ಎರಡು ವರ್ಷ ವಿಚಾರಣೆ ಇಲ್ಲದೆ ಜೈಲಲ್ಲಿಡಬಹುದಾದ ಕಾನೂನಿನಡಿ ಫಾರೂಕ್ ಅಬ್ದುಲ್ಲಾ ಬಂಧಿ: ಎಲ್ಲೆಡೆ ಚರ್ಚೆ

0
714

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.16: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲರನ್ನು ಸಾರ್ವಜನಿಕ ಸುರಕ್ಷಾ ಕಾನೂನಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ವಿಚಾರಣೆಯಿಲ್ಲದೆ ಎರಡು ವರ್ಷದವರೆಗೆ ಜೈಲಿನಲ್ಲಿ ಕೂಡಿಹಾಕಬಹುದಾದ ಕಾನೂನು ಇದು. ಎಂಡಿಎಂಕೆ ನಾಯಕ ವೈಕೊ ಹೇಬಿಯಸ್ ಕಾರ್ಪಸ್ ಅರ್ಜಿ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರುತ್ತಿರುವಂತೆ ರವಿವಾರ ರಾತ್ರೆ ಫಾರೂಕ್ ಅಬ್ದುಲ್ಲಾರ ವಿರುದ್ಧ ಕ್ರಮ ಜರಗಿಸಲಾಗಿದೆ. ಫಾರೂಕ್ ಅಬ್ದುಲ್ಲಾರ ಬಂಧನವನ್ನು ಕೋರ್ಟಿನಲ್ಲಿ ಸಮರ್ಥಿಸುವುದಕ್ಕೆ ಪುರಾವೆಯಾಗಿ ಕೇಂದ್ರ ಪಿಎಸ್‍ಐ ಕಾನೂನು ಹೇರಿದೆ.

ಇದೇವೇಳೆ, ವೈಕೋರ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಇಂದು ಸುಪ್ರೀಂಕೋರ್ಟು ಕೇಂದ್ರಕ್ಕೆ ನೋಟಿಸು ಜಾರಿ ಮಾಡಿದೆ. ಸೆಪ್ಟಂಬರ್ 30ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ. ಕೇಂದ್ರದ ನೋಟೀಸ್ ವಿರುದ್ಧ ಸಾಲಿಸಿಟರ್ ಜನರಲ್ ರಂಗಪ್ರವೇಶಿಸಿದರೂ ಕೋರ್ಟು ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ವೈಕೊ ಕಾನೂನಿನಡಿಯಲ್ಲಿ ಅರ್ಜಿಸಲ್ಲಿಸುವ ಹಕ್ಕು ಹೊಂದಿಲ್ಲ ಎಂದು ಕೇಂದ್ರ ವಾದಿಸಿತು. ಅಬ್ದುಲ್ಲಾರನ್ನು ಕೋರ್ಟಿನಲ್ಲಿ ಹಾಜರುಪಡಿಸಲು ಕೇಂದ್ರ ಸರಕಾರಕ್ಕೆ ಆದೇಶಿಸಬೇಕೆಂದು ಸೆಪ್ಟಂಬರ್ ಹದಿನೈದರಂದು ಚೆನ್ನೈಯಲ್ಲಿ ನಡೆಯುವ ಸೆಮಿನಾರ್‌ನಲ್ಲಿ ಭಾಗವಹಿಸಲು ಅವರಿಗೆ ಅನುಮತಿ ನೀಡಬೇಕೆಂದು ವೈಕೊ ಸುಪ್ರೀಂಕೋರ್ಟಿಗೆ ಆಗ್ರಹಿಸಿದ್ದರು. ಅಬ್ದುಲ್ಲರಿಗೆ ಚೆನ್ನೈಗೆ ಬರಲು ಅನುಮತಿ ನೀಡಬೇಕೆಂದು ವೈಕೊ ಈ ಹಿಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರೂ ಕೇಂದ್ರ ಸರಕಾರ ಉತ್ತರಿಸಿರಲಿಲ್ಲ.

1978ರಲ್ಲಿ ಶೇಖ್ ಅಬ್ದುಲ್ಲ ಮುಖ್ಯ ಮಂತ್ರಿಯಾಗಿದ್ದಾಗ ಪಿಎಸ್‍ಐ ಪ್ರಥಮ ಬಾರಿಗೆ ಅಸ್ತಿತ್ವಕ್ಕೆ ತರಲಾಗಿತ್ತು. ಎರಡು ವರ್ಷದವರೆಗೆ ವಿಚಾರಣೆಯಿಲ್ಲದೆ ವ್ಯಕ್ತಿಯನ್ನು ಜೈಲಿಗೆ ಹಾಕಬಹುದಾಗಿದೆ. ಕಾಶ್ಮೀರದಲ್ಲಿ ಮರ ಕಳ್ಳಸಾಗಾಟ ತಡೆಯಲು ಈ ಕಾನೂನು ಅಸ್ತಿತ್ವಕ್ಕೆ ಬಂದಿತ್ತು. ನಂತರ ಹಲವು ಯುವಕರ ಮೇಲೆ ಇದು ಪ್ರಯೋಗವಾಗಿದೆ. 2010ರಲ್ಲಿ ಕಾನೂನಿಗೆ ತಿದ್ದು ಪಡಿ ತಂದು ಕೆಲವು ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿತ್ತು. ಮೊದಲ ಬಾರಿ ಬಂಧಿಸಿದವರನ್ನು ಆರು ತಿಂಗಳ ಕಾಲ ಕಸ್ಟಡಿಯಲ್ಲಿ ಇಡಬಹುದಾಗಿತ್ತು. ತಿದ್ದುಪಡಿಯ ನಂತರ ಆರೋಪಿಯ ವರ್ತನೆಯಲ್ಲಿ ಪ್ರಗತಿಯಾಗದಿದ್ದರೆ ಎರಡು ವರ್ಷದವರೆಗೆ ಜೈಲಿನಲ್ಲಿಡಬಹುದು ಎಂದು ಬದಲಾವಣೆ ಮಾಡಲಾಗಿತ್ತು. ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಅಬ್ದುಲ್ಲರನ್ನು ಆಗಸ್ಟ್ ಐದರಿಂದ ಗೃಹಬಂಧನದಲ್ಲಿರಿಸಲಾಗಿದೆ.