ಗುಜರಾತ್: ಜಾಮಾ ಮಸೀದಿಯ ಮಿಹ್ರಾಬ್ ನಲ್ಲಿ ಟಯರ್ ಸುಟ್ಟ ಪ್ರಕರಣ; ತನಿಖೆಗೆ ಆದೇಶ

0
1076

ಗುಜರಾತ್: ಬರೋಡಾ ಹೆರಿಟೇಜ್ ಟ್ರಸ್ಟ್ ನ 114 ಸ್ಮಾರಕಗಳಲ್ಲಿ ಒಂದಾದ ಚಂಪಾನೇರ್ ನಲ್ಲಿರುವ ಜಾಮಾ ಮಸೀದಿ ಆವರಣದಲ್ಲಿ ಟೈರ್ ಸುಟ್ಟ ಪ್ರಕರಣದ ನಂತರ ಮಂಗಳವಾರ ಪೊಲೀಸರು ಅಪರಿಚಿತ ವ್ಯಕ್ತಿಯ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಈ ಮಸೀದಿಯು ಯುನೆಸ್ಕೊ ವಿಶ್ವ ಪರಂಪರೆಯ ತಾಣವಾದ ಚಂಪನೇರ್-ಪಾವಗಡ ಪುರಾತತ್ವ ಉದ್ಯಾನದ ಒಂದು ಭಾಗವಾಗಿದೆ.

ಘಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗೋಧ್ರಾದ ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಪಂಚಮಹಲ್ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರಿಗೆ ಮನವಿಯನ್ನ ಸಲ್ಲಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ.

“… ಭಾರತವು ಒಂದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರ ಮತ್ತು ವೈವಿಧ್ಯತೆಯಲ್ಲಿ ಏಕತೆ ನಮ್ಮ ಗುರುತು. ಯಾವುದೇ ಸಮಾಜ ವಿರೋಧಿ ಅಂಶವು ಶಾಂತಿಯನ್ನು ಕದಡಲು ಮತ್ತು ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸಿದರೆ ಅದರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಮಾಮ್ ನಮಾಝ್ ಮಾಡುವ ಸ್ಥಳದಲ್ಲಿ ಕೆಲವು ಸಮಾಜ ಘಾತುಕರು ಟಯರನ್ನು ಸುಟ್ಟುಹಾಕಿದ್ದಾರೆ ಮತ್ತು ಪರಂಪರೆಯ ತಾಣವನ್ನು ಹಾನಿ ಮಾಡಲು ಪ್ರಯತ್ನಿಸಿದ್ದಾರೆ. ನೀವು ಅವರ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡು, ಅವರನ್ನು ಗುರುತಿಸಿ ಬಂಧಿಸಿಸಬೇಕಾಗಿ ನಾವು ನಿಮ್ಮಲ್ಲಿ ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ), ವಡೋದರಾ ವ್ಯಾಪ್ತಿಯ ಸಂರಕ್ಷಣಾ ಸಹಾಯಕ ರಾಜೇಶ್ ಜೋಹ್ರಿ ಅವರು ಸ್ಮಾರಕಕ್ಕೆ “ಗೋಚರ ಹಾನಿ” ಗೊಳಿಸಲಾಗಿದೆ ಎಂದು ಹೇಳಿದರು. “ನಾವು ಇಡೀ ಪ್ರದೇಶವನ್ನು ಪರಿಶೀಲಿಸಿದ್ದೇವೆ, ಆದರೆ ಅಂತಹ ಚಟುವಟಿಕೆಗಳು ಸ್ವೀಕಾರಾರ್ಹವಲ್ಲ. ನಾವು ಎಫ್ಐ ಆರ್ ದಾಖಲಿಸಿದ್ದೇವೆ ಮತ್ತು ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದರೂ ಭದ್ರತೆಯ ಉಲ್ಲಂಘನೆಯಾಗಿರುವ ಕುರಿತು ತನಿಖೆ ನಡೆಸಲು ಭದ್ರತಾ ಸಂಸ್ಥೆಗೆ ಆದೇಶಿಸಿದ್ದೇವೆ” ಎಂದು ಜೋಹ್ರಿ ತಿಳಿಸಿದ್ದಾರೆ.

ತನಿಖಾಧಿಕಾರಿ ಎನ್ ಆರ್ ವಘೇಲಾ ಅವರು ಹೇಳುತ್ತಾರೆ, ಆವರಣದಲ್ಲಿ ಯಾವುದೇ ಸಿ.ಟಿ.ಟಿ.ವಿ ಕ್ಯಾಮರಾ ಇರಲಿಲ್ಲವಾದ ಕಾರಣ ಅಪರಾಧಿ ಯಾರೆಂದು ತಿಳಿದುಬಂದಿಲ್ಲ ಮತ್ತು ಘಟನೆಯ ಕುರಿತು ಭದ್ರತಾ ಸಿಬ್ಬಂದಿ ಯಾವುದೇ ಮಾಹಿತಿಯನ್ನು ಹೊಂದಿಲ್ಲ. “ಇದುವರೆಗೂ ಯಾವುದೇ ಬಂಧನಗಳು ನಡೆದಿಲ್ಲ ” ಎಂದು ವಘೇಲಾ ಹೇಳಿದರು.

ಈ ಪ್ರಕರಣವನ್ನು ಸಾರ್ವಜನಿಕ ಆಸ್ತಿ ಹಾನಿ ತಡೆಗಟ್ಟುವಿಕೆ ಕಾಯಿದೆ, 1984 ಮತ್ತು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ತಾಣಗಳು ಮತ್ತು ಅವಶೇಷ ಕಾಯಿದೆ (ಅಥವಾ AMASR ಕಾಯಿದೆ) ಅಡಿಯಲ್ಲಿ ನೋಂದಾಯಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.