟು ನೇರ ಮತ್ತು ಸತ್ಯವಂತನಾದ ಮನುಷ್ಯನನ್ನು ನಾನು ಕಾಣಲಿಲ್ಲ.

ಇದನ್ನು ಕೇಳಿ ಮಾರುವೇಷದಲ್ಲಿ ಇದ್ದ ರಾಜನಿಗೆ ಚಿಂತೆ ಆಗುತ್ತದೆ.ಅವಳ ಹತ್ತಿರ ಕೇಳುತ್ತಾನೆ “ನಿನ್ನ ಗಂಡನನ್ನು ಊರಿನವರು ಮದ್ಯಪಾನವನ್ನು ಮಾಡುವವ ವ್ಯಭಿಚಾರ ಮಾಡುತಿದ್ದ ಹೇಳುತ್ತಿದ್ದಾರೆ”.

ರೋದಿಸುತ್ತಾ ಅವಳು ಹೇಳುತ್ತಾಳೆ “ತನ್ನ ಗಂಡ ದಿನದಲ್ಲಿ ಕಷ್ಟಪಟ್ಟು ದುಡಿಯುತಿದ್ದ ಮತ್ತು ಆ ದುಡಿದ ಹಣದಲ್ಲಿ ಶರಾಬು ಅಂಗಡಿಗೆ ಹೋಗಿ ಶರಾಬು ಖರೀದಿಸುತಿದ್ದ ಮತ್ತು ಅದನ್ನು ಗಟಾರಕ್ಕೆ ಹೋಗಿ ಚೆಲ್ಲುತಿದ್ದ. ಮತ್ತು ಅವನು ಹೇಳುತಿದ್ದ ನಾನು ಇವತ್ತು ಈ ಚೆಲ್ಲಿದ ಶರಾಬನ್ನು‌ ಕುಡಿದು ಯುವಕರು ಕೆಡುತಿದ್ದರು ಹೆಚ್ಚು ಕಮ್ಮಿ ನಾನು ಅವರ ಪಾಪವನ್ನು ಸ್ವಲ್ಪಮಟ್ಟಿಗೆ ಆದರೂ ಕಮ್ಮಿ ಮಾಡಿದೆ.

ಹಾಗೆ ವ್ಯಭಿಚಾರ ಮಾಡುವ ಹೆಣ್ಣಿನ ಮನೆಗೆ ಹೋಗುತ್ತಿದ್ದ ಅವಳಿಗೆ ಅವತ್ತಿನ ದಿನದ ಹಣವನ್ನು ಕೊಡುತಿದ್ದ ಮತ್ತು ಅವಳ ಹತ್ತಿರ ಇವತ್ತು ನಿನ್ನ ಮನೆಯ ಬಾಗಿಲನ್ನು ಭದ್ರಪಡಿಸು ಎನ್ನುತ್ತಿದ್ದ. ಯಾರೂ ಯುವಕರು ನಿನ್ನ ಮನೆಗೆ ಬಾರದಿರಲಿ ಹೆಚ್ಚು ಕಮ್ಮಿ ಇವತ್ತಿನ‌ ಒಂದು ದಿವಸಕ್ಕೆ ಆದರೂ ಅವರ ಪಾಪ ಕಡಿಮೆ ಆಗಲಿ ಎಂದು ಹೇಳುತಿದ್ದ”.

ನಾನು ಇದನ್ನು ನೋಡಿ ನನ್ನ ಗಂಡನಲ್ಲಿ ಹೇಳುತಿದ್ದೆ.”ಯಾಕೆ ನೀವು ಹೀಗೆ ಮಾಡುತಿದ್ದೀರಿ ನಿಮಗೆ ಭಯ ಆಗುವುದಿಲ್ಲವೆ? ನೀವು ಯಾವತ್ತಾದರೂ ಒಂದು ದಿವಸ ಮರಣ ಹೊಂದಿದರೆ ನಿಮ್ಮ ಶವವನ್ನು ಊರಿನವರು ಮುಟ್ಟಿ ನೋಡುವುದಿಲ್ಲ. ನಿಮ್ಮನ್ನು ಊರಿನವರು ಶರಾಬು ಕುಡಿಯುವವ, ವ್ಯಭಿಚಾರ ಮಾಡುವವ ಎಂದು ಕರೆಯುತ್ತಾರೆ”ಎಂದಿದ್ದೆ.

ಆವಾಗ ನನ್ನ ಗಂಡ ನಗುತ್ತಾ ಹೇಳುತಿದ್ದರು “ನೋಡು ಜಗದೊಡೆಯನು ನನ್ನ ಶವವನ್ನು ರಾಜನು ಹೊತ್ತು ಕೊಂಡು ಬರುವ ಹಾಗೆ ಮಾಡುತ್ತಾನೆ ಮತ್ತು ನನ್ನ ಜನಾಝ ನಮಾಝನ್ನು ಊರಿನ ಎಲ್ಲಾ ವಿದ್ವಾಂಸರನ್ನು ಕರೆದು ಮಾಡಿಸುತ್ತಾನೆ”ಎಂದೆನ್ನುತ್ತಿದ್ದರು.

ಇದನ್ನು ಕೇಳಿ ಮಾರುವೇಷದಲ್ಲಿ ಇದ್ದ ರಾಜನು ರೋದಿಸುತ್ತಾನೆ.ಆ ಮರಣ ಹೊಂದಿದ ಮನುಷ್ಯನ ಶವವನ್ನು ತನ್ನ ಆಸ್ಥಾನದಲ್ಲಿ ಕೊಂಡು ಹೋಗಿ ಊರಿನ ಎಲ್ಲಾ ವಿದ್ವಾಂಸರನ್ನು ಮತ್ತು ಪಂಡಿತರನ್ನು ಕರೆದು ಜನಾಝ ನಮಾಝನ್ನು ಮಾಡಿಸುತ್ತಾನೆ.

ಇಮಾಮ್ ಅಲಿ (ರ.ಅ) ಹೇಳುತ್ತಾರೆ;”ಒಬ್ಬರ ಬಗ್ಗೆ ಅವನು ಕೆಟ್ಟವನು ಎಂಬ ಊಹೆಯನ್ನು ಇಟ್ಟುಕೊಳ್ಳಬೇಡ. ಅವನನ್ನು ನೀವು ಪರಾಂಬರಿಸಿ ನೋಡಿದ ಮೇಲೂ ಅವನ ಕೆಲಸ ಕಾರ್ಯವನ್ನು ಅರಿತಿರದೆ ನೀವು ಒಬ್ಬನನ್ನು ಕೆಟ್ಟವನು ಎಂದು ಭಾವಿಸಿದರೆ ನೀವು ಎಷ್ಟು ದೊಡ್ಡ ವಿದ್ವಾಂಸನಾದರೂ ಜಗದೊಡೆಯನು ನಿಮ್ಮನ್ನು ಇಷ್ಟಪಡಲಾರನು”.