6,750 ವಲಸೆ ಕಾರ್ಮಿಕರನ್ನು ಜೀತ ಮುಕ್ತಗೊಳಿಸಿದ 19ರ ಆದಿವಾಸಿ ಬಾಲೆ

0
598

ಸನ್ಮಾರ್ಗ ವಾರ್ತೆ

ಲೇಖಕರು: ಗಿರಿಧರ್ ಕಾರ್ಕಳ

ಬಲಾತ್ಕಾರದಿಂದ ಕೂಡಿ ಹಾಕಲ್ಪಟ್ಟು, ತಮಿಳುನಾಡಿನ ಇಟ್ಟಿಗೆ ಭಟ್ಟಿಗಳಲ್ಲಿ ದುಡಿಯುತ್ತಿದ್ದ ಒಡಿಶಾ,ಜಾರ್ಖಂಡ್, ಉತ್ತರ ಪ್ರದೇಶಗಳ 6,750 ವಲಸೆ ಕಾರ್ಮಿಕರನ್ನು ಅಲ್ಲಿಂದ ಬಿಡುಗಡೆಗೊಳಿಸಿ ತಮ್ಮೂರಿಗೆ ಕಳುಹಿಸುವಲ್ಲಿ ಯಶಸ್ವಿಯಾದ ಒಡಿಶಾದ ಬಾಲಂಗಿರ್ ಜಿಲ್ಲೆಯ 19ರ ಹರೆಯದ ಆದಿವಾಸಿ ಬಾಲೆ ಮಾನಸಿ ಬಾರಿಹಾಳ ಸಾಹಸದ ಕಥೆಯಿದು.

ಮಾನಸಿ ಬಾರಿಹಾ ತನ್ನ ಮೃತ ತಾಯಿಯ ಚಿಕಿತ್ಸೆಗಾಗಿ,ತನ್ನ ತಂದೆ ಮತ್ತು ತಂಗಿಯೊಂದಿಗೆ ದುಡಿವ ಒಪ್ಪಂದದ ಮೇರೆಗೆ ತಮಿಳುನಾಡಿನ ತಿರುವಳ್ಳುವರ್ ಜಿಲ್ಲೆಯ ಪುದುಕುಪ್ಪಂ ನ GDM Brick Kiln ಮಾಲೀಕರಿಂದ ರೂ.28,000/-ದಂತೆ ಸಾಲ ಪಡೆದಿದ್ದಳು.

ಒಪ್ಪಂದದಂತೇ ಹಲವಾರು ತಿಂಗಳುಗಳ ಕಾಲ ಮೂವರೂ ದುಡಿದಿದ್ದರೂ, ಮಾಲೀಕ ಸರಿಯಾದ ಲೆಕ್ಕವಿಡದೇ, ವಾರಕ್ಕೆ ಕೇವಲ 250/- ಸಂಬಳದಂತೆ ಲೆಕ್ಕ ಹಾಕಿ,ಸಾಲ ತೀರಿಲ್ಲವೆಂದು ಸಬೂಬು ಹೇಳುತ್ತಲೇ ಬರುತ್ತಿದ್ದ. ಅಷ್ಟರಲ್ಲಿ ಕೊರೋನಾ ಹಾವಳಿ ಆರಂಭವಾಯಿತು.

ಕೋವಿಡ್ ಭಯದಿಂದ ತತ್ತರಿಸಿ ಇಟ್ಟಿಗೆ ಭಟ್ಟಿಯಲ್ಲಿ ದುಡಿಯುತ್ತಿದ್ದ 350ಕ್ಕೂ ಹೆಚ್ಚು ಕಾರ್ಮಿಕರು ತಮ್ಮೂರಿಗೆ ಹೊರಟರೂ, ಮಾಲಿಕರು ಹೋಗಲು ಬಿಡದೆ ಬಲಾತ್ಕಾರದಿಂದ ಹೊಡೆದು ಬಡಿದು ಬೆದರಿಸಿ ಕೂಡಿ ಹಾಕಿದ್ದರು. ವೃದ್ಧರು, ಹೆಂಗಸರು, ಮಕ್ಕಳ ಮೇಲೆ ನಡೆಯುತ್ತಿದ್ದ ದೈಹಿಕ ಹಲ್ಲೆ ಕಂಡು ಮರುಗಿದ ಮಾನಸಿ, ಯಾರಿಗೂ ತಿಳಿಯದಂತೆ, ಹೊಡಿ ಬಡಿವ ದೃಶ್ಯಗಳನ್ನೆಲ್ಲ ತನ್ನ ಮೊಬೈಲ್ ಫೋನಿನಲ್ಲಿ ಸೆರೆಹಿಡಿದು ವಿಡಿಯೋ ಮಾಡಿ ಆಪ್ತರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಳು.

ವಿಡಿಯೋ ನೋಡಿದ್ದೇ ತಡ, ಕಾರ್ಯಪ್ರವೃತ್ತರಾದ ಒಡಿಶಾದ ‘ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್’ ಎಂಬ ಸ್ವಯಂ ಸೇವಾ ಸಂಘಟನೆಯ ನಿರ್ದೇಶಕಿ ನೀನಾ ಥಾಮಸ್, ಕೂಡಲೇ ತಿರುವಳ್ಳುವರ್ ಜಿಲ್ಲಾಡಳಿತವನ್ನು ಸಂಪರ್ಕಿಸಿ ದೂರು ದಾಖಲಿಸಿದರು.

ತಕ್ಷಣ ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ, ಮಾನಸಿ ದುಡಿಯುತ್ತಿದ್ದ ಇಟ್ಟಿಗೆ ಭಟ್ಟಿಯ 355 ಕಾರ್ಮಿಕರೂ ಸೇರಿದಂತೆ,ಜಿಲ್ಲೆಯ 30ಕ್ಕೂ ಹೆಚ್ಚು ಇಟ್ಟಿಗೆ ಭಟ್ಟಿಗಳಲ್ಲಿ ಹೀಗೇ ಜೀತದಾಳುಗಳಂತೆ ದುಡಿಯುತ್ತಿದ್ದ 6,750ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಮಾಲಿಕರ ಸೆರೆಯಿಂದ ಬಿಡಿಸಿ, ಐಜೆಎಂ ಸೇವಾ ಸಂಸ್ಥೆ ವ್ಯವಸ್ಥೆಗೊಳಿಸಿದ 150 ಬಸ್ಸುಗಳ ಮೂಲಕ ಅವರವರ ಊರಿಗೆ ಕಳುಹಿಸಿ ಕೊಟ್ಟಿತು.

“ಅಕ್ರಮ ಮಾನವ ಸಾಗಾಣಿಕೆ ವಿರೋಧಿ ದಿನದಂದು ರಾಷ್ಟ್ರೀಯ ಮಹಿಳಾ ಕಮಿಷನ್ ವಲಸೆ ಕಾರ್ಮಿಕರನ್ನು ಅಕ್ರಮ ಬಂಧನದಿಂದ ಬಿಡಿಸಲು ನೆರವಾದ ಮಾನಸಿ ಬಾರಿಹಾಳ ಧೈರ್ಯ ಸಾಹಸವನ್ನು ಟ್ವೀಟ್ ಮೂಲಕ ಮುಕ್ತಕಂಠದಿಂದ ಶ್ಲಾಘಿಸಿದೆ.

ಮತ್ತೆ,ನಾವೂ ಕೂಡ ಮಾನಸಿಯನ್ನು ಅಭಿನಂದಿಸಲೇ ಬೇಕು. ಹ್ಯಾಟ್ಸಾಫ್ ಮಾನಸಿ ಬಾರಿಹಾ..

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.