ಗೋವು, ಹೆಣ್ಣು ಮತ್ತು ನಾವು…

0
523

ಸಂಪಾದಕೀಯ

ಅತ್ಯಾಚಾರವನ್ನು ತಡೆಗಟ್ಟುವುದು ಹೇಗೆ ಎಂಬ ಪ್ರಶ್ನೆ ಅತ್ಯಂತ ಗಂಭೀರ ಸ್ವರೂಪವನ್ನು ಪಡೆದುಕೊಂಡದ್ದು ನಿರ್ಭಯ ಪ್ರಕರಣದ ಬಳಿಕ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ಕೂಗು ಬಲ ಪಡೆದದ್ದೂ ಆ ಬಳಿಕವೇ. ಮನ್‍ಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಕೆಲವು ಕ್ರಮಗಳನ್ನು ಕೈಗೊಂಡಿತು. ಕಾನೂನಿಗೆ ಬಲ ತುಂಬುವ ಕೆಲಸವನ್ನು ಮಾಡಿತು. ನಿರ್ಭಯ ನಿಧಿಯ ಸ್ಥಾಪನೆಯೂ ಆಯಿತು. ಇದು 5 ವರ್ಷಗಳ ಹಿಂದಿನ ಬೆಳವಣಿಗೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸರಕಾರವು ವಿಧೇಯಕವೊಂದನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಈ ವಿಧೇಯಕವೂ ಅತ್ಯಾಚಾರಕ್ಕೆ ಸಂಬಂಧಿಸಿದ್ದೇ. ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ಈ ವಿಧೇಯಕ ಅವಕಾಶ ಮಾಡಿಕೊಡುತ್ತದೆ. ಈ ವಿಧೇಯಕಕ್ಕಿಂತ ಮೊದಲು ಇನ್ನೊಂದು ವಿಧೇಯಕಕ್ಕೂ ನಮ್ಮ ದೇಶದ ಸಂಸತ್ತು ಅನುಮೋದನೆ ನೀಡಿತ್ತು. ಅದೂ ಅತ್ಯಾಚಾರಕ್ಕೆ ಸಂಬಂಧಿಸಿದ ವಿಧೇಯಕವೇ. ಅತ್ಯಾಚಾರದಲ್ಲಿ ಭಾಗಿಯಾದ ಅಪ್ರಾಪ್ತ ವಯಸ್ಕನನ್ನು ಪ್ರಾಪ್ತನಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಲು ಅನುವು ಮಾಡಿಕೊಡುವ ವಿಧೇಯಕ ಅದಾಗಿತ್ತು. ವಿಷಾದ ಏನೆಂದರೆ,

ಸಂಸತ್ತಿನಲ್ಲಿ ವಿಧೇಯಕಗಳು ಒಂದರ ಮೇಲೊಂದರಂತೆ ಮಂಡನೆಯಾಗುತ್ತಲೇ ಇದೆ. ಅಲ್ಲದೇ, ಅಂಗೀಕಾರವನ್ನೂ ಪಡೆದುಕೊಳ್ಳುತ್ತಿದೆ. ಆದರೆ, ಅತ್ಯಾಚಾರದ ಪ್ರಕರಣಗಳಲ್ಲಿ ಇಳಿಕೆ ಆಗುತ್ತಲೇ ಇಲ್ಲ. ಮಾತ್ರವಲ್ಲ, ಅತ್ಯಾಚಾರ ಪ್ರಕರಣಗಳ ಭೀಭತ್ಸಕತೆಯಲ್ಲಿ ಮೊನ್ನೆಯಿಂದ, ನಿನ್ನೆಗೆ, ನಿನ್ನೆಯಿಂದ ಇವತ್ತಿಗೆ ಏರಿಕೆ ಆಗುತ್ತಲೇ ಇದೆ. ಇದು ಹೇಗೆ ಸಾಧ್ಯ? ಒಂದು ಕಡೆ, ಬಲ ಪಡೆಯುತ್ತಿರುವ ಕಾನೂನು ಮತ್ತು ಇನ್ನೊಂದು ಕಡೆ, ಅತ್ಯಾಚಾರ ಮತ್ತು ಅದರ ಭೀಕರತೆಯಲ್ಲಿ ಹೆಚ್ಚಳವಾಗುತ್ತಿರುವುದು- ಇವೆಲ್ಲ ಏನು ಮತ್ತು ಏಕೆ? 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣ ದಂಡನೆ ವಿಧಿಸುವ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾಗುತ್ತಿರುವ ಹೊತ್ತಿಲ್ಲೇ ತೆಲಂಗಾಣದಿಂದ ಭೀಕರ ಸುದ್ದಿಯೊಂದು ಹೊರಬಿತ್ತು. 10 ವರ್ಷಕ್ಕಿಂತ ಕಿರಿಯ ವಯಸ್ಸಿನ ಬಾಲಕಿಯರಿಗೆ ಹಾರ್ಮೋನ್ ಇಂಜಕ್ಷನ್ ಚುಚ್ಚಿ ಸೆಕ್ಸ್ ದಂಧೆಗೆ ಬಳಸಿಕೊಳ್ಳುವ ಜಾಲ ಅಲ್ಲಿ ಪತ್ತೆಯಾಯಿತು. 12ರಷ್ಟು ಬಾಲಕಿಯರನ್ನು ಆ ಕ್ರೌರ್ಯದಿಂದ ರಕ್ಷಿಸಲಾಯಿತು. ಇದಕ್ಕಿಂತ ಎರಡು ವಾರಗಳ ಮೊದಲು ಬಿಹಾರದ ಮುಝಫ್ಫರ್‍ಪುರ ನಗರದಲ್ಲಿ ಸರಕಾರದ ಅನುದಾನದಿಂದ ‘ಸೇವಾ ಸಂಕಲ್ಪ ಏವಂ ವಿಕಾಸ್ ಸಮಿತಿ’ಯು ನಡೆಸುತ್ತಿದ್ದ ಬಾಲಿಕಾಗೃಹದಲ್ಲಿ 24ರಷ್ಟು ಹೆಣ್ಮಕ್ಕಳು ಮೇಲೆ ನಿರಂತರ ಅತ್ಯಾಚಾರಕ್ಕೊಳಗಾದ ಘಟನೆ ಬಹಿರಂಗಕ್ಕೆ ಬಂತು. ಇದನ್ನು ನಡೆಸುತ್ತಿದ್ದವ ಬೃಜೇಶ್ ಠಾಕೂರ್ ಎಂಬ ಅರೆಕಾಲಿಕ ಪತ್ರಕರ್ತ. ಕಳೆದವಾರ ನಮ್ಮದೇ ರಾಜ್ಯದ ಮಾಲೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಯಿತು. ಹಾಗಂತ, ಇಲ್ಲಿ ಉಲ್ಲೇಖಗೊಂಡ ಕೃತ್ಯಗಳನ್ನು ಬಿಡಿಬಿಡಿಯಾಗಿ ಓದಬೇಕಿಲ್ಲ. ಈ ದೇಶದಲ್ಲಿ ನಿರಂತರ ನಡೆಯುತ್ತಿರುವ ಪ್ರಕರಣಗಳಿಂದ ಹೆಕ್ಕಿಕೊಂಡ ಘಟನೆಗಳಷ್ಟೇ ಇವು.

ಹೆಣ್ಣು ಪದೇ ಪದೇ ಈ ದೇಶದಲ್ಲಿ ಅಸುರಕ್ಷಿತೆಯಾಗಿ ಗುರುತಿಸಿಕೊಳ್ಳುವುದಕ್ಕೆ ಕಾರಣಗಳು ಏನು? ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಾಚ್‍ನ ವರದಿಯ ಪ್ರಕಾರ, ಭಾರತದ ಸುಮಾರು ಒಂದು ಲP್ಷÀದ 50 ಸಾವಿರಕ್ಕಿಂತಲೂ ಅಧಿಕ ಹೆಣ್ಣು ಮಕ್ಕಳು ದೇಶ-ವಿದೇಶಗಳಲ್ಲಿ ವೇಶ್ಯಾವಾಟಿಕೆಯ ದಂಧೆಗೆ ಸಿಲುಕಿ ಬಿಟ್ಟಿದ್ದಾರೆ. ಭಯಾನಕ ಏನೆಂದರೆ, ಇವರಲ್ಲಿ ಶೇ. 40ರಷ್ಟು ಹೆಣ್ಣು ಮಕ್ಕಳೂ ಅಪ್ರಾಪ್ತರು. ಅವರ ಬಾಲ್ಯವೇ ನಾಶವಾಗಿ ಹೋಗಿದೆ. ಈ ದೇಶದಲ್ಲಿ ಪ್ರತಿವರ್ಷ 6 ಲಕ್ಷ ಹೆಣ್ಣು ಭ್ರೂಣದ ಹತ್ಯೆಯಾಗುತ್ತಿದೆ. ವರ್ಷಕ್ಕೆ 5 ಲಕ್ಷ ಮಕ್ಕಳನ್ನು ಲೈಂಗಿಕ ವ್ಯಾಪಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ದೇಶದ ಒಟ್ಟು ಮಕ್ಕಳ ಜನಸಂಖ್ಯೆಯಲ್ಲಿ ಶೇ. 53ರಷ್ಟು ಮಕ್ಕಳು ಯಾವುದಾದರೊಂದು ರೀತಿಯಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಯುನಿಸೆಫ್‍ನ ವರದಿಯೂ ಹೇಳುತ್ತಿದೆ. ಅಲ್ಲದೇ, ಪ್ರತಿ 155 ನಿಮಿಷಕ್ಕೊಮ್ಮೆ ದೇಶದಲ್ಲಿ 16 ವರ್ಷದೊಳಗಿನ ಒಂದು ಹೆಣ್ಣು ಮಗು ಅತ್ಯಾಚಾರಕ್ಕೆ ಒಳಗಾಗುತ್ತಿದೆ. ಪ್ರತಿ 13 ಗಂಟೆಗೊಮ್ಮೆ 10 ವರ್ಷಕ್ಕಿಂತ ಕೆಳಗಿನ ಒಂದು ಹೆಣ್ಣು ಮಗು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪುಟ ತುಂಬುವಷ್ಟು ಅಂಕಿ-ಅಂಶಗಳಿವೆ. ಈ ಅಂಕಿ-ಅಂಶಗಳ ಆಚೆಗೆ ಈ ದೇಶವನ್ನು ಹೆಣ್ಣಿನ ಪಾಲಿಗೆ ಸುರಕ್ಷಿತಗೊಳಿಸುವುದು ಹೇಗೆ? ತಮಾಷೆ ಏನೆಂದರೆ, ಗೋವುಗಳ ಸುರಕ್ಷಿತತೆಯ ಬಗ್ಗೆ ಆತಂಕ ತೋಡಿಕೊಳ್ಳುವ ರಾಜಕಾರಣಿಗಳು ಈ ದೇಶದಲ್ಲಿದ್ದಾರೆ. ಗೋವುಗಳಿಗೆ ಸಂಬಂಧಿಸಿ ಪ್ರತಿ ದಿನ ಒಂದು ಹೇಳಿಕೆಯಾದರೂ ಮಾಧ್ಯಮಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳುವ ಜಾಣತನವೂ ಅವರಿಗೆ ಗೊತ್ತಿದೆ. ಗೋಸಾಗಾಟದ ಹೆಸರಲ್ಲಿ ಹಲ್ಲೆ-ಹತ್ಯೆಗಳು ನಡೆದಾಗಲೆಲ್ಲ ಈ ಮಂದಿ ತಾರಕ ದನಿಯಲ್ಲಿ ಮಾತಾಡುತ್ತಾರೆ. ಗೋಸಂತತಿಯನ್ನು ಉಳಿಸುವ ಬಗ್ಗೆ, ಅಳಿವಿನಂಚಿನಲ್ಲಿರುವ ಗೋ ಸಂತತಿಗಳ ಬಗ್ಗೆ, ಗೋಮಾಂಸ ಸೇವಕರ ಬಗ್ಗೆ, ಗೋಹತ್ಯಾ ಮುಕ್ತ ದೇಶ ಕಟ್ಟುವ ಬಗ್ಗೆ, ಗೋಗ್ರಾಮ-ಗೋ ಅರಣ್ಯ ಸ್ಥಾಪಿಸುವ ಬಗ್ಗೆ.. ಹೀಗೆ ಹೇಳಿಕೆಗಳು ಬರುತ್ತಲೇ ಇರುತ್ತವೆ. ಅದೇವೇಳೆ, ಪ್ರತಿವರ್ಷ ಸುಮಾರು 40 ಸಾವಿರದಷ್ಟು (2014ರಲ್ಲಿ 37,681) ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಈ ಬಗ್ಗೆ ಗಂಭೀರ ಹೇಳಿಕೆಗಳು ಮತ್ತು ಆವೇಶದ ಮಾತುಗಳು ಕೇಳಿ ಬರುತ್ತಲೇ ಇಲ್ಲ. ಗೋಸಂತತಿಯನ್ನು ಉಳಿಸಬೇಕೆನ್ನುವ ಅದೇ ಕಾಳಜಿಯಲ್ಲಿ ಹೆಣ್ಣು ಸಂತತಿಯನ್ನು ಉಳಿಸಿಕೊಳ್ಳಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿಲ್ಲ. ಹೆಣ್ಣಿನ ಮೇಲಿನ ಅತ್ಯಾಚಾರವು ಗೋಹತ್ಯೆಯ ಮುಂದೆ ಜುಜುಬಿ ಅನ್ನಿಸಿಕೊಂಡದ್ದು ಯಾಕಾಗಿ?

ಅತ್ಯಾಚಾರವೆಂದರೆ, ಒಂದು ಮನಸ್ಸಿನ ಸಾವು. ‘ಅತ್ಯಾಚಾರ’ವೆಂಬುದು ಬಾಹ್ಯನೋಟಕ್ಕೆ ನಾಲ್ಕು ಶಬ್ದಗಳಾದರೂ ಅದರ ಅರ್ಥ ಅತ್ಯಂತ ಆಳವಾದದ್ದು. ಹೆಣ್ಣಿನ ಮೇಲೆ ಗಂಡು ತನ್ನ ಬಲವನ್ನು ತೋರ್ಪಡಿಸುವ ಕ್ರಿಯೆಯಷ್ಟೇ ಅಲ್ಲ ಅದು. ಆಕೆಯ ಸಂವೇದನೆಯನ್ನು ಕೊಲೆಗೈದ ಕ್ರಿಯೆ ಕೂಡ. ಆದರೂ ಗೋವಿಗಾಗಿ ಮಾತಾಡುವ ಯಾವ ರಾಜಕೀಯದ ಬಾಯಿಗಳೂ ಅದೇ ಉಗ್ರತಮ ಭಾಷೆಯಲ್ಲಿ ಹೆಣ್ಣಿಗಾಗಿ ಮಾತಾಡುವುದಿಲ್ಲ. ಅತ್ಯಾಚಾರವನ್ನು ಸಹಜವೂ ಗೋಮಾಂಸವನ್ನು ಅಸಹಜವೂ ಆಗಿ ನಮ್ಮ ರಾಜಕಾರಣಿಗಳು ಪರಿಗಣಿಸಿದ್ದಾರೆಯೇ? ಅಥವಾ ರಾಜಕೀಯ ದೃಷ್ಟಿಯಲ್ಲಿ ಹೆಣ್ಣಿಗಿಂತ ಗೋವು ಹೆಚ್ಚು ಮತ ತಂದುಕೊಡುತ್ತದೆ ಎಂಬ ನಂಬಿಕೆಯೇ? ಅತ್ಯಾಚಾರದ ವಿರುದ್ಧ ಆಡುವ ಮಾತಿಗಿಂತ ಗೋವಿಗಾಗಿ ಆಡುವ ಮಾತು ಯಾಕೆ ತೂಕವುಳ್ಳದ್ದಾಗಿ ಈ ದೇಶದಲ್ಲಿ ಗುರುತಿಸಿಕೊಂಡಿದೆ? ಹೆಣ್ಣನ್ನು ಮಾತೆ, ದೇವಿ ಎಂದೆಲ್ಲಾ ಕರೆದು ಗೌರವಿಸುವ ದೇಶದಲ್ಲಿ ಹೆಣ್ಣಿನ ಮಾನ ಮತ್ತು ಪ್ರಾಣಕ್ಕಿಂತ ಗೋವಿನ ಪ್ರಾಣ ಹೆಚ್ಚು ತೂಗುವಂತಾದುದು ಯಾವುದರ ಸೂಚನೆ?

ಬರೇ ಕಾನೂನು-ಕಾಯ್ದೆಗಳಷ್ಟೇ ಹೆಣ್ಣಿಗೆ ಈ ಭೂಮಿಯನ್ನು ಸುರಕ್ಷಿತಗೊಳಿಸಲಾರದು. ಹೆಣ್ಣನ್ನು ಗೌರವಾರ್ಹವಾಗಿ ಕಾಣುವ ಮನಸ್ಥಿತಿಯೊಂದರ ನಿರ್ಮಾಣವೇ ಇದರ ಪ್ರಥಮ ಬೇಡಿಕೆ. ಇದು ಒಂದು ರಾತ್ರಿಯಿಂದ ಬೆಳಗಾಗುವುದರ ನಡುವೆ ಸಾಧ್ಯವಾಗುವಂಥದ್ದಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಪುರುಷರನ್ನು ನಿರಂತರವಾಗಿ ತರಬೇತುಗೊಳಿಸುವ ಕ್ರಿಯೆ. ಮಕ್ಕಳಿಂದಲೇ ಈ ತರಬೇತಿ ಪ್ರಾರಂಭವಾಗಬೇಕು. ಹೆಣ್ಣಿನ ಬಗ್ಗೆ ಗೌರವ ಮೂಡುವಂಥ ಮಾತು-ಕೃತಿಗಳನ್ನು ಹೆತ್ತವರು ಮಕ್ಕಳಿಗೆ ನೀಡುತ್ತಲಿರಬೇಕು. ಹೆಣ್ಣನ್ನು ನಕಾರಾತ್ಮಕವಾಗಿ ನೋಡುವ ಎಲ್ಲದರಿಂದಲೂ ದೂರ ನಿಲ್ಲಬೇಕು.

ಈ ಜಗತ್ತು ನಡೆಯುವುದೇ ಹೆಣ್ಣು ಮತ್ತು ಗಂಡು ಎಂಬ ಜೀವಿಯಿಂದ. ಇವೆರಡೂ ಜಗತ್ತನ್ನು ಮುಂದಕ್ಕೊಯ್ಯುವ ಗಾಲಿಗಳು. ಈ ಗಾಲಿಗಳಲ್ಲಿ ಒಂದರ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಅಪಾಯಕಾರಿ.