ದಿಗ್ಬಂಧನದ 4 ವರ್ಷಗಳ ಬಳಿಕ ಸೌದಿಗೆ ಭೇಟಿ ನೀಡಿದ ಕತಾರ್ ದೊರೆ

0
263

ಸನ್ಮಾರ್ಗ ವಾರ್ತೆ

ರಿಯಾದ್: ನಾಲ್ಕು ವರ್ಷದ ದಿಗ್ಬಂಧನದ ನಂತರ ಕತಾರ್ ದೊರೆ ಪುನಃ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದಾರೆ. ಮಂಗಳವಾರ ಮಧ್ಯಾಹ್ನದ ಬಳಿಕ ಉತ್ತರ ಸೌದಿ ಅರೇಬಿಯದ ಅಲ್‍ಉಲ ಪ್ರಾಚೀನ ನಗರದಲ್ಲಿ ನಡೆಯುವ 41ನೇ ಗಲ್ಫ್ ಶೃಂಗದಲ್ಲಿ ಭಾಗವಹಿಸಲಿಕ್ಕಾಗಿ ಕತರ್ ಅಮೀರ್ ಶೇಖ್ ತಮೀಮ್ ಬಿನ್ ಹಮಾದ್ ಅಲ್‍ತಾನಿ ಬಂದಿದ್ದು ಸೌದಿಯ ಯುವರಾಜ ಅಮೀರ್ ಮುಹ್ಮದ್ ಬಿನ್ ಸಲ್ಮಾನ್‌ರವರು ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದರು.

2017ರಲ್ಲಿ ಕತಾರ್‌ನೊಂದಿಗೆ ಸೌದಿ ಅರೇಬಿಯ, ಯುಎಇ, ಬಹ್ರೈನ್, ಈಜಿಪ್ಟ್‌ಗಳು ಕೆಲವು ಕಾರಣಗಳನ್ನು ಮುಂದಿಟ್ಟು ರಾಜತಾಂತ್ರಿಕ ಸಂಬಂಧವನ್ನು ಸ್ಥಗಿತ ಗೊಳಿಸಿತ್ತು. ನಂತರ ನಡೆದ ಗಲ್ಫ್ ಶೃಂಗದಲ್ಲಿ ಅಥವಾ ಗಲ್ಫ್ ಸಹಕಾರಿ ಕೌನ್ಸಿಲ್‍ನಲ್ಲಿ, ಬೇರೆ ಸಮಾರಂಭಗಳಲ್ಲಿ ಕತಾರ್ ಅಮೀರ್ ಭಾಗವಹಿಸಿರಲಿಲ್ಲ. ಸೌದಿ ಅರೇಬಿಯಕ್ಕೂ ಬಂದಿರಲಿಲ್ಲ.

ಆದರೆ, ಈ ವಿಷಯದಲ್ಲಿ ಪರಿಹಾರ ಚರ್ಚೆ ನಡೆದು ಸಮಸ್ಯೆ ಕೊನೆಗೊಂಡು ಗಲ್ಫ್ ಒಗ್ಗಟ್ಟು ಮರುಸ್ಥಾಪನೆಯಾಗುವುದೆಂದು ನಿರೀಕ್ಷೆಯಿರುವ 41ನೇ ಶೃಂಗಕ್ಕೆ ಪೂರ್ವಭಾವಿಯಾಗಿ ಸೋಮವಾರ ಸಂಜೆ ಸೌದಿ ಅರೇಬಿಯ ಮತ್ತು ಕತರ್ ನಡುವಿನ ಭೂ, ಜಲ, ವಾಯು ಮಾರ್ಗ ತೆರೆದುಕೊಂಡಿರುವ ಹಿನ್ನೆಲೆಯಲ್ಲಿ ಶೇಖ್ ತಮೀಮ್ ಬಿನ್ ಹಮದ್ ಗಲ್ಫ್ ಶೃಂಗಕ್ಕಾಗಿ ಸೌದಿ ಅರೇಬಿಯಕ್ಕೆ ಬಂದಿದ್ದಾರೆ. ಇದು ಗಲ್ಫ್‌ನಾದ್ಯಂತ ಸಂತೋಷಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.