ಹಣೆಯಲ್ಲಿ ಉದ್ದ ನಾಮ, ಕೈಯಲ್ಲಿ ಕೇಸರಿ ನೂಲು: ಆಕೆ ಪ್ರಾರ್ಥಿಸಿದಳು..

0
1536

ದಿನದ ಮಿಂಚು- 85

ಏ ಕೆ ಕುಕ್ಕಿಲ

ಆ ಸುದ್ದಿಯನ್ನು ಕೇಳಿ ಆಕೆ ಕಂಗಾಲಾದಳು. ಹಣೆಯಲ್ಲಿ ಬೆವರು.

“ಸಂಜೆಯ ವೇಳೆ ಗಣೇಶ ವಿಸರ್ಜನೆಯ ಮೆರವಣಿಗೆ ಇರುವುದರಿಂದ ಸಂಜೆಗಿಂತ ಮೊದಲೇ ಮನೆಗೆ ತಲುಪಿ…” ಎಂದು ನಗರಕ್ಕೆ ಹೊರಟು ನಿಂತ ಗಂಡ, ಮಕ್ಕಳು ಮತ್ತು ಅತ್ತೆ- ಮಾವಂದಿರೊಂದಿಗೆ ಆಕೆ ನೆನಪಿಸಿದ್ದಳು. ಗಲಭೆ ಸ್ಪೋಟಿಸಿದರೆ… ಅನ್ನುವ ಭಯ ಆಕೆಯದು. ಈಗ ಆಕೆಗೆ ಸಿಕ್ಕ ಸುದ್ದಿಯು ಆ ಭಯವನ್ನು ನಿಜವಾಗಿಸಿತ್ತು. ಆಕೆ ಗಂಡನ ಮೊಬೈಲ್ ಗೆ ಕರೆ ಮಾಡಿದಳು. ಆಕೆಯ ಪಕ್ಕವೇ ರಿಂಗ್ ಆಗುತ್ತಿರುವ ಸದ್ದು. ಛೆ, ಇವತ್ತೇ ಅವರು ಮೊಬೈಲ್ ಅನ್ನು ಬಿಟ್ಟು ಹೋಗಬೇಕೆ ಎಂದು ಸಂಕಟಪಟ್ಟಳು. ತನ್ನ ಪರಿಚಿತರಿಗೆ ಕರೆ ಮಾಡಿದಳು. ಆದರೆ, ಅವರ ಮಾತು ಅವಳಲ್ಲಿ ಇನ್ನಷ್ಟು ಭಯವನ್ನೇ ಹುಟ್ಟಿಸಿತು. ಮನೆಯಲ್ಲಿ ನಿಲ್ಲಲಾಗಲಿಲ್ಲ. ನೆರೆಮನೆಗೆ ಓಡಿದಳು. ಭಯ ತೋಡಿಕೊಂಡಳು. ಈ ನಡುವೆ ಗಂಡನ ಮೊಬೈಲ್ ಗೆ ಕರೆ ಬಂದದ್ದೂ ಆಕೆಗೆ ಗೊತ್ತಾಗಲಿಲ್ಲ.

ತುಸು ಹೊತ್ತು…

ಆಂಬುಲೆನ್ಸ್ ಒಂದು ವೇಗವಾಗಿ ಬಂದು ಮನೆಯ ಎದುರು ನಿಂತಿತು. ದಾಪುಗಾಲಿಟ್ಟು ಆಂಬುಲೆನ್ಸ್ ನ ಬಳಿಗೆ ತಲುಪಿದ ಆಕೆಯ ಕಣ್ಣು ತುಂಬಾ ನೀರು. ಆಂಬುಲೆನ್ಸ್ ನಿಂದ ಇಳಿದ ಗಂಡ ಆಕೆಯನ್ನು ತಬ್ಬಿಕೊಂಡ. ಸಾಂತ್ವನಿಸಿದ. ಅಂಗಡಿಯ ಪಕ್ಕದ ದ್ವಾರವೊಂದರಲ್ಲಿ ಭಯದಿಂದ ಅಡಗಿ ನಿಂತಿದ್ದ ನಮ್ಮನ್ನು ಹತ್ತಿಸಿಕೊಂಡ ಈ ಆಂಬುಲೆನ್ಸ್ ಹೇಗೆ ಬಚಾವ್ ಮಾಡಿತು ಎಂಬುದನ್ನು ವಿವರಿಸಿದ. ಆಕೆ ಆ ಡ್ರೈವರ್ ನ ಕಡೆಗೆ ನೋಡಿದಳು. ಹಣೆಯಲ್ಲಿ ಉದ್ದ ನಾಮ, ಕೈಯಲ್ಲಿ ಕೇಸರಿ ನೂಲು..
ಆಕೆ ಗಂಡನ ಎದೆಗೆ ತಲೆಯಿಡುತ್ತಾ ಪ್ರಾರ್ಥಿಸಿದಳು,

ಯಾ ಅಲ್ಲಾಹ್, ಈ ಬಣ್ಣಗಳನ್ನೆಲ್ಲಾ ಒಮ್ಮೆ ಅಳಿಸಿಬಿಡು. ಮನುಷ್ಯರೆಷ್ಟು ಒಳ್ಳೆಯವರು.