ಗುಜರಾತ್: ಬಕ್ರೀದ್ ಪ್ರಯುಕ್ತ ಆಡುಗಳ ಮಾರಾಟಕ್ಕೆ ಶೆಡ್ ನಿರ್ಮಾಣ : ಬಿಜೆಪಿ- ಕಾಂಗ್ರೆಸ್ ಜಟಾಪಟಿ

0
1150

ಸೂರತ್: ಕಳೆದ ಆರು ವರ್ಷಗಳಿಂದ ಸೂರತ್ ಗೆ ಬಕ್ರೀದ್ ಪ್ರಯುಕ್ತ ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ಆಡುಗಳನ್ನು ಮಾರಾಟ ಮಾಡಲು ಮಾರಾಟಗಾರರ ತಂಡಗಳು ಆಗಮಿಸುತ್ತವೆ. ಆದರೆ ಈ ಬಾರಿ ಆಡುಗಳ ಸುರಕ್ಷತೆಗಾಗಿ ಸೂರತ್ ಮುನ್ಸಿಪಲ್ ಕಾರ್ಪೋರೇಷನ್ ಶೆಡ್ ನಿರ್ಮಿಸಿ ಕೊಟ್ಟಿರುವುದು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಕಡೆ ಬಿಜೆಪಿ ಈ ಶೆಡ್ ಗಳನ್ನು ತೆಗೆದುಹಾಕಲು ಆಗ್ರಹಿಸುತ್ತಿದ್ದರೆ ಇನ್ನೊಂದು ಕಡೆ ಸ್ಥಳೀಯ ಆಡಳಿತದಲ್ಲಿರುವ ಕಾಂಗ್ರೆಸ್; ಬಿಜೆಪಿಗೆ ಸೊಪ್ಪು ಹಾಕದೇ ಸಾರಸಗಟಾಗಿ ಬಿಜೆಪಿಯ ಬೇಡಿಕೆಯನ್ನು ನಿರಾಕರಿಸಿದೆ.
ಓಂ ನಗರದಲ್ಲಿರುವ 4೦೦ ಕ್ಕೂ ಹೆಚ್ಚಿನ ಮುಸ್ಲಿಮ್ ಕುಟುಂಬಗಳಿಗೆ ಬಕ್ರೀದ್ ಪ್ರಯುಕ್ತ ಬಲಿ ಅರ್ಪಣೆಗೆ ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ಆಡುಗಳನ್ನು ಮಾರಾಟ ಮಾಡಲು ವ್ಯಾಪಾರಿಗಳು ಬರುತ್ತಿದ್ದು, ಬಿದಿರು ಹಾಗು ತಗಡುಗಳಿಂದ ಹೊದಿಸಲ್ಪಟ್ಟ ಈ ಶೆಡ್ ಗಳು ಅವರ ವ್ಯಾಪಾರ ವ್ಯವಹಾರಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟಿವೆಯಲ್ಲದೇ ಮಳೆಯಿಂದ ರಕ್ಷಣೆ ನೀಡಿದೆ. ಇದಲ್ಲದೇ ಸ್ಥಳೀಯ ಆಡಳಿತದಿಂದ ಆಡುಗಳ ಮಾರಾಟಕ್ಕೆ ಪರವಾನಗಿಯೂ ಲಭಿಸಿದೆ.
ದುಂಭಾಲ್ ಪ್ರದೇಶದ ಬಿಜೆಪಿ ಕೌನ್ಸಿಲರ್ ಆದ ವಿಜಯ್ ಚೌಮಲ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮುನ್ಸಿಪಲ್ ಕಮಿಷನರ್ ಗೆ ಶುಕ್ರವಾರ ಪತ್ರ ಬರೆದಿದ್ದು” ಮುಸ್ಲಿಮರು ಸೂರತ್ ಮುನ್ಸಿಪಲ್ ಕಾರ್ಪೋರೇಷನ್ ನಿಂದ ಕಾನೂನುಬಾಹಿರವಾಗಿ ಪರವಾನಗಿ ಪಡೆದಿದ್ದಾರೆ” ಎಂದು ಆಪಾದಿಸಿದ್ದಾರೆ.
ಆದರೆ ಇದಕ್ಕೆ ಮುಖ್ಯಮಂತ್ರಿ ರೂಪಾನೀಯವರ  ಮಧ್ಯಪ್ರವೇಶಕ್ಕಾಗಿ ಆಗ್ರಹಿಸಿ ಪತ್ರ ಬರೆದ ಕಾಂಗ್ರೆಸ್ ಕೌನ್ಸಿಲರ್ ಅಸ್ಲಮ್ ಚಿಲೇವಾಲಾರವರು “ಕಳೆದ ಆರು ವರ್ಷಗಳಿಂದ ಸೂರತ್ ನಲ್ಲಿ ಆಡುಗಳ ಮಾರಾಟಕ್ಕೆ ಶೆಡ್ ಗಳನ್ನು ನಿರ್ಮಿಸಲಾಗುತ್ತಿದೆ, ಬಿಜೆಪಿಯ ಕೆಲವು ಮುಖಂಡರು ನಗರದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಲು ಮತ್ತು ಸಾಮಾಜಿಕ ಸುರಕ್ಷತೆಗೆ ಧಕ್ಕೆ ತರುವ ಯತ್ನ ನಡೆಸುತ್ತಿದ್ದಾರೆ” ಎಂದು ಆಪಾದಿಸಿದರು.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಚೌಮಲ್ ರವರು ಬೇರೆಯೇ ಹೇಳಿಕೆಯನ್ನು ನೀಡಿದ್ದು “ಸ್ಥಳೀಯರ ದೂರಿನ ಮೇರೆಗೆ ನಾವು ಈ ಸಮಸ್ಯೆಯನ್ನು ಹೊರಹಾಕಿದ್ದೇವೆ. ಆದರೆ ಕಾಂಗ್ರೆಸ್ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ” ಎಂದಿದ್ದಾರೆ.