ಇನ್ ಸ್ಟಾಗ್ರಾಮ್, ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಲೈಕ್ ಮತ್ತು ದಾಂಪತ್ಯ ಸುಖ

0
1728

ಖದೀಜ ನುಸ್ರತ್, ಅಬುಧಾಬಿ

ಸ್ನೇಹ ಕಾರುಣ್ಯದೊಂದಿಗೆ ಎರಡು ಹೃದಯಗಳನ್ನು ಬೆಸೆಯುವಂತಹ ವಿವಾಹವು ನಿಕಾಹ್ ಎಂಬ ಪವಿತ್ರ ಬಂಧನದೊಂದಿಗೆ ಆರಂಭವಾಗುತ್ತದೆ. ಪವಿತ್ರ ಕುರ್ ಆನ್ ನಲ್ಲಿ ವಿವಾಹವನ್ನು ಪ್ರಬಲ ಕರಾರು ಎಂದು ವಿಶ್ಲೇಷಿಸಲಾಗಿದೆ. ವಿವಾಹವೆಂಬುದು ಕೆಲವಾರು ತಿಂಗಳು ಅಥವಾ ವರ್ಷಗಳಿಗೆ ಸೀಮಿತವಾದುದಲ್ಲ. ಪತಿಪತ್ನಿಯರು ನಿರಂತರ ಸಮರ್ಪಣೆ, ಪರಿಶ್ರಮ, ಸಹನೆ, ಗೌರವ, ಅನುಕಂಪ, ಪ್ರೀತಿ, ತಾಳ್ಮೆ, ಹೃದಯ ವೈಶಾಲ್ಯತೆ, ನಿಸ್ವಾರ್ಥ, ಸಹಿಷ್ಣುತೆಯೊಂದಿಗೆ ಜೀವಿಸಿ ತಮ್ಮೆಲ್ಲಾ ಜವಾಬ್ದಾರಿಕೆ, ಹಕ್ಕು ಬಾಧ್ಯತೆಗಳನ್ನು ಹಂಚಿಕೊಂಡು ಇಹಲೋಕ ಮತ್ತು ಪರಲೋಕದಲ್ಲಿ ಜತೆಯಾಗಿ ಎಂದೆಂದೂ ಒಟ್ಟಿಗೆ ವಾಸಿಸಬೇಕೆಂಬುದು ವಿವಾಹದ ಮುಖ್ಯ ಉದ್ದೇಶ.
ವಿವಾಹದ ಸಂತೋಷ ಔತಣಕೂಟ ಮತ್ತು ಹನಿಮೂನ್ ನೊಂದಿಗೆ ಮುಗಿಯುವುದಿಲ್ಲ. ಹನಿಮೂನ್ ಎಂಬುದು ನವದಂಪತಿಯರಿಗೆ ಮಾತ್ರ ಸೀಮಿತವಾದುದಲ್ಲ. ವಿವಾಹವಾಗುವುದರ ಉದ್ದೇಶ ಮುಂದಿನ ಸಂಪೂರ್ಣ ಜೀವನದಲ್ಲಿ ಸಂತೋಷದಿಂದಿರುವುದಾಗಿದೆ. ಅದರ ಹೊರತು ತಮ್ಮ ಎಲ್ಲಾ ಪರಿಶ್ರಮಗಳು ಕೇವಲ ವಿವಾಹವಾಗಲಿಕ್ಕಾಗಿರಬಾರದು. ಯಾವುದೇ ಕೆಲಸ ಮಾಡುವುದರ ಉದ್ದೇಶ ಸಂತೋಷದಿಂದಿರುವುದಾಗಿರಬೇಕು.
ದಂಪತಿಗಳ ದೇವಭಯ, ಪ್ರೀತಿ, ಪ್ರೇಮದಿಂದ ಮಾತ್ರ ದಾಂಪತ್ಯ ಜೀವನ ಯಶಸ್ವಿಯಾಗಲು ಸಾಧ್ಯ. ಇಬ್ಬರ ಮಧ್ಯೆ ಶಾರೀರಿಕ, ಮಾನಸಿಕ, ನೋಟ, ಮಾತು, ವಸ್ತ್ರ, ಗುಣ ನಡತೆಯಲ್ಲಿ ಆಕರ್ಷಣೆಯಿರಬೇಕು. ತನ್ನ ಸಂಗಾತಿಯು ಏನು ಆಲೋಚನೆ ಮಾಡುತ್ತಾರೆ, ಇಷ್ಟಾ ನಿಷ್ಟ ಯಾವುದು ಎಂದು ಪರಸ್ಪರ ತಿಳಿದಿರುವಷ್ಟರ ಮಟ್ಟಿಗೆ ಅವರ ಸಂಬಂಧವು ನಿಕಟವೂ ಆತ್ಮೀಯವೂ ಆಗಿರಬೇಕು. ಪರಸ್ಪರ ನಗುಮುಖದಿಂದ ಭೇಟಿಯಾಗುವುದು, ಅವರ ಸಣ್ಣಪುಟ್ಟ ಕೆಲಸಗಳನ್ನು ಪ್ರಶಂಸಿಸುವುದು, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು, ನಯವಾದ ಶಬ್ಧದೊಂದಿಗೆ ಮಾತನಾಡುವುದು, ಅವರೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯುವುದು, ಮನೆಯ ಎಲ್ಲಾ ವಿಷಯಗಳನ್ನು ಚರ್ಚಿಸುವುದು, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವುದು. ಮನೆಕೆಲಸದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವುದು. ಕೆಲಸ ಮಾಡಲು ಅರಿಯದಿದ್ದರೂ ಸಹಾಯ ಮಾಡಿದಂತೆ ನಟಿಸುವುದು. ಪಾರ್ಕ್, ಬೀಚ್ ಹಾಗೂ ಇನ್ನಿತರ ವಿನೋದ ಸ್ಥಳಗಳಿಗೆ, ಸಂಬಂಧಿಕರ ಮನೆಗೆ ಜೊತೆಯಾಗಿ ಹೋಗುವುದು.
“ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ, ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ.” (ಅರ್ರೂಮ್ :21) ಪತಿಪತ್ನಿ ಪರಸ್ಪರ ಪ್ರೀತಿಸುವುದರಿಂದ ಹಾಗೂ ಕರುಣೆ ತೋರುವುದರಿಂದ ಮಾತ್ರ ನೆಮ್ಮದಿ ಮತ್ತು ಶಾಂತಿಯಿಂದ ಜೀವಿಸಲು ಸಾಧ್ಯ. ಪ್ರೀತಿ, ಕರುಣೆಯೆಂಬುದು ಯಾವುದೇ ಖರ್ಚಿಲ್ಲದೆ ಹೃದಯ ವೈಶಾಲ್ಯದಿಂದ ಸಿಗುವ ವಸ್ತು. ಆದ್ದರಿಂದ ಪ್ರೀತಿಸುವುದರಲ್ಲಿ
ಜಿಪುಣತೆ ತೋರಬಾರದು. ಆದರೆ ಇಬ್ಬರ ಪ್ರೀತಿಯಿಂದ ಮೂರನೆಯವರ ಹಕ್ಕುಚ್ಚುತಿಯಾಗದಂತೆ ಜಾಗ್ರತೆ ವಹಿಸಬೇಕು. ಮದುವೆಯಾದ ಮೊದಲಿನ ದಿನಗಳಲ್ಲಿ ಪ್ರೀತಿಯಿಂದ ಇದ್ದವರು ಎರಡು ಮೂರು ಮಕ್ಕಳಾದ ನಂತರ ಅದು ಕಡಿಮೆಯಾಗುವ ಬದಲು ಹೆಚ್ಚಾಗುತ್ತಾ ಹೋಗಬೇಕು. ಅವರಿಬ್ಬರ ಸಂಬಂಧವು ಭದ್ರ ವಾಗುತ್ತಾ ಬಿಗಿಯಾಗಬೇಕು. ಒಬ್ಬರನ್ನೊಬ್ಬರಿಗೆ ಬಿಟ್ಟಗಲುವುದು ಅವರಿಗೆ ಅಸಾಧ್ಯವಾಗಬೇಕು. ತನ್ನ ಸಂಗಾತಿಯ ನೋವು ತನ್ನ ನೋವಾಗಿರಬೇಕು. ಸಂಗಾತಿಯ ತೃಪ್ತಿಯು ತನ್ನ ತೃಪ್ತಿಯಾಗಿರಬೇಕು ಮುಪ್ಪು, ಅನಾರೋಗ್ಯದಿಂದ ಅವರ ಪ್ರೀತಿಯಲ್ಲಿ ಕಡಿಮೆಯಾಗಲಾರದು. ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಲೇಖನ, ಪುಸ್ತಕಗಳನ್ನು ಓದುತ್ತಲಿರುವುದರಿಂದ ನಮ್ಮ ಹಕ್ಕುಬಾಧ್ಯತೆಗಳನ್ನು ನೆನಪಿಸುತ್ತದೆ. ಪತಿಪತ್ನಿಯರು ಪರಸ್ಪರರ ಕುಟುಂಬದವರನ್ನು ಪ್ರೀತಿಸಬೇಕು, ಗೌರವಿಸಬೇಕು.
ಪ್ರವಾದಿ ಮುಹಮ್ಮದ್(ಸ) ರ ಚರ್ಯೆಯು ಮಸೀದಿಯ ನಾಲ್ಕು ಮೂಲೆಗಳಿಗೆ ಸೀಮಿತವಾಗಿರಲಿಲ್ಲ. ಪ್ರವಾದಿ ಮುಹಮ್ಮದ್(ಸ) ರ ದಾಂಪತ್ಯ ಜೀವನವು
ನಮಗೆಲ್ಲರಿಗೂ ಅತ್ಯುತ್ತಮ ಮಾದರಿಯಾಗಿದೆ. ಮನೆಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಆಯಿಶಾ(ರ)ರೊಂದಿಗೆ ಓಟಸ್ಪರ್ಧೆ ನಡೆಸುತ್ತಿದ್ದರು. ನೀಗ್ರೋಗಳ ಸೈನಿಕ- ಕವಾಯತು ಮತ್ತು ಆಟವನ್ನು ನೋಡಲು ಸ್ವತಃ ಕರೆದುಕೊಂದು ಹೋಗಿದ್ದರು. ಪತ್ನಿ ಒಂಟೆಗೆ ಹತ್ತುವಾಗ ಕೈ ಹಿಡಿದು ಸಹಾಯ ಮಾಡುತ್ತಿದ್ದರು, ಪ್ರವಾದಿ ಪತ್ನಿಯರ ಪೈಕಿ ಆಯಿಶಾ(ರ)ರು ಎಳೆಪ್ರಾಯದವರು ಮತ್ತು ಕುಮಾರಿಯಾಗಿದ್ದರು. ಆದ್ದರಿಂದಲೇ ಅವರ ಪ್ರಾಯ ಮತ್ತು ಅಭಿರುಚಿಗೆ ತಕ್ಕಂತೆ ವರ್ತಿಸುತ್ತಿದ್ದರು.
ಹೊಸ ಹೊಸ ತಂತ್ರಜ್ಞಾನವನ್ನು ನಮ್ಮ ಕುಟುಂಬ ಜೀವನದಲ್ಲೂ ಅಳವಡಿಸಬೇಕು. ಫೇಸ್ ಬುಕ್, ವಾಟ್ಸಾಪ್ ಗಳಲ್ಲೂ ಬಾಳಸಂಗಾತಿಯ ಸಂಪರ್ಕದಲ್ಲಿರುವುದು. ನಮ್ಮ ಮೊಬೈಲ್ ನಲ್ಲಿರುವ ಹೃದಯದ ಸ್ಮೈಲಿಯನ್ನು ಬಾಳಸಂಗಾತಿಗೆ ಕಳುಹಿಸುವುದು. ಮನೆಗೆ ತಡವಾಗಿ ಬರುವುದಾದರೆ ಮೆಸೇಜ್ ಕಳುಹಿಸುವುದು.
ಡಾರ್ಲಿಂಗ್, ಸ್ವೀಟ್ ಹಾರ್ಟ್, ಹಬೀಬಿ, ಹಬೀಬ್ತಿ… ಅಥವಾ ಇತರ ಯಾವುದೇ ಅತುತ್ಯಮ ಹೆಸರಿನಿಂದ ಕರೆಯಬಹುದು. ಪ್ರವಾದಿ ಮುಹಮ್ಮದ್(ಸ)ರು ಆಯಿಶಾ(ರ) ರನ್ನು ಪ್ರೀತಿಯಿಂದ ಆಯಿಶ್, ಹುಮೈರಾ ಎಂದೆಲ್ಲಾ ಕರೆಯುತ್ತಿದ್ದರು.
ನಮ್ಮ ವೈವಾಹಿಕ ಜೀವನವನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬಾರದು. ಇನ್ ಸ್ಟಾಗ್ರಾಮ್ ಅಥವಾ ಫೇಸ್ ಬುಕ್ ನಲ್ಲಿ ದಂಪತಿಯರ ಫೋಟೋ ಅತೀ ಹೆಚ್ಚು ಲೈಕ್ ಪಡೆದರೆ ಅವರು ಸುಖವಾಗಿ ಜೀವಿಸುತ್ತಿದ್ದಾರೆ ಎಂದರ್ಥವಲ್ಲ. ಯಾರೋ ತನ್ನ ಪತ್ನಿಗೆ ಕೊಟ್ಟ ಐ ಫೋನ್, ವಿವಾಹ ವಾರ್ಷಿಕೋತ್ಸವದ ಕೇಕ್, ಮಾಣಿಕ್ಯ ಅಥವಾ ವಜ್ರದ ಉಂಗುರ ಅಥವಾ ಚಿನ್ನದ ಬಲೆಯ ಕಡೆಗೆ ಕಣ್ಣೆತ್ತಿಯೂ ನೋಡಬಾರದು. ಐ ಫೋನ್, ಕೇಕ್, ಫೋಟೋ, ಚಿನ್ನ ಅಥವಾ ವಜ್ರದಿಂದ ಸಂತೃಪ್ತ ದಾಂಪತ್ಯ ಜೀವನ ನಡೆಸಲು ಸಾಧ್ಯವಿಲ್ಲ. ಸಿಂಗಾಪುರ್, ಮಲೇಷ್ಯಾಗೆ ಹನಿಮೂನ್ ಗೆ ಹೋದರೆ ಅವರ ಜೀವನ ಆನಂದಮಯವಾಗಿದೆಯೆಂದು ಭಾವಿಸಬೇಡಿರಿ. ಕೈ ತುಂಬ ಹಣವಿದ್ದರೂ ಸುಖವಾಗಿ ಜೀವಿಸಲು ಸಾಧ್ಯವಿಲ್ಲ. ಹೋಲಿಕೆ, ಸಂಶಯ, ಅಪನಂಬಿಕೆಗಳೆಂಬ ರೋಗಗಳು ಸುಖದಾಂಪತ್ಯಕ್ಕೆ ವಿಷಕಾರಿಯಾಗಿರುತ್ತದೆ.
ಸುಖ ದಾಂಪತ್ಯ ಜೀವನಕ್ಕೆ ಬೇಕಾದ ಅಂಶಗಳನ್ನು ನಾವು ಚೆನ್ನಾಗಿ ಅರಿತಿರಬೇಕು. ಪರಸ್ಪರ ಭರವಸೆ, ಆಲಸ್ಯವಿಲ್ಲದೆ, ಕೋಪವನ್ನು ನುಂಗುತ್ತಾ, ಒಬ್ಬರನ್ನೊಬ್ಬರು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸದೆ, ನಿಂದಿಸದೆ, ಕಿರಿಕಿರಿ ಮಾಡದೆ, ಕಠೋರರಾಗದೆ, ಒಬ್ಬರು ಇನ್ನೊಬ್ಬರನ್ನು ರೇಗಿಸದೆ, ಅರ್ಥ ಮಾಡಿಕೊಳ್ಳುತ್ತಾ, ನಮ್ಮಲ್ಲಿ ಬದಲಾವಣೆ ಮಾಡುತ್ತಾ ಜೀವನ ಸಾಗಿಸಬೇಕು. ಇಲ್ಲಿ ಸೃಷ್ಟಿಕರ್ತನ ನಿಯಮಗಳು ದಂಪತಿಯರನ್ನು ನಿಯಂತ್ರಣದಲ್ಲಿಡಬೇಕು. ನಿಕಾಹ್ ಆದ ಕೂಡಲೇ ದಂಪತಿಯರು ಎಲ್ಲಾ ವಿಷಯಗಳಲ್ಲಿ ಪಕ್ವತೆ ಹಾಗೂ ಅನುಭವಗಳನ್ನು ಹೊಂದಿರುವುದಿಲ್ಲ. ಮಾನವ ಸಹಜ ದೌರ್ಬಲ್ಯಗಳು, ಕುಂದುಕೊರತೆಗಳು, ಲೋಪ ದೋಷಗಳಿಲ್ಲದ ಮನುಷ್ಯರಿಲ್ಲ. ಇಬ್ಬರ ಭಾವನೆ, ಸ್ವಭಾವ ಬೇರೆ ಬೇರೆ ರೀತಿಯಾಗಿರಬಹುದು. ಪ್ರತಿಯೊಂದು ಘಟ್ಟದಲ್ಲಿ ಹೊಸ ಹೊಸ ಅನುಭವಗಳು, ಸಮಸ್ಯೆಗಳು, ಸಣ್ಣಪುಟ್ಟ ತಪ್ಪುಗಳಿಂದ ಪಾಠಗಳನ್ನು ಕಲಿಯುತ್ತಾ ಬದಲಾವಣೆಗೆ ತಯಾರಾಗಬೇಕು. ನನ್ನಲ್ಲಿ ಯಾವುದೇ ತಪ್ಪಿಲ್ಲ, ನಾನು ಮಾಡುವುದೆಲ್ಲವೂ ಸರಿ ಎಂಬ ಸಂಕುಚಿತ ಭಾವನೆಯಿಂದ ಹೊರಬರಬೇಕು. ತನ್ನ ಬಾಳಸಂಗಾತಿ ಯಾವ ರೀತಿ ಅತ್ಯುತ್ತಮವಾಗಿ ಸದ್ವರ್ತನೆ ತೋರಬೇಕೆಂದು ನಿರೀಕ್ಷಿಸುತ್ತೇವೋ ಅದೇ ರೀತಿ ನಾವೂ ಕೂಡಾ ಸದ್ವರ್ತನೆ ಮಾಡುತ್ತಾ ಅತ್ಯುತ್ತಮರಾಗಲು ಪ್ರಯತ್ನಿಸಬೇಕು.
ಪತಿ ಪತ್ನಿಯರು ಇಂದು ಅನುಭವಿಸುವ ಸಮಸ್ಯೆಗಳಿಗೆ ಮುಖ್ಯ ಕಾರಣ ಮನೆಯಲ್ಲಿ ಪ್ರೀತಿ, ನೆಮ್ಮದಿ, ಸಂತೋಷವಿಲ್ಲ, ಸಭ್ಯ ಮಾತುಕತೆಗಳಿಲ್ಲ. ಮೊಬೈಲ್ ಮತ್ತು ನಾಲಗೆಯು ಎಲ್ಲಾ ಸಮಸ್ಯೆಗಳ ಮೂಲ ಕಾರಣವಾಗಿದೆ. ಪರಸ್ಪರರ ಮೇಲೆ ದ್ವೇಷ, ಸಂಶಯ, ಅಪನಂಬಿಕೆ, ಒಬ್ಬರು ಇನ್ನೊಬ್ಬರನ್ನು ಕಡೆಗಣಿಸುವುದು, ಉಪ್ಪು ಜಾಸ್ತಿಯಾಯಿತು, ಸಕ್ಕರೆ ಕಡಿಮೆಯಾಗಿದೆ, ಯಾವುದೇ ಕೆಲಸ ಮಾಡಲು ಮರೆತು ಹೋದದಕ್ಕಾಗಿ ಅಥವಾ ಹೊರಡಲು ತಡವಾಯಿತೆಂಬ ಸಣ್ಣ ಸಣ್ಣ ಕಾರಣಗಳು ದೊಡ್ಡದಾಗುತ್ತಿದೆ. ಹಲವಾರು ದಿನಗಳ ತನಕ ಕೋಪದಿಂದ ಮಾತನಾಡದಿರುವುದು. ಒಬ್ಬರು ಇನ್ನೊಬ್ಬರೊಂದಿಗೆ ತರ್ಕ, ವಾದ ವಿವಾದಗಳಲ್ಲಿ ತಲ್ಲೀನರಾಗುವುದು. ಪತಿಪತ್ನಿಯರಿಗೆ ಪರಸ್ಪರ ಮಾತನಾಡಲು ಸಮಯವಿಲ್ಲ, ಯಾವಾಗಲೂ ತಡರಾತ್ರಿ ಮನೆಗೆ ಬರುವುದು, ಟಿವಿ, ಮೊಬೈಲ್, ಕಂಪ್ಯೂಟರ್ ಅಥವಾ ಗೆಳೆಯರೊಂದಿಗೆ ಅಥವಾ ದೂರವಿರುವ ಪರಿಚಯವಿಲ್ಲದ ಯಾರಲ್ಲಿಯೋ ಚಾಟಿಂಗ್ ಮಾಡುತ್ತಾ ಸಮಯ ಕಳೆಯುವ ದುರಾಭ್ಯಾಸವು ಕುಟುಂಬ ಜೀವನವನ್ನು ಅವನತಿಯೆಡೆಗೆ ತಳ್ಳುತ್ತಿದೆ.
ಪವಿತ್ರ ಕುರ್ ಆನ್ ನಲ್ಲಿ ಉಪವಾಸದ ಬಗ್ಗೆ ವಿವರಿಸುವಾಗ ಅದರ ಮಧ್ಯೆ ಪತಿಪತ್ನಿಯರು ಒಂದು ವಸ್ತ್ರವಿದ್ದಂತೆ ಎಂದು ಹೇಳಲಾಗಿದೆ.
“ಅವರು ನಿಮಗೆ ಉಡುಪಾಗಿರುವರು ಮತ್ತು ನೀವು ಅವರಿಗೆ ಉಡುಪಾಗಿರುವಿರಿ.” (ಅಲ್ ಬಕರಃ:187) ವಸ್ತ್ರವು ನಮ್ಮ ಶರೀರದ ಹತ್ತಿರವಿರುವಂತೆ ಮಾನಸಿಕವಾಗಿಯೂ ಅವರಿಬ್ಬರು ಅತಿ ನಿಕಟವಾಗಿರಬೇಕು. ಹೃದಯದಲ್ಲಿ ಸೃಷ್ಟಿಕರ್ತನಾದ ಅಲ್ಲಾಹನ ಭಯದ ನಂತರ ನಮ್ಮ ಬಾಳಸಂಗಾತಿಗೆ ಸ್ಥಾನ ನೀಡಬೇಕು. ವಸ್ತ್ರವು ನಮಗೆ ಬಿಸಿಲು, ಚಳಿಯಿಂದ ರಕ್ಷಣೆ ನೀಡುವಂತೆ ಪತಿಪತ್ನಿಯರು ಸಮಾಜದ ಕೆಟ್ಟ ದೃಷ್ಟಿ ಮತ್ತು ಕೆಡುಕುಗಳಿಂದ ಪರಸ್ಪರ ರಕ್ಷಕರಾಗಿರುತ್ತಾರೆ. ವಸ್ತ್ರವು ಶರೀರದ ನ್ಯೂನತೆ, ನಗ್ನತೆ, ಕುಂದುಕೊರತೆಗಳನ್ನು ಮರೆಸುವಂತೆ ಒಬ್ಬರಿಗೊಬ್ಬರ ಕುಂದುಕೊರತೆಗಳನ್ನು, ಸ್ವಭಾವದೋಷ, ಕೆಡುಕು, ಸಣ್ಣಪುಟ್ಟ ತಪ್ಪುಗಳನ್ನು ಮರೆಸುವವರೂ ಕ್ಷಮಿಸುವವರೂ ಆಗಬೇಕು. ಅವರಲ್ಲಿರುವಂತಹ ಒಳಿತುಗಳನ್ನು ನೆನಪಿಸುತ್ತಾ, ಹೊಗಳುತ್ತಾ ಕೆಡುಕುಗಳನ್ನು ಕಡೆಗಣಿಸುವುದು. ಒಳಿತುಗಳನ್ನು ಉಪದೇಶಿಸುತ್ತಾ, ಸತ್ಕರ್ಮಗಳನ್ನು ನೆನಪಿಸುತ್ತಾ, ಸತ್ಕರ್ಮ ಮಾಡಲು ಪ್ರೇರೇಪಿಸುತ್ತಾ, ಒಬ್ಬರು ಇನ್ನೊಬ್ಬರಿಗಾಗಿ ತ್ಯಾಗ ಮಾಡುತ್ತಾ ಉತ್ತಮ ಪತಿ ಪತ್ನಿಯಾದಾಗ ಮಾತ್ರ ಅವರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ. ಅವರಿಬ್ಬರ ಜೀವನವೂ ಪರಿಪೂರ್ಣವಾಗುತ್ತದೆ.
ಸಂಗಾತಿಯಲ್ಲಿ ಯಾವುದೇ ಕೆಟ್ಟ ಗುಣವಿದ್ದರೆ ಪದೇ ಪದೇ ಅದನ್ನು ಎತ್ತಿ ಹಿಡಿಯುವುದು ಅಥವಾ ಕಳೆದು ಹೋದ ಸಮಸ್ಯೆಗಳನ್ನು ಸಂಭವಗಳನ್ನು ನೆನಪಿಸುತ್ತಾ ಮನಸ್ಸು ನೋವಿಸುತ್ತಾ ಭವಿಷ್ಯವನ್ನು ಹಾಳು ಮಾಡಬಾರದು. ಗಂಡ ಹೆಂಡತಿಯರ ಜಗಳ ಉಂಡು ಮಲಗುವವರೆಗೆ ಎಂಬ ಗಾದೆ ಮಾತಿನಂತೆ ಎಲ್ಲಾ ನೋವುಗಳನ್ನು ಅಳಿಸಿ ಹಾಕುತ್ತಾ ಮರುದಿನ ಹೊಸಜೀವನವನ್ನು ಆರಂಭಿಸಬೇಕು.