ಹಣ ಖರ್ಚು ಮಾಡುವ ಮುನ್ನ…..

0
1332

✒ಖದೀಜ ನುಸ್ರತ್

ತಾಯ್ನಾಡಿನಲ್ಲಿ ದುಡಿಯುತ್ತಿರುವಾಗ ಉಳಿತಾಯವಿರುವುದಿಲ್ಲವೆಂದು ವೇಗದಲ್ಲಿ ಹಣ ಸಂಪಾದಿಸಬೇಕೆಂಬ ಉದ್ದೇಶದಿಂದ ಜನರು ಜೀವನಾಧಾರ ಹುಡುಕಿಕೊಂಡು ಗಲ್ಫ್ ಗೆ ಬರುತ್ತಾರೆ. ಆದರೆ  ಈಗ ವಿದೇಶಗಳಲ್ಲಿ ದುಡಿಯುವವರಲ್ಲಿ ಹೆಚ್ಚಿನವರು ಅನುಭವಿಸುವ ಸಮಸ್ಯೆಯೂ ಅವರಿಗೆ ಉಳಿತಾಯವಿರುವುದಿಲ್ಲ ಎಂಬುದಾಗಿದೆ. ಕಾರಣ ಜನರು ಗಲ್ಫ್ ನಲ್ಲಿ ಉದ್ಯೋಗ ಸಿಕ್ಕಿದ ನಂತರ ಅವರ ಮತ್ತು ಕುಟುಂಬಿಕರ ಜೀವನ ಶೈಲಿಯು ಬದಲಾಯಿಸಲಾಗುತ್ತದೆ. ಅಥವಾ ಕುಟುಂಬವು ವಿದೇಶದಲ್ಲಿರುವಾಗ ಕಂಪೆನಿಯಿಂದ ಯಾವುದೇ ಸವಲತ್ತು ಸಿಗದಿರುವಾಗ ಸಿಗುವ  ಸಂಬಳದ ದೊಡ್ಡ ಭಾಗವನ್ನು ವೀಸ, ಮನೆ, ಶಾಲೆ, ಆಸ್ಪತ್ರೆ ಚಿಕಿತ್ಸೆ ಯಂತಹ ಮೂಲಭೂತ ಬೇಡಿಕೆಗಳಿಗೆ ಖರ್ಚು ಮಾಡಲು ನಿರ್ಬಂಧಿತರಾಗಿರುತ್ತಾರೆ.

ಮೊತ್ತ ಮೊದಲು ಹಣ ಸಂಪಾದನೆ ಮಾಡುವಾಗ  ಧರ್ಮಸಮ್ಮತಿಸುವ  ರೀತಿಯಲ್ಲಿ ಹೇಗೆ ಹಣ ಸಂಪಾದನೆ ಮಾಡುತ್ತೇವೆ ಹಾಗೂ ಅದನ್ನು ಯಾವ ರೀತಿ ಖರ್ಚು ಮಾಡುತ್ತೇವೆ ಎಂದು ಅಲ್ಲಾಹನಿಗೆ ಉತ್ತರ ನೀಡಲು ಜವಾಬ್ದಾರರಾಗಿದ್ದೇವೆ ಎಂಬ ಪ್ರಜ್ಞೆ ನಮ್ಮಲ್ಲಿರಬೇಕು. ಅದೇ ರೀತಿ ಭೂಮಿಗೆ ಬಂದ  ನಮ್ಮ ಉದ್ದೇಶ ಹಣ ಸಂಪಾದನೆ ಮಾಡುವುದು ಅಲ್ಲ. ಆದ್ದರಿಂದ ಸಂಪಾದನೆ ಮಾಡಲಿಕ್ಕಾಗಿ ಜೀವಿಸುವವರಾಗಬಾರದು. ಬದಲಾಗಿ ಜೀವಿಸಲಿಕ್ಕಾಗಿ ಹಣ ಸಂಪಾದನೆ ಮಾಡುವವರಾಗಬೇಕು. ವಾಸಿಸಲು ಮನೆ, ಆಹಾರ, ವಸ್ತ್ರ ಇತ್ಯಾದಿ ಮೂಲಭೂತ ಬೇಡಿಕೆಗಳನ್ನು ಪೂರೈಸುವುದು ಸಂಪಾದನೆಯ ಮುಖ್ಯ ಉದ್ದೇಶವಾಗಿರಬೇಕು.

ನಮಗೆ ಅಲ್ಲಾಹನು ನೀಡಿದ ಸಂಪತ್ತಿನ ಬಗ್ಗೆ ಯಾವಾಗಲೂ ಮನಸ್ಸಿನಲ್ಲಿ ಕೃತಜ್ಞತಾ ಭಾವ ಇರಬೇಕು. ಬದಲಾಗಿ ಸಂಪತ್ತಿನ ಬಗ್ಗೆ ಅತಿಯಾಸೆ ಇರಬಾರದು.  ಒಬ್ಬನ ಮನಸ್ಸಿನಲ್ಲಿ ಸತ್ಯವಿಶ್ವಾಸ ಬಲವಾದಂತೆ ಇಹಲೋಕದ ಮೋಹ ಕಡಿಮೆಯಾಗುತ್ತಾ ಹೋಗುವುದು.  ವೇಗದಲ್ಲಿ ಹಣ ಮಾಡಬೇಕೆಂಬ ದುರಾಸೆಯಿಂದ ಮಾಡುವ ಧರ್ಮ ಸಮ್ಮತವಲ್ಲದ  ರೀತಿಯ ಸಂಪಾದನೆಯ ಅಂತಿಮ ಪರಿಣಾಮವು ಇಹಲೋಕ ಮತ್ತು ಪರಲೋಕದಲ್ಲಿಯೂ ಶೂನ್ಯವಾಗಿರುತ್ತದೆ.

ನಮಗೆ ಸಿಗುವ ಹಣದಲ್ಲಿ  ಉಳಿತಾಯ ಇದೆಯೇ? ಸಿಕ್ಕಿದ್ದನ್ನೆಲ್ಲಾ ನಾವು ಖರ್ಚು ಮಾಡುತ್ತಿದ್ದೇವೆಯೇ? ಅಥವಾ ಸಂಬಳಕ್ಕಿಂತಲೂ ಹೆಚ್ಚೇ ಖರ್ಚು ಮಾಡುತ್ತಿದ್ದೇವೆಯೇ? ನಿರುದ್ಯೋಗಿ ಅಥವಾ ನಿವೃತ್ತ ಆದರೆ ನಮ್ಮ  ಮುಂದಿನ ಅವಸ್ಥೆಯೇನು? ಎಂಬುದನ್ನು ಒಮ್ಮೆಯಾದರೂ ಆಲೋಚಿದ್ದೇವೆಯೇ? ಕೆಲವೊಮ್ಮೆ ಈ ಎಲ್ಲಾ ವಿಷಯಗಳನ್ನು ಆಲೋಚಿಸದೇಯೇ ಬಂದಲ್ಲಿ ನೋಡುವ ಎಂದು  ಬರುವಂತಹ ಎಲ್ಲಾ ತಾತ್ಕಾಲಿಕ  ಖರ್ಚುಗಳನ್ನು ನಿಭಾಯಿಸುತ್ತಾ ಹೋಗುವವರೇ ಹೆಚ್ಚು.

ನಾವು ಇಲ್ಲಿ ಕೆಲವು ಪ್ರಮುಖ ಅರ್ಥಶಾಸ್ತ್ರಜ್ಞರ  ಮಾತುಗಳನ್ನು ನೆನಪಿಸುವುದು ಉತ್ತಮವಾಗಿದೆ.

“ಕೈ ತುಂಬಾ ಹಣವು ನಿಮ್ಮನ್ನು ಶ್ರೀಮಂತ ವ್ಯಕ್ತಿಯನ್ನಾಗಿ ಮಾಡುವುದಿಲ್ಲ. ಬುದ್ದಿವಂತಿಕೆಯಿಂದ ಖರ್ಚುಮಾಡುವುದೇ ಶ್ರೀಮಂತಿಕೆಯಾಗಿದೆ.” – ಚಾರ್ಲ್ಸ್ ಎ ಜಾಫ್ಫ್

“ಹಣವನ್ನು ಸಂಪಾದಿಸುವುದಕ್ಕಿಂತಲೇ ಮುಂಚೆ ಖರ್ಚು ಮಾಡಬೇಡಿರಿ.” – ಥೋಮಸ್ ಜೆಫರ್ ಸನ್

“ಖರ್ಚು ಮಾಡಿದ ನಂತರ  ಬಾಕಿ ಇರುವುದನ್ನು ಉಳಿತಾಯ ಮಾಡಬೇಡಿರಿ. ಬದಲಾಗಿ ಉಳಿತಾಯ ಮಾಡಿ ಬಾಕಿ ಇರುವುದನ್ನು ಖರ್ಚು ಮಾಡಿರಿ.” -ವಾರನ್ ಬಫೆಟ್

“ಅದೆಷ್ಟೋ ಜನರು ತಮಗೆ ಇಷ್ಟವಿಲ್ಲದ ಜನರ ಮೇಲೆ ತೋರಿಕೆಗಾಗಿ ಪ್ರಭಾವ ಬೀರಲು ತಮ್ಮದಲ್ಲದ  ಹಣದಿಂದ ತಮಗೆ ಅಗತ್ಯವಿಲ್ಲದ ಸಾಮಾನನ್ನು ಖರೀದಿಸಿ  ಖರ್ಚು ಮಾಡುತ್ತಾರೆ.” -ವಿಲ್ ರೋಜರ್ಸ್

ಈಗ ಕೊಲ್ಲಿ ರಾಷ್ಟ್ರಗಳಲ್ಲಿ ದಿನದಿಂದ ದಿನಕ್ಕೆ ಬರುತ್ತಿರುವ ಹೊಸಹೊಸ ಕಾನೂನು, ಬದಲಾಗುತ್ತಿರುವ ವೀಸಾ ನಿಯಮ, ದುಬಾರಿಯಾಗುತ್ತಿರುವ ದೈನಂದಿನ ಖರ್ಚು ವೆಚ್ಚಗಳು ಯಾವುದೇ ಪ್ರವಾಸಿಯ ಮಟ್ಟಿಗೆ ಹಿತಕರವಲ್ಲ.  ಕಂಪೆನಿಯ ಆರ್ಥಿಕ ನಷ್ಟ, ಹೊಸ ಉದ್ಯೋಗಾವಕಾಶದ ಕೊರತೆ, ಅನಾರೋಗ್ಯ ಅಥವಾ ಇನ್ನಾವುದೇ ಕಾರಣಗಳಿಂದ  ಅನಿವಾಸಿ ಜೀವನ ಕೊನೆಗೊಳ್ಳುವ ಸಾಧ್ಯತೆ ಇದೆ. ಯಾವುದೇ ಸಮಯದಲ್ಲಿಯೂ ತಾಯ್ನಾಡಿಗೆ ಮರಳಲು ಮಾನಸಿಕವಾಗಿಯೂ, ಆರ್ಥಿಕವಾಗಿಯೂ ತಯಾರಾಗಬೇಕಾಗಿದೆ. ಇಂದು ಸಿಗುವ ಸಂಬಳ, ವರಮಾನ ಬರುವ ತಿಂಗಳೂ ಸಿಗುವ ಯಾವುದೇ ಭರವಸೆಯಿಲ್ಲ. ಮುಂದಿನ ತಿಂಗಳುಗಳಲ್ಲಿ ಬರುವ ಸಂಬಳ ಅಥವಾ ವ್ಯಾಪಾರದ ಲಾಭವನ್ನು ಲೆಕ್ಕ ಹಾಕಿ ದೀರ್ಘಕಾಲದ ಯಾವುದೇ ವಹಿವಾಟು ಮಾಡದಿರಿ.

ನಮ್ಮ ಮಾಸಿಕ ಅಥವಾ ವಾರ್ಷಿಕ ಆದಾಯದಲ್ಲಿ ಅಗತ್ಯ, ಅನಗತ್ಯ ಎಂದು ಪಟ್ಟಿ ಮಾಡಿ ಅಗತ್ಯದ ಖರ್ಚುಗಳನ್ನು ಮಾತ್ರ ಮಾಡುವುದು. ತಮ್ಮ ಆದಾಯದ ಒಂದು ದೊಡ್ಡ ಮೊತ್ತ, ಸಾಧ್ಯವಾದರೆ 50% ಇಲ್ಲವಾದರೆ ಕನಿಷ್ಠ ಪಕ್ಷ 30-40% ಆದರೂ ಉಳಿತಾಯ ಮಾಡುವುದು. ತಮ್ಮ ಉಳಿತಾಯದಿಂದ ಝಕಾತ್ ನೀಡುವುದರಿಂದ  ಸಂಪತ್ತಿನಲ್ಲಿ ಸಂಸ್ಕರಣವಾಗುವುದರೊಂದಿಗೆ ಸಮೃದ್ಧಿಯುಂಟಾಗುತ್ತದೆ.  ಅಥವಾ ಪ್ರತಿ ತಿಂಗಳು 2.5%, 5% ಅಥವಾ 10%  ಹಣವನ್ನು ಬಡಬಗ್ಗರಿಗೆ  ಸಮಾಜ ಸೇವೆಗಾಗಿ ಮೀಸಲಿಡುವುದು. ಇದು ನಾವು ಮಾಡುವಂತಹ ಯಾವುದೇ ನಷ್ಟವಾಗದಂತಹ  ಶಾಶ್ವತ ಹೂಡಿಕೆಯಾಗಿರುತ್ತದೆ. ನಮ್ಮ ಹಣದಿಂದ ಇತರರು ಸಂತೋಷವಾದಾಗ ಮಾತ್ರ  ಅವರು ನಮಗಾಗಿ ಹೃದಯಾಂತರಾಳದಿಂದ ಪ್ರಾರ್ಥಿಸುತ್ತಾರೆ ಮತ್ತು ಇದರಿಂದ ನಮ್ಮ ಸಂಪಾದನೆಯಲ್ಲಿ ಅಲ್ಲಾಹನ ಅನುಗ್ರಹವಿರುತ್ತದೆ.

ತಮ್ಮ ಉಳಿತಾಯದಲ್ಲಿ ಮೊದಲು ವಿವಾಹವಾಗುವುದು ನಂತರ ಮನೆ ನಿರ್ಮಿಸುವುದು ನಂತರ ತಮ್ಮ ನಿವೃತ್ತ ಜೀವನಕ್ಕಾಗಿ ಯೋಜನೆ ಮಾಡಬೇಕು. ಸ್ವಂತ ವಿವಾಹವಾದರೂ ಅಥವಾ ಮಕ್ಕಳ ಅಥವಾ ಸಹೋದರಿಯರ ವಿವಾಹವಾದರೂ ಒಂದು ವರ್ಷಕ್ಕಿಂತ ಹೆಚ್ಚಿನ ಉಳಿತಾಯವನ್ನು ಖರ್ಚು ಮಾಡಬೇಡಿರಿ.  ಮನೆಯವರು ಅದಕ್ಕಿಂತಲೂ ಹೆಚ್ಚು ಖರ್ಚು ಮಾಡಲು ಒತ್ತಾಯಪಡಿಸಿದರೂ  ಮಧ್ಯಮ ನಿಲುವನ್ನು ತಾಳಿರಿ. ವಿವಾಹಕ್ಕೆ ನಾವು ಖರ್ಚು ಮಾಡಿದ ಹಣ ಉದ್ಯೋಗ ನಷ್ಟವಾದಾಗ ಪ್ರಯೋಜನಕ್ಕೆ ಬರುವುದಿಲ್ಲ ಬದಲಾಗಿ ನಾವು ಮಾಡಿದಂತಹ ಸಾಲಗಳಿಗೆ ನಾವೇ ಜವಾಬ್ದಾರರು ಎಂಬ ಸತ್ಯವನ್ನು ಅರಿಯಬೇಕು. ಉದ್ಯೋಗವಿದ್ದಾಗ ಕಂಪೆನಿಯಿಂದ ಸಿಗುವ ಸೌಲಭ್ಯ, ಸವಲತ್ತು, ಸಂಬಳ ಹಾಗೂ ಖರ್ಚಿನ ಬಗ್ಗೆ ಶಿಫಾರಸ್ಸು ಮಾಡುವ ಕುಟುಂಬಿಕರು ಉದ್ಯೋಗ ನಷ್ಟವಾದಾಗ ಸರಿಯುವುದನ್ನು ಕಾಣುತ್ತೇವೆ.

ಮಧ್ಯಮ ವರ್ಗದವರು ವಿವಾಹದ ಖರ್ಚಿಗೆ ಗಲ್ಫ್ ನಲ್ಲಿರುವವರು ಸಹಾಯ ಮಾಡಬೇಕೆಂದು ಆಶ್ರಯಿಸುತ್ತಾರೆ. ಕುಟುಂಬದಲ್ಲಿ ಕಡು ಬಡವರ ವಿವಾಹಕ್ಕೆ ಮಾತ್ರ ಆರ್ಥಿಕ ಸಹಾಯ ನೀಡಿರಿ.  ಅನಗತ್ಯವಾಗಿ  ಮತ್ತು ಅನಾವಶ್ಯಕವಾಗಿ ಖರ್ಚು ಮಾಡುವವರಿಗೆ ಸಹಾಯ ಮಾಡಬೇಡಿರಿ. ಇಂತಹ ಸಮಯದಲ್ಲಿ ಹಣ ನೀಡಲು ನಿರ್ಬಂಧಿತರಾದರೆ ಅವಧಿ ನಿರ್ಣಯದೊಂದಿಗೆ ಸಾಲ ನೀಡಿರಿ. ಹಣ ಹಿಂದಿರುಗಿಸಬೇಕೆಂಬ ಜವಾಬ್ದಾರಿಕೆಯ ಪ್ರಜ್ಞೆಯು ಅವರ ಖರ್ಚನ್ನು ನಿಯಂತ್ರಿಸಬಹುದು.  ವಿವಾಹಕ್ಕೆ ಸಹಾಯ ಮಾಡುವುದು ಹಾಗೂ ಚಿನ್ನವನ್ನು ನೀಡುವುದನ್ನು ಇಂದು ದೊಡ್ಡ ಪುಣ್ಯಕಾರ್ಯವೆಂದು ಜನರು ಭಾವಿಸುತ್ತಾರೆ. ಆದರೆ ಇಸ್ಲಾಮ್ ಸರಳ ವಿವಾಹಕ್ಕೆ  ಹೆಚ್ಚಿನ ಆದ್ಯತೆ ನೀಡಿದೆ.  ಕುರ್ ಆನ್  ಮತ್ತು  ಹದೀಸ್ ಗಳಲ್ಲಿ ಇದಕ್ಕೆ ಯಾವುದೇ ಪುರಾವೆಗಳು ಕಾಣಸಿಗುವುದಿಲ್ಲ.

ಗಲ್ಫ್ ನಲ್ಲಿ ದುಡಿಯುವವರ ಕೆಲವರ ಉಳಿತಾಯವು ಅಗತ್ಯವಿರುವವರಿಗೆ ಆರ್ಥಿಕ ಸಹಾಯ, ಸಾಲ ನೀಡಿ ತಮಗೆ ಅಗತ್ಯವಿರುವಾಗ ಮರಳಿ ಸಿಗದಂತಾಗುತ್ತದೆ. ಆದ್ದರಿಂದ ಹಣ ಕಾಸಿನ ವ್ಯವಹಾರ ಮಾಡುವಾಗ ನೀವು ನೀಡುವ ಹಣ ಸಾಲವೋ ಅಥವಾ ವ್ಯಾಪಾರದಲ್ಲಿ ಪಾಲುದಾರಿಕೆಯೋ ಎಂದು ಮೊದಲೇ ಲಿಖಿತವಾದ ಒಪ್ಪಂದ ಮಾಡಿರಿ . ಇದು ಪ್ರವಾದಿ ಚರ್ಯೆ ಹಾಗು ಕುರ್ ಆನಿನ ಆದೇಶವಾಗಿದೆ.

“ವ್ಯವಹಾರವು ಚಿಕ್ಕದಿರಲಿ ಅಥವಾ ದೊಡ್ಡದಿರಲಿ – ಅವಧಿ ನಿರ್ಣಯದೊಂದಿಗೆ ಅದರ ಕರಾರು ಪತ್ರವನ್ನು ಬರೆಯಿಸಿಕೊಳ್ಳುವುದರ ಬಗೆಗೆ ಉದಾಸೀನರಾಗದಿರಿ. (ಅಲ್ ಬಕರ: 282)

ನಿಮ್ಮ ಹೆಚ್ಚಿನ ಉಳಿತಾಯವನ್ನು ಮನೆ ನಿರ್ಮಾಣಕ್ಕೆಂದು ಬಳಸಬೇಡಿರಿ. ಮನೆ ನಿರ್ಮಾಣದಲ್ಲಿ ಕೆಲವರು  ಮಾಡುವಂತಹ ತಪ್ಪು. ಕೈಯಲ್ಲಿ ಸ್ವಲ್ಪ ಹಣವಿರುವಾಗ ಒಂದೈದು ವರ್ಷದ ಬ್ಯಾಂಕ್ ಲೋನ್ ಪಡೆಯುವುದು, ಇದ್ದ ಚಿನ್ನವನ್ನು ಅಡವು ಇಡುವುದು, ಸಂಬಂಧಿಕರಲ್ಲಿ ಸ್ನೇಹಿತರಲ್ಲಿ ಸಾಲ ಪಡೆಯುವುದು. ಇದರ ಮಧ್ಯೆ ಸಾಲ ಮರುಪಾವತಿ ಮಾಡದಿದ್ದರೆ ಸಂಬಂಧ, ಗೆಳೆತನ ಎಲ್ಲವೂ ಕಳೆದು ಹೋಗುತ್ತದೆ. ಸಾಲ ಸಂದಾಯ, ಬಡ್ಡಿ ಎಂದು ಮುಂದಿನ ಕೆಲವು ವರ್ಷಗಳು ನಷ್ಟವಾಗುತ್ತದೆ. ಹೀಗೆ ತಮ್ಮ  ಹತ್ತು ಹದಿನೈದು ವರ್ಷದ ಸಂಪಾದನೆಯನ್ನು ತಾಯ್ನಾಡಿನಲ್ಲಿ ಮನೆ ನಿರ್ಮಾಣ ಹಾಗೂ ಅದರ ಆಂತರಿಕ ಸೆಟ್ಟಿಂಗ್ ಮಾಡಲೆಂದು ಖರ್ಚು ಮಾಡುತ್ತಾರೆ. ಆದರೆ ನಿರುದ್ಯೋಗಿಯಾಗಿ ಮರಳುವಾಗ ಅಥವಾ  ನಿವೃತ್ತರಾದಾಗ ಅಂತಹ ಮನೆಗಳ ಸಂರಕ್ಷಣೆ ಕೂಡಾ ಅವರಿಗೆ ಕಷ್ಟವಾಗುತ್ತದೆ.

ಮನೆ ನಿರ್ಮಾಣದ ನಂತರ ತಮ್ಮ ಉಳಿತಾಯದ ಒಂದು ಭಾಗವನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಖರ್ಚುಮಾಡಲು ಹಣ ನಗದಾಗಿಟ್ಟುಕೊಳ್ಳಿರಿ. ಇನ್ನೊಂದು ಭಾಗವನ್ನು ಬೇರೆ ಬೇರೆ ಕಡೆ ಕಡೆಗಳಲ್ಲಿ ಸಣ್ಣ ಸಣ್ಣ ಹೂಡಿಕೆ ಮಾಡಿರಿ. ಒಂದರಲ್ಲಿ ನಷ್ಟ ಬಂದರೂ ಇನ್ನೊಂದರಲ್ಲಿ ಲಾಭ ಬರುತ್ತಿರಬಹುದು. ಎಲ್ಲ ಹಣವನ್ನು ಒಂದೇ ಕಡೆ ಹೂಡಿಕೆ ಮಾಡಬೇಡಿರಿ. ನಿಮಗೆ ನೇರವಾಗಿ ನಿಯಂತ್ರಿಸಲು, ವ್ಯವಹರಿಸಲು ಸಾಧ್ಯವಾಗದ ಕಡೆಗಳಲ್ಲಿ ಹೂಡಿಕೆ ಮಾಡದಿರಿ.  ನಿಮ್ಮ ಅನುಪಸ್ಥಿತಿಯಲ್ಲಿಯೂ ಆ ವ್ಯವಹಾರ ನಡೆಯುತ್ತಲೇ ಇರಬೇಕು.

ಒಬ್ಬನು 35-38 ವರ್ಷ ಪ್ರಾಯವಾಗುವಾಗ ತನ್ನ ನಿವೃತ್ತ ಜೀವನ ಹಾಗೂ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಳಿತಾಯ ಮಾಡಲು ಆರಂಭಿಸಬೇಕು.

ನಿಮ್ಮ ಸಂಪಾದನೆಯ ಒಂದು ಪೈಸೆಯೂ ಬಡ್ಡಿ ಅಥವಾ ಇನ್ನಾವುದೇ ರೂಪದಲ್ಲಿ ಬ್ಯಾಂಕ್ ನ ಪಾಲಾಗದಂತೆ ಜಾಗ್ರತೆ ವಹಿಸಿರಿ. ಮನೆ ಹಾಗೂ ಕಾರ್ ಗಳನ್ನು ಬ್ಯಾಂಕ್ ಲೋನ್ ಮುಕ್ತಗೊಳಿಸಿರಿ. ಪರೋಕ್ಷವಾಗಿ ಯಾವುದೇ ಸಾಲವಿಲ್ಲದೆ ಅಲ್ಲಾಹನನ್ನು ಭೇಟಿಯಾಗಲು ತಯಾರಾಗಬೇಕು.

ನಿಮ್ಮಲ್ಲಿ ಕೈ ತುಂಬಾ ಉಳಿತಾಯವಿರುವಾಗ ಮಾತ್ರ ಉಪಯೋಗಕ್ಕೆ  ಬರುವ ಸಣ್ಣ ಸಣ್ಣ ವಸ್ತುಗಳನ್ನು ಉಡುಗೊರೆ ಕೊಡುವ ಅಭ್ಯಾಸ ಬೆಳೆಸಿರಿ. ಚಿನ್ನ, ವಜ್ರ ಅಥವಾ ಇನ್ನಾವುದೇ ಬೆಲೆಬಾಳುವ ವಸ್ತುಗಳನ್ನು  ಉಡುಗೊರೆ ನೀಡಿ ಹೆಸರು ಗಳಿಸುವಂತಹ ಸಾಹಸವನ್ನು ಮಾಡಬೇಡಿರಿ. ಯಾವುದೇ ಉಳಿತಾಯ ವಿಲ್ಲದಾಗ ತೋರಿಕೆಗಾಗಿ ಸಾಲ ಮಾಡಿ ಉಡಗೊರೆ ನೀಡದಿರಿ.

ಸ್ತ್ರೀಯರಲ್ಲಿರುವ ಆಭರಣ ಮೋಹವು ಗಲ್ಫ್ ನವರ ಸಂಪಾದನೆಯ ಒಂದು ದೊಡ್ಡ ಪಾಲನ್ನು ವ್ಯರ್ಥಗೊಳಿಸುತ್ತದೆ. ಮಾರು ಕಟ್ಟೆಯಲ್ಲಿ ಬರುವ ಎಲ್ಲ ಹೊಸ ಆಭರಣವನ್ನು ಖರೀದಿಸುವ, ಅದಲು ಬದಲು ಮಾಡುವ, ಚಿನ್ನವನ್ನು ಉಡುಗೊರೆಯಾಗಿ ನೀಡುವುದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಬೇಕು. ಮಾರು ಕಟ್ಟೆಯಲ್ಲಿ ಬರುವ ಎಲ್ಲಾ ಹೊಸ ಮಾಡೆಲ್ ಬುರ್ಕಾ, ವಸ್ತ್ರ ಅಥವಾ ಮೊಬೈಲ್ ಗಳಂತಹ ಇನ್ನಾವುದೇ ವಸ್ತುಗಳನ್ನು ಅನಾವಶ್ಯಕವಾಗಿ ಖರೀದಿಸಬೇಕೆಂದಿಲ್ಲ. ತಮಗೆ ಅತಿ ಅಗತ್ಯವಿರುವಾಗ ಮಾತ್ರ ಸಾಮಾನುಗಳನ್ನು ಖರೀದಿಸುವ ಅಭ್ಯಾಸ ಬೆಳೆಸಿರಿ.

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆ ಮಾತಿ ನಂತೆ ಖರ್ಚು ಮಾಡಿದ ಹಣಕ್ಕೆ ಖೇದಿಸಿ ಪ್ರಯೋಜನವಿಲ್ಲ ಎಂಬಂತಾಗದಿರಲಿ.

ಎಲ್ಲರು ಜೀವಿಸಿದಂತೆ ನಮಗೆ ಜೀವಿಸಬೇಕು, ಎಲ್ಲರ ಮನೆಯಂತೆ ನಮ್ಮ ಮನೆ ಇರಬೇಕು, ಎಲ್ಲರು ಖರ್ಚು ಮಾಡಿದಂತೆ ನಮಗೂ ಖರ್ಚು ಮಾಡಬೇಕೆಂಬ ಪೈಪೋಟಿ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬಿಟ್ಟು ಬಿಡಬೇಕು. ಖರ್ಚು ಮಾಡುವುದರಲ್ಲಿ ತೋರಿಕೆ, ಮಾಡಿದುದ್ದನ್ನು ಹೇಳುತ್ತಾ ಶಿಫಾರಸ್ಸು ಮಾಡುವುದು, ಖರ್ಚಿನ ಬಗ್ಗೆ ಹೆಮ್ಮೆ ಪಡುವುದು, ಇತರರೊಂದಿಗೆ ಪೈಪೋಟಿ ನಡೆಸುವುದು ಇತ್ಯಾದಿ ನಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡುವುದರ ಜೊತೆಗೆ ಇತರರ ನೆಮ್ಮದಿಯನ್ನು ಹಾಳು ಮಾಡುತ್ತದೆ. ಇದು ಕ್ರಮೇಣ ಅಸೂಯೆ ಮತ್ತು ವಿದ್ವೇಷವನ್ನು ಹುಟ್ಟಿಸುತ್ತದೆ.  ಕುಟುಂಬದಲ್ಲಿ ಪರಸ್ಪರರ ಮಧ್ಯೆ ಶೀತಲ ಸಮರಕ್ಕೆ ಕಾರಣವಾಗುತ್ತದೆ. ತಮ್ಮ ಖರ್ಚಿನ ಬಗ್ಗೆ ಏನೂ ಹೇಳಲು ಅವಕಾಶವಿಲ್ಲದಾಗ ಸುಳ್ಳು ಹೇಳಲು ಪ್ರೇರೇಪಿಸುತ್ತದೆ. ಆದ್ದರಿಂದ ನಿಮಗೆ ಅಗತ್ಯವಿರುವಷ್ಟು ಖರ್ಚು ಮಾಡಿ ತೃಪ್ತರಾಗಿರಿ. ಅದರ ಬಗ್ಗೆ ಎಲ್ಲರೊಂದಿಗೆ ಹೇಳುತ್ತಾ ಹೋಗಬೇಡಿರಿ.  ನಿಮ್ಮ ಸಂಬಳ, ಸಂಪತ್ತನ್ನು ಇನ್ನೊಬ್ಬರ ಸಂಪತ್ತಿನೊಂದಿಗೆ ಹೋಲಿಕೆ ಮಾಡಿಬೇಡಿರಿ. ಸಂಪತ್ತಿನ ವಿಷಯದಲ್ಲಿ ನಮಗಿಂತ ಕೆಳಗಿನವರನ್ನು ನೋಡಲು, ಬಡತನದಲ್ಲೂ ಶ್ರೀಮಂತಿಕೆಯಲ್ಲೂ ಮಧ್ಯಮ ಧೋರಣೆ ಅನುಸರಿಸಲು ಪ್ರವಾದಿ ಮುಹಮ್ಮದ್(ಸ) ಉಪದೇಶಿಸಿರುವರು.

ಎಷ್ಟು ವರ್ಷ ಗಲ್ಫ್ ನಲ್ಲಿ ದುಡಿದರೂ ಅಲ್ಪ ಸಂಭಳ, ನಿರುದ್ಯೋಗ ಅಥವಾ ಕುಟುಂಬದ ಜವಾಬ್ದಾರಿಕೆಗಳಿಂದ ಉಳಿತಾಯ ಮಾಡಲು ಸಾಧ್ಯವಾಗದವರೂ ಇದ್ದಾರೆ. ಉದ್ಯೋಗ, ವ್ಯಾಪಾರ, ಕಂಪೆನಿ, ಸ್ವಂತ ಮನೆ, ಇಹಲೋಕ ಯಾವುದೂ ಶಾಶ್ವತ ಅಲ್ಲ.

“ಈ ಸೊತ್ತು ಮತ್ತು ಈ ಸಂತತಿಗಳು ಕೇವಲ ಲೌಕಿಕ ಜೀವನದ ಕ್ಷಣಿಕ ಸೊಬಗು ಮಾತ್ರ. ವಾಸ್ತವದಲ್ಲಿ ಉಳಿಯುವ ಪುಣ್ಯ ಕಾರ್ಯಗಳೇ ನಿಮ್ಮ ಪ್ರಭುವಿನ ಬಳಿ ಪರಿಣಾಮದ ದೃಷ್ಟಿಯಿಂದ ಶ್ರೇಷ್ಠವಾಗಿರುತ್ತವೆ. ಅವುಗಳ ಮೇಲೆಯೇ ಉತ್ತಮ ನಿರೀಕ್ಷೆಗಳನ್ನಿರಿಸಿ ಕೊಳ್ಳಬಹುದು.” (ಅಲ್ ಕಹ್ಫ್ :46)