ಕಾರಿನಲ್ಲಿ ಮೃತದೇಹದೊಂದಿಗೆ ಠಾಣೆಗೆ ಬಂದ ಭಾರತೀಯ ಸಂಜಾತನ ಬಂಧನ

0
517

ಸನ್ಮಾರ್ಗವಾರ್ತೆ

ಸ್ಯಾನ್‍ಫ್ರಾನ್ಸಿಸ್ಕೊ,ಅ.18: ಕಾರಿನ ಢಿಕ್ಕಿಯಲ್ಲಿ ಮೃತದೇಹವನ್ನು ಹಾಕಿಕೊಂಡು ಬಂದ ಭಾರತ-ಅಮೆರಿಕನ್ ವಂಶದ ಐಟಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯದ ಮೌಂಟ್ ಸೆಸ್ಟ್ ಪೊಲೀಸ್ ಠಾಣೆಯಲ್ಲಿ ನಾಟಕೀಯ ಘಟನೆ ನಡೆದಿದೆ. ಕೆಂಪು ಕಾರಿನಲ್ಲಿ ಶಂಕರ್ ನಾಗಪ್ಪ ಹಾಂಕುಡ್(53), ಕರ್ತವ್ಯ ನಿರತರಾಗಿದ್ದ ಪೊಲೀಸರಿಗೆ ಕೊಲೆ ಮಾಡಿದ ವಿವರವನ್ನು ತಿಳಿಸಿದ್ದಾನೆ. ಕುಟುಂಬದ ನಾಲ್ವರನ್ನು ಕೊಂದಿದ್ದೇನೆ ಇವರಲ್ಲಿ ಒಬ್ಬರ ಮೃತದೇಹ ಢಿಕ್ಕಿಯಲ್ಲಿದೆ ಎಂದು ಈತ ವಿವರಿಸಿದ್ದಾನೆ.

ಬರೇ ತಮಾಷೆ ಇದು. ನಿಜವಾಗಿರಲಿಕ್ಕಿಲ್ಲ ಎಂದು ಪೊಲೀಸರ ಭಾವನೆಯಾಗಿತ್ತು. ಆದರೆ ತನಿಖೆಯಲ್ಲಿ ಕ್ಯಾಲಿಫೋರ್ನಿಯವನ್ನೇ ನಡುಗಿಸಿದ ಕೊಲೆಗಳ ಸರಣಿಯ ವಿವರಗಳನ್ನು ಆತ ಹೇಳಿದ್ದಾನೆ.

ಸೋಮವಾರ ಮಧ್ಯಾಹ್ನ ತನ್ನ ಕಾರಿನಲ್ಲಿ ಶಂಕರ್ ಪೊಲೀಸ್ ಠಾಣೆಗೆ ಮೃತದೇಹದೊಂದಿಗೆ ಬಂದಿದ್ದಾನೆ. ಈತ ನೀಡಿದ ಹೇಳಿಕೆಯಂತೆ 212 ಮೈಲು ದೂರದ ರೋಸ್‍ ವಿಲ್ಲಾದಲ್ಲಿ ಪೊಲೀಸರು ಶೋಧ ನಡೆಸಿದಾಗ ಇಬ್ಬರು ಮಕ್ಕಳ ಸಹಿತ ಮೂವರ ಮೃತದೇಹಗಳು ಪತ್ತೆಯಾಗಿವೆ.

ಆತ ಯಾಕೆ ಕೊಲೆ ಮಾಡಿದ್ದಾನೆ ಎನ್ನುವುದು ಸ್ಪಷ್ಟವಾಗಿಲ್ಲ. ಕೊಲೆ ಮಾಡಿದ ಬಳಿಕ ನಾಲ್ಕನೆ ಮೃತದೇಹವನ್ನು ಕಾರಿನ ಢಿಕ್ಕಿಯಲ್ಲಿ ಹಾಕಿ ಹಲವು ಸ್ಥಳಕ್ಕೆ ಹೋಗಿಬಂದಿದ್ದ ಎಂದು ಪೊಲೀಸರು ತಿಳಿಸಿದರು. ಶಂಕರ್ ಕ್ಯಾಲಿಫೋರ್ನಿಯದ ಪ್ರಮುಖ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಡಾಟ ಎಕ್ಸಪರ್ಟ್ ಆಗಿದ್ದ. ಆತನ ವಿರುದ್ಧ ಕೊಲೆ ಆರೋಪ ಹೊರಿಸಿ ಕೇಸು ದಾಖಲಿಸಿಕೊಳ್ಳಲಾಗಿದೆ.