ನರೇಂದ್ರ ಮೋದಿ ಗೆದ್ದರಲ್ಲ, ಹೇಗೆ?

0
745

ಏ.ಕೆ. ಕುಕ್ಕಿಲ

1. ನಿರುದ್ಯೋಗ

2. ಕೃಷಿ ಬಿಕ್ಕಟ್ಟು

3. ಬೆಲೆ ಹೆಚ್ಚಳ

ಈ ಮೂರನ್ನೂ ನಗಣ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಧ್ಯವಾದದ್ದು ಹೇಗೆ? ಕೃಷಿ ಬಿಕ್ಕಟ್ಟು, ಬೆಲೆ ಹೆಚ್ಚಳ ಮತ್ತು ನಿರುದ್ಯೋಗ ಇವು ಮೂರೂ ಮಧ್ಯಮ, ಮೇಲ್ಮಧ್ಯಮ ಮತ್ತು ತಳ ಸಮುದಾಯಕ್ಕೆ ಸಂಬಂಧಿಸಿದ ಸಂಕಟ ಗಳು. ಈ ದೇಶದಲ್ಲಿ ಯಾರು ಪ್ರಧಾನಿಯಾಗಬೇಕು, ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ತೀರ್ಮಾನಿಸುವ ಸಾಮಥ್ರ್ಯ ಈ ಬೃಹತ್ ಸಮೂಹದ ಕೈಯಲ್ಲಿದೆ. ಹೀಗಿದ್ದೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋ ದಿಯವರ ಮೇಲೆ ಈ ಸಮೂಹ ವಿಶ್ವಾಸ ತಾಳಿದುದು ಯಾವ ಕಾರಣದಿಂದ? ತನ್ನ ಚುನಾವಣಾ ಭಾಷಣದಲ್ಲಿ ನರೇಂದ್ರ ಮೋದಿಯವರು ಈ ಮೇಲಿನ ಮೂರೂ ವಿಷಯಗಳ ಮೇಲೆ ಮಾತಾಡಿದ್ದು ಬಹಳ ಬಹಳ ಕಡಿಮೆ. ತಮ್ಮ ಅಷ್ಟೂ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ನೋಟು ನಿಷೇಧ ಎಂಬ ಪದವನ್ನು ಉಲ್ಲೇಖಿಸಿದ್ದು ಬರೇ ಎರಡು ಬಾರಿ. ಹೀಗಿದ್ದೂ ಅವರು ಗೆದ್ದರಲ್ಲ, ಹೇಗೆ?

1. ನರೇಂದ್ರ ಮೋದಿಯವರಿಗೆ ಸರಿಸಮಾನವಾದ ನಾಯಕನನ್ನು ತೋರಿಸಲು ವಿರೋಧ ಪಕ್ಷಗಳು ವಿಫಲವಾದುದು ಇದಕ್ಕಿರುವ ಮೊದಲ ಕಾರಣ. ವಿರೋಧ ಪಕ್ಷಗಳು ಎಷ್ಟು ಚೆಲ್ಲಾಪಿಲ್ಲಿಯಾಗಿದ್ದುವು ಅಂದರೆ ಅಲ್ಲಿ ಪ್ರತಿಯೊಬ್ಬರೂ ಪ್ರಧಾನಿ ಅಭ್ಯರ್ಥಿಯಾಗಿಯೇ ಬಿಂಬಿಸಿಕೊಂಡರು. ಡಿ.ಎಂ.ಕೆ. ಪಕ್ಷವನ್ನು ಬಿಟ್ಟರೆ ಉಳಿದಂತೆ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳುವುದಕ್ಕೆ ಇತರ ಪಕ್ಷಗಳು ಹಿಂಜರಿದುವು. ಮಾಯಾವತಿ, ಮಮತಾ ಬ್ಯಾನರ್ಜಿ, ದೇವೇಗೌಡ, ಶರದ್ ಪವಾರ್ ಮುಂತಾದವರ ಹೆಸರುಗಳನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಧ್ಯಮಗಳು ತೇಲಿಸಿ ಬಿಟ್ಟವು. ಅಲ್ಲದೇ, ಈ ನಾಯಕರೂ ಅದನ್ನು ಒಳಗೊಳಗೇ ಆನಂದಿಸಿದರು. ಇದಕ್ಕೆ ವಿರುದ್ಧವಾಗಿ ನರೇಂದ್ರ ಮೋದಿಯವರು ತನ್ನನ್ನು ಬಲಿಷ್ಠ ನಾಯಕ ಎಂದು ಘೋಷಿಸಿಕೊಂಡರು. ಇದಕ್ಕೆ ಪುರಾವೆಯಾಗಿ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್‍ನ ಮೇಲೆ ನಡೆಸಲಾದ ವಾಯುದಾಳಿಯನ್ನು ಜನರ ಮುಂದಿಟ್ಟರು. ಇದರ ಜೊತೆಗೇ ಉರಿ ದಾಳಿಗೆ ಪ್ರತೀಕಾರವಾಗಿ 2016 ಸೆಪ್ಟೆಂಬರ್‍ನಲ್ಲಿ ನಡೆಸಲಾದ ಸರ್ಜಿಕಲ್ ದಾಳಿಯನ್ನೂ ಜನರೊಂದಿಗೆ ಹಂಚಿಕೊಂಡರು. ‘ಘರ್‍ಮೆ ಗುಸ್‍ಕರ್ ಮಾರೂಂಗಾ’ ಮತ್ತು ‘ಗೋಲಿ ಕೆ ಜವಾಬ್ ಗೋಲಾ ಸೆ ದಿಯಾ ಜಾಯೆಗಾ’ ಎಂಬ ನುಡಿಗಟ್ಟುಗಳನ್ನು ಜನರ ಬಾಯಿಗಿಟ್ಟರು. ಅಗತ್ಯ ಬಿದ್ದರೆ ಅಣುಬಾಂಬನ್ನೂ ಪ್ರಯೋಗಿಸುವೆ ಎಂಬ ಆವೇಶ ತೋರ್ಪಡಿಸಿದರು. ನಿಜವಾಗಿ, ಚರ್ಚೆಯಾಗಬೇಕಿ ದ್ದುದು ಪುಲ್ವಾಮ ದಾಳಿಯ ಬಗ್ಗೆ. ನರೇಂದ್ರ ಮೋದಿಯವರು ಬಲಿಷ್ಠ ನಾಯಕನೇ ಆಗಿದ್ದಿದ್ದರೆ ಪುಲ್ವಾಮದಲ್ಲಿ 40 ಯೋಧರ ಹತ್ಯೆ ಹೇಗಾಯಿತು ಎಂಬ ಪ್ರಶ್ನೆ ಮುನ್ನೆಲೆಗೆ ಬರಬೇಕಾದುದು ಸಹಜ. ರಾಷ್ಟ್ರೀಯ ಭದ್ರತೆ ಮತ್ತು ಬಲಿಷ್ಠ ನಾಯಕತ್ವ ಎಂಬುದು ತೋಳ್ಬಲದ ಪ್ರದರ್ಶನವಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುವುದಕ್ಕೆ ಪುಲ್ವಾಮ ಮುಖ್ಯವಾಗಿತ್ತು. ಆದರೆ, ಅಂಥ ಪ್ರಶ್ನೆ ಯನ್ನು ಎತ್ತುವ ಸಂದರ್ಭವನ್ನೇ ಅವರು ವಿರೋಧ ಪಕ್ಷಗಳಿಗೆ ನೀಡಲಿಲ್ಲ. ಚೌಕಿದಾರ್‍ನಿಂದ ಅವರು ಬಾಲಾಕೋಟ್‍ಗೆ ನೆಗೆದರು. ರಫೇಲ್‍ನ ಬಗ್ಗೆ ಪ್ರಶ್ನಿಸುವಾಗ ರಾಜೀವ್ ಗಾಂಧಿಯನ್ನು ಮುನ್ನೆಲೆಗೆ ತಂದರು. ತನ್ನ ವಿರುದ್ಧ ವಿರೋಧ ಪಕ್ಷಗಳು ಮಾಡಿರುವ ಟೀಕೆಯನ್ನೇ ಭಾಷಣವನ್ನಾಗಿ ಮಾಡಿದರು. ಇದನ್ನು ಹೆಕ್ಕಿಹೆಕ್ಕಿ ಉತ್ತರಿಸಬೇಕಾದರೆ ವಿರೋಧಿ ಕೂಟದಲ್ಲಿ ಬಲಿಷ್ಠ ಮತ್ತು ಸರ್ವಾಂಗೀಕೃತ ನಾಯಕರಿರಬೇಕು. ತಾನು ಎಲ್ಲರ ಒಪ್ಪಿಗೆಯ ನಾಯಕ ಹೌದೋ ಅಲ್ಲವೋ ಎಂಬ ಸಂದೇಹ ರಾಹುಲ್ ಗಾಂಧಿಗೆ ಆರಂಭದಿಂದಲೂ ಇತ್ತು. ಬಲಿಷ್ಠ ನಾಯಕತ್ವ ಎಂಬ ಮೋದಿಯವರ ಮಾತಿಗೆ ಪ್ರತಿಯಾಗಿ ಅವರು ಏನನ್ನೂ ಹೇಳದೆಯೇ ಇಶ್ಶೂ ಬದಲಿಸಲು ನೋಡಿದರು. ಮೋದಿಯವರಿಗೆ ಪ್ರತಿ ಏಟು ಕೊಡುವ ಬದಲು ರಕ್ಷಣಾತ್ಮಕವಾಗಿ ಮಾತಾಡಿದರು. ಎಲ್ಲಿಯವರೆಗೆಂದರೆ ‘ಸರ್ಜಿಕಲ್ ಸ್ಟ್ರೈಕ್ ನಾವು ಮಾಡಿದ್ದೀವಿ’ ಎಂದು ಸಮರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ಅವರ ಧ್ವನಿ ಕ್ಷೀಣವಾಯಿತು. ಒಂದುರೀತಿಯಲ್ಲಿ, ಪುಲ್ವಾಮದ ಬಳಿಕ ಬೆಳವಣಿಗೆಗಳನ್ನು ಬಳಸಿಕೊಂಡು ನರೇಂದ್ರ ಮೋ ದಿಯವರು ಈ ದೇಶಕ್ಕೆ ಬಲಿಷ್ಠ ನಾಯಕನ ಅಗತ್ಯವಿದೆ ಮತ್ತು ಆ ಬಲಿಷ್ಠ ನಾನೇ ಎಂದು ಮತದಾರರಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿರುವಂತೆಯೇ ರಾಹುಲ್ ಮತ್ತು ವಿರೋಧ ಪಕ್ಷಗಳು ಅದಕ್ಕೆ ಎದುರೇಟು ನೀಡಲು ಮತ್ತು ಪ್ರತಿ ನಾಯಕ ನನ್ನು ಸೃಷ್ಟಿಸಲು ವಿಫಲವಾದುವು. ನಿಜವಾಗಿ, ಈ ವಿಷಯದಲ್ಲಿ ಮೋದಿ ಒಂಟಿಯಲ್ಲ. ಕಳೆದ 5-6 ವರ್ಷಗಳಲ್ಲಿ ವಿಶ್ವದಾದ್ಯಂತ ನಡೆಯುತ್ತಿರುವ ಬೆಳವಣಿಗೆ ಇದು. ಅಮೇರಿಕ, ರಷ್ಯಾ, ಬ್ರೆಝಿಲ್, ಫಿಲಿಪ್ಪೀನ್ಸ್, ಹಂಗರಿ, ಪೋಲ್ಯಾಂಡ್ ಮುಂತಾದ ರಾಷ್ಟ್ರಗಳಲ್ಲಿ ‘ಬಲಿಷ್ಠ ನಾಯಕ’ ಎಂಬುದು ಒಂದು ಮಂತ್ರವಾಗಿ ಬಿಟ್ಟಿದೆ. ಇವರ ಕಾರ್ಯಶೈಲಿ ಹೇಗಿದೆ ಎಂದರೆ, ನಿಯಮಬದ್ಧ ಸಂಸ್ಥೆಗಳನ್ನು ನಿರ್ಲಕ್ಷಿಸುತ್ತಾರೆ. ಸಿದ್ಧ ಮಾದರಿಯನ್ನು ವ್ಯಂಗ್ಯ ಮಾಡುತ್ತಾರೆ. ಇತರರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಾರೆ. ಪ್ರಜಾತಂತ್ರ ಆಡಳಿತ ವಿಧಾನವನ್ನು ಅಸಹನೆಯಿಂದ ನೋಡುತ್ತಾರೆ. ಮೋದಿಯವರ ಈ ಪ್ರಚಾರ ಶೈಲಿ ಜನರ ಮೇಲೆ ತೀವ್ರ ಪರಿಣಾಮ ಬೀರಿದೆ ಎಂಬುದಕ್ಕೆ ‘ದಿ ಹಿಂದೂ-ಸಿಎಸ್‍ಡಿಎಸ್ ಲೋಕನೀತಿ’ ನಡೆಸಿರುವ ಸಮೀಕ್ಷೆಯೇ ಸಾಕ್ಷಿ. ಮೋದಿಯವರಿಗೆ ಮತ ಹಾಕಿದ ಯುವ ಮತದಾರರ ಪೈಕಿ ಪ್ರತಿ ಮೂವರಲ್ಲಿ ಒಬ್ಬರು ಪ್ರಧಾನಿ ಅಭ್ಯರ್ಥಿಯೇ ಮುಖ್ಯ ವಿಷಯ ಎಂದು ಅಭಿಪ್ರಾಯಪಟ್ಟರು. ಹಾಗೆಯೇ, ಮೋದಿ ಪ್ರಧಾನಿ ಅಭ್ಯರ್ಥಿ ಅಲ್ಲದಿರುತ್ತಿದ್ದರೆ ನಾವು ಬೇರೆ ಪಕ್ಷಗಳಿಗೆ ಮತ ಹಾಕುತ್ತಿದ್ದೆವು ಎಂದು ಯುವ ಮತದಾರ ರಲ್ಲಿ 33% ಮಂದಿ ಹೇಳಿಕೊಂಡರು. ಹರ್ಯಾಣ, ರಾಜಸ್ತಾನ, ಉತ್ತರಾಖಂಡ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದ ಯುವ ಸಮೂಹದಲ್ಲಿ ಮೋದಿಯವರ ಜನಪ್ರಿಯತೆಯು ರಾಷ್ಟ್ರೀಯ ಸರಾಸರಿಗಿಂತ ಅಧಿಕವಿದೆ ಅನ್ನುವುದು ಇಲ್ಲಿ ಉಲ್ಲೇಖನೀಯ.

2. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಪ್ರದರ್ಶಿಸಿದ ಒಗ್ಗಟ್ಟನ್ನು ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ಪ್ರದರ್ಶಿಸಲೇ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೇಜ್ರಿವಾಲ್, ಸೀತಾರಾಮ್ ಯೆಚೂರಿ, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಮಾಯಾವತಿ ಮುಂತಾದವರು ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದು ಆ ವೇದಿಕೆಗಷ್ಟೇ ಸೀಮಿತವಾಯಿತು. ಕಾಂಗ್ರೆಸನ್ನು ಕೈಬಿಟ್ಟು ಎಸ್‍ಪಿ-ಬಿಎಸ್‍ಪಿಗಳು ಮೈತ್ರಿ ಮಾಡಿಕೊಂಡವು. ಅದೇವೇಳೆ, ಪಶ್ಚಿಮ ಬಂಗಾಲದಲ್ಲಿ ತೃಣಮೂಲ, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್‍ಗಳು ಮುಖ ತಿರುಗಿಸಿ ಕೊಂಡು ನಿಂತವು. ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಹಾಗೂ ಬಿಎಸ್‍ಪಿ ಮೈತ್ರಿ ಮಾಡಿಕೊಳ್ಳಲಿಲ್ಲ. ಕೇಜ್ರಿವಾಲ್‍ರ ಎಎಪಿಗೂ ಕಾಂಗ್ರೆಸ್‍ಗೂ ನಡುವೆ ಹೊಂದಾಣಿಕೆಯಾಗಲಿಲ್ಲ. ಕಾಂಗ್ರೆಸ್ ಮತ್ತು ಎನ್‍ಸಿಪಿ ರಾಷ್ಟ್ರಮಟ್ಟದಲ್ಲಿ ಮೈತ್ರಿ ಪಕ್ಷಗಳಾಗಿದ್ದರೂ ಗುಜರಾತ್‍ನಲ್ಲಿ ಪರಸ್ಪರ ವಿರುದ್ಧ ಸ್ಪರ್ಧಿಸಿದುವು. ವಿರೋಧ ಪಕ್ಷಗಳ ನಡುವಿನ ಈ ಅನೈಕ್ಯವನ್ನು ಮೋದಿಯವರು ಪರಿಣಾಮ ಕಾರಿಯಾಗಿ ವ್ಯಂಗ್ಯಕ್ಕೆ ಗುರಿಪಡಿಸಿದರು. ಮಹಾ ಕಲಬೆರಕೆ ಮೈತ್ರಿಕೂಟ ಎಂದು ಜರೆದರು.

3. ಬಿಜೆಪಿಯ- ಬಹುಸಂಖ್ಯಾತ ಧ್ರುವೀಕರಣ ರಾಜಕಾರಣಕ್ಕೆ ಪ್ರತಿಯಾಗಿ ರಾಷ್ಟ್ರೀಯ ಪಕ್ಷವೆಂಬ ನೆಲೆಯಲ್ಲಿ ಕಾಂಗ್ರೆಸ್ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸದೇ ಇದ್ದುದೂ ಮೋದಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. ರಾಹುಲ್ ಗಾಂಧಿಯವರು ಕೇರಳದ ವಯನಾಡ್‍ನಲ್ಲಿ ಸ್ಪರ್ಧಿಸುವುದನ್ನು ನರೇಂದ್ರ ಮೋದಿಯವರು ಪ್ರಶ್ನಿಸಿದ ರೀತಿ ಧ್ರುವೀಕರಣ ರಾಜಕೀಯಕ್ಕೆ ಸ್ಪಷ್ಟ ಉದಾಹರಣೆಯಾಗಿತ್ತು. ಬಹುಸಂಖ್ಯಾತರಿರುವ ಅಮೇಥಿಯಿಂದ ಅಲ್ಪಸಂಖ್ಯಾತರಿರುವ ವಯ ನಾಡ್‍ಗೆ ರಾಹುಲ್ ಗಾಂಧಿ ಪಲಾಯನ ಮಾಡಿದರು ಎಂದವರು ಕುಟುಕಿದರು. ಕುಂಭಮೇಳದ ಸಮಯದಲ್ಲಿ ಮೋದಿಯವರು ಸಂಗಮ ಸ್ಥಳವಾದ ಪ್ರಯಾಗ್‍ರಾಜ್‍ನಲ್ಲಿ ಮಿಂದರು. ವಾರಣಾಸಿಯ ಗಂಗಾನದಿಯಲ್ಲಿ ಮತ್ತೆಮತ್ತೆ ಆರತಿ ಎತ್ತಿದರು. ನಾಮಪತ್ರ ಸಲ್ಲಿಸುವುದಕ್ಕಿಂತ ಹಿಂದಿನ ದಿನವೂ ಅವರು ಆರತಿ ಎತ್ತಿದರು. ಮೇ 18ರ ಕೊನೆ ಹಂತದ ಮತದಾನಕ್ಕಿಂತ ಒಂದುದಿನ ಮೊದಲು ಕೇದಾರನಾಥ ಗುಹೆಯಲ್ಲಿ ಕೇಸರಿ ಬಟ್ಟೆಯುಟ್ಟುಕೊಂಡು ಧ್ಯಾನ ನಿರತರಾದರು. ಅದನ್ನು ಈ ದೇಶದ ಮುಖ್ಯ ವಾಹಿನಿಯ ಮಾಧ್ಯಮಗಳು ಲಕ್ಷಾಂತರ ಮನೆಗಳಿಗೆ ನೇರವಾಗಿ ದಾಟಿಸಿದುವು. ಬಿಜೆಪಿಯ ಯುವ ಮೋರ್ಚಾವು ‘ಮೋದಿ ಯುವ ಶಕ್ತಿ’ ಎಂಬ ಅಭಿಯಾನವನ್ನು ದೇಶದಾದ್ಯಂತ ನಡೆಸಿತು. ನಿಜವಾಗಿ, ಯುವ ಮತದಾರರ ಮೇಲೆ ಬಿಜೆಪಿಯು 2017ರಲ್ಲೇ ಒಂದು ಕಣ್ಣಿಟ್ಟಿತ್ತು. 2017 ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮೋದಿಯವರು ಯುವ ಸಮೂಹದ ಭಾವನೆಗಳಿಗೆ ಲಗ್ಗೆ ಹಾಕಿದ್ದರು. ‘ಈ ಶತಮಾನದ ಆರಂಭದಲ್ಲಿ ಜನಿಸಿದ ಯುವ ಸಮೂಹವೇ, ನೀವು 18 ವರ್ಷಕ್ಕೆ ಕಾಲಿಡುತ್ತಿದ್ದೀರಿ. ನೀವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಿ. ಭಾರತದ ಭವಿಷ್ಯ ಬರೆಯುವ ನಿಮಗೆ ಸ್ವಾಗತ’ ಎಂದು ಅವರ ಮನ ಗೆಲ್ಲಲು ಯತ್ನಿಸಿದ್ದರು. ಅಂದಹಾಗೆ, ಬಹುಸಂಖ್ಯಾತರನ್ನು ಧ್ರುವೀಕರಿಸುವ ಬಿಜೆಪಿಯ ತಂತ್ರ ಎಷ್ಟು ಯಶಸ್ವಿಯಾಗಿದೆ ಅನ್ನುವುದಕ್ಕೆ ಹಿಂದೂ ಬಾಹುಳ್ಯವಿರುವ ಜಮ್ಮು ಮತ್ತು ಮುಸ್ಲಿಮ್ ಬಾಹುಳ್ಯವಿರುವ ಕಾಶ್ಮೀರವೇ ಸಾಕ್ಷಿ. ಜಮ್ಮು, ಉದಮ್‍ಪುರ ಮತ್ತು ಲಡಾಕ್ ಈ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಶಾಲಿಯಾದರೆ ಶ್ರೀನಗರ, ಬಾರಮುಲ್ಲ ಮತ್ತು ಅನಂತನಾಗ್ ಕ್ಷೇತ್ರಗಳಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಜಯಗಳಿಸಿತು. ಬಿಜೆಪಿಯ ಈ ಧ್ರುವೀಕರಣ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅತ್ಯಂತ ಹತಾಶ ನಿಲುವನ್ನು ಪ್ರದರ್ಶಿಸಿತು. ಕಳೆದ ಐದು ವರ್ಷಗಳಲ್ಲಿ ಬಿಜೆಪಿಯು ಸೆಕ್ಯುಲರಿಸಂ ಅನ್ನು ಬದಿಗೆ ತಳ್ಳಿದ್ದರೂ ಕಾಂಗ್ರೆಸ್ ಆ ಬಗ್ಗೆ ಭಾರತೀಯರನ್ನು ಎಚ್ಚರಿಸುವ ಮತ್ತು ಸೆಕ್ಯುಲರ್ ರಾಷ್ಟ್ರೀಯತೆಯ ಅಗತ್ಯವನ್ನು ಎತ್ತಿಹಿಡಿಯುವ ಗಂಭೀರ ಪ್ರಯತ್ನ ನಡೆಸಲೇ ಇಲ್ಲ. ಸೆಕ್ಯುಲರಿಸಂ ನಿಂದ ಅಲ್ಪಸಂಖ್ಯಾತರವರೆಗೆ ಅದು ಒಂದು ರೀತಿಯ ಮೌನವನ್ನು ಪಾಲಿಸುತ್ತಾ ಬಂತು. ಕಾಂಗ್ರೆಸ್‍ನ ಏಳಿಗೆಯ ದೃಷ್ಟಿಯಿಂದ ಈ ಎರಡೂ ವಿಷಯಗಳಲ್ಲಿ ಸ್ಪಷ್ಟ ಧೋರಣೆಯನ್ನು ತಳೆಯಬೇಕಾದುದು ಬಹುಮುಖ್ಯವಾಗಿತ್ತು. ರಾಹುಲ್ ಗಾಂಧಿಯವರು ಮಂದಿರಗಳಿಗೆ ಪದೇ ಪದೇ ಭೇಟಿ ಕೊಟ್ಟರಾದರೂ ಹಿಂದುತ್ವ ಮತ್ತು ಹಿಂದೂಯಿಸಂನ ನಡುವಿನ ಅಂತರ ಮತ್ತು ವ್ಯತ್ಯಾಸವನ್ನು ಪರಿಣಾಮಕಾರಿಯಾಗಿ ಹೇಳುವಲ್ಲಿ ವಿಫಲರಾದರು ಅಥವಾ ಅವರ ಪಕ್ಷ ಅವರ ನಡವಳಿಕೆಯನ್ನು ಮೌನದಿಂದ ವೀಕ್ಷಿಸುವುದರ ಹೊರತಾಗಿ ಏನನ್ನೂ ಮಾಡಲಿಲ್ಲ. ಇದೂ ಜನರ ಮೇಲೆ ಪರಿಣಾಮ ಬೀರಿತು. ಬಿಜೆಪಿ ಪ್ರತಿಪಾದಿಸುವ ಹಿಂದುತ್ವವೇ ನಿಜವಾದ ಹಿಂದೂಯಿಸಂ ಎಂದು ಜನರು ನಂಬಿದರು ಮತ್ತು ಈ ವಿಷಯದಲ್ಲಿ ಹೆಚ್ಚು ಬದ್ಧತೆ ವ್ಯಕ್ತಪಡಿಸುತ್ತಿರುವ ಬಿಜೆಪಿಯ ಮೇಲೆ ವಿಶ್ವಾಸ ವ್ಯಕ್ತ ಪಡಿಸಿದರು. ಅಲ್ಲದೇ, ಕಾಂಗ್ರೆಸ್ ತನ್ನ ಕಾರ್ಯಕರ್ತರ ಪಡೆಯನ್ನು ಕಟ್ಟುವಲ್ಲಿ ಮತ್ತು ಸಂಯೋಜಿಸುವಲ್ಲಿ ತೀವ್ರ ಹಿನ್ನಡೆ ಅನುಭವಿಸಿತು. 2004ರಿಂದ 2014ರ ನಡುವೆ ಈ ವಿಷಯದಲ್ಲಿ ಗಾಢ ನಿರ್ಲಕ್ಷ್ಯ ತೋರಲಾಯಿತು. ಇದಕ್ಕೆ ಹೋಲಿಸಿದರೆ, ಬಿಜೆಪಿ ಬಹಳ ಮುಂದಿತ್ತು. ತನ್ನ ಪರಿವಾರ ಸಂಘಟನೆಗಳ ಮೂಲಕ ಹಳ್ಳಿ, ಗ್ರಾಮ ಮತ್ತು ಪಟ್ಟಣಗಳಲ್ಲಿ ಕಾರ್ಯಕರ್ತರ ಪಡೆಯನ್ನು ಯಶಸ್ವಿಯಾಗಿ ಅದು ಕಟ್ಟಿಕೊಂಡಿತು. ಧಾರ್ಮಿಕ ಕ್ಷೇತ್ರಗಳನ್ನು ಬಿಜೆಪಿಯು ಇದಕ್ಕಾಗಿ ಬಳಸಿಕೊಂಡಿತು. ಇದರ ಜೊತೆಗೇ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಪ್ರಸ್ತುತಪಡಿಸಿದ NYAY (ನ್ಯಾಯ್) ಯೋಜನೆಯು ಜನರಿಗೆ ತಲುಪುವಲ್ಲಿ ವಿಫಲವಾಯಿತು. 20% ಬಡಕುಟುಂಬಗಳಿಗೆ ಪ್ರತಿ ತಿಂಗಳು 6000 ರೂಪಾಯಿಯಂತೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವ ಈ ಯೋಜನೆಯು ವಿಶಿಷ್ಟವಾಗಿದ್ದರೂ ಅದನ್ನು ಚುನಾವಣೆಯ ಕೊನೆಕ್ಷಣದಲ್ಲಿ ಘೋಷಿಸಿದುದು ಕಾಂಗ್ರೆಸ್‍ಗೆ ಮುಳುವಾಯಿತು. ಪ್ರಿಯಾಂಕಾ ಗಾಂಧಿಯನ್ನು ಅಖಾಡಕ್ಕೆ ತಂದುದೂ ಕೊನೆಕ್ಷಣದಲ್ಲಿ.

4. ಬಿಜೆಪಿಗೂ ಮಹಿಳೆಯರಿಗೂ ಈವರೆಗೆ ಸಂಬಂಧ ಅಷ್ಟಕ್ಕಷ್ಟೇ ಇತ್ತು. ಆದರೆ ಈ ಬಾರಿ ದೊಡ್ಡ ಮಟ್ಟದಲ್ಲಿ ಮಹಿಳೆಯರು ಅದರಲ್ಲೂ ಯುವತಿಯರು ಬಿಜೆಪಿಯನ್ನು ಬೆಂಬಲಿಸಿದರು. ಈ ಬಾರಿ 66.79% ಪುರುಷರು ಮತ ಚಲಾಯಿಸಿದ್ದರೆ 66.68% ಮಹಿಳೆಯರು ಮತ ಚಲಾಯಿಸಿದ್ದರು. ಪುರುಷರಿಗೆ ಸರಿಸಮಾನವಾಗಿ ಚಲಾಯಿಸಲಾದ ಈ ಮತವೂ ಫಲಿತಾಂಶದ ನಿರ್ಣಯದಲ್ಲಿ ಮುಖ್ಯ ಪಾತ್ರ ನಿರ್ವಹಿಸಿತು. ಉಜ್ವಲ್ ಯೋಜನೆಯ ಅಡಿಯಲ್ಲಿ ಮನೆಮನೆಗೆ ಉಚಿತ ಗ್ಯಾಸ್ ಸಿ ಲಿಂಡರ್ ಹಂಚಿದ್ದು ಮತ್ತು ಸ್ವಚ್ಛ ಭಾರತ್ ಮಿಶನ್ ಗ್ರಾಮೀಣ್ ಯೋಜನೆಯಡಿಯಲ್ಲಿ ಶೌಚಾಲಯ ಕಟ್ಟಿಸಿಕೊಟ್ಟದ್ದು ಬಿಜೆಪಿಯನ್ನು ಮಹಿಳೆಯರಿಗೆ ಹತ್ತಿರಗೊಳಿಸಿತು. ಜೊತೆಗೇ ಅಬ್ಬರದ ಪ್ರಚಾರ ಮತ್ತು ಪ್ರತಿ ಯೋಜನೆಗೂ ನೀಡಲಾದ ಜಾಣತನದ ಹೆಸರುಗಳೂ ಬಿಜೆಪಿ ಗೆಲುವಿನಲ್ಲಿ ತಮ್ಮದೇ ಪಾತ್ರವನ್ನು ವಹಿಸಿದವು. 2014ರ ಲೋಕಸಭಾ ಚುನಾವಣೆ ಯಲ್ಲಿ 5 ಸಾವಿರ ಕೋಟಿ ರೂಪಾಯಿಯನ್ನು ಜಾಹೀರಾತಿಗೆ ಖರ್ಚು ಮಾಡಿದ್ದ ಬಿಜೆಪಿಯು 2018ರಲ್ಲಿ 5 ರಾಜ್ಯಗಳ ಚುನಾವಣೆಗಾಗಿ ಓeಣಜಿಟix, ಅoಟgಚಿಣe ಮತ್ತು ಡೆಟಾಲ್‍ಗಳು ಟಿ.ವಿ. ಜಾಹೀರಾತಿಗೆ ವ್ಯಯಿಸಿದ ಹಣಕ್ಕಿಂತ ಹೆಚ್ಚು ಖರ್ಚು ಮಾಡಿತು. ಜೊತೆಗೇ ಮುಖ್ಯವಾಹಿನಿಯ ಮಾಧ್ಯಮಗಳು ಬಿಜೆಪಿಯ ಐಟಿ ಸೆಲ್‍ನಂತೆ ಕಾರ್ಯನಿರ್ವಹಿಸಿದುವು. ಮೋದಿಯವರ ಫೋಟೋ ಗಳು ಎಲ್ಲೆಡೆಯೂ ಕಾಣುವಂತೆ ನೇತು ಹಾಕುವ ತಂತ್ರವೂ ಯಶಸ್ವಿಯಾಯಿತು. ಕಚೇರಿಗಳಲ್ಲಿ, ಪೆಟ್ರೋಲ್ ಪಂಪ್, ಕ್ಯಾಲೆಂಡರ್, ವಿಮಾನ ನಿಲ್ದಾಣದ ಬಿಲ್ ಬೋರ್ಡ್‍ನಲ್ಲಿ, ರೈಲ್ವೇ ಮತ್ತು ಬಸ್ ನಿಲ್ದಾಣಗಳಲ್ಲಿ ಹೀಗೆ ಎಲ್ಲೆಲ್ಲೂ ಮೋದಿಯವರು ಕಾಣಿಸಿಕೊಂಡರು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನಾ, ಪ್ರಧಾನಮಂತ್ರಿ ಆವಾಸ್ ಯೋಜನಾ, ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನಾ, ಪ್ರಧಾನಮಂತ್ರಿ ಜನಧನ್ ಯೋಜನಾ, ಪ್ರಧಾನಮಂತ್ರಿ ಉಜ್ವಲ್ ಯೋಜನಾ, ಪ್ರಧಾ ನಮಂತ್ರಿ ಗ್ರಾಮ ಸಡಕ್ ಯೋಜನಾ.. ಮುಂತಾಗಿ ಪ್ರತಿಯೊಂದರಲ್ಲೂ ಪ್ರಧಾನಿಯನ್ನು ಸ್ಮರಿಸುವ ತಂತ್ರ ಹೆಣೆಯಲಾಯಿತು. ಇದರ ಜೊತೆಗೇ ವಿರೋಧ ಪಕ್ಷಗಳ ನಕಾರಾತ್ಮಕ ಪ್ರಚಾರ ತಂತ್ರವೂ ಬಿಜೆಪಿಯ ಕೈ ಹಿಡಿಯಿತು. ಮೋದಿಯನ್ನೇ ಹಣಿಯಲು ಕಾದು ಕುಳಿತಂತೆ ವರ್ತಿಸಿದ ಮತ್ತು ಸ್ಪಷ್ಟ ಎಜೆಂಡಾ ಇಲ್ಲದೇ ಅಖಾಡಕ್ಕಿಳಿದ ವಿರೋಧ ಪಕ್ಷಗಳನ್ನು ಮತದಾರರು ದ್ವೇಷಿಸತೊಡಗಿದರು. ಹಿಂದುಳಿದ ಜಾತಿ, ವರ್ಗಗಳು ಮತ್ತು ದಲಿತ ಸಮೂಹವೂ ಸೇರಿದಂತೆ ಎಲ್ಲವನ್ನೂ ಒಂದೇ ಕೊಡೆಯೊಳಗೆ ಸೇರಿಸುವುದು ಬಿಜೆಪಿಯ ಗುರಿಯಾಗಿತ್ತು. ಅದು ಈ ಬಾರಿ ಬಹುತೇಕ ಈಡೇರಿದೆ. ಜಾತಿರಹಿತ ಸಮೂಹವನ್ನು ಕಟ್ಟಿಕೊಂಡು ಅಧಿಕಾರದಲ್ಲಿ ಉಳಿಯುವ ಶ್ರಮವಂತೂ ಈಗ ಯಶಸ್ವಿಯಾಗಿದೆ. 18ರಿಂದ 22 ವರ್ಷದೊಳಗಿನ ಮತದಾರರ ಪೈಕಿ 41% ಮಂದಿ ಬಿಜೆಪಿಯನ್ನು ಈ ಬಾರಿ ಬೆಂಬಲಿಸಿದ್ದಾರೆ. ಇಲ್ಲಿ ಮುಖ್ಯವಾಗುವುದು ಈ ಮತದಾರರ ವಯಸ್ಸು. ಕಿರಿ ವಯಸ್ಸಿನ ಇವರನ್ನು ದೀರ್ಘ ಅವಧಿವರೆಗೆ ಬೆಂಬಲಿಗರಾಗಿ ಉಳಿಸಿಕೊಳ್ಳುವ ತಂತ್ರವನ್ನು ಬಿಜೆಪಿ ಖಂಡಿತ ಹೆಣೆಯಲಿದೆ. ಬಹುಸಂಖ್ಯಾತರನ್ನು ಧ್ರುವೀಕರಿಸಿ ಬಿಸಿರಕ್ತದ ಈ ಯುವಸಮೂಹವನ್ನು ತನ್ನ ಜೊತೆಯೇ ಇಟ್ಟುಕೊಳ್ಳುವ ಶ್ರಮವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ನಡೆಸಲಿದೆ.

ಆದ್ದರಿಂದ ಪಾಕಿಸ್ತಾನ ಮತ್ತು ಮುಸ್ಲಿಮರು ಮುಂದಿನ ದಿನಗಳಲ್ಲಿ ಸಾಕಷ್ಟು ಬೈಗುಳವನ್ನು ತಿನ್ನಬೇಕಾದೀತು.