ಅವರು ನಮ್ಮೊಂದಿಗೆ ತಪ್ಪೊಪ್ಪಿಕೊಳ್ಳುತ್ತಿದ್ದರು: ಕೋವಿಡ್ ರೋಗಿಗಳ ಮರಣದ ವೇಳೆಯಲ್ಲಿನ ಅನುಭವ ಬಿಚ್ಚಿಟ್ಟ ಹೈದರಾಬಾದ್ ನ ವೈದ್ಯರು

0
904

ಸನ್ಮಾರ್ಗ ವಾರ್ತೆ

ಹೈದರಾಬಾದ್: ಇಡೀ ಜಗತ್ತನ್ನೇ ಅಲ್ಲಾಡಿಸಿದ ಕೊರೋನಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೋವಿಡ್ ರೋಗಿಗಳ ಸೇವೆಗೈದ ವೈದ್ಯರು, ನರ್ಸ್ ಗಳು ಹಾಗೂ ಶುಶ್ರೂಷಕಿಯರು ಕೊರೋನಾ ಸಂದರ್ಭದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಕೋವಿಡ್ ರೋಗಿಗಳು ತಮ್ಮ ಬದುಕಿನಲ್ಲಿ ಮಾಡಿದ್ದ ತಪ್ಪುಗಳನ್ನು ನೆನೆದು ಕಣ್ಣೀರು ಹಾಕಿ, ತಪ್ಪೊಪ್ಪಿಗೆ ನಡೆಸುತ್ತಿದ್ದ ಅಂಶವನ್ನು ನೆನಪಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ರೋಗಿಗಳ ಸೇವೆ ಮಾಡಿದ ಹೈದರಾಬಾದ್ ನಗರದ ವೈದ್ಯರ ಬಳಿ ಮಾತನಾಡಿಸಿದ ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿ, ವೈದ್ಯರ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ಈ ನೋವಿನ ಅಂಶದ ಬಗ್ಗೆ ಹೈದರಾಬಾದ್ ಗಾಂಧಿ ಆಸ್ಪತ್ರೆಯ ವೈದ್ಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಮಾರ್ಚ್ 2, 2020 ರಂದು ತೆಲಂಗಾಣದಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾಗಿತ್ತು. ಗಾಂಧಿ ಆಸ್ಪತ್ರೆ ರಾಜ್ಯದಲ್ಲಿ ನೋಡಲ್ ಹೆಲ್ತ್‌ಕೇರ್ ಸೌಲಭ್ಯದೊಂದಿಗೆ ಸೇವೆ ನೀಡುತ್ತಿತ್ತು‌. ಇಲ್ಲಿನ ವೈದ್ಯರು ರಾಜ್ಯದಲ್ಲಿ ಸುಮಾರು 2,000 ರೋಗಿಗಳ ಸಾವುಗಳಿಗೆ ಸಾಕ್ಷಿಯಾಗಿದ್ದರು. ಸಾಯುವ ಮೊದಲು ಅನೇಕ ರೋಗಿಗಳು ವೈದ್ಯರಿಗೆ ತಮ್ಮ ಭಯ ಮತ್ತು ನಿರಾಶೆಗಳನ್ನು ಒಪ್ಪಿಕೊಂಡಿದ್ದು ಮತ್ತು ವೈದ್ಯರ ಜೊತೆ ತಮ್ಮ ಕೊನೆಯ ಆಸೆಗಳನ್ನು ಸಹ ವ್ಯಕ್ತಪಡಿಸುತ್ತಿದ್ದರು. ವೈದ್ಯರು ಅದನ್ನು ಪೂರೈಸಲು ಪ್ರಯತ್ನಿಸಿದ್ದರು.‌ ಆದರೆ ಕೆಲವೊಮ್ಮೆ ವಿಫಲರಾದರು.
ವಾಸ್ತವವಾಗಿ, ಪ್ರೀತಿಪಾತ್ರರಿಗೆ ಅವರು ಮಾಡಿದ ತಪ್ಪನ್ನು ಸರಿಪಡಿಸುವ ಹಂಬಲವು ಹೆಚ್ಚಿನವರನ್ನು ಕಾಡಿತ್ತೆಂಬ ಅಂಶವನ್ನು ತಿಳಿಸಿದ್ದಾರೆ.

45 ವರ್ಷ ವಯಸ್ಸಿನ ಕೋವಿಡ್ ರೋಗಿಯೋರ್ವ ತನ್ನ ವೈದ್ಯರಲ್ಲಿ ತನ್ನ ತಪ್ಪನ್ನು ತೋಡಿಕೊಂಡದ್ದು ಹೀಗೆ.
ಕಳೆದ ಹತ್ತು ವರ್ಷಗಳಿಂದ ನಾನು ನನ್ನ ಸಹೋದರನೊಂದಿಗೆ ಮಾತನಾಡಿಲ್ಲ. ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ನಾನು ಅವನಿಗೆ ದ್ರೋಹ ಮಾಡಿದ್ದೇನೆ. ನಾನು ತಪ್ಪು ಮಾಡಿದ್ದೇನೆ‌‌. ನನ್ನ ಆಸ್ತಿಯ
ಒಂದು ಭಾಗವನ್ನು ನನ್ನ ಪ್ರೀತಿಯ ಸಹೋದರನಿಗೆ ಹಸ್ತಾಂತರಿಸಲು ಬಯಸುತ್ತೇನೆ. ನನ್ನ ಸಹೋದರನನ್ನು ಹುಡುಕಿ’ ಎಂದು ಅವರು ನನ್ನನ್ನು ವಿನಂತಿಸಿದರು. ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಾವು ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಗಾಂಧಿ ಆಸ್ಪತ್ರೆಯ ಅಧೀಕ್ಷಕ ಎಂ.ರಾಜರಾವ್ ಆ ವ್ಯಕ್ತಿ ಸಾಯುವ ಹಿಂದಿನ ರಾತ್ರಿ ಹೇಳಿದ್ದ ವಿಷಯವನ್ನು ಹಂಚಿಕೊಂಡಿದ್ದಾರೆ.

ಕಹಿ ಘಟನೆಯ ಕಾರಣಕ್ಕಾಗಿ ಬೇರ್ಪಟ್ಟಿದ್ದ ಯುವ ದಂಪತಿಗಳ ಪೈಕಿ, ನಾನು ತಪ್ಪು ಮಾಡಿದ್ದೇನೆ. ನನ್ನ ಪತ್ನಿಯ ಬಳಿ ನನಗೆ ಮಾತನಾಡಬೇಕು‌. ಆಕೆ ಎಲ್ಲಿದ್ದಾಳೆಂದು ನನಗೆ ಗೊತ್ತಿಲ್ಲ. ಆಕೆಯನ್ನು ಹುಡುಕಿ ನನ್ನ ಬಳಿಗೆ ಕರೆದುಕೊಂಡು ಬನ್ನಿ. ನನ್ನ ಮನಸ್ಸಿನಲ್ಲಿರುವ ಭಾವನೆಗಳನ್ನು ಆಕೆಯ ಜೊತೆ ಹಂಚಿಕೊಳ್ಳಬೇಕು‌ ಎಂದು ಕಣ್ಣೀರು ಹಾಕಿದ್ದರು‌. ತನ್ನ ಸಂಗಾತಿಯನ್ನು ಹುಡುಕಲು ಮತ್ತು ಅವನ ಭಾವನೆಗಳನ್ನು ಅವಳಿಗೆ ತಿಳಿಸುವಂತೆ ವಿನಂತಿಸಿದ್ದನು.‌ ಆತನ ಭಾವನೆ ಏನು ಎಂದು ನಾವು ಆತನ ಬಾಯಿಂದ ಕೇಳುವ ಮೊದಲೇ ಅವರು ನಿಧನರಾದರು ” ಎಂದು ಆತನ ತಪ್ಪೊಪ್ಪಿಗೆಯನ್ನು ಕೇಳಿದ್ದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯೋರ್ವರು ತಮ್ಮ ಅನುಭವವನ್ನು ತಿಳಿಸಿದ್ದಾರೆ.

ಕೊನೆಯ ಬಾರಿಗೆ ತಮ್ಮ ಕುಟುಂಬಗಳನ್ನು ಭೇಟಿಯಾಗಲು ಆಸ್ಪತ್ರೆಯಿಂದ ಹೊರಹೋಗಲು ಸಹಾಯ ಮಾಡುವಂತೆ ವೈದ್ಯರನ್ನು ಹಲವಾರು ಕೋವಿಡ್ ರೋಗಿಗಳು ಕೋರಿದ್ದರು.

ಹೆಚ್ಚಿನ ತಪ್ಪೊಪ್ಪಿಗೆಗಳು ಆಸ್ತಿ, ಹಣದ ವಹಿವಾಟು, ಜವಾಬ್ದಾರಿಗಳ ಹಂಚಿಕೆ, ಸ್ವಪ್ರತಿಷ್ಠೆಯ ಜಗಳಗಳು ಒಳಗೊಂಡಿತ್ತು ಎಂಬ ಅಂಶವನ್ನು ವೈದ್ಯರು ಹಂಚಿಕೊಂಡಿದ್ದಾರೆ. ಅಲ್ಲದೇ ಹಲವಾರು ಕೋವಿಡ್ ರೋಗಿಗಳು ತಮ್ಮ ಕೊನೆಯ ಆಸೆಯಾಗಿ ತನ್ನ ಪ್ರೀತಿ ಪಾತ್ರರಿಗೆ ಶುಭಾಶಯ ಸಲ್ಲಿಸುವಂತೆ, ತನ್ನ ಇಷ್ಟದ ಆಹಾರವನ್ನು ಕೊನೆಯದಾಗಿ ನೀಡುವಂತೆ ಆಗ್ರಹಿಸಿದ ಅಂಶವನ್ನು ಉಲ್ಲೇಖ ಮಾಡಿದ್ದಾರೆ.

ಈವರೆಗೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡದ್ದ ಶ್ರೀಮಂತ ಮನೆತನದ ರೋಗಿಯೊಬ್ಬರು ವಿಲಕ್ಷಣ ಭಕ್ಷ್ಯಗಳಿಗಾಗಿ ಹಂಬಲಿಸುತ್ತಿದ್ದರು ಎಂದು ಮನೋವೈದ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಅಜಯ್ ಕುಮಾರ್ ಜುಪಕಾ ನೆನಪಿಸುತ್ತಾರೆ.

ಅಲ್ಲದೇ, ಈ‌ ಮಧ್ಯೆ ತಮ್ಮ ಕುಟುಂಬವನ್ನು ಭೇಟಿಯಾಗಲು ಸಾಧ್ಯವಾಗದ್ದರಿಂದ ಕೊನೆಯ ಘಳಿಗೆಯಲ್ಲಿ ಕೆಲವು ವೈದ್ಯರು ವಿಡಿಯೋ ಕರೆಗಳನ್ನು ತಮ್ಮ‌ ಮೊಬೈಲ್ ಮ‌ೂಲಕ ರೋಗಿಗಳ ಕುಟುಂಬದ ಸದಸ್ಯರಿಗೆ ವೀಡಿಯೋ ಕರೆ ಮಾಡಿ, ಮಾತನಾಡಿಸುವ ಮೂಲಕ ಅವರ ಕೊನೆಯಾಸೆಯನ್ನು ಈಡೇರಿಸಲು ಪ್ರಯತ್ನ ಮಾಡಿದ್ದನ್ನು ನೆನಪಿಸಿದ್ದಾರೆ.

ಆದರೆ ಕೊನೆಯ ಘಳಿಗೆಯಲ್ಲಿ ಕೆಲವು ರೋಗಿಗಳು ಮಾನಸಿಕವಾಗಿ ತೀವ್ರವಾಗಿ ಜರ್ಜರಿತವಾಗಿದ್ದರಿಂದ ಮತ್ತು ವಾಸ್ತವ ಜಗತ್ತಿನಿಂದ ದೂರ ಹೋಗಿದ್ದರಿಂದ ತಮ್ಮ ಕುಟುಂಬಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ.‌ ಅಂಥವರ ಕೊನೆಯ ಘಳಿಗೆಯನ್ನು ಈಗ ನೆನೆಯುವಾಗ ನಮಗೆ ಕಣ್ಣೀರು ಬರುತ್ತದೆ ಎಂದು ಹಲವಾರು ವೈದ್ಯರು, ನರ್ಸ್ ಗಳು, ಶುಶ್ರೂಷಕಿಯರು ತಿಳಿಸಿದ್ದಾರೆ.