ಠಾಣೆಯಲ್ಲೇ ಎರಡು ಹೊತ್ತಿನ ಊಟ ತಯಾರಿಸಿ ಬಡವರಲ್ಲಿ ಹಂಚುತ್ತಿರುವ ವಿವೇಕನಗರ ಪೊಲೀಸ್ ಠಾಣೆ: ಇನ್ಸ್ ಪೆಕ್ಟರ್ ರಫೀಕ್ ಅವರ ಮಾನವೀಯತೆಗೆ ಸರ್ವತ್ರ ಶ್ಲಾಘನೆ

0
10525

ಸನ್ಮಾರ್ಗ ವಾರ್ತೆ

ಬೆಂಗಳೂರು: ಮಾ. 27- ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಪೊಲೀಸರ ಲಾಠಿ ಒಂದು ಕಡೆ ಸುದ್ದಿ ಮಾಡುತ್ತಿರೆ, ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯು ಮಾನವೀಯತೆಗಾಗಿ ಸುದ್ದಿಯಲ್ಲಿದೆ.

ಕಳೆದ ಮೂರು ದಿನಗಳಿಂದ ಈ ಪೊಲೀಸ್ ಠಾಣೆಯ ವ್ಯಾಪ್ತಿಯ ಬಡವರು, ಕಾರ್ಮಿಕರು, ಭಿಕ್ಷುಕರು ಮತ್ತು ಸಾಮಾನ್ಯ ಉದ್ಯೋಗಿಗಳು ಮುಂತಾದವರಿಗೆ ಠಾಣೆಯಲ್ಲೇ ಎರಡು ಹೊತ್ತಿನ ಊಟವನ್ನು ತಯಾರಿಸಿ ವಿತರಿಸಲಾಗುತ್ತಿದೆ. ಈ ಮಾನವೀಯ ಕೆಲಸವು ಠಾಣೆಯ ಇನ್ಸ್ ಪೆಕ್ಟರ್ ರಫೀಕ್ ಕೆ ಎಂ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಹೊರ ರಾಜ್ಯದಿಂದ ಬಂದಿರುವ ಕೆಲಸಗಾರರೂ ಸೇರಿದಂತೆ ಬೀದಿ ಬದಿಯಲ್ಲಿ ಮಲಗುವವರು, ಭಿಕ್ಷುಕರು ಮತ್ತು ಬಡವರ ಹೊಟ್ಟೆಯ ಹಸಿವಿಗೆ ಸ್ಪಂದಿಸುವುದು ತನ್ನ ಕರ್ತವ್ಯ ಎಂದು ತಿಳಿದುಕೊಂಡು ಇಬ್ಬರು ಹೋಟೆಲ್ ಅಡುಗೆಯವರನ್ನು ಕರೆಸಿ ಎರಡು ಹೊತ್ತಿನ ಊಟ ತಯಾರಿಸಿ ಮೂರು ದಿನಗಳಿಂದ ಈ ಠಾಣಾ ವ್ಯಾಪ್ತಿಯ ಬಡವರಲ್ಲಿ ಹಂಚುತ್ತಿದ್ದೇವೆ. ಹೋಟೆಲ್ ಅಡುಗೆಯವರಿಗೆ ಕೆಲಸವಿರಲಿಲ್ಲ. ಈ ಮೂಲಕ ಅವರಿಗೂ ಒಂದು ಉದ್ಯೋಗ ಸಿಕ್ಕಂತಾಯಿತು. ಠಾಣಾ ವ್ಯಾಪ್ತಿಯಲ್ಲಿ ರೆಗ್ಯುಲರ್ ರೌಂಡ್ಸ್ ನಲ್ಲಿರುವ ಪೊಲೀಸರು ವಾಹನಗಳಲ್ಲಿ ತೆರಳಿ ಊಟವನ್ನು ಹಂಚುತ್ತಿದ್ದಾರೆ. ಠಾಣೆಯಲ್ಲೂ ಆಹಾರವನ್ನು  ಹಂಚುತ್ತಿದ್ದೇವೆ ಎಂದು ರಫೀಕ್ ಅವರು ಸನ್ಮಾರ್ಗಕ್ಕೆ ತಿಳಿಸಿದ್ದಾರೆ.

ಆರಂಭದಲ್ಲಿ ಹೋಟೆಲ್ ಪಾರ್ಸೆಲ್ ಇರಲಿಲ್ಲ. ಇಂದಿರಾ ಕ್ಯಾಂಟೀನ್ ಇರಲಿಲ್ಲ. ಇನ್ನು ಸಾಮಾನ್ಯ ಕೆಲಸಗಾರರಿಗೆ ಸುಗ್ಗಿ, ಝೋಮ್ಯಾಟೋ ಮುಂತಾದುವುಗಳ ಮೂಲಕ ಆಹಾರವನ್ನು ತರಿಸುವಷ್ಟು ಹಣವೂ ಇರುವುದಿಲ್ಲ. ಇಂಥ ಸ್ಥಿತಿಯಲ್ಲಿ ಎಲ್ಲೆಲ್ಲಿಂದಲೋ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿರುವವರಿಗೆ  ಇನ್ಸ್ ಪೆಕ್ಟರ್ ರಫೀಕ್ ಅವರು ನೆರವಿನ ಹಸ್ತ ಚಾಚಿದ್ದಕ್ಕೆ  ಪೊಲೀಸ್ ಇಲಾಖೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿತ್ತು.

ಒಂದು ಹೊತ್ತಿನಲ್ಲಿ ನೂರಕ್ಕಿಂತ ಅಧಿಕ ಮಂದಿಗೆ ನಾವು ಊಟ ವಿತರಿಸುತ್ತಿದ್ದೇವೆ. ಅನ್ನ ಮತ್ತು ಸಾಂಬಾರ್. ಇವತ್ತಿನಿಂದ ಇಂದಿರಾ ಕ್ಯಾಂಟೀನ್ ಆರಂಭವಾಗಲಿದ್ದು ನಮ್ಮ ಹೊಣೆ ಕಡಿಮೆಯಾಗಲಿದೆ ಎಂದು ಅವರು ಹೇಳಿದ್ದಾರೆ.