ಕಠಿಣ ಕಾನೂನಿನ ಹಿನ್ನೆಲೆ: ಮಾಲ್ಡೀವ್ಸ್‌ಗೆ ತೆರಳಿದ ಐಪಿಎಲ್ ನಲ್ಲಿ ಭಾಗಿಯಾದ ಆಸ್ಟ್ರೇಲಿಯಾ ಕ್ರಿಕೆಟಿಗರು

0
6941

ಸನ್ಮಾರ್ಗ ವಾರ್ತೆ

ನವದೆಹಲಿ: ಕೊರೋನಾ ಹೆಚ್ಚುತ್ತಿರುವ ಭಾರತದಿಂದ ಬರುವ ತಮ್ಮ ದೇಶದ ಪ್ರಜೆಗಳಿಗೆ ಜೈಲು ಶಿಕ್ಷೆ ನೀಡಲಾಗುವುದು ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ರವರು ಹೇಳಿರುವ ಬೆನ್ನಿಗೆ ಹಾಗೂ ಕಠಿಣ ಕಾನೂನು ಕ್ರಮ ಜರಗುವ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರು ಹಾಗೂ ಅಧಿಕಾರಿಗಳು ಆಸ್ಟ್ರೇಲಿಯಾಕ್ಕೆ ತೆರಳದೆ ಮಾಲ್ಡೀವ್ಸ್‌ಗೆ ತೆರಳಿರುವುದಾಗಿ ತಿಳಿದು ಬಂದಿದೆ.

ಆಸ್ಟ್ರೇಲಿಯಾದ ಆಟಗಾರರು, ತರಬೇತುದಾರರು, ಪಂದ್ಯದ ಅಧಿಕಾರಿಗಳು ಮತ್ತು ಕಾಮೆಂಟರಿ ನೀಡುವವರನ್ನು ಭಾರತದಿಂದ ಸುರಕ್ಷಿತವಾಗಿ ಮಾಲ್ಡೀವ್ಸ್‌ಗೆ ಕರೆದುಕೊಂಡು ಹೋಗಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ದೃಢಪಡಿಸಿದೆ. ಭಾರತದಿಂದ ಆಸ್ಟ್ರೇಲಿಯಾಕ್ಕೆ ವಿಮಾನ ಹಾರಾಟಕ್ಕೆ ಸಂಬಂಧಿಸಿದ ಪ್ರಯಾಣ ವಿರಾಮ ಮುಗಿಯುವವರೆಗೂ ಆಸ್ಟ್ರೇಲಿಯನ್ನರು ಮಾಲ್ಡೀವ್ಸ್‌ನಲ್ಲಿ ಉಳಿಯುತ್ತಾರೆ ಎಂದು ತಿಳಿಸಿದೆ.

ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಅನ್ನು ಕೋರೋನ ಕಾರಣದಿಂದ ಅನಿರ್ದಿಷ್ಟವಾಗಿ ಮುಂದೂಡುವ ಬಿಸಿಸಿಐಯ ನಿರ್ಧಾರದ ಎರಡು ದಿನಗಳ ನಂತರ ಆಸ್ಟ್ರೇಲಿಯನ್ನರನ್ನು ಭಾರತದಿಂದ ಮಾಲ್ಡೀವ್ಸ್ ಗೆ ಸ್ಥಳಾಂತರಿಸುವಲ್ಲಿ ಸಂಪೂರ್ಣ ಸಹಕಾರ ನೀಡಿದ್ದಕ್ಕಾಗಿ ಕೆಟ್ ಆಸ್ಟ್ರೇಲಿಯಾವು ಬಿಸಿಸಿಐಗೆ ಧನ್ಯವಾದಗಳನ್ನು ತಿಳಿಸಿದೆ.

ಈ ಬಾರಿಯ ಐಪಿಎಲ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮ್ಮಿನ್ಸ್, ಸ್ಟೋಯಿನಿಸ್ ಸೇರಿದಂತೆ ಮತ್ತಿತರ ಆಟಗಾರರು ಭಾಗವಹಿಸಿದ್ದರು.

ಕೊರೋನಾ ತಡೆಯಲು ಭಾರತದಿಂದ ಬರುವ ತಮ್ಮ ಪ್ರಜೆಗಳಿಗೆ ಜೈಲು ಶಿಕ್ಷೆ ನೀಡುವುದಾಗಿ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಸಮರ್ಥಿಸಿಕೊಂಡಿದ್ದರು. ಕೊರೊನ ಎರಡನೇ ಅಲೆಯನ್ನು ಯಶಸ್ವಿಯಾಗಿ ತಡೆಯುವ ಉದ್ದೇಶದಿಂದ ಹೀಗೆ ಮಾಡಬೇಕಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಲ್ಲದೆ, ನಿಷೇಧ ಉಲ್ಲಂಘಿಸಿ ಮರಳಿ ಬರುವ ಪ್ರಜೆಗಳಿಗೆ ಐದು ವರ್ಷ ಜೈಲು ಶಿಕ್ಷೆಮತ್ತು 38 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಕೂಡ ಎಚ್ಚರಿಕೆ ನೀಡಿದ್ದರು.