ಕೃಷಿ ಕಾನೂನುಗಳ ವಿರುದ್ಧ ಪ್ರಧಾನಿಗೆ ಪತ್ರ: ರೈತರಿಗಾಗಿ ಕೊನೆಯ ಉಪವಾಸ ಸತ್ಯಾಗ್ರಹ ಕೈಗೊಳ್ಳುವೆ ಎಂದ ಅಣ್ಣಾ ಹಜಾರೆ

0
337

ಸನ್ಮಾರ್ಗ ವಾರ್ತೆ

ನವದೆಹಲಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಜನವರಿ ಅಂತ್ಯದ ವೇಳೆಗೆ ದೆಹಲಿಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರಕ್ಕೆ ಆಗ್ರಹಿಸಿ ‘ಉಪವಾಸ ಸತ್ಯಾಗ್ರಹ’ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

“ರೈತರ ವಿಷಯದಲ್ಲಿ ನಾನು ಕೇಂದ್ರದೊಂದಿಗೆ ಐದು ಬಾರಿ ಪತ್ರ ವ್ಯವಹಾರವನ್ನು ನಡೆಸಿದ್ದೇನೆ. ಆದಾಗ್ಯೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಇದರ ಪರಿಣಾಮವಾಗಿ, ನನ್ನ ಜೀವನದ ಕೊನೆಯ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಾನು ನಿರ್ಧರಿಸಿದ್ದೇನೆ” ಎಂದು ಹಜಾರೆ ಗುರುವಾರ ಪ್ರಧಾನಿಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹಜಾರೆ, ಹೊಸ ಕೃಷಿ ಕಾನೂನುಗಳು ಅಸಂವಿಧಾನಿಕ ಮತ್ತು ‘ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿಲ್ಲ. ಶಾಸನದ ಕರಡು ರಚನೆಯಲ್ಲಿ ಜನರ ಸಹಭಾಗಿತ್ವ ಅಗತ್ಯ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 14 ರಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಅವರು ಪತ್ರ ಬರೆದಿದ್ದು, ಎಂ.ಎಸ್ ಸ್ವಾಮಿನಾಥನ್ ಸಮಿತಿಯ ಕೃಷಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿದ್ದರು.

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಅನುಮತಿ ಕೋರಿ ಹಜಾರೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಾಲ್ಕು ಪತ್ರಗಳನ್ನು ಬರೆದಿದ್ದಾರೆ. ಆದರೆ, ಈ ಬಗ್ಗೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು 83 ವರ್ಷದ ಹಜಾರೆ ಹೇಳಿದ್ದಾರೆ.