ಸಲಿಂಗರತಿ: ಪ್ರೀತಿಸುವ ಸ್ವಾತಂತ್ರ್ಯವೋ ಅಲ್ಲ, ಧ್ವಂಸಗೊಳಿಸುವ ಸ್ವಾತಂತ್ರ್ಯವೋ?

0
1715

 ಭಾಗ-1

ಡಾ| ಜಾವೇದ್ ಜಮೀಲ್

“ಸಲಿಂಗರತಿಗೆ ಮಾನವ ಹಕ್ಕುಗಳಿವೆ. ಆದರೆ ಸಲಿಂಗರತಿಯೇ ಮಾನವ ಹಕ್ಕಲ್ಲ.”


ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದಲ್ಲಿ ಇಸ್ಲಾಮೀ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ| ಜಾವೇದ್ ಜಮೀಲ್ ರವರು ಬರೆಯುತ್ತಾರೆ….


ಭಾರತದಲ್ಲಿ ಸಲಿಂಗರತಿಯ ಸ್ವಾತಂತ್ರ್ಯ ಸನ್ನಿಹಿತವಾಗಿದೆ. ಸರಕಾರ ಈ ವಿಷಯವನ್ನು ಕೋರ್ಟಿಗೆ ಬಿಟ್ಟುಕೊಟ್ಟಿದೆ. ಕೋರ್ಟು ತನ್ನ ನಿರ್ಣಯವನ್ನು ಈಗಾಗಲೇ ನೀಡಿಯಾಗಿದೆ. ಇದೀಗ ಏನಿದ್ದರೂ ಉದ್ಯಮ ಶಕ್ತಿಗಳ ಮತ್ತೊಂದು ಮಹತ್ತರ ವಿಜಯದ ಪತಾಕೆಯಾಗಿ ಈ ತೀರ್ಪು ಮಾರ್ಪಾಡಾಗುತ್ತಿರುವ ಘಟನಾವಳಿಗಳು ಮಾತ್ರ ಉಳಿದುಕೊಂಡಿವೆ. ಈ ತೀರ್ಪನ್ನು ಬಂಡವಾಳಶಾಹಿಗಳು ಪ್ರೀತಿಸುವ ಸ್ವಾತಂತ್ರ್ಯ( Right To Love ) ಎಂಬ ಹೆಸರಿಟ್ಟು ಮತ್ತೊಂದು ಕೈಗಾರಿಕೋದ್ಯಮವನ್ನು ಆರಂಭಿಸುತ್ತಾರೆ. ಸಮಯದ ಅಂತರವಿಲ್ಲದೇ ಗೇ ಕ್ಲಬ್‍ಗಳು, ಗೇ ರೆಸಾರ್ಟ್‍ಗಳು, ಗೇ ವಿವಾಹ ಬ್ಯೂರೋ, ಗೇ ವಿಚ್ಛೇದನ ಬ್ಯೂರೋ, ಗೇ ನೀಲಿಚಿತ್ರಗಳು, ಗೇ ಸಾಹಿತ್ಯ ಹೀಗೆ ಎಲ್ಲ ರಂಗಗಳಲ್ಲಿ ಸಲಿಂಗರತಿಯ ಛಾಪನ್ನು ಮೂಡಿಸಲಾಗುತ್ತದೆ. ಆಗ ಕೇವಲ ಧಾರ್ಮಿಕತೆ, ನೈತಿಕತೆಯನ್ನೇ ಬದುಕಾಗಿಸಿಕೊಂಡ ಬಹುಪಾಲು ಭಾರತೀಯರು ಈ ಹೇಯ ಕೃತ್ಯಗಳನ್ನು ಅಸಹಾಯಕತೆಯಿಂದಲೂ ಅಸಮಾಧಾನದಿಂದಲೂ ವೀಕ್ಷಿಸಬೇಕಾಗಿ ಬರುತ್ತದೆ. ಜನರ ಜೀವನ, ಆರೋಗ್ಯ ನಶಿಸಿ ಹೋದರೂ ಯಾವುದೇ ರೀತಿಯ ವಾಗ್ವಾದಗಳನ್ನು ನಡೆಸದೇ ತೆಪ್ಪಗಿರಬೇಕಾಗುತ್ತದೆ. ಯಾಕೆಂದರೆ, ಈ ಅನೈತಿಕತೆ ಈಗ ಕಾನೂನಾಗಿ ಬಿಟ್ಟಿದೆ ಮತ್ತು ನಾವು ಈ ಕಾನೂನನ್ನು ಗೌರವಿಸ ಬೇಕಾದ ಅಸಹಾಯಕ ಸ್ಥಿತಿಯಲ್ಲಿ ನಿಂತು ಬಿಟ್ಟಿದ್ದೇವೆ. ಅಷ್ಟೇ ಯಾಕೆ, ಸರಕಾರ ಹಾಗೂ ಶಾಸಕಾಂಗ ವ್ಯವಸ್ಥೆಯ ಕೈಯಲ್ಲಿ ಎಲ್ಲವನ್ನೂ ಅರ್ಪಿಸಿದ ನಾವುಗಳು ಅವರ ಮಾತಿನಂತೆ, ಅವರ ತೀರ್ಪಿನಂತೆ ತೆಪ್ಪಗೆ ನಡೆದುಕೊಳ್ಳಬೇಕಾಗುತ್ತದೆ. ಈ ಕಪಿಮುಷ್ಠಿಯಿಂದ ಯಾವ ನೈತಿಕತೆಯೂ ಬದುಕುಳಿಯಲಾರದು.

ಇಂತಹ ವಿಚಿತ್ರ ಬೇಡಿಕೆಗಳನ್ನು ಈಡೇರಿಸಲು ಮಾರುಕಟ್ಟೆಗಳು, ಮಾಲ್ ಮಳಿಗೆಗಳು ಗ್ರಾಹಕರಿಗೆ ವಿಶೇಷ ಆಫರ್‍ಗಳನ್ನು ಏರ್ಪಡಿಸುತ್ತವೆ. ತಮ್ಮಲ್ಲಿನ ಪರಸ್ಪರ ಪೈಪೋಟಿಯಲ್ಲಿ ಬೊಕ್ಕಸವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಲೈಂಗಿಕ ವಿರೋಧಾಭಾಸಗಳಿಗೆ ಪ್ರಚಾರ ನೀಡುತ್ತಾರೆ. ಸಲಿಂಗರತಿ ಒಂದು ಹೊಸ ಬ್ರಾಂಡ್ ಆಗಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತದೆ. ಸ್ವಾಭಾವಿಕ ಭಿನ್ನ ಲೈಂಗಿಕತೆ ಮತ್ತು ಸಲಿಂಗರತಿ ಎಂಬ ಎರಡು ವಿಭಾಗಗಳು ಜಗತ್ತಿನಾದ್ಯಂತ ವ್ಯಾಪಿಸಲಿದೆ. ವ್ಯಾಪಿಸದೇ ಇದ್ದರೂ ಕೂಡಾ ಅವರ ನಡುವೆ ಅದು ಪರಿಗಣನೆಗೆ ಒಳಗಾಗುವ ವಿಷಯವಾಗಿ ಮಾರ್ಪಡುತ್ತದೆ. ಇದು ಇತಿಹಾಸದಲ್ಲಿ ಸಂಭವಿಸದೇ ಇದ್ದ ವ್ಯವಸ್ಥೆ ಏನಲ್ಲ. ಇತಿಹಾಸದಲ್ಲಿ ಹಾದು ಹೋಗಿ ನಶಿಸಿದ ಒಂದು ಅಧ್ಯಾಯ ಮತ್ತೊಮ್ಮೆ ವಿನಾಶದತ್ತ ಕೊಂಡೊಯ್ಯುತ್ತಿರುವುದರ ಸೂಚನೆಯಾಗಿದೆ.

ಹಲವಾರು ಧಾರ್ಮಿಕ ಗ್ರಂಥಗಳಲ್ಲಿ ಸರೋಮ್ ಮತ್ತು ಗೊಮೊರ್ರಾ ಎಂಬ ಅವಳಿ ನಗರಗಳ ನಾಗರಿಕತೆಗಳು ಹೇಗೆ ಸಲಿಂಗರತಿಯಲ್ಲಿ ತೊಡಗಿಕೊಂಡಿದ್ದವು ಮತ್ತು ಅವರಿಗೆ ಯಾವ ರೀತಿಯ ಕಠೋರ ಶಿಕ್ಷೆಯು ಲಭಿಸಿತ್ತು ಎಂಬ ಕುರಿತು ಬೋಧಿಸುತ್ತದೆ. ಹತ್ತು ಮಂದಿ ನೀತಿವಂತರೂ ಈ ನಗರಗಳಲ್ಲಿ ಉಳಿದಿರಲಿಲ್ಲವೆಂಬುದನ್ನು ಬೈಬಲ್ ಹಾಗೂ ಕುರ್‍ಆನ್ ತಿಳಿಸುತ್ತದೆಯಲ್ಲದೇ ಅವಳಿ ನಗರಗಳ ಮೇಲೆ ರಭಸದಿಂದ ಕಲ್ಲುಗಳನ್ನು ಹಾಕುವ ಮೂಲಕ ಮತ್ತು ಕಲ್ಲುಗಳ ಮಳೆಯ ಮೂಲಕ ವಿನಾಶಗೊಳಿಸಿರುವುದನ್ನು ತಿಳಿಸಿಕೊಡುತ್ತದೆ. ಆದರೂ ಸಲಿಂಗರತಿಯು ಬಹುತೇಕ ದೇಶಗಳಲ್ಲಿ ಈಗಲೂ ವ್ಯಾಪ್ತಿ ಹೊಂದುತ್ತಾ ಸಾಗುತ್ತಿದೆ ಎಂಬುದು ದುರದೃಷ್ಟಕರ.

ನೈಸರ್ಗಿಕ v/s ಮಾನವ ನಿರ್ಮಿತ
ನೈಸರ್ಗಿಕ ಮತ್ತು ಮಾನವ ನಿರ್ಮಿತ ವರ್ತನೆಗಳಲ್ಲಿಯೂ ಬಂಡವಾಳಶಾಹಿಗಳು ಲೈಂಗಿಕತೆಯ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಬಂಡವಾಳ ಹೆಚ್ಚಿಸಲಿಕ್ಕಾಗಿ ಸಲಿಂಗದವರನ್ನೇ ಪರಸ್ಪರ ಆಕರ್ಷಿತರನ್ನಾಗಿಸುವ ಮೋಡಿಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಲಿಂಗ ರತಿಯ ನಡುವಿನ ಸಂಬಂಧವನ್ನು ನೈಸರ್ಗಿಕವೆಂದು ಹೇಳುವಷ್ಟರ ಮಟ್ಟಿಗೆ ಅವರ ವಾದಗಳು ಪ್ರಚಲಿತಗೊಳ್ಳುತ್ತವೆ. ನೈಸರ್ಗಿಕತೆಯನ್ನು, ಪ್ರಾಕೃತಿಕ ನಿಯಮಗಳನ್ನು ಮೀರಿ ಮಾನವನ ಸ್ವೇಚ್ಛೆಯು ಈ ರಂಗದಲ್ಲಿ ವ್ಯಾಪಾರದ ಪ್ರಮುಖ ಗುರಾಣಿಯಾಗಿ ಬಿಡುತ್ತದೆ.
ನೈಸರ್ಗಿಕತೆಯು ಮಾನವನನ್ನು ಮರಣ, ರೋಗ ಮತ್ತು ಮಾನವ ಸಂತತಿಯ ನಾಶಗಳಿಂದ ಕಾಪಾಡುತ್ತದೆ. ಇದು ವ್ಯಕ್ತಿಯ ವೈಯಕ್ತಿಕ ಏಳಿಗೆಯೊಂದಿಗೆ ಸಾಮಾಜಿಕ ಏಳಿಗೆಗೆ ದಾರಿಯಾಗುತ್ತದೆ. ಆದರೆ ಈ ನೈಸರ್ಗಿಕ ಪರಿಸ್ಥಿತಿಯನ್ನು ತಿರುಚಿ ಪರಸ್ಪರ ಏಕಲಿಂಗಾಂಗವನ್ನೇ ಇತರರೆಡೆಗೆ ಆಕರ್ಷಿಸುವ ಮಾನವನ ವರ್ತನೆಯೂ ಸಮಾಜದಲ್ಲಿ ಅಪರಾಧಗಳಿಗೂ ರೋಗಗಳಿಗೂ ಅನಾರೋಗ್ಯಕರ ಲೈಂಗಿಕ ಅರಾಜಕತೆಗೂ ದಾರಿಯಾಗುತ್ತದೆ. ಇದಲ್ಲದೇ ಕೌಟುಂಬಿಕ ವ್ಯವಸ್ಥೆಯಲ್ಲಿ ಮಾನವನ ವಿಕಾಸವು ಕ್ಷೀಣಿಸುವತ್ತ ಸಾಗುತ್ತದೆ. ಈ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅತ್ಯಾಚಾರ, ಕೊಲೆ, ಕಳ್ಳತನ ಸುಲಿಗೆಗಳೆಲ್ಲವೂ ಸಮಾಜದಲ್ಲಿ ಮನೆ ಮಾಡುತ್ತದೆ. ಈ ಎಲ್ಲ ಅರಾಜಕತೆಗಳನ್ನು ತಡೆಯಲು ಮತ್ತೊಮ್ಮೆ ಇಂತಹದೇ ಕಾನೂನುಗಳಿಗೆ ಮನ್ನಣೆ ನೀಡುತ್ತಾ ಸಾಗುವ ದಿನಗಳು ಇನ್ನೇನು ಕೆಲವೇ ದಿನಗಳಲ್ಲಿ ಬರಲೂ ಬಹುದು.

ಜೀವಕ್ಕೆ ಅಪಾಯಕಾರಿ
ಸಲಿಂಗರತಿಯಲ್ಲಿ ಅದರಲ್ಲಿಯೂ ಪುರುಷ ಮತ್ತು ಪುರುಷರ ನಡುವಿನ ಸಂಬಂಧವು ಬಹಳ ಮಾರಕವಾದುದು. ಈ ಸಂಬಂಧವು ಅನಾರೋಗ್ಯಪೂರ್ಣ ಮತ್ತು ಅಸುರಕ್ಷಿತ ಲೈಂಗಿಕ ಸಂಬಂಧವಾಗಿದ್ದು, ಇದು ಹೆಚ್ಚಿನ ಪ್ರಮಾಣದ ಸೋಂಕು ರೋಗಗಳನ್ನು ಹರಡುತ್ತದೆ. ಸಿಫಿಲಿಸ್, ಗೋನೊರಿಯ ಮತ್ತು ಏಡ್ಸ್‍ನಂತಹ ಕಾಯಿಲೆಗಳು ಸಲಿಂಗರತಿಯಿಂದ ಪ್ರಾರಂಭಗೊಂಡು ತದನಂತರ ವಿಭಿನ್ನ ಲಿಂಗೀಯರಲ್ಲಿಯೂ ಹರಡುವ ಸಾಧ್ಯತೆಗಳು ಹೆಚ್ಚು. ಸ್ತ್ರೀ-ಸ್ತ್ರೀಯರ ಸಂಬಂಧಗಳಿಗಿಂತಲೂ ಕೂಡಾ ಗುದ ಸಂಬಂಧವಿರಿಸುವ ಪುರುಷರ ಸಂಬಂಧವು ಬಹಳ ಅಪಾಯಕಾರಿ ಯಾದುದು. ಸ್ತ್ರೀ-ಸ್ತ್ರೀಯರ ಸಂಬಂಧದಲ್ಲಿ (ಲೆಸ್ಬಿಯನ್) ಲೈಂಗಿಕತೆಯುಂಟಾದರೂ ಯಾವುದೇ ರೀತಿಯ ಅಪಾಯಕಾರಿ ದ್ರಾವಕಗಳು ಉತ್ಪತ್ತಿಯಾಗುವುದಿಲ್ಲ. ಆದರೆ ಸ್ತ್ರೀ-ಸ್ತ್ರೀಯರ ಸಂಬಂಧದಿಂದ ಪರಸ್ಪರರ ನಡುವಿನ ಹಸ್ತಮೈಥುನವು ನಡೆಯು ವುದು. ಸ್ತ್ರೀ-ಸ್ತ್ರೀಯರ ಸಂಬಂಧದಿಂದ ಜೀವಿತಾವಧಿಯಲ್ಲಿ ಕುಂಠಿತವಾಗುವುದು. ಆದರೆ ಪುರುಷ-ಪುರುಷರ ನಡುವಿನ ಸಂಬಂಧಕ್ಕೆ (ಗೇ) ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಬೇಕಾದ ಅಗತ್ಯ ಇದೆ. ಒಂದು ನಿರ್ದಿಷ್ಟ ಅವಧಿಯ ವರೆಗೆ ಕೌನ್ಸೆಲಿಂಗ್ ಮಾಡುವ ಮೂಲಕ ಅವರ ನಡುವಿನ ಈ ಭಾವನಾತ್ಮಕ ನಂಟನ್ನು ಕುಂಠಿತಗೊಳಿಸಲು ಪ್ರಯತ್ನಗಳು ನಡೆಯಬೇಕಿದೆ. ಗುದ ಮೈಥುನವನ್ನು ಅಭ್ಯಾಸವಾಗಿಸಿಕೊಂಡಿರುವ ಗೇ ಸಂಬಂಧಗಳು ಮಾನವ ಕುಲಕ್ಕೆ ಮಾರಕವಾದುದಲ್ಲದೇ ಇದು ಮಾನವನ ವಿಕಾಸವನ್ನು ಕುಂಠಿತಗೊಳಿಸುವುದು. ಈಗಾಗಲೇ ವಿಶ್ವದಾದ್ಯಂತ ಗೇ (Gay) ಮಾರುಕಟ್ಟೆಗಳು ತಲೆ ಎತ್ತುತ್ತಿರುವುದರಿಂದ ಗೇ ಪದ್ಧತಿಯನ್ನು ವಿಶ್ವದಾದ್ಯಂತ ಕಾನೂನಾಗಿಸುವ ದಿನಗಳೇನೂ ದೂರ ಉಳಿದಿಲ್ಲ. ಪಾಶ್ಚಿಮಾತ್ಯ ಪ್ರದೇಶಗಳಲ್ಲಿ ಈಗಾಗಲೇ ಇದು ಮಾರುಕಟ್ಟೆಯಾಗಿ ಅಂಗೀಕಾರ ಪಡೆದಿದೆ. ಲೈಂಗಿಕ ಮಾರುಕಟ್ಟೆಗಳೇ ಮಾರುಕಟ್ಟೆಯ ರಂಗದಲ್ಲಿ ಅತಿ ಹೆಚ್ಚು ಬೆಳವಣಿಗೆ ಹೊಂದಿದವು ಗಳಾಗಿವೆ. ಅದರಲ್ಲಿಯೂ ಲೈಂಗಿಕ ಮಾರುಕಟ್ಟೆಯಲ್ಲಿ ಗೇ ಮಾರುಕಟ್ಟೆ ದಿನೇ ದಿನೇ ಬೆಳೆಯುತ್ತಲೇ ಇದೆ.

ಗೇ ಟೂರಿಸಂನ ಒಂದು ವರದಿಯು ಹೀಗೆ ಹೇಳುತ್ತದೆ,
“ಬ್ರಿಟಿಷ್ ಕೊಲಂಬಿಯಾದಲ್ಲಿ 2003ರಲ್ಲಿ ಸಲಿಂಗ ವಿವಾಹಕ್ಕೆ ಹಸಿರು ನಿಶಾನೆ ತೋರಿಸಿದಾಗ ಅವರು ತಮ್ಮ ವಿವಾಹವನ್ನು ಏರ್ಪಡಿಸಲು ಒಂದು ಪ್ರತ್ಯೇಕ ಸ್ಥಳವನ್ನು ಆಯ್ದುಕೊಳ್ಳುತ್ತಾರೆ. ಇದಲ್ಲದೇ “Two Dears and A Queer” ಎಂಬ ಹೆಸರಲ್ಲಿ ತಮ್ಮ ವಿವಾಹದ ಜಾಹೀರಾತನ್ನು ತಯಾರಿಸುತ್ತಾರೆ. ಈ ಜಾಹೀರಾತಿನಲ್ಲಿ ಅವರ ಹನಿಮೂನ್ ಚಿತ್ರಣಗಳನ್ನು ಕೂಡಾ ಚಿತ್ರಿಸಲಾಗುತ್ತದೆ. ವಿವಾಹವಾದ ಕೂಡಲೇ ದಂಪತಿಗಳು ಮತ್ತು ಅಲ್ಲಿ ನೆರೆದ ಅತಿಥಿಗಳು ಉಳಿದುಕೊಳ್ಳಲು ಒಂದು ಪ್ರತ್ಯೇಕ ಸ್ಥಳವನ್ನು ನಿಯೋಜಿಸಲಾಗುತ್ತದೆ. ತದನಂತರ ಅವರಿಗೆ ಬೇಕಾದ ಎಲ್ಲ ಬೇಡಿಕೆಗಳನ್ನು ಅಲ್ಲಿನ ನಿಯೋಜಕರು ಪೂರೈಸುತ್ತಾರೆ. ಈ ನಡುವೆ ಅಲ್ಲಿಗೆ ಆಗಮಿಸಿದ ಜನರಲ್ಲಿ ಕೆಲವರು ಮನೋರಂಜನೆ, ಮೋಜು, ಮಸ್ತಿ ಮಾಡಿದರೆ ಇನ್ನೊಂದು ಗುಂಪಿನಲ್ಲಿ ಒಂದೆರಡು ಇಂತಹದೇ ವಿವಾಹಗಳ ನಂಟು ಬೆಸೆದುಕೊಳ್ಳುತ್ತದೆ. ಇದು ಒಂದು ರೀತಿಯಲ್ಲಿ ಚತುರ ವ್ಯಾಪಾರವಾಗಿದೆ.” ಇನ್ನು, “ಸಲಿಂಗ ರತಿ ಮಾಧ್ಯಮಗಳಿಂದ ಅಮೇರಿಕ ಕೋಟ್ಯಂತರ ಡಾಲರ್ ಸಂಪಾದನೆಯನ್ನು ಮಾಡುತ್ತದೆ. HBO ಶೋಗಳು, ಚಲನಚಿತ್ರಗಳು, ಪುಸ್ತಕಗಳು, ಮ್ಯಾಗಝಿನ್‍ಗಳು ಎಲ್ಲವೂ ಆದಾಯದ ಭಾಗವಾಗಿದೆ. ಇವು ಅಮೇರಿಕದ ಆದಾಯದಲ್ಲಿ ಒಂದು ಪ್ರಬಲ ಅಂಶವಾಗಿಯೇ ನಿರ್ಧರಿಸಲ್ಪಡುತ್ತಿದೆ” ಎನ್ನುತ್ತಾರೆ.

ಜೀವನದಲ್ಲಿ ಸಲಿಂಗರತಿಯು ಯಾವುದೇ ರೀತಿಯ ಉತ್ತಮ ಅಂಶಗಳನ್ನು ಹೊಂದಿಲ್ಲ. ಇದು ಸಕಲ ಮಾನವ ಕುಲಕ್ಕೆ ಅಪಾಯಕಾರಿಯಾದುದು. ಅದರಲ್ಲಿಯೂ ಸಲಿಂಗರತಿಯಲ್ಲಿ ತೊಡಗಿ ದವರಿಗೆ ಅವರ ಜೀವಕ್ಕೆ ಇದು ಮಾರಕವಾಗಿದೆ. ಭಾರತದಲ್ಲಿ NACO ನಡೆಸಿದ ಸರ್ವೇ ಪ್ರಕಾರ, ಸಾಮಾನ್ಯ ಜನರಿಗಿಂತಲೂ ಸಲಿಂಗರತಿಯಲ್ಲಿ 8 ಪಟ್ಟು ಹೆಚ್‍ಐವಿ (HIV) ಹೆಚ್ಚಳವಿದೆ. ಇದೀಗ ಕಾನೂನಾತ್ಮಕವಾಗಿ ಇದಕ್ಕೆ ಮನ್ನಣೆ ನೀಡುವ ಮೂಲಕ ಮಾರುಕಟ್ಟೆಗಳಿಗೆ ಲಾಭ ಒದಗಿಸಬಹುದೇ ಹೊರತು ಗೇಗಳನ್ನು ಕಾನೂನಾತ್ಮಕವಾಗಿ ಶಿಕ್ಷೆಗೊಳಪಡಿಸಲಂತೂ ಅಸಾಧ್ಯ.

ಸಲಿಂಗರತಿ ಕಾನೂನಾತ್ಮಕಗೊಳಿಸುವುದರಿಂದ ಅಣಬೆಗಳಂತೆ ಗೇ ಸಾಹಿತ್ಯ, ಗೇ ಕ್ಲಬ್‍ಗಳು, ಗೇ ನೀಲಿಚಿತ್ರಗಳ ಸಂಖ್ಯೆ ಹೆಚ್ಚುವು ದಲ್ಲದೇ ಈ ಸಲಿಂಗರತಿ ಕೂಪಕ್ಕೆ ತಳ್ಳಲ್ಪಡುವವರ ಸಂಖ್ಯೆ ಅಪಾರವಾಗುತ್ತಾ ಹೋಗುತ್ತದೆ. ಏಡ್ಸ್ ತಡೆಗಟ್ಟಲು ಸಲಿಂಗರತಿ ಉತ್ತಮವೆಂದು ವಾದಿಸುವುದು ನಿಜಕ್ಕೂ ಅಸಂಬದ್ಧ. ಏಡ್ಸ್ ತಡೆಗಟ್ಟಲು ವ್ಯಭಿಚಾರದ ವಿರುದ್ಧ, ನೀಲಿಚಿತ್ರಗಳ ವಿರುದ್ಧ, ಸಲಿಂಗ ರತಿಯ ವಿರುದ್ಧ ಹಾಗೂ ಮಕ್ಕಳನ್ನು ಲೈಂಗಿಕತೆಗೆ ಬಳಸುವುದರ ವಿರುದ್ಧ ಅಭಿಯಾನಗಳನ್ನು ನಡೆಸಬೇಕಿದೆ. ಸಲಿಂಗರತಿಯಲ್ಲಿ ಪುರುಷ-ಪುರುಷರ ಸಂಬಂಧಕ್ಕೆ ಕಡಿವಾಣ ಹಾಕಿದರೂ ಹೆಚ್‍ಐವಿ ಪ್ರಮಾಣದಲ್ಲಿ ಗಣನೀಯ ಇಳಿಕೆಯನ್ನು ಕಾಣಬಹುದು.

ಸಲಿಂಗರತಿಗೆ ಪೂರಕವಾಗಿ ಈ ಕೆಳಗಿನ ವಾದಗಳನ್ನು ಮಂಡಿಸಲಾಗುತ್ತದೆ.
1. ಸಲಿಂಗರತಿ ಪ್ರಾಚೀನವಾದುದು ಎಂದು ಅವರು ವಾದಿಸು ತ್ತಾರೆ. ಆದರೆ ಮಾನವ ಸಮಾಜದಲ್ಲಿ ಹಲವಾರು ಅಪರಾಧಗಳು ಪ್ರಾಚೀನ ಕಾಲದಿಂದಲೇ ನೆಲೆಸಿವೆ. ಆದರೆ ಈ ಅಪರಾಧಗಳಿಗೆ ಪ್ರಚಾರ ನೀಡಿ ಅವುಗಳನ್ನು ವ್ಯಾಪಕಗೊಳಿಸುವ ಬದಲು ಅವುಗಳನ್ನು ನಿರ್ನಾಮ ಮಾಡುವತ್ತ ಸಮಾಜವು ನಡೆಯಬೇಕಾದ ಅಗತ್ಯತೆ ಇದೆ.

2. ಇಬ್ಬರು ಪ್ರೌಢ ಸಹಲಿಂಗೀಯರಲ್ಲೇ ಸಲಿಂಗರತಿಯನ್ನು ಕಾನೂನುಬದ್ಧಗೊಳಿಸುವುದು ನಿಜಕ್ಕೂ ಅಸಂಬದ್ಧ. ಪ್ರೌಢತೆ ಎಂಬುದು ಇಂತಹ ಹೇಯಕೃತ್ಯಗಳಿಗಾಗಿರುವುದಲ್ಲ.

3. ಸಲಿಂಗರತಿಯನ್ನು ಕಾನೂನುಬದ್ಧಗೊಳಿಸುವುದೆಂದರೆ ಜೀವಿಸುವ ಹಕ್ಕಿಗೆ ಮನ್ನಣೆ ನೀಡಿದಂತೆ ಎಂದು ಅವರು ವಾದಿಸುತ್ತಾರೆ. ಆದರೆ ಇದರ ವಿರುದ್ಧದ ಅಂಶವು ಸತ್ಯಪೂರ್ಣವಾದುದು. ಯಾಕೆಂದರೆ, ಸಲಿಂಗರತಿಯು ಸಕಲ ಮಾನವ ಕುಲಕ್ಕೆ ಮಾರಕವಾಗಿದೆ. ಯಾರು ಸಲಿಂಗರತಿಯಲ್ಲಿ ತೊಡಗಿರುವರೋ ಅವರ ಜೀವಕ್ಕಂತೂ ಇದು ಮಾರಕವಾಗಿಯೇ ಇದೆ. ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವವರ ಜೀವಕ್ಕೂ ಇದು ಅಪಾಯಕಾರಿಯಾಗಿದೆ.

4. ಸಲಿಂಗರತಿಯು ಸ್ವಾತಂತ್ರ್ಯದ ಭಾಗವಾಗಿದೆ ಎಂದು ಅವರು ಹೇಳುತ್ತಾರೆ. ಸ್ವಾತಂತ್ರ್ಯವನ್ನು ಉತ್ತಮ ಕಾರ್ಯನಡತೆಗಳತ್ತ ಉಪಯೋಗಿಸಿದಾಗ ಮಾತ್ರ ಆ ಸ್ವಾತಂತ್ರ್ಯಕ್ಕೆ ಬೆಲೆ ಇರುತ್ತದೆ. ಒಂದು ವೇಳೆ ಸಾಯುವುದು ನನ್ನ ಸ್ವಾತಂತ್ರ್ಯವೆಂದು ಹೇಳಿದರೆ ಅಂತಹ ಸ್ವಾತಂತ್ರ್ಯವನ್ನು ಕಾನೂನು ಜನರಿಗೆ ನೀಡದು.

5. ಇದು ಹುಟ್ಟು ಸ್ವಭಾವವೆಂದು ಅವರು ವಾದಿಸುತ್ತಾರೆ. ಆದರೆ ಹುಟ್ಟಿನೊಂದಿಗೆ ಬರುವ ಹೆಚ್ಚಿನ ಎಲ್ಲ ಕಾಯಿಲೆಗಳಿಗೆ ಇಂದು ಪೂರಕ ಚಿಕಿತ್ಸೆಗಳನ್ನು ನೀಡಿ ಗುಣಪಡಿಸಲಾಗುತ್ತಿಲ್ಲವೇ ಎಂಬುದನ್ನು ಯೋಚಿಸಬೇಕಿದೆ.

ಒಂದು ನಾಗರಿಕತೆಯ ಉಳಿವಿಗೆ ನೈಸರ್ಗಿಕ ಮತ್ತು ಆರೋಗ್ಯಕರ ಜೀವನಶೈಲಿಯು ಅತಿ ಪ್ರಮುಖವಾದುದು. ಒಂದು ಕೌಟುಂಬಿಕ ವ್ಯವಸ್ಥೆಯಲ್ಲಿ ಒಂದು ಮಗುವಿಗೆ ತಂದೆ ತಾಯಿ ಮತ್ತು ಕುಟುಂಬ ಜೀವನವು ನೀಡುವ ಪ್ರೀತಿ ಮತ್ತು ಭಾವ ನಾತ್ಮಕತೆಯು ಸಲಿಂಗರತಿ ವಿವಾಹಗಳಲ್ಲಿ ಸಿಗದೇ ಹೋಗಬಹುದು. ಜನನ ಪ್ರಮಾಣದಲ್ಲಿ ಕುಂಠಿತವಾಗುವುದು. ನಾಗರಿಕತೆಯ ಬೆಳ ವಣಿಗೆಯಲ್ಲಿ ಬೃಹತ್ ಪ್ರಮಾಣದ ನಾಶ-ನಷ್ಟಗಳು ಸಂಭವಿಸ ಬಹುದು. ಬೆಳವಣಿಗೆ ಮತ್ತು ಅಭಿವೃದ್ಧಿ ಹೆಸರಲ್ಲಿ ಹಾಗೂ ಪ್ರಗತಿ ಪರತೆಯ ಹೆಸರಲ್ಲಿ ಸ್ವಾಭಾವಿಕ ಜೀವನವನ್ನು ತಿರುಚಿ ನೂತನ ಕಾನೂನುಗಳಿಗೆ ಮನ್ನಣೆ ನೀಡಿದಾಗ ಮಾಧ್ಯಮಗಳು ಅದನ್ನು ಮಹತ್ತರ ವಿಜಯವೆಂಬಂತೆ ಬಣ್ಣಿಸುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮಾನವ ಹಕ್ಕುಗಳ ವಿಜಯವೆಂಬ ನಿಟ್ಟಿನಲ್ಲಿ ಮನ್ನಣೆ ನೀಡುತ್ತವೆ. ಆದರೆ ಇದರ ಹಿಂದೆ ಬಂಡವಾಳ ಹೂಡಿಕೆದಾರರು ತಮ್ಮ ಕೈಗಾರಿಕೀಕರಣವನ್ನು ಬೆಳೆಸಲು ದಾಪುಗಾಲಿರಿಸಿರುತ್ತಾರೆ. ಕಾನೂನಾತ್ಮಕ ವಾಗಿ ಪುರುಷ-ಪುರುಷರ ವಿವಾಹವನ್ನು ಮನ್ನಣೆ ನೀಡುವ ಮೂಲಕ ಅವರಲ್ಲಿ ಉಂಟಾಗುವ ಮಕ್ಕಳಿಗೆ ಅವರು ಉತ್ತಮ ಕೌಟುಂಬಿಕ ವಾತಾವರಣ ನೀಡಲು ಸಾಧ್ಯವಾಗದು. ಹೆಚ್ಚಿನ ಬಾರಿ ಮಕ್ಕಳ ಮೇಲೆ ದೌರ್ಜನ್ಯ ಪ್ರಮಾಣವೇ ಹೆಚ್ಚುತ್ತಾ ಹೋಗಬಹುದು. ಸಲಿಂಗರತಿಯಲ್ಲಿ ಅಪರಾಧ ಪ್ರಮಾಣವು ಹೆಚ್ಚಳವಾಗಿರುವುದು. ಹಲವಾರು ಮಾರಕ ರೋಗಗಳು ಸಮಾಜದಲ್ಲಿ ಹರಡಿಕೊಳ್ಳಬಹುದು. ಇಂತಹ ಎಲ್ಲ ಬೆಳವಣಿಗೆಗಳಿಗೆ ಕಾನೂನು ಯಾವ ರೀತಿಯ ತೀರ್ಪುಗಳನ್ನು ಹೊರತರಬಹುದು? ಮತ್ತೊಮ್ಮೆ ಯೋಚಿಸಲೇಬೇಕಾದ ಅಂಶಗಳನ್ನು ಕಡಿಗಣಿಸುವುದು ಎಷ್ಟು ಸರಿ?

ಜನ್ಮಜಾತ ರೋಗವಾಗಿ ಒಂದು ವೇಳೆ ಸಲಿಂಗರತಿಯು ಬಂದಿದ್ದೇ ಆದಲ್ಲಿ ಅದನ್ನು ರೋಗವಾಗಿಯೇ ಪರಿಗಣಿಸಿ ಸೂಕ್ತ ಚಿಕಿತ್ಸೆ ನೀಡಬೇಕಿದೆಯೇ ಹೊರತು ಈ ಪ್ರಕ್ರಿಯೆಗೆ ಕಾನೂನಾತ್ಮಕ ಮನ್ನಣೆ ನೀಡಬೇಕಾದ ಅಗತ್ಯತೆ ಇಲ್ಲ.
(ಮುಂದುವರಿಯುವುದು)
ಕೃಪೆ: ಕಾರವಾನ್ ಡೈಲಿ