ಕಿರುಚಾಟ, ಆರ್ಭಟಗಳೇ ನ್ಯೂಸ್ ಪ್ರೆಸೆಂಟೇಷನ್ ಗಳಲ್ಲ: ಟಿವಿ ಜರ್ನಲಿಸ್ಟ್ ಗಳೇ, ಒಮ್ಮೆ ಅಲ್ ಜಝೀರಾ ಚಾನೆಲನ್ನು ವೀಕ್ಷಿಸಿ- ಮಾಹಿತಿಪೂರ್ಣ ಬರಹ

0
1015

ಸನ್ಮಾರ್ಗ ವಾರ್ತೆ

– ದಿನೇಶ್ ಕುಮಾರ್ ದಿನೂ

ಕರೋನಾ‌ ವಿಷಯದಲ್ಲಿ ಮೀಡಿಯಾ ನಡೆದುಕೊಂಡ ರೀತಿ, ಜನರಲ್ಲಿ ಹುಟ್ಟಿಸಿದ ಭಯದ ಕುರಿತು ಬರೆದರೆ ಅದನ್ನು ಕೆಲವು ಉದಯೋನ್ಮುಖ ಟೀವಿ ಜರ್ನಲಿಸ್ಟ್ ಗಳು ಟೀಕಿಸಿ ಬರೆದ ಸ್ಕ್ರೀನ್ ಶಾಟ್ ಗಳನ್ನು ಗೆಳೆಯರು ಕಳುಹಿಸಿದ್ದರು. ಸಂತೋಷ, ತಮ್ಮನ್ನು ತಾವು, ಟೀವಿ ಪರದೆಯಲ್ಲಿ ಕುಳಿತ ಅವರ ಬಾಸ್ ಗಳನ್ನು ಡಿಫೆಂಡ್ ಮಾಡಿಕೊಳ್ಳುವ ಹಕ್ಕು ಅವರಿಗೆ ಇದ್ದೇ ಇದೆ,‌ ಮಾಡಿಕೊಳ್ಳಲಿ ತಪ್ಪೇನಿಲ್ಲ.

ಆದರೆ ಅವರಿಗೆ ನಾನು ಪ್ರೀತಿಯಿಂದ ಕೊಡುವ ಸಲಹೆ ಏನೆಂದರೆ ಒಂಚೂರು ಹೊರಜಗತ್ತನ್ನು ನೋಡಿಬನ್ನಿ. ಟೀವಿ ಮೀಡಿಯಾ ಅಂದರೆ ಕೇವಲ ಅರ್ನಾಬ್ ಗೋಸ್ವಾಮಿ, ಸುಧೀರ್ ಚೌಧರಿ ಅಲ್ಲ. ಕಿರುಚಾಟ, ಆರ್ಭಟಗಳೇ ನ್ಯೂಸ್ ಪ್ರೆಸೆಂಟೇಷನ್ ಗಳಲ್ಲ. ಜಗತ್ತಿನ ಅತ್ಯುತ್ತಮ ನ್ಯೂಸ್ ಪ್ರೆಸೆಂಟರ್ ಗಳ್ಯಾರೂ ಕೂಗುಮಾರಿಗಳಲ್ಲ. ನ್ಯೂಸ್ ಚಾನಲ್ ಗಳೆಂದರೆ ಬೋಧನೆ ಮಾಡುವ ಸತ್ಸಂಗಗಳೂ ಅಲ್ಲ, ದೇವರನ್ನು ಸಾಕ್ಷಾತ್ಕರಿಸಿಕೊಡುವ ಇವ್ಯಾಂಜಲಿಸ್ಟ್ ಗಳ ಶೋಗಳೂ ಅಲ್ಲ. ಸತ್ಯ ಏನಿದೆಯೋ ಅದನ್ನು ಜಗತ್ತಿನ ಮುಂದಿಡುವುದು ನಿಮ್ಮ ಕರ್ತವ್ಯ. ನೀವು ಯಾವಾಗ ಬ್ರೋಕರಿಕೆ ಕೆಲಸ ಶುರು ಮಾಡಿದಿರೋ ಆಗಲೇ ನಿಮ್ಮ ಸತ್ಯಾನ್ವೇಷಣೆಯ ಹಾದಿ ಬಂದ್ ಆಯಿತು. ಅಲ್ಲಿಗೆ ನಿಮ್ಮ ಜರ್ನಲಿಸಂ ಕೂಡ ಸತ್ತುಹೋಯಿತು‌.

ಬೇರೇನೂ ಬೇಡ, ಅಲ್ ಜಜೀರಾ ಒಂದನ್ನು ಗಮನಿಸಿ. ಅದು ಇರಾಕ್ ಮೇಲಿನ ಅಮೆರಿಕ ಮಿತ್ರಪಡೆಗಳ ಯುದ್ಧವನ್ನು ಕವರೇಜ್ ಮಾಡಿತು. ಅಫ್ಘಾನಿಸ್ತಾನದ ಯುದ್ಧವನ್ನು ವರದಿ ಮಾಡಿತು. ಜಗತ್ತಿನ ಯಾವ ಮಾಧ್ಯಮಗಳ ಕೈಗೂ ಸಿಗದ ಫುಟೇಜುಗಳು ಅವರ ಬಳಿ ಇದ್ದವು.‌ ಅಮೆರಿಕ ಅತ್ತ ಒಸಾಮಾ ಬಿನ್ ಲ್ಯಾಡೆನ್ ಗಾಗಿ ಅಫಘಾನಿಸ್ತಾದ ಗಲ್ಲಿಗಲ್ಲಿಯಲ್ಲಿ ಅಲೆಯುತ್ತಿದ್ದರೆ ಅವನ ವಿಡಿಯೋಗಳು ಅಲ್ ಜಜೀರಾದಲ್ಲಿ ಪ್ರಸಾರವಾಗುತ್ತಿದ್ದವು. ಒಸಾಮಾ ಸಂದರ್ಶಿಸಿದ ಅಲ್ ಜಜೀರಾ ವರದಿಗಾರನನ್ನು ಸ್ಪಾನಿಷ್ ಸರ್ಕಾರ ಬಂಧಿಸಿ, ಜೈಲಿಗೆ ಕಳಿಸಿ ನಂತರ ಬಿಟ್ಟುಕಳಿಸಿತು. ಒಸಾಮಾಗೆ ಇವನು ಕ್ಲೋಜು ಎಂಬುದು ಈ ಪತ್ರಕರ್ತನ ಮೇಲೆ ಹೇರಿದ ಆರೋಪವಾಗಿತ್ತು. ಜಗತ್ತಿನಾದ್ಯಂತ ಪತ್ರಕರ್ತರು ಅಂಡುಬಡಿದುಕೊಂಡು ನಕ್ಕರು. ಇಷ್ಟೆಲ್ಲ ಕಸುಬುದಾರಿಕೆ ಇದ್ದರೂ ಅವರು ಕಿರುಚಾಡದೇ, ಕೂಗಾಡದೆ ವರದಿ ಪ್ರಸಾರ ಮಾಡಿದರು. ಅನುಮಾನವಿದ್ದರೆ ಅಲ್ ಜಜೀರಾದ ಹಳೆಯ ಡಾಕ್ಯುಮೆಂಟರಿಗಳನ್ನೊಮ್ಮೆ ತೆರೆದುನೋಡಿ. ಅದರ ಸಾಹಸಗಾಥೆಗಳನ್ನೆಲ್ಲ ಒಂದು ಜರ್ನಲಿಸಂ ಕೋರ್ಸ್ ನಂತೆ ಓದಿಕೊಳ್ಳಿ.

ಅಲ್ ಜಜೀರಾ ಒಂದು ಮಹಾಸಾಹಸಿ ಪತ್ರಕರ್ತರ ತಂಡ. ಇರಾಕ್ ಯುದ್ಧದ ವೇಳೆ ಅಮೆರಿಕ ಬೇಕೆಂದೇ ಕಾಬೂಲ್ ನ ಅಲ್ ಜಜೀರಾ ಕಚೇರಿಯ ಮೇಲೆ ಬಾಂಬ್ ಎಸೆದು ಒಬ್ಬ ಪತ್ರಕರ್ತನನ್ನು ಕೊಂದುಹಾಕಿತು. ನಂತರ ಗೊತ್ತಾಗಲಿಲ್ಲ ಬಾಂಬ್ ಹಾಕಿಬಿಟ್ಟೆವು, ಸಾರಿ ಎಂದಿತು.‌ ಆದರೆ ಅಮೆರಿಕಕ್ಕೆ ಕತಾರ್ ಸರ್ಕಾರ ಅಲ್ ಜಜೀರಾ ಕಚೇರಿಯ ಮಾಹಿತಿ ಮೊದಲೇ ನೀಡಿತ್ತು. By mistake ಬಾಂಬ್ ಹಾಕುವ ಪ್ರಶ್ನೆಯೇ ಇರಲಿಲ್ಲ. ಈ ದಾಳಿ ಯಾಕೆ ನಡೆಯಿತೆಂದರೆ ಇರಾಕ್ ನಲ್ಲಿ ನಡೆದ ದಾಳಿಯ ಇಂಚಿಂಚು ಮಾಹಿತಿಯನ್ನು ಅಲ್ ಜಜೀರಾ ಬಯಲಿಗೆಳೆಯುತ್ತಿತ್ತು. ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಲಜ್ಜೆಯಿಂದ ತಲೆ ತಗ್ಗಿಸುವಂತಾಗಿತ್ತು

ಒಂದು ಟೀವಿ ಮಾಧ್ಯಮಕ್ಕೆ ಜಗತ್ತಿನ ನಾನಾ ದೇಶಗಳ ಸರ್ಕಾರಗಳಯ ಹೆದರುತ್ತವೆ ಅಂದರೆ ಅದರ ಪ್ರಭಾವಳಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಲ್ ಜಜೀರಾವನ್ನು ಸ್ಥಾಪಿಸಿದ್ದು ಕತಾರ್ ಸರ್ಕಾರ. ಆದರೆ ಅದು ಸಂಪಾದಕೀಯ ವಿಭಾಗಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿತು. ಎಲ್ಲಿಯವರೆಗೆ ಎಂದರೆ ಅಲ್ ಜಜೀರಾ ಕೆಲವು ಸಂದರ್ಭಗಳಲ್ಲಿ ಕತಾರ್ ಸರ್ಕಾರವನ್ನೇ ಟೀಕಿಸಿತು. ಕತಾರ್ ಒಂದು ದೇಶವಾಗಿ ತೆಗೆದುಕೊಂಡ ಅಂತಾರಾಷ್ಟ್ರೀಯ ಮಹತ್ವದ ವಿಷಯಗಳ‌ ನಿಲುವಿಗೆ ವಿರುದ್ಧವಾಗಿ ವಾದ ಮಂಡಿಸಿತು. ಜಗತ್ತಿನಾದ್ಯಂತ ಅದರ ಎಂಭತ್ತು ಬ್ಯೂರೋಗಳಿವೆ. ಎಲ್ಲಾದರೂ ಯುದ್ಧ, ದಂಗೆ ನಡೆಯುತ್ತದೆ ಎಂದರೆ ಮಿಲಿಟರಿ ಬರುವ ಮುನ್ನವೇ ಅಲ್ ಜಜೀರಾ ತನ್ನ ಕ್ಯಾಮೆರಾ ನೆಟ್ಟು ನಿಂತಿರುತ್ತದೆ.

ಅಲ್ ಜಜೀರಾ ಸುನ್ನಿಗಳ ಪರವಾಗಿಯೂ, ಶಿಯಾಗಳ ವಿರುದ್ಧವಾಗಿಯೂ ಇದೆ. ಅದು ಮುಸ್ಲಿಂ ಬ್ರದರ್ ಹುಡ್ ಬೆಂಬಲಿಸುತ್ತದೆ ಎಂಬ ಪುಕಾರುಗಳೆಲ್ಲ ಹುಟ್ಟಿಕೊಂಡವು. ಆದರೆ ಅಲ್ ಜಜೀರಾ ಜಗತ್ತಿನ ಯಾವ ಸಂಘರ್ಷವನ್ನು ವರದಿ ಮಾಡಿದರೂ ಎರಡೂ ಆಯಾಮಗಳನ್ನು ಮುಂದಿಡುತ್ತಿತ್ತು. ಪ್ಯಾಲೆಸ್ಟೈನ್ ನಲ್ಲಿ ಈಗಲೂ ಜನ ನೋಡುವುದು ಅಲ್ ಜಜೀರಾವನ್ನೇ, ಆದರೂ ಇಸ್ರೇಲ್ ಆಯಾಮಗಳನ್ನೂ ಅದು ಇಡುತ್ತ ಬಂದಿತ್ತು. ಇಸ್ರೇಲ್ ಪರವಾದ ಅಮೆರಿಕನ್ ಸಂಸ್ಥೆಗಳ ಒಳಗೆ ತನ್ನ ಅಂಡರ್ ಕವರ್ ವರದಿಗಾರನನ್ನು‌ ನುಗ್ಗಿಸಿ ಸ್ಫೋಟಕ ಮಾಹಿತಿಗಳನ್ನು ಹೊರತೆಗೆದು ಪ್ರಸಾರ ಮಾಡಿತು.

2017ರಲ್ಲಿ ಕತಾರ್ ಜತೆ ಜಗಳಕ್ಕೆ ನಿಂತಿದ್ದ ಸೌದಿ ಅರೇಬಿಯಾ, ಯುನೈಟೆಡ್ ಎಮಿರೇಟ್ಸ್‌, ಈಜಿಪ್ಟ್, ಬಹರೈನ್ ಸರ್ಕಾರಗಳು ಮಾತುಕತೆಗೆ ಕುಳಿತಾಗ ಇಟ್ಟ ಬೇಡಿಕೆಗಳಲ್ಲಿ ಒಂದು ಏನು ಗೊತ್ತೆ? ಮೊದಲು ಅಲ್ ಜಜೀರಾ ಬಂದ್ ಮಾಡಿ ಎಂಬುದು. ಆಗ ದಿ ಗಾರ್ಡಿಯನ್, ನ್ಯೂಯಾರ್ಕ್‌ ಟೈಂಸ್ ಸೇರಿದಂತೆ ಇಡೀ ಜಗತ್ತಿನ ದೊಡ್ಡದೊಡ್ಡ ಮಾಧ್ಯಮಸಂಸ್ಥೆಗಳು ಈ ದೇಶಗಳ ಬೇಡಿಕೆಯನ್ನು ತೀಕ್ಷ್ಣವಾಗಿ ಟೀಕಿಸಿದವು. ಆದರೂ ಸೌದಿ, ಯುಎಇಗಳು ಅಷ್ಟುಹೊತ್ತಿಗಾಗಲೇ ಅಲ್ ಜಜೀರಾ ವೆಬ್ ಸೈಟುಗಳನ್ನು ಬ್ಯಾನ್ ಮಾಡಿ ಕುಳಿತಿದ್ದವು. ರಿಯಾದ್ ನಲ್ಲಿನ ಅಲ್ ಜಜೀರಾ ಕಚೇರಿಯನ್ನು ಮುಚ್ಚಿಸಲಾಗಿತ್ತು. ಜೋರ್ಡಾನ್ ಅಲ್ ಜಜೀರಾಗೆ ಕೊಟ್ಟ ಲೈಸೆನ್ಸ್ ವಾಪಾಸ್ ಪಡೆಯಿತು.

ಅಲ್ ಜಜೀರಾ ನಿದ್ದೆಗೆಡಿಸುತ್ತ ಬಂದಿದ್ದು ಒಂದೊಂದು ದೇಶವನ್ನಲ್ಲ, ತಮಾಶೆ ಎಂದರೆ ಬಹಳ ಹಿಂದೆ 1999ರ ಜನವರಿ 27ರಂದು ಅಲ್ಜೀರಿಯಾದಲ್ಲಿ ಅಲ್ಲಿನ ಪ್ರಭುತ್ವ ವಿರೋಧಿ‌ ವರದಿ ಪ್ರಸಾರವಾಗುತ್ತದೆ ಎಂಬ ಕಾರಣಕ್ಕೆ ಇಡೀ ದೇಶದಲ್ಲಿ ಎಲೆಕ್ಟ್ರಿಸಿಟಿ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು! ಒಂದು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗೆ ಇದಕ್ಕಿಂತ ದೊಡ್ಡ ಯಶಸ್ಸು ಇನ್ನೇನಿರಲು ಸಾಧ್ಯ ಹೇಳಿ?

ಅಲ್ ಜಜೀರಾ ಇಷ್ಟೆಲ್ಲ ವಿರೋಧಗಳನ್ನು ಎದುರಿಸಿಯೂ ಇಡೀ ಮಧ್ಯಪ್ರಾಚ್ಯವನ್ನು ಆವರಿಸಿಕೊಂಡಿದೆ. ಅಷ್ಟೇ ಯಾಕೆ ಅದು ಅಮೆರಿಕ,‌ ಬ್ರಿಟನ್ ನಲ್ಲೂ ಜನಪ್ರಿಯ. ಭಾರತ ಮೂಲದವರಾದ (ಬ್ರಿಟಿಷ್ ಪ್ರಜೆ) ಮೆಹದಿ ಹಸನ್ ಎಂಬ ನ್ಯೂಸ್ ಪ್ರೆಸೆಂಟರ್ ಜತೆ ಐದು ನಿಮಿಷ ಟೀವಿ ಚರ್ಚೆಯಲ್ಲಿ ಭಾಗವಹಿಸಲು ಜಗತ್ತಿನ ನಾನಾ ಭಾಗದ ರಾಜಕೀಯ ಮುಖಂಡರು, ಸರ್ಕಾರಗಳ ಪ್ರತಿನಿಧಿಗಳು ಫ್ಲೈಟ್ ಹತ್ತಿ ಬರುತ್ತಾರೆ. ಮೆಹದಿ ಹಸನ್ ಕೂಡ ಕಿರುಚಾಡೋಲ್ಲ, ಪರಚಾಡೋಲ್ಲ. ಬಂದ ಅತಿಥಿಯ ಮುಂದೆ ದಾಖಲೆಗಳನ್ನಿಟ್ಟು ಅದರ ಹಿಂದೆ ದೊಡ್ಡ ಕನ್ನಡಿಯಿಟ್ಟು ನಿಮ್ಮ ಮುಖ ನೀವೇ ನೋಡಿಕೊಳ್ಳಿ ಎನ್ನುತ್ತಾರೆ. ಹಸನ್ ಮಾತ್ರವಲ್ಲ, ಅಲ್ ಜಜೀರಾದ ಇತರ ನ್ಯೂಸ್ ಆಂಕರುಗಳು ಒಂದು ತನ್ಮಯತೆಯಲ್ಲಿ ಶಾಂತಚಿತ್ತರಾಗಿ ಸುದ್ದಿಯನ್ನು ಮುಂದಿಡುತ್ತ ಹೋಗುತ್ತಾರೆ. ಅದರಿಂದಾಗಿಯೇ ಜಗತ್ತಿನ ನಾನಾ ದೇಶಗಳ ಸರ್ಕಾರಗಳು ಅಲ್ ಜಜೀರಾ ಎಂದರೆ ಬೆಚ್ಚಿ ಬೀಳುತ್ತವೆ.

ನಮ್ಮ ಉದಯೋನ್ಮುಖ ಪತ್ರಕರ್ತರಿಗೆ ನಾನು ಪ್ರೀತಿಯಿಂದ ಹೇಳೋದಿಷ್ಟೆ, ಹೊರಗೆ ಒಮ್ಮೆ ನೋಡಿ. ಅಲ್ ಜಜೀರಾ, ಬಿಬಿಸಿಯಂಥವನ್ನು ಗಮನಿಸಿ. ಅಲ್ಲಿನ ನ್ಯೂಸ್ ಪ್ರೆಸೆಂಟರ್ ಗಳನ್ನು ಫಾಲೋ ಮಾಡಿ. ಆಮೇಲೆ ನಾನು ಯಾಕೆ, ನೀವೇ ಈ ಕೂಗುಮಾರಿಗಳನ್ನು ಕಂಡರೆ ವ್ಯಾಕ್ ಅಂತೀರ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.