ಜಗತ್ತಿನಲ್ಲಿಯೇ ಅತ್ಯಂತ ಸಂತೃಪ್ತ ಮುಸ್ಲಿಮರು ಭಾರತದಲ್ಲಿದ್ದಾರೆ- ಮೋಹನ್ ಭಾಗವತ್

0
402

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.10: ಜಗತ್ತಿನಲ್ಲಿಯೇ ಅತ್ಯಂತ ಸಂತೃಪ್ತ ಮುಸ್ಲಿಮರು ಭಾರತದಲ್ಲಿದ್ದಾರೆ ಎಂದು ಆರೆಸ್ಸೆಸ್ ಅಧ್ಯಕ್ಷ ಮೋಹನ್ ಭಾಗವತ್ ಹೇಳಿದ್ದಾರೆ.

ಹಿಂದೂಗಳನ್ನು ಮಾತ್ರ ಆಲಿಸಲಾಗುತ್ತದೆ ಎಂದು ಭಾರತದ ಸಂವಿಧಾನದಲ್ಲಿ ಹೇಳಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಾರಾಷ್ಟ್ರದ ವಿವೇಕ ಹಿಂದಿ ಮಾಸಿಕಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಒಂದು ವಿದೇಶಿ ಧರ್ಮ ಜನರನ್ನು ಆಳುವುದು ಮತ್ತು ಅಲ್ಲಿ ಈಗಲೂ ಅದು ಇರುವುದಕ್ಕೆ ಜಗತ್ತಿನಲ್ಲಿ ಬೇರೆ ಉದಾಹರಣೆಗಳಿಲ್ಲ. ಅದು ಭಾರತದಲ್ಲಿ ಮಾತ್ರ ಇದೆ. ಭಾರತದಿಂದ ಭಿನ್ನವಾಗಿದೆ ಪಾಕಿಸ್ತಾನ. ಅದು ಮುಸ್ಲಿಮರಿಗಾಗಿ ರಚನೆಯಾದ ದೇಶವಾಗಿದೆ. ಇತರ ಧರ್ಮೀಯರಿಗೆ ಪಾಕಿಸ್ತಾನದಲ್ಲಿ ಹಕ್ಕುಗಳನ್ನು ನೀಡುವುದಿಲ್ಲ ಎಂದು ಮೋಹನ್ ಭಾಗವತ್ ಹೇಳಿದರು.

ಹಿಂದೂಗಳಿಗೆ ಮಾತ್ರ ಇಲ್ಲಿರಲು ಸಾಧ್ಯವಿದೆಯೆಂದೋ, ಇನ್ನು ಮೇಲೆ ಹಿಂದೂ ಹೇಳುವುದನ್ನು ಮಾತ್ರ ಆಲಿಸಲಾಗುವುದು ಎಂದೋ, ನಿಮಗೆ ಇಲ್ಲಿ ಇರಬೇಕಾದರೆ ನೀವು ಹಿಂದೂವಿನ ಮೇಲಧಿಕಾರವನ್ನು ಅಂಗೀಕರಿಸಬೇಕೆಂದೋ ಭಾರತದ ಸಂವಿಧಾನ ಹೇಳುವುದಿಲ್ಲ. ನಾವು ಅವರಿಗೆ ಇಲ್ಲಿ ಒಂದು ಜಾಗವನ್ನು ಕೊಟ್ಟಿದ್ದೇವೆ. ಇದು ನಮ್ಮ ದೇಶದ ಪ್ರಕೃತಿ. ಈ ಅಂತರ್ಲೀನ ಪ್ರಕೃತಿಯನ್ನು ಹಿಂದೂ ಎಂದು ಕರೆಯುವುದು. ಸ್ವಂತ ಹಿತಕ್ಕೆ ಬಾಧಕವಾಗುವವರು ಮಾತ್ರ ಯಾವುದಾದರೂ ರೀತಿಯ ಕೋಮುವಾದ, ವಿಭಾಜಕವಾದವನ್ನು ಪ್ರಚಾರ ಮಾಡುತ್ತಾರೆ.

ಭಾರತದ ಇತಿಹಾಸದಲ್ಲಿ ದೇಶದ ಸಂಸ್ಕೃತಿಯ ಮೇಲೆ ದಾಳಿ ನಡೆದಾಗಲೆಲ್ಲ ಎಲ್ಲ ಧರ್ಮವಿಶ್ವಾಸಿಗಳು ಒಂದುಗೂಡಿ ನಿಂತಿದ್ದಾರೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮೇವಾರದ ರಾಜ ಮಹಾರಾಣ ಪ್ರತಾಪ್‍ರ ಸೇನೆಯಲ್ಲಿ ಮೊಗಲ ಚಕ್ರವರ್ತಿ ಅಕ್ಬರ್ ವಿರುದ್ಧ ಹಲವು ಮುಸ್ಲಿಮರು ಯುದ್ಧ ಮಾಡಿದ್ದನ್ನು ಮೋಹನ್ ಭಾಗವತ್ ಬೆಟ್ಟು ಮಾಡಿದರು.

ಅಯೋಧ್ಯೆಯ ರಾಮ ಮಂದಿರವನ್ನು ಪ್ರಸ್ತಾಪಿಸಿದ ಮೋಹನ್ ಭಾಗವತ್ ರಾಮ ಮಂದಿರ ಕೇವಲ ಆಚಾರ ಉದ್ದೇಶದ್ದಲ್ಲ. ಅದು ದೇಶದ ದೇಶಿ ಮೌಲ್ಯದ ಗುಣದ ಚಿಹ್ನೆಯಾಗಿದೆ ಎಂದರು.