ಆರೋಗ್ಯಕರ ನಿದ್ರೆ-ಹೋಮಿಯೋಪತಿ ಹೆಲ್ತ್ ಟಿಪ್ಸ್

0
1456

ಡಾ| ಅಲ್‍ಫ್ರೀಡಾ ಲವಿನ ಪಿಂಟೊ
ಹೋಮಿಯೋಪತಿ ತಜ್ಞರು, ಮಂಗಳೂರು
(phone: 9449300306)

ನಿದ್ರೆ ಎನ್ನುವುದು ದಿನಚರಿಯ ಒಂದು ಮುಖ್ಯ ಭಾಗ. ಊಟ ಮಾಡದೆ 2-3 ದಿನ ಜೀವಿಸಬಹುದು. ಆದ್ರೆ ನಿದ್ರೆ ಮಾಡಲೇಬೇಕು. ಪ್ರತಿಯೊಬ್ಬ ವ್ಯಕ್ತಿಯ ನಿದ್ರೆಯ ಅವಧಿ ಬೇರೆ ಬೇರೆಯಾಗಿರುತ್ತದೆ. ನಿದ್ರೆಯ ಗುಣಮಟ್ಟವೂ ನಿದ್ರೆಯ ಅವಧಿಯಷ್ಟೇ ಮಹತ್ವದ್ದು. ನಿದ್ರೆಯ ಅವಧಿ ಅಥವಾ ಗುಣಮಟ್ಟ ಯಾವುದರಲ್ಲೂ ಏರುಪೇರಾದರೆ ನಿದ್ರೆ ಸರಿಯಾಗಲಿಲ್ಲ ಎಂದೆನಿಸು ತ್ತದೆ ಹಾಗೂ ದಿನವಿಡೀ ಅಹಿತರಕವೆನಿಸುತ್ತದೆ.

ಕೆಲವು ಬಾರಿ ನಿದ್ರೆಯ ಬಗ್ಗೆ ಯೋಚಿಸಿದರೆ ಆಶ್ಚರ್ಯವೇ ಆಗುತ್ತದೆ. ನಿದ್ರೆಯಲ್ಲಿರುವಾಗ ದೇಹದ ಹೊರಭಾಗ ಕಾರ್ಯಾಚರಣೆ ನಿಲ್ಲಿಸುತ್ತದೆ. ಆದರೆ ದೇಹದ ಒಳಗೆ ಕೆಲಸ ನಡೆಯುತ್ತಲೇ ಇರುತ್ತದೆ. ಪ್ರತೀ ದಿನ ಸರಿಯಾಗಿ ನಿದ್ದೆ ಮಾಡುವುದು ಮನಸ್ಸಿನ ಚಲಾವಣೆ, ಭಾವನಾತ್ಮಕ ಸಮತೋಲನ, ದೈಹಿಕ ಚಟುವಟಿಕೆ ಹಾಗೂ ದಿನದ ಕೆಲಸ ಕಾರ್ಯಗಳಿಗೆ ಬಹಳ ಅಗತ್ಯ.

ನಾವು ನಿದ್ರಿಸಿದಾಗ ಏನಾಗುತ್ತದೆ?

ನಾವು ನಿದ್ರೆ ಮಾಡಿದಾಗ ನಮ್ಮ ದೇಹ ವಿಶ್ರಾಂತಿ ಪಡೆಯುತ್ತದೆ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ, ರಕ್ತದೊತ್ತಡ ಕಡಿಮೆಯಾಗು ತ್ತದೆ, ಹೃದಯಬಡಿತ, ಶ್ವಾಸ ಹಾಗೂ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಅದೇ ವೇಳೆ ಮೆದುಳು ಕ್ರಿಯಾಶೀಲವಾಗಿದ್ದು ಮನಸ್ಸಿನ ಹಾಗೂ ದೇಹದ ಒಳಗಿನ ಕ್ರಿಯೆಗಳನ್ನು ನಡೆಸಿಕೊಂಡು ಇರುತ್ತದೆ. ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಿಸಲು ನಿದ್ದೆ ಉಪಕಾರಿಯಾಗಿದೆ. ಮಕ್ಕಳ ಬೆಳವಣಿಗೆಗೂ ನಿದ್ದೆಯ ಅಗತ್ಯವಿದೆ. ಹಸಿವನ್ನು ನಿಯಂತ್ರಣ ಮಾಡಿ ದೇಹದ ತೂಕದ ಮೇಲೂ ನಿದ್ದೆಯ ಪ್ರಭಾವವಿರುತ್ತದೆ.

ಎಷ್ಟು ನಿದ್ದೆ ನಮಗೆ ಅಗತ್ಯ

ನಾನು ರಾತ್ರಿ 2-3 ಗಂಟೆ ಮಾತ್ರ ಮಲ ಗೋದು. ನನಗಷ್ಟು ಸಾಕು, ಏನೂ ತೊಂದರೆ ಆಗೋದಿಲ್ಲ’ ಎಂದು ಕೆಲವರು ಹೇಳುತ್ತಾರೆ. ನಮ್ಮ ದೇಶದ ಪ್ರಧಾನಿಯವರ ದಿನಚರಿಯೂ ಹಾಗೇ ಇದೆ ಎಂದು ನಾನು ಓದಿದ್ದೆ. ಸರಿಯಾಗಿ ನಿದ್ದೆ ಮಾಡದಿದ್ದರೆ ಸದ್ಯಕ್ಕೆ ಏನೂ ಸಮಸ್ಯೆ ಬಾರದು. ಆದರೆ ಹಾಗೇ ತುಂಬಾ ಸಮಯ ಮುಂದುವರಿದಿರೆ, ಅದರ ಪರಿಣಾಮ ಏನಿರಬಹುದು ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಹಲವಾರು ಮಂದಿ ದೇಹ ಸದೃಢಗೊಳಿಸಲು ಆರೋಗ್ಯಕರವಾಗಿರಲು ಏನೆಲ್ಲ ಕಸರತ್ತು ಮಾಡುತ್ತಾರೆ- ಜಿಮ್‍ಗೆ ಹೋಗುತ್ತಾರೆ, ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸುತ್ತಾರೆ, ಯೋಗ ಮಾಡುತ್ತಾರೆ, ಆಗಾಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳು ತ್ತಾರೆ. ಆದರೂ ಅವರ ಹೃದಯದ ಮೇಲೆ ಒತ್ತಡ ಹೆಚ್ಚಾಗಿದೆ. ಏಕೆಂದರೆ ಹಣ, ಅಂತಸ್ತು, ಸಮಾಜದಲ್ಲಿ ಸ್ಥಾನಮಾನ, ವೈಯಕ್ತಿಕ ಯಶಸ್ಸು, ಸಾಧನೆ ಸಂಪಾದಿಸುವಲ್ಲಿ ತಮ್ಮ ಬಹುತೇಕ ಸಮಯ ವ್ಯಯ ಮಾಡುವುದರಿಂದ ಸರಿಯಾಗಿ ನಿದ್ದೆ ಮಾಡಲು ಸಮಯವಿಲ್ಲದೆ ದಿನಕ್ಕೆ 2-3 ಗಂಟೆ ಮಾತ್ರ ನಿದ್ದೆ ಮಾಡುತ್ತಾರೆ. ಆದರೆ ಅಷ್ಟು ನಿದ್ರೆಯಿಂದ ಆರೋಗ್ಯವಾಗಿರಲು ಸಾಧ್ಯವಿಲ್ಲ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದು ಆರೋಗ್ಯವಂತ ವಯಸ್ಕರಿಗೆ 6-8 ತಾಸು ಒಳ್ಳೆಯ ನಿದ್ದೆ ಅಗತ್ಯವಿದೆ ಎಂದು ಹೇಳಿದೆ. ಮಕ್ಕಳು, ಹದಿಹರೆಯದವರಿಗೆ ಹೆಚ್ಚಿನ ಅವಧಿಯ ಆವಶ್ಯಕತೆಯಿರುತ್ತದೆ.

ಇನ್ನು ಕೆಲವರು ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ತಡವಾಗಿ ಏಳುವ ಕೆಟ್ಟ ಅಭ್ಯಾಸವನ್ನು ಇಟ್ಟುಕೊಂಡಿದ್ದಾರೆ. ಅಂತಹ ಅಭ್ಯಾಸವೂ ಆರೋಗ್ಯಕರವಲ್ಲ. ಇತ್ತೀಚೆಗೆ ರಾತ್ರಿ ಶಿಫ್ಟ್ ಕೆಲಸ ಮಾಡುವವರು ಹಗಲಿಗೆ ಮಲಗಿರುವುದು ಸಾಮಾನ್ಯವಾಗುತ್ತಿದೆ. ಅದೂ ಪ್ರಕೃತಿಗೆ ವಿರುದ್ಧ. ರಾತ್ರಿ ಎದ್ದು ಹಗಲಿಗೆ ಮಲಗಿದರೆ ಬುದ್ಧಿ ಚುರುಕಾಗಿರುವುದಿಲ್ಲ. ಕೆಲ ಸಮಯ ಹೀಗೆ ಉಲ್ಟಾ ಬದುಕಬಹುದು. ಆದರೆ ಸುದೀರ್ಘ ಅವಧಿಗೆ ಹಾಗೆ ಮುಂದುವರಿದರೆ ಆರೋಗ್ಯದಲ್ಲಿ ಏರುಪೇರು ಆಗುವುದು ಖಂಡಿತ.

ಕೆಲವು ಮನೆಗಳಲ್ಲಿ ಮಲಗಿದ ಮಕ್ಕಳನ್ನು ಬೈದು ಹೊಡೆದು ಎಬ್ಬಿಸುತ್ತಾರೆ. ಮಕ್ಕಳು ನಿದ್ದೆ ಮಾಡಿ ಸೋಮಾರಿಗಳಾಗಬಾರದೆಂಬುದು ಹೆತ್ತವರ ಉದ್ದೇಶವಾಗಿದ್ದರೂ ಮಕ್ಕಳನ್ನು ಹೆದರಿಸಿ ಬೆದರಿಸಿ, ನೀರೆರಚಿ ಬೈಯುತ್ತಾ ಎಬ್ಬಿಸುವುದು ಸರಿಯಲ್ಲ. ಅದು ಮಕ್ಕಳ ಮನಸ್ಸು ಹಾಗೂ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ.

ಕೆಲವರು ನಿದ್ರೆಯಿಂದ ಎದ್ದ ಮೇಲೆ ತಲೆನೋವು, ತಲೆಭಾರ ಎಂದು ಹೇಳುತ್ತಾರೆ. ಏಕೆಂದರೆ ನಿದ್ರೆಯಿಂದ ಎಚ್ಚರವಾಗುವಾಗ ಮನಸ್ಸು ಪ್ರಶಾಂತ ಸ್ಥಿತಿಯಲ್ಲಿ ಇರಬೇಕು. ಕೆಲವು ಸಲ ದೇಹ ನಿದ್ರೆ ಮಾಡುವ ಸ್ಥಿತಿಯಲ್ಲಿದ್ದರೂ ಮನಸ್ಸು ಯಾವುದೋ ಯೋಚನೆಯಲ್ಲಿ ತೊಡಗಿರುತ್ತದೆ. ಕೆಲವರು ಚಿಂತೆ ಮಾಡಿ ನಿದ್ದೆ ಹಾಳು ಮಾಡಿಕೊಳ್ಳುತ್ತಾರೆ. ನಿದ್ರೆ ಮಾಡುವಾಗ ನಿಮ್ಮ ಮನಸ್ಸು-ಬುದ್ಧಿಯನ್ನು ಸ್ವಚ್ಛವಾಗಿಟ್ಟುಕೊಳ್ಳ ಬೇಕು. ಬೇರೆ ಯಾವುದೇ ಯೋಚನೆ ಇರಬಾರದು. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತದಂತೆ. ಅದಕ್ಕಾಗಿ ನೆಮ್ಮದಿಯಿಂದ ನಿದ್ದೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಒಳ್ಳೆಯ ನಿದ್ರೆಗೆ ಕೆಲವು ಟಿಪ್ಸ್
1. ಹಗಲಲ್ಲಿ ಪ್ರಕಾಶಭರಿತ ಬೆಳಕಿನಲ್ಲಿ ಹೆಚ್ಚಾಗಿ ಇರುವುದು.
2. ಸಾಯಂಕಾಲ ನಂತರ ನೀಲಿ ಬೆಳಕನ್ನು ಹೆಚ್ಚಾಗಿ ನೋಡಬಾರದು. (ನೀಲಿ ಬೆಳಕೆಂದರೆ ಮೊಬೈಲ್, ಟಿ.ವಿ, ಕಂಪ್ಯೂಟರ್ ಇತ್ಯಾದಿ)
3. ಹಗಲಲ್ಲಿ ದೀರ್ಘ ಸಮಯ ನಿದ್ರಿಸಬಾರದು.
4. ನಿಯಮಿತವಾಗಿ ಒಂದೇ ನಿರ್ಧಾರಿತ ಸಮಯಕ್ಕೆ ಮಲಗುವುದು ಹಾಗೂ ಎಚ್ಚರಿಸುವುದು.
5. ಮದ್ಯಪಾನದಿಂದ ದೂರ ಉಳಿಯುವುದು.
6. ಮಲಗುವ ಕೋಣೆಯಲ್ಲಿ ಶಾಂತ ವಾತಾವರಣ ಇರಬೇಕು. ಕೋಣೆಯಲ್ಲಿ ಅತಿಯಾದ ಬೆಳಕು, ಶಬ್ದ, ವಾಸನೆ, ತಾಪ ಇರಬಾರದು.
7. ರಾತ್ರಿ ತಡವಾಗಿ ಊಟ ಮಾಡಬೇಡಿ. ಊಟ ಮಾಡಿದ ತಕ್ಷಣ ನಿದ್ರೆ ಮಾಡಲು ಹೋಗಬಾರದು.
8. ಮನಸ್ಸು ಶಾಂತವಾಗಿಡಬೇಕು.
9. ಸಂಜೆ ಹೊತ್ತು ಬೆಚ್ಚಗಿನ ಸ್ನಾನ ಮಾಡುವುದು.
10. ಮಲಗುವ ಮಂಚ ಹಾಗೂ ಹಾಸಿಗೆ ಆರಾಮದಾಯಕವಾಗಿರಬೇಕು.
11. ನಿರಂತರ ವ್ಯಾಯಾಮ, ಯೋಗ ಮಾಡುವುದು ಆದರೆ ಮಲಗುವ ಹೊತ್ತಿಗೆ ವ್ಯಾಯಾಮ ಮಾಡಬಾರದು.
12. ಮಲಗುವ ಹೊತ್ತಿಗೆ ತುಂಬಾ ನೀರು ಕುಡಿದರೆ ರಾತ್ರಿ ಪದೇ ಪದೇ ಮೂತ್ರ ವಿಸರ್ಜಿಸಲು ಎಚ್ಚರವಾಗಿ ನಿದ್ರೆ ಹಾಳಾಗುವ ಸಾಧ್ಯತೆ ಹೆಚ್ಚು.
13. ನಿದ್ರೆಯ ತೊಂದರೆ ಅಥವಾ ವಿಪರೀತ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.
14. ವೈದ್ಯರ ಸಲಹೆ ಇಲ್ಲದೆ ನಿದ್ದೆ ಮಾತ್ರೆ ಸೇವಿಸಬೇಡಿ.

ಹೋಮಿಯೋಪತಿ ಚಿಕಿತ್ಸಾ ವಿಧಾನದಲ್ಲಿ ನಿದ್ರೆ ಸಮಸ್ಯೆ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಹಾಗೂ ಶಾಶ್ವತ ಪರಿಹಾರ ಕೊಡಬಲ್ಲ ಚಿಕಿತ್ಸೆ ಲಭ್ಯವಿದೆ. ದೀರ್ಘಕಾಲ ನಿದ್ರೆ ಮಾತ್ರೆ ಸೇವಿಸುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮವಾಗುತ್ತದೆ. ಆದರೆ ಹೋಮಿಯೋಪತಿ ಔಷಧಗಳಲ್ಲಿ ಯಾವುದೇ ಅಡ್ಡಪರಿಣಾಮವಾಗಲಿ ಔಷಧಗಳ ಚಟವಾಗಲಿ ಆಗುವುದಿಲ್ಲ. ರೋಗಿಯ ಪೂರ್ಣ ವ್ಯಕ್ತಿತ್ವದ ಆಧಾರದ ಮೇಲೆ ಹೊಂದಿಕೊಂಡು ಪರಿಪೂರ್ಣ ಚಿಕಿತ್ಸೆ ನೀಡುವುದರಿಂದ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ.