ನೆರೆ ದೇಶಗಳನ್ನೆಲ್ಲ ಚೀನ ತೆಕ್ಕೆಗೆ ಹಾಕಿಕೊಂಡಿರುವುದು ಹೇಗೆ?

0
172

ಸನ್ಮಾರ್ಗ ವಾರ್ತೆ

ವಿ.ವಿ. ಶರೀಫ್ ಸಿಂಗಾಪುರ

ಕೊರೋನ ಭಾರತದ ಉಪಭೂಖಂಡದಲ್ಲಿ ಹರಡಲು ಶುರುವಾದ ಸಮಯದಲ್ಲಿ ಚೀನದ ವೈದ್ಯಕೀಯ ತಂಡ ಪಾಕಿಸ್ತಾನದ ರಾಜಧಾನಿಯ ಸೈನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಅವರಿಗೆ ಬೇಕಾದ ಸಹಾಯ ಮಾಡಿಕೊಟ್ಟಿತು. ಒಂದು ಅಪಾಯದ ಘಟ್ಟದಲ್ಲಿ ನೆರೆಯ ದೇಶಕ್ಕೆ ಸಹಾಯ ಮಾಡುವುದು ಎನ್ನುವುದರಾಚೆ ಯೋಚಿಸುವುದಾದರೆ ಪಾಕಿಸ್ತಾನ, ಭಾರತ ಸಹಿತ ನೆರೆ ದೇಶಗಳಲ್ಲಿ ಚೀನ, ಆಳವಾಗಿ ಹಿಡಿತ ಬಿಗಿಗೊಳಿಸುವು ದಕ್ಕೆ ಸಾಕ್ಷ್ಯ ಇದು. ಹಿಮಾಲಯಕ್ಕಿಂತ ಎತ್ತರವೂ ಕಡಲಿ ಗಿಂತಲೂ ಆಳವೂ ಮತ್ತು ಜೇನಿಗಿಂತ ಸಿಹಿ ಎಂದು ತಮ್ಮ ಸಂಬಂಧವನ್ನು ಚೀನ ಪಾಕಿಸ್ತಾನಗಳು ಹೇಳಿಕೊಳ್ಳುತ್ತವೆ.

ಚೀನದ ಅಧ್ಯಕ್ಷ ಶಿ ಜಿನ್ಪಿಂಗ್ ಭಾರತಕ್ಕೆ ಬಂದು ಎಂಟು ತಿಂಗಳು ಆಗುವುದರೊಳಗೆ ಆ ದೇಶ ಭಾರತದ ಗಡಿಯಲ್ಲಿ ಸಮಸ್ಯೆ ಉಂಟು ಮಾಡಲು ಶುರುಮಾಡಿತು. ನಮ್ಮ ನೆರೆಯ ದೇಶಗಳಲ್ಲಿ ಉದ್ಯಮ, ನಿರ್ಮಾಣ ಕಾಮಗಾರಿ ಹೆಚ್ಚಿಸುವುದೆನ್ನುತ್ತಾ ಬೃಹತ್ ಹೂಡಿಕೆ ಮಾಡುತ್ತಿರುವ ಚೀನ, ಜೊತೆಗೇ ಭಾರತದ ಬಹುಮುಖ್ಯ ಗಡಿ ಹಂಚಿಕೊಂಡ ದೇಶಗಳ ಮೇಲೆ ತನ್ನ ಹಿಡಿತ ವನ್ನು ಬಿಗಿಗೊಳಿಸಿ ರಾಜಕೀಯ ಲಾಭವನ್ನು ಕೂಡ ಗುರಿಯಿಟ್ಟಿದೆ ಎಂದು ಭಾವಿಸಬಹುದಾಗಿದೆ. ಮಾತ್ರವಲ್ಲ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ಪ್ರದೇಶದಲ್ಲಿರುವ ಈ ದೇಶಗಳನ್ನು ಅಗತ್ಯವಿದ್ದಾಗ ಭಾರತದ ವಿರುದ್ಧ ಉಪಯೋಗಿಸುವ ಗುರಿಯೂ ಅದಕ್ಕಿದೆ ಎಂದು ಊಹಿಸಬಹುದು.

ಆಧುನಿಕ ಸಿಲ್ಕ್ ರೂಟ್ ಎನ್ನಲಾಗುತ್ತಿರುವ ಭೂಮಿ ಕಡಲು ಗಳ ಮೂಲಕ ಭೂಖಂಡಗಳನ್ನು ಜೋಡಿಸುವ ಚೀನದ ಕನಸಿನ ಯೋಜನೆ ಬಿಆರೈ(ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್)ಯ ಪ್ರಧಾನ ಕೊಂಡಿಯು ಚೀನ-ಪಾಕಿಸ್ತಾನ ಆರ್ಥಿಕ ಮಧ್ಯಾಂತರ ಮಾರ್ಗದ (ಸಿಪಿಇಸಿ) ಮೂಲಕ ಚೀನವನ್ನು ಆಫ್ರಿಕ, ಯುರೋಪ್, ಪೌರಾತ್ಯ ದೇಶಗಳೊಂದಿಗೆ ಭೂ-ಸಮುದ್ರ ಮಾರ್ಗವಾಗಿ ಜೋಡಿಸ ಲಿದ್ದು, ಈ ಮೂಲಕ ಈಗಿನ ದೀರ್ಘ ಸಮಯ ತಗಲುವುದನ್ನು ಕಡಿಮೆ ಮಾಡುವ ಉದ್ದೇಶದಿಂದ 6200 ಕೋಟಿ ಡಾಲರ್ ಬೃಹತ್ ಹೂಡಿಕೆ ಮಾಡುವ ಗುರಿಯನ್ನು ಚೀನ ಇರಿಸಿಕೊಂಡಿದೆ.

ಇದರಲ್ಲಿ 2000 ಕೋಟಿ ರೂಪಾಯಿಯ ಯೋಜನೆ ಪೂರ್ಣಗೊಂಡಿದ್ದು ಪಾಕಿಸ್ತಾನ, ಭಾರತದ ನಡುವೆ ಇರುವ ವಿರೋಧಗಳಿಂದ ಚೀನ ಲಾಭವೆತ್ತುತ್ತಿದೆ. ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದೊಂದಿಗೆ ಆತ್ಮೀಯತೆ ಯನ್ನು ತೋರಿಸದಿರುವ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿ ಕೊಂಡು ಚೀನ ದಾಳಗಳನ್ನು ಉರುಳಿಸಿದೆ. ಚೀನದ ಬೃಹತ್ ಹೂಡಿಕೆಗಳು ಪಾಕಿಸ್ತಾನದಲ್ಲಿ ರಾಶಿಬೀಳುತ್ತಿದೆ. ಸಾಲ ಹೆಚ್ಚುತ್ತಿದೆ. ಚೀನಾದೊಂದಿಗೆ ಪಾಕಿಸ್ತಾನದ ಋಣಭಾರವು ವಿಧೇಯತೆಯನ್ನು ಹೆಚ್ಚಿಸುತ್ತಿದೆ. ಹೀಗೆ ಸಾಲಶೂಲದಿಂದ ಪಾಕಿಸ್ತಾನವನ್ನು ನಿಯಂತ್ರಣ ದಲ್ಲಿಟ್ಟು ಭಾರತ, ಅಮೆರಿಕದ ವಿರುದ್ಧ ಗಟ್ಟಿಯಾದ ಮಿತ್ರ ದೇಶವನ್ನಾಗಿ ಮಾಡಿಕೊಳ್ಳಲು ಸಾಧ್ಯ ಎಂಬ ಲೆಕ್ಕವನ್ನು ಚೀನ ಹಾಕಿದೆ.

ಭಾರತದ ದಕ್ಷಿಣ ಭಾಗದಲ್ಲಿರುವ ನೆರೆಯ ದೇಶ ಎನ್ನುವುದರೊಂದಿಗೆ ಸಮುದ್ರ ಮಾರ್ಗದಲ್ಲಿ ಸರಕು ಸಾಗಾಟದ ತಂತ್ರ ಪ್ರಧಾನ ವಲಯವಾದ ಶ್ರೀಲಂಕ ದೊಂದಿಗೂ ಚೀನದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಮೋದಿ ಸರಕಾರ ಬರೇ ನೋಡಿ ನಿಂತಿದೆ. ಬಹಳ ದೀರ್ಘ ಕಾಲದಿಂದ ಭಾರತದೊಂದಿಗೆ ಉತ್ತಮ ವ್ಯಾಪಾರ, ಹೂಡಿಕೆ, ರಕ್ಷಣಾ ಸಂಬಂಧವನ್ನು ಹೊಂದಿದ್ದ ಶ್ರೀಲಂಕಾ ಮಹಿಂದ ರಾಜಪಕ್ಷೆ ಅಲ್ಲಿ 2005ರಲ್ಲಿ ಅಧಿಕಾರಕ್ಕೆ ಬಂದ ನಂತರ ಚೀನಕ್ಕೆ ನಿಕಟ ವಾಗತೊಡಗಿತು. ಹತ್ತು ವರ್ಷದ ಮಹಿಂದ್ರಾರ ಆಡಳಿತ ಕಾಲದಲ್ಲಿ ಚೀನ ಅಲ್ಲಿ ಗಟ್ಟಿಯಾಗಿ ಹಿಡಿತ ಬಿಗಿಗೊಳಿಸಿತು. ಪ್ರಧಾನವಾದ ಬಂದರನ್ನು ಅಭಿವೃದ್ಧಿಪಡಿಸಿ ಪ್ರಭಾವವನ್ನು ಹೆಚ್ಚಿಸಿದ ಚೀನ 2015ರಲ್ಲಿ ರಾಜಪಕ್ಷೆ ಹೊರಹೋದ ಮೇಲೆ ಈ ಪ್ರಭಾವ ಕಡಿಮೆಯಾಗಲಿದೆ ಮತ್ತು ಶ್ರೀಲಂಕಾ ಪುನಃ ಭಾರತಕ್ಕೆ ಹತ್ತಿರವಾಗಲಿದೆ ಎಂದು ಭಾವಿಸಲಾಗಿತ್ತು.

ಹೊಸದಾಗಿ ಅಧ್ಯಕ್ಷರಾದ ಸಿರಿಸೇನೆ ಪುನಃ ಚೀನವನ್ನು ಹೊರದಬ್ಬಿ ಭಾರತಕ್ಕೆ ಪ್ರಭಾವ ಹೆಚ್ಚಿಸುವ ಅವಕಾಶ ಸೃಷ್ಟಿಸುವರೆಂದು ಭಾವಿಸಿಕೊಳ್ಳಲಾಗಿತ್ತು. ಈ ಅನುಕೂಲ ಪರಿಸ್ಥಿತಿಯನ್ನು ಬಳಸಿ ಅಲ್ಲಿ ಪ್ರಭಾವವನ್ನು ಹೆಚ್ಚಿಸಿಕೊಳ್ಳ ಬೇಕೆಂದು ಮೋದಿ ಹೇಳಿಕೊಂಡರು. ಚೀನ ಸಿರಿಸೇನೆಯವರ ಆಡಳಿತ ಕಾಲದಲ್ಲಿಯೂ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿತು. ಸಿರಿ ಸೇನೆಯ ಆಡಳಿತದಲ್ಲಿ ಸಾಲ ಮರಳಿಸಲು ಆಗದ್ದರಿಂದ ಅಲ್ಲಿನ ಪ್ರಧಾನ ಬಂದರುಗಳಲ್ಲಿ ಒಂದಾದ ದಕ್ಷಿಣ ಶ್ರೀಲಂಕಾದ ಹಾಂಬೆತ್ರವನ್ನು 99 ವರ್ಷಗಳ ಲೀಸ್‍ಗೆ ಚೀನಕ್ಕೆ ಬಿಟ್ಟುಕೊಡಬೇಕಾಗಿ ಬಂತು. ಈಗ ರಾಜಪಕ್ಸೆ ಮರಳಿರುವುದರಿಂದ ಚೀನಕ್ಕೆ ಪ್ರಭಾವವನ್ನು ವಿಸ್ತರಿಸುವ ಅವಕಾಶ ಇನ್ನೂ ಹೆಚ್ಚಾಗಿದೆ.

ಶ್ರೀಲಂಕದಲ್ಲಿ ಚೀನ 1,200 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡಿದೆ. ರಾಜಧಾನಿ ಕೊಲಂಬೋದ ಸಮೀಪದಲ್ಲಿ ಚೀನ ಒಂದು ಬಂದರು ನಗರವನ್ನು ನಿರ್ಮಿಸುತ್ತಿದೆ. ಇದಲ್ಲದೆ ಚೀನದ ಕಂಪೆ ನಿಗಳು ಎಕ್ಸ್‍ಪ್ರೆಸ್ ರಸ್ತೆ, ಇಂಧನ ಯೋಜನೆ, ಕೃಷಿ ಕ್ಷೇತ್ರಗಳಲ್ಲಿ ಬೃಹತ್ ಹೂಡಿಕೆಗಳನ್ನು ಮಾಡಿವೆ. ಶ್ರೀಲಂಕಾದ ಬಂದರುಗಳ ಗುಣಮಟ್ಟ ಉತ್ತಮ ದ್ದಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಚೀನ ಅವರ ಬಂದರುಗಳನ್ನು ನಿಯಂತ್ರಿಸುತ್ತಿವೆ ಎಂಬ ಹಿನ್ನೆಲೆ ಕೂಡ ಈ ಮಾತಿನಲ್ಲಿದೆ. ಅದೇವೇಳೆ,

ಚೀನದ ನಗರಗಳೊಂದಿಗೆ ಬಾಂಗ್ಲಾದೇಶದಲ್ಲಿ ಆಯ್ಕೆ ಮಾಡಿದ ನಗರಗಳು ಪರಸ್ಪರ ಸೌಹಾರ್ದ ಸಂಬಂಧ (ಸಿಸ್ಟರ್ ಸಿಟಿ) ಸ್ಥಾಪಿಸಬೇಕಾಗಿದೆ ಎಂದು ಚೀನದ ಕಮ್ಯುನಿಸ್ಟ್ ಪಾರ್ಟಿ ಕಳೆದ ಮೇ ತಿಂಗಳಲ್ಲಿ ಶೇಖ್ ಹಸೀನಾರೊಂದಿಗಿನ ಭೇಟಿಯ ವೇಳೆ ಸೂಚನೆ ನೀಡಿತ್ತು. ಈ ಮೂಲಕ ನಗರಗಳ ಪರಸ್ಪರ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ, ಶೈಕ್ಷಣಿಕ ಸಹಕಾರವನ್ನು ಉತ್ತಮಪಡಿಸುವುದು ಉದ್ದೇಶವಾಗಿದೆ ಎಂದಿತು. ಆದರೆ, ಚೀನ ತನ್ನ ಪ್ರಭಾವವನ್ನು ಸಮಾಜ ಮತ್ತು ರಾಜಕೀಯದ ಮೇಲೆ ಸೃಷ್ಟಿಸುವ ಯೋಜನೆ ಇದೆಂದು ವಿಮರ್ಶಕರು ಹೇಳುತ್ತಾರೆ. ಇಷ್ಟರಲ್ಲೇ ಬಾಂಗ್ಲಾದೇಶದ ಮೇಲೆ ಚೀನ 3,800 ಕೋಟಿ ಡಾಲರ್‍ನ ಹೂಡಿಕೆ ಯೋಜನೆಯನ್ನು ರೂಪಿಸಿದೆ. ಭಾರತ ಉಪ ಭೂಖಂಡದಲ್ಲಿ ಪಾಕಿಸ್ತಾನದ ನಂತರ ಅತೀ ಹೆಚ್ಚು ಚೀನ ಹೂಡಿಕೆ ಮಾಡಿದ ಎರಡನೆ ದೇಶ ಬಾಂಗ್ಲಾದೇಶವಾಗಿದೆ. ಅಲ್ಲಿನ ಅತೀದೊಡ್ಡ ರೈಲು-ರಸ್ತೆ, ಸೇತುವೆಯೂ ಚೀನದ ಮೂಲಕವೇ ಆಗಿದೆ.

ಭಾರತದ ಇನ್ನೊಂದು ಪ್ರಧಾನ ನೆರೆಯ ದೇಶ ನೇಪಾಳ ಇತ್ತೀಚೆಗೆ ಭಾರತದ ವಿರುದ್ಧ ಕೆಂಗಣ್ಣು ಬೀರಲು ಆರಂಭಿಸಿದ್ದೇಕೆ ಎಂದು ಕೇಳಿದರೆ ಅಲ್ಲಿಯೂ ಚೀನದ ಪ್ರಭಾವ ಇರುವುದು ಅದಕ್ಕೆ ಕಾರಣವೆ ನ್ನಬಹುದು. ಪಾಕಿ ಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳಿಂದ ಭಿನ್ನವಾಗಿ ಇಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಚೀನ ಹೂಡಿಕೆ ಮಾಡಿತೆನ್ನುವು ದಕ್ಕಿಂತ ಮಿಗಿಲಾಗಿ ರಾಜಕೀಯ ಕ್ಷೇತ್ರದಲ್ಲಿ ಚೀನ ಬಹಿರಂಗವಾಗಿಯೇ ಹಸ್ತಕ್ಷೇಪ ಮಾಡುತ್ತಿದೆ. ಆಡಳಿತ ಪಕ್ಷ ಎನ್‍ಸಿಪಿಗೆ ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯೇ ತರ ಬೇತಿ ನೀಡುತ್ತಿದೆ. ಮಾತ್ರವಲ್ಲ ಇತ್ತೀಚೆಗೆ ಎನ್‍ಸಿಪಿಯಲ್ಲಿ ಉಂಟಾದ ಭಿನ್ನಮತವನ್ನು ಅಲ್ಲಿನ ಚೀನದ ರಾಯಭಾರಿ ಮಧ್ಯಪ್ರವೇಶಿಸಿ ಪರಿಹರಿಸಿದ್ದಾರೆ. ಇವೆಲ್ಲವೂ ಬಹಿರಂಗ ವಾಗಿಯೇ ನಡೆಯುತ್ತಿದೆ.

ಹೀಗೆ ನಮ್ಮ ನಾಲ್ಕೂ ಕಡೆಗಳಲ್ಲಿ ಇರುವ ನೆರೆಯ ದೇಶಗಳಲ್ಲೆಲ್ಲ ಚೀನ ಹಿಡಿತ ಬಿಗಿಗೊಳಿಸುತ್ತಿರುವಾಗ ತಿರುಮಂತ್ರ ಪ್ರಯೋಗಿಸಲೋ, ತಂತ್ರಪರವಾಗಿ ಎದುರಿಸಲೋ ಮೋದಿ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅತೀ ಹೆಚ್ಚು ವಿದೇಶಗಳಿಗೆ ಭೇಟಿ ನೀಡಿದ ಪ್ರಧಾನಿ ಮೋದಿಯಾಗಿದ್ದಾರೆ. ಆದರೆ, ಈ ಅನುಭವಗಳು ಯಾವುವೂ ನಮ್ಮ ನೆರೆಯ ದೇಶಗಳು ಚೀನದತ್ತ ವಾಲುವುದನ್ನು ತಡೆಯಲು ಸಹಾಯಕವಾಗಿಲ್ಲ ಎಂಬುದು ನಮ್ಮ ಹಿನ್ನಡೆಯಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here