ಆಮದು ತೆರಿಗೆ ಹೆಚ್ಚಳ: ಭಾರತ, ಚೀನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲ- ಡೊನಾಲ್ಡ್ ಟ್ರಂಪ್ ಆಕ್ರೋಶ

0
517

ವಾಷಿಂಗ್ಟನ್, ಆ. 15: ಭಾರತ ಮತ್ತು ಚೀನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲ. ಆ ಸ್ಥಾನಮಾನವನ್ನು ಉಪಯೋಗಿಸಿ ಎರಡು ದೇಶಗಳು ಲಾಭ ಪಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಬುಧವಾರ ಪೆನ್‍ಸಿಲ್ವೇನಿಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.

‘ಎರಡು ಬೃಹತ್ ಆರ್ಥಿಕ ಶಕ್ತಿಗಳಾದ ಚೀನ, ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದು ಹೇಳಲಾಗದು. ಆದ್ದರಿಂದ ವಿಶ್ವ ವ್ಯಾಪಾರ ಸಂಘಟನೆಯ(ಡಬ್ಲ್ಯೂಟಿಒ) ಲಾಭಗಳನ್ನು ಅವರು ಪಡೆಯಲು ಅರ್ಹರಲ್ಲ. ಚೀನ ಮತ್ತು ಭಾರತ ಅನೇಕ ವರ್ಷಗಳಿಂದ ಸಂಘಟನೆಯಿಂದ ಲಾಭ ಪಡೆಯುತ್ತಿವೆ ಎಂದು ಟ್ರಂಪ್ ಆರೋಪಿಸಿದರು. ಡಬ್ಲ್ಯೂಟಿಒ ಈಗಲೂ ಚೀನಾ ಮತ್ತು ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ದೇಶವೆಂದು ಪರಿಗಣಿಸಿದೆ. ಆದರೆ ಅವರೆಲ್ಲರೂ ಅಭಿವೃದ್ಧಿ ಹೊಂದಿಯಾಗಿದೆ. ಇನ್ನೂ ಡಬ್ಲ್ಯೂಟಿಒವನ್ನು ದುರಪಯೋಗಿಸಲು ಇವರನ್ನು ಬಿಡುವುದಿಲ್ಲ ಎಂದು ಟ್ರಂಪ್ ಮುನ್ನೆಚ್ಚರಿಕೆ ನೀಡಿದರು.

ಡಬ್ಲ್ಯೂಟಿಒ ಅಮೆರಿಕಕ್ಕೆ ನ್ಯಾಯಯುತ ಪರಿಗಣನೆ ನೀಡುತ್ತದೆ ಎನ್ನುವ ನಿರೀಕ್ಷೆ ಇದೆ. ಇಲ್ಲದಿದ್ದರೆ ಸಂಘಟನೆಯಿಂದ ಹೊರಬರುವುದಾಗಿ ಟ್ರಂಪ್ ಬೆದರಿಕೆ ಹಾಕಿದರು. ಅಮೆರಿಕ ನಿರ್ಮಿಸಿದ ಉತ್ಪನ್ನಗಳ ಆಮದು ತೆರಿಗೆ ಹಾಕಿದ ಭಾರತದ ಕ್ರಮ ಟ್ರಂಪ್ ಕೋಪಕ್ಕೆ ಕಾರಣವಾಗಿದೆ. ಭಾರತವನ್ನು ತೆರಿಗೆ ರಾಜ ಎಂದು ಅವರು ವ್ಯಂಗ್ಯವಾಡಿದ್ದಾರೆ. ಚೀನದ ಉತ್ಪನ್ನಗಳಿಗೆ ಆಮದು ತೆರಿಗೆ ಹೆಚ್ಚಿಸಿದ ನಂತರ ಅಮೆರಿಕ ಮತ್ತು ಚೀನದ ನಡುವೆ ವ್ಯಾಪಾರ ಯುದ್ಧ ನಡೆಯುತ್ತಿದೆ. ಅಮೆರಿಕದ ಉತ್ಪನ್ನಗಳಿಗೆ ಚೀನ ಕೂಡ ತೆರಿಗೆ ಹೆಚ್ಚಳ ಮಾಡಿದೆ.