ಗುಜರಾತ್: ರಾಜ್ಯಸಭಾ ಚುನಾವಣೆಗೆ ಎರಡು ಪ್ರತ್ಯೇಕ ದಿನಗಳನ್ನು ನಿಗದಿಪಡಿಸಿರುವುದರಲ್ಲಿ ಷಡ್ಯಂತ್ರವಿದೆಯೇ? ಕಾಂಗ್ರೆಸ್ ಶಂಕೆಗೆ ಇಲ್ಲಿದೆ ಕಾರಣ

0
240

ಹೊಸದಿಲ್ಲಿ, ಜೂ.14: ಲೋಕಸಭಾ ಚುನಾವನೆಯಲ್ಲಿ ಗೆದ್ದಿರುವ ಬಿಜೆಪಿ ನಾಯಕರಾದ ಅಮಿತ್‍ ಶಾ, ಸ್ಮೃತಿ ಇರಾನಿಯವರು ರಾಜ್ಯಸಭೆಯಿಂದ ನಿವೃತ್ತರಾದ ದಿನಾಂಕವನ್ನು ಬದಲಿಸಿದ್ದರಲ್ಲಿ ದೊಡ್ಡ ಸಂಚು ಇದೆ ಎಂದು ಕಾಂಗ್ರೆಸ್ ಹೇಳಿದೆ. ಇಬ್ಬರೂ ಗುಜರಾತ್‍ನ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇವರಿಂದ ತೆರವಾದ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದರು.

ಲೋಕಸಭಾ ಚುನಾವಣೆ ಮುಗಿದು ಮೇ 23ಕ್ಕೆ ಮತ ಎಣಿಕೆ ನಡೆದಿದೆ. ಅಮಿತ್ ಶಾ ಗಾಂಧಿನಗರದಿಂದ ಗೆದ್ದಿದ್ದಾರೆ ಎಂದು ಅಂದೇ ಘೋಷಿಸಲಾಯಿತು. ಆದರೆ ಮತ ಎಣಿಕೆ ತಡವಾದ್ದರಿಂದ ಅಮೇಠಿಯಲ್ಲಿ ಸ್ಮೃತಿ ಇರಾನಿ ಗೆದ್ದಿರುವುದನ್ನು ಮರುದಿವಸ ಘೋಷಿಸಲಾಯಿತು. ಇದರ ಬೆನ್ನಿಗೆ ಅಮಿತ್ ಶಾರ ಸ್ಥಾನ ಖಾಲಿಯಾಗಿದೆ ಎಂದು ರಾಜ್ಯಸಭಾ ದಾಖಲೆಯಲ್ಲಿ ಮೇ 28ಕ್ಕೆ ದಾಖಲಿಸಲಾಗಿದೆ. ಇಬ್ಬರೂ ಗುಜರಾತ್‍ನಿಂದ ರಾಜ್ಯಸಭೆಗೆ ಗೆದ್ದವರು. ಎರಡು ತಾರೀಕುಗಳಲ್ಲಿ ಇಬ್ಬರ ಗೆಲುವು ಘೋಷಣೆಯಾದ್ದರಿಂದ ಚುನಾವಣಾ ಅಯೋಗ ಎರಡು ದಿವಸಗಳಲ್ಲಿ ರಾಜ್ಯಸಭಾ ಚುನಾವಣೆ ನಡೆಸಬಹುದು. ಇಲ್ಲಿಯೇ ಆಟ ಇರುವುದು. ಒಂದೇ ದಿನ ರಾಜ್ಯಸಭಾ ಚುನಾವಣೆ ನಡೆಸಿದರೆ ಮಾತ್ರ ಶಾಸಕರಿಗೆ ಆದ್ಯತೆಯ ಮತಗಳನ್ನು ಚಲಾಯಿಸಲು ಸಾಧ್ಯವಾಗುತ್ತದೆ. ಆಗ ಇಬ್ಬರಿಗೂ ಸರಿಸಮಾನ ಮತಗಳು ಸಿಗುವುದಿಲ್ಲ. ಎರಡು ದಿವಸ ಬೇರೆ ಬೇರೆಯಾಗಿ ಚುನಾವಣೆ ನಡೆಸಿದರೆ ಒಂದೇ ಪಾರ್ಟಿಯ ಇಬ್ಬರು ಅಭ್ಯರ್ಥಿಗಳಿಗೆ ಸಮಾನ ಮತಗಳು ಸಿಗುತ್ತವೆ ಎಂದು ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

ಗುಜರಾತ್‍ನಲ್ಲಿ ಬಿಜೆಪಿಗೆ 99 ಶಾಸಕರು ಮತ್ತು ಕಾಂಗ್ರೆಸ್ 77ರಷ್ಟು ಶಾಸಕರಿದ್ದಾರೆ. ಒಂದೇ ದಿನ ಮತದಾನ ನಡೆದರೆ ಬಿಜೆಪಿಗೆ ಇಬ್ಬರನ್ನು ರಾಜ್ಯಸಭೆಗೆ ಗೆಲ್ಲಿಸಲು ಬಿಜೆಪಿಗೆ ಸಾಧ್ಯವಿಲ್ಲ. ಮತದ ಮೌಲ್ಯದ ಪ್ರಕಾರ ಕಾಂಗ್ರೆಸ್‍ಗೆ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ. ಇದನ್ನು ತಡೆಯಲು ಎರಡು ದಿವಸಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಚುನಾವಣಾ ಆಯೋಗ ನಿಷ್ಪಕ್ಷಪಾತಿಯಲ್ಲ ಎಂದು ಅವರು ಹೇಳಿದರು.