ಮುಸ್ಲಿಂ ವಿದ್ಯಾರ್ಥಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದೆಯೇ ಗುಜರಾತ್ ಸರ್ಕಾರ? 2002ರ ಹತ್ಯಾಕಾಂಡಕ್ಕಿಂತ ಮೊದಲಿನ ದಿನಗಳನ್ನು ನೆನಪಿಸಿಕೊಂಡ ಪೋಷಕರು

0
136

ಗುಜರಾತ್ ನಲ್ಲಿ   10 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುವ ಮುಸ್ಲಿಂ ವಿದ್ಯಾರ್ಥಿಗಳನ್ನು  ಆನ್ಲೈನ್ ಮೂಲಕ  ಗುರುತಿಸುವ ಅನುಮಾನಾಸ್ಪದ ಬೆಳವಣಿಗೆ ನಡೆಯುತ್ತಿದೆ ಎಂದು ಅಹ್ಮದಾಬಾದ್ ಮಿರರ್ಪತ್ರಿಕೆಯು ವರದಿ ಮಾಡಿದೆ. ಗುಜರಾತ್ ಉಚ್ಛನ್ಯಾಯಾಲಯವು ಈ  ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರಕಾರಕ್ಕೆ ಶೋ-ಕಾಸ್ ನೋಟೀಸ್ ಜಾರಿಗೊಳಿಸಿದೆ.

ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಷನ್ ಬೋರ್ಡ್ (ಜಿಎಸ್ಎಸ್ಇಎಸ್ ಬಿ) ಗೆ ಸಂಬಂಧಿಸಿದಂತೆ ಆನ್ಲೈನ್ ಪರೀಕ್ಷೆಯ ಅರ್ಜಿ ನಮೂನೆಯಲ್ಲಿ  ವಿದ್ಯಾರ್ಥಿಗಳು ಅಲ್ಪಸಂಖ್ಯಾತ ವರ್ಗದವರಾಗಿದ್ದಾರೆಯೇ ಎಂದು ಕೇಳಲಾಗಿದೆ  ಮತ್ತು ನಂತರ ಮುಸ್ಲಿಮರು ಮತ್ತು ಇತರ ಎಂಬ  ಎರಡು ಆಯ್ಕೆಗಳನ್ನು ನೀಡಲಾಗಿದೆ.

ಗುಜರಾತ್ ರಾಜ್ಯವು ನಾಲ್ಕು ಅಲ್ಪಸಂಖ್ಯಾತ ಧರ್ಮಗಳಾದ ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಜೈನರನ್ನು ಹೊಂದಿದೆ ಎಂಬುವುದನ್ನು ಇಲ್ಲಿ ಗಮನಿಸಬೇಕು.

ಸುಮಾರು 17.5 ಲಕ್ಷ ವಿದ್ಯಾರ್ಥಿಗಳು ಪ್ರತಿವರ್ಷ ಜಿಎಸ್ಎಸ್ಇಎಸ್ಬಿ ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ. ಕಳೆದ ಐದು ವರ್ಷಗಳಿಂದ  ರಾಜ್ಯ ಸರಕಾರವು ಬೋರ್ಡ್ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುವ ಮುಸ್ಲಿಮ್ ವಿದ್ಯಾರ್ಥಿಗಳ  ಅಂಕಿಅಂಶವನ್ನು  ಸಂಗ್ರಹಿಸುತ್ತಿದೆ ಎಂದು  ರಾಜ್ಯ ಶಿಕ್ಷಣ ಮಂತ್ರಿ  ತಿಳಿಸಿದ್ದಾರೆ.

ಶೋ-ಕಾಸ್  ನೋಟಿಸ್ ಸಲ್ಲಿಸಿದವರು ಯಾರು?

ಬಿಜೆಪಿ ಆಳ್ವಿಕೆಯ ಗುಜರಾತ್ ಸರಕಾರವು ಮಂಡಳಿಯ ಪರೀಕ್ಷೆಯಲ್ಲಿ  ಕಾಣಿಸಿಕೊಳ್ಳುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಧಾರ್ಮಿಕ- ವ್ಯಕ್ತಿ ಚಿತ್ರವನ್ನು ಸಂಗ್ರಹಿಸುತ್ತಿದೆ ಎಂದು ಆರೋಪಿಸಿ  ಕೆ.ಆರ್.ಕೋಸ್ಟಿ ಸಲ್ಲಿಸಿದ ಪಿಐಎಲ್ ನ ನಂತರ ಈ ನೋಟೀಸ್ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಅನಂತ್ ದೇವ್  ಮತ್ತು ನ್ಯಾಯಮೂರ್ತಿ ಬೈರೆನ್ ವೈಷ್ಣವ್ ಅವರ ವಿಭಾಗೀಯ  ಪೀಠವು ರಾಜ್ಯ ಸರಕಾರ, ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಷನ್ ಬೋರ್ಡ್ (ಜಿಎಸ್ಎಸ್ಇಬಿಬಿ) ಮತ್ತು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ದಿಂದ  ಡಿಸೆಂಬರ್ 6 ರೊಳಗೆ ಉತ್ತರವನ್ನು ಅಪೇಕ್ಷಿಸಿದೆ.

ಆನ್ಲೈನ್ ಪರೀಕ್ಷೆಯ ಅರ್ಜಿಗಳ  ಕುರಿತು  ಒತ್ತು ನೀಡಲಾದ  ವಿಷಯಗಳು  ಯಾವುವು?

ರಾಜ್ಯದ ಅನೇಕ ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವು ಕಳಪೆಯಾಗಿರುವುದನ್ನು ಉಲ್ಲೇಖಿಸುತ್ತಾ, ಬೋರ್ಡ್ ಪರೀಕ್ಷೆಗಳಿಗೆ  ಆನ್ಲೈನ್ ಅರ್ಜಿಗಳನ್ನು  ಗುಜರಾತ್ ಸರಕಾರ ಕಡ್ಡಾಯಗೊಳಿಸಿರುವುದನ್ನು ಕೋಶ್ಟಿ ಪ್ರಶ್ನಿಸಿದರು,

ಪಿಐಎಲ್ ಪ್ರಕಾರ, ಅರ್ಜಿ ನಮೂನೆಗಳು ಸರ್ವೋಚ್ಛ ನ್ಯಾಯಾಲಯದ  ಇತ್ತೀಚಿನ ತೀರ್ಪಿಗೆ  ವಿರುದ್ಧವಾಗಿ  ಆಧಾರ್ ವಿವರಗಳನ್ನು ಸಹ ಕೇಳುತ್ತಿದೆ.

ಧರ್ಮ-ಆಧಾರಿತ  ಗುರುತಿಸುವಿಕೆ  ಬಗ್ಗೆ ಪೋಷಕರು ಅಸಹ್ಯ ವ್ಯಕ್ತಪಡಿಸುತ್ತಾರೆ

“ಅರ್ಜಿ ನಮೂನೆಗಳನ್ನು  ಸಾಮಾನ್ಯವಾಗಿ ಶಾಲಾ ಆಡಳಿತದಿಂದ ತುಂಬಿಸಲಾಗುತ್ತದೆ. ನಾನು ನನ್ನ ಮಗುವಿನ ಅರ್ಜಿಯನ್ನು  ತುಂಬಲು ಶಾಲೆಗೆ ಹೋದಾಗ, ಅವರು ಅದರಲ್ಲಿ ನಾವು ಅಲ್ಪಸಂಖ್ಯಾತ  ಸಮುದಾಯಕ್ಕೆ  ಸೇರಿದ್ದೇವೆಯೇ  ಎಂದು ಪ್ರಶ್ನಿಸಿರುವುದನ್ನು ನೋಡಿದೆ. ನಾವು ಹೌದು ಎಂದು ಗುಂಡಿ ಒತ್ತಿದಾಗ, ಅದು ಎರಡು ಆಯ್ಕೆಗಳನ್ನು ನೀಡಿದೆ: ಮುಸ್ಲಿಮರು ಅಥವಾ ಇತರರು. ಆನ್ಲೈನ್ ನಮೂನೆಗಳಿಂದ ಸಂಗ್ರಹಿಸಿದ ಅಂಕಿಅಂಶವನ್ನು ಬೇರೆ ಯಾವುದಕ್ಕಾದರೂ  ದುರುಪಯೋಗಪಡಿಸಬಹುದೆಂದು ನಾನು ಅನುಮಾನ ವ್ಯಕ್ತಪಡಿಸಿದೆ. .ಇದು ನನ್ನಲ್ಲಿ ಭಯವನ್ನು ಮೂಡಿಸಿದೆ ಎಂದು ಅಹಮದಾಬಾದ್ ಮಿರರ್  ಗೆ  ಅನಾಮಧೇಯರಾಗಿ ಉಳಿಯಲು ಬಯಸುತ್ತಾ ವಿದ್ಯಾರ್ಥಿಯ  ತಂದೆಯೊಬ್ಬರು ಹೇಳಿದರು.

ಅಹ್ಮದಾಬಾದ್ ನಲ್ಲಿ ವಾಸಿಸುವ, ಭೋಜನ ಗೃಹ ನಡೆಸುತ್ತಿರುವ  ಮುಸ್ಲಿಮರೊಬ್ಬರು  ಪತ್ರಿಕೆಗೆ ತಿಳಿಸಿದ ಪ್ರಕಾರ, ಮುಸ್ಲಿಮರ  ವ್ಯವಹಾರಗಳನ್ನು ಗುರುತಿಸಲು ಇದೇ ರೀತಿಯ ವಿಧಾನವನ್ನು 2002 ರಲ್ಲಿ ಬಳಸಲಾಗುತ್ತಿತ್ತು, ಅದರ ನಂತರ ಆತನ ಅಂಗಡಿಯು ಪ್ರತ್ಯೇಕಿಸಲ್ಪಟ್ಟಿತು ಮತ್ತು ಸುಟ್ಟು ಹಾಕಲಾಯಿತು. ಸರ್ಕಾರ ಮತ್ತು ಪೊಲೀಸರು ಸಂಗ್ರಹಿಸಿದ ಜನಗಣತಿಯನ್ನು ದಂಗೆಕೋರರು ಬಳಸಿದ್ದಾರೆ. ಈಗ ನಾನು ನನ್ನ ಮಗನ ಕುರಿತು  ಹೆದರುತ್ತಿದ್ದೇನೆ, ವಿದ್ಯಾರ್ಥಿ ಮುಸ್ಲಿಂ ಅಥವಾ ಇಲ್ಲವೇ ಎಂದು ತಿಳಿಯಲು ಗುಜರಾತ್ ಸರಕಾರ ಏಕೆ ಬಯಸುತ್ತಿದೆ” ಎಂದು ಅವರು ಅಹಮದಾಬಾದ್ ಮಿರರ್ ನೊಂದಿಗೆ  ಭಯವನ್ನು ತೋಡಿಕೊಂಡರು.

2013 ರಿಂದಲೂ  ಅದೇ ಆನ್ಲೈನ್ ನಮೂನೆ  ಬಳಕೆಯಲ್ಲಿದೆ.

2013 ರಿಂದಲೂ ಇದೇ  ನಮೂನೆಗಳನ್ನು  ಬಳಸಲಾಗುತ್ತಿದೆ  ಮತ್ತು ಮುಸ್ಲಿಮರನ್ನು ಗುರುತಿಸಲು ಹೀಗೆ ಮಾಡಲಾಗುತ್ತಿದೆ ಎಂದು   ಯಾರು ಸಹ ಇದುವರೆಗೆ ಆಕ್ಷೇಪಿಸಿಲ್ಲ ಎಂದು ಜಿಎಸ್ಇಇಬಿ ಅಧ್ಯಕ್ಷ ಎ.ಜೆ.ಶಾಹ್ ಅವರು ಹೇಳುತ್ತಾರೆ.

ಮೂಲ: ಇಂಡಿಯಾ ಟುಡೇ
ಕನ್ನಡಕ್ಕೆ: ಆಯಿಶತುಲ್ ಅಫೀಫ